
Karnataka Budget 2026|ಜಿಬಿಎ ಚುನಾವಣೆ ಗುರಿ: ಬ್ರ್ಯಾಂಡ್ ಬೆಂಗಳೂರಿಗೆ ಬಂಪರ್ ಕೊಡುಗೆ?
ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿಗೆ ಬಂಪರ್ ಅನುದಾನ ಘೋಷಿಸುವ ಮೂಲಕ 'ಬ್ರ್ಯಾಂಡ್ ಬೆಂಗಳೂರು' ಕನಸಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಸಿಎಂ ಸಿದ್ದರಾಮಯ್ಯ ಅವರು ನಾಳೆ (ಮಾ.6) ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ಸಿದ್ಧತೆ ಆರಂಭವಾದ ಬಳಿಕ ಮಂಡನೆ ಮಾಡುತ್ತಿರುವ ಬಜೆಟ್‌ನಲ್ಲಿ ಸರ್ಕಾರದ ಕಣ್ಣು ನೇರವಾಗಿ ಬೆಂಗಳೂರಿನ ಆಡಳಿತ ಹಿಡಿಯುವುದರತ್ತ ನೆಟ್ಟಿದೆ. 'ಬ್ರ್ಯಾಂಡ್ ಬೆಂಗಳೂರು' ಕನಸಿಗೆ ಹೊಸ ಚೈತನ್ಯ ನೀಡಿ ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಿಲಿಕಾನ್ ಸಿಟಿಗೆ ಭರಪೂರ ಅನುದಾನ ಹಾಗೂ ಯೋಜನೆ ಘೋಷಿಸುವ ನಿರೀಕ್ಷೆ ಇದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ, ಉದ್ಯಾನ, ಪಾದಚಾರಿ ಮಾರ್ಗ, ಮೂಲಸೌಕರ್ಯ ಹಾಗೂ ಕೆರೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಬಂಪರ್ ಅನುದಾನ ಮೀಸಲಿಡುವ ಸಾಧ್ಯತೆಯಿದೆ.
ಸಂಚಾರ ದಟ್ಟಣೆಗೆ ಮುಕ್ತಿ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರವು ಹೊಸ ಯೋಜನೆ ಘೋಷಿಸುವ ನಿರೀಕ್ಷೆಯಿದೆ. ಸುಮಾರು 54 ಸಾವಿರ ಕೋಟಿ ರೂ. ವೆಚ್ಚದ ಸಂಚಾರ ನಿರ್ವಹಣಾ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಬಹುದು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸುರಂಗ ರಸ್ತೆ ನಿರ್ಮಾಣ ಯೋಜನೆಯನ್ನು ಘೋಷಿಸಲಿದೆ. ನಗರದ ಪ್ರಮುಖ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ವೈಟ್ ಟಾಪಿಂಗ್ ಯೋಜನೆಯ ಮುಂದಿನ ಹಂತಗಳಿಗೆ ಅನುಮೋದನೆ ಸಿಗಲಿದೆ.
ಸಾರಿಗೆ ಸುಧಾರಣೆ
ಮೆಟ್ರೋ ಮತ್ತು ರೈಲು ಜಾಲದ ವಿಸ್ತರಣೆಗೂ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸುವ ಸಾಧ್ಯತೆ ಇದೆ. ಮೆಟ್ರೋ ರೈಲು ಯೋಜನೆಯ 3ನೇ ಹಂತದ ಕಾಮಗಾರಿ ಮತ್ತು ಕೆ.ಆರ್. ಪುರಂನಿಂದ ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆಗೆ ನೆರವು ನೀಡುವ ನಿರೀಕ್ಷೆಯಿದೆ. ಕಳೆದ ವರ್ಷ ಘೋಷಣೆಯಾಗಿದ್ದ ರಾಮನಗರ ಹಾಗೂ ಹಾರೊಹಳ್ಳಿವರೆಗೂ ʼನಮ್ಮ ಮೆಟ್ರೋʼ ವಿಸ್ತರಣೆಗೆ ಅನುದಾನ ಮೀಸಲಿಡುವ ಸಾಧ್ಯತೆಗಳಿವೆ.
'ವಜ್ರ ವಿಸ್ತಾರ'ದಂತಹ ಯೋಜನೆಗಳ ಮೂಲಕ ರಾಮನಗರ, ಕನಕಪುರಕ್ಕೆ ನಗರ ಸಾರಿಗೆ ಒದಗಿಸಲು ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸುವ ನಿರೀಕ್ಷೆ ಇದೆ. ಎಲ್ಲ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಸೇವೆ ಒದಗಿಸಲು ಯೋಜಿಸಲಾಗಿದೆ.
ಜಲಮೂಲಗಳ ಸಂರಕ್ಷಣೆ
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಮತ್ತು ರಾಜಕಾಲುವೆಗಳ ದುರಸ್ತಿಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಬಹುದು. ನಗರಕ್ಕೆ ಹೆಚ್ಚುವರಿಯಾಗಿ 500 ಎಂಎಲ್‍ಡಿ ನೀರು ಪೂರೈಸುವ ಕಾವೇರಿ 6ನೇ ಹಂತದ ಯೋಜನೆಗೆ ದೊಡ್ಡ ಮೊತ್ತದ ಹಣ ಮೀಸಲಿಡುವ ಸಾಧ್ಯತೆ ಇದೆ. ನಗರದ ಹಳೆಯ ಮತ್ತು ಸೋರಿಕೆಯಾಗುತ್ತಿರುವ ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್‌ಗಳನ್ನು ಬದಲಾಯಿಸುವ ಬೇಡಿಕೆಯನ್ನು ಸರ್ಕಾರ ಪುರಸ್ಕರಿಸುವ ನಿರೀಕ್ಷೆಯಿದೆ. 'ನಮ್ಮ ಕೆರೆ' ಯೋಜನೆಯಡಿ ಆಯ್ದ ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಮತ್ತು ಅಂತರ್ಜಲ ಮರುಪೂರಣ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಅನುದಾನ ಮೀಸಲಿಡುವ ನಿರೀಕ್ಷೆ ಇದೆ.
ಹಸಿರು ಕೈಗಾರಿಕೆಗೆ ಸಬ್ಸಿಡಿ
ಶೇ.100 ರಷ್ಟು ನವೀಕರಿಸಬಹುದಾದ ಇಂಧನ ಬಳಸುವ ಉದ್ಯಮಗಳಿಗೆ ವಿದ್ಯುತ್ ತೆರಿಗೆಯಲ್ಲಿ ವಿನಾಯಿತಿ ಮತ್ತು ಸಬ್ಸಿಡಿ ನೀಡುವ ಮೂಲಕ ಬೆಂಗಳೂರನ್ನು ಹಸಿರು ನಗರವನ್ನಾಗಿ ಮಾಡುವ ಸಾಧ್ಯತೆಗಳಿವೆ. ಡಿಜಿಟಲ್ ಪಾವತಿ ಅಥವಾ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವ ಮನೆಗಳಿಗೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡುವ ಸಾಧ್ಯತೆಯಿದೆ. ನಗರದ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬೇಡಿಕೆ ಈ ಬಜೆಟ್‌ನಲ್ಲಿ ಈಡೇರಬಹುದು.
ಬಿಜೆಪಿ ಮುಖಂಡ ಎನ್.ಆರ್.ರಮೇಶ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರವೇ ವಿಶೇಷ ಕಾಳಜಿ ವಹಿಸಿ, ಐದು ಭಾಗಗಳಾಗಿ ಜಿಬಿಎ ವಿಂಗಡಿಸಿದೆ. ಈಗ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಜಿಬಿಎ ಸಿಬ್ಬಂದಿ, ನೌಕರರಿಗೆ ವೇತನ ನೀಡಲು ತಿಂಗಳಿಗೆ ಕನಿಷ್ಟ 270 ಕೋಟಿ ರೂ. ಅವಶ್ಯಕತೆ ಇದೆ. ವರ್ಷಕ್ಕೆ ಸಾವಿರಾರು ಕೋಟಿ ರೂ. ಬೇಕಿದೆ. ಉದ್ಯಾನ, ರಸ್ತೆ ಸೇರಿ ಇತರೆ ನಿರ್ವಹಣೆಗೆ 6 ಸಾವಿರ ಕೋಟಿ ರೂ. ಅವಶ್ಯಕತೆ ಇದೆ. ಹೀಗಾಗಿ ಪ್ರತಿ ಜಿಬಿಎ ಗೆ ಕನಿಷ್ಟ 2 .5 ಸಾವಿರ ಕೋಟಿ ರೂಗಳ ಹಣ ನೀಡಬೇಕು. ಈ ಭಾರಿಯ ಬಜೆಟ್‌ನಲ್ಲಿ ಬೆಂಗಳೂರಿನ ಜಿಬಿಎಗೆ ಕನಿಷ್ಟ 13 ಸಾವಿರ ಕೋಟಿ ರೂ.ಗಳ ಅವಶ್ಯಕತೆ ಇದೆ. ಹೀಗಾಗಿ ಬಜೆಟ್‌ನಲ್ಲಿ ಬೆಂಗಳೂರಿಗೆ ವಿಶೇಷ ಅನುದಾನದ ಪ್ಯಾಕೆಜ್ ಘೋಷಿಸಬೇಕಿದೆ ಎಂದರು.

