
ಜಿಬಿಎ ಮೊದಲ ಬಜೆಟ್: ಸಾಲದ ಹೊರೆ, ಅಭಿವೃದ್ಧಿಗೆ ಬರೆ
ಆಸ್ತಿ ತೆರಿಗೆಯನ್ನು 'ಬಂಡವಾಳ ಮೌಲ್ಯ' (Capital Value System) ಆಧಾರಿತವಾಗಿ ಪರಿಷ್ಕರಿಸಿರುವುದರಿಂದ ಪಾಲಿಕೆಯ ಸ್ವಂತ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ.
ಇದೇ ಮೊದಲ ಬಾರಿಗೆ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಮಂಡಿಸಲಿರುವ ಬಜೆಟ್ ಸಾರ್ವಜನಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಜನಪ್ರತಿನಿಧಿಗಳೇ ಇಲ್ಲದ ಜಿಬಿಎಗೆ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಬಜೆಟ್ ಮತದಾರರ ಮೇಲೆ ಗಣನೀಯ ಪ್ರಭಾವ ಬೀರಲಿದೆ. ಹೀಗಾಗಿ, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾಲಿಕೆ 'ಜನಪರ ಬಜೆಟ್' ಮಂಡಿಸುವ ಸಾಧ್ಯತೆಗಳಿವೆ.
ಈ ಮೊದಲು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಎಂಬ ಒಕ್ಕೂಟ ವ್ಯವಸ್ಥೆಯಲ್ಲಿದ್ದ ಆಡಳಿತ, ಈಗ ವಿಕೇಂದ್ರೀಕರಣ ಮಾದರಿಯಲ್ಲಿ 5 ವಲಯಗಳಾಗಿ ಜಿಬಿಎ ಅಡಿಯಲ್ಲಿ ರಚನೆಗೊಂಡಿದೆ. 2020ರ ಸೆಪ್ಟೆಂಬರ್‌ನಲ್ಲಿ ಅಂದಿನ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಅಂದಿನಿಂದಲೂ ಆಡಳಿತಾಧಿಕಾರಿಗಳೇ ಅಧಿಕಾರ ಚಲಾಯಿಸುತ್ತಿದ್ದಾರೆ. ಸದ್ಯ ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರೊಂದಿಗೆ ನಗರ ವ್ಯಾಪ್ತಿಯ 28 ಶಾಸಕರು ಹಾಗೂ 3 ಸಂಸದರು ಉಸ್ತುವಾರಿಯ ಹೊಣೆ ಹೊತ್ತಿದ್ದಾರೆ. ಕಳೆದ ಬಾರಿ ಬಿಬಿಎಂಪಿ ಬಜೆಟ್ ಅನ್ನು ಆರ್ಥಿಕ ಇಲಾಖೆಯ ಆಯುಕ್ತರೇ ಮಂಡಿಸಿದ್ದರು.
ಆದರೀಗ 5 ವಿಭಾಗಗಳಾಗಿರುವ ಜಿಬಿಎ ಬಜೆಟ್ ಅನ್ನು ಯಾರು ಮಂಡಿಸಲಿದ್ದಾರೆ? ಐದು ಪಾಲಿಕೆಗಳಿಗೆ ಪ್ರತ್ಯೇಕ ಬಜೆಟ್ ಮಂಡನೆಯಾಗಲಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಆಯಾ ಪಾಲಿಕೆಗಳ ಆದಾಯ ಮತ್ತು ಸರ್ಕಾರ ನೀಡುವ ಅನುದಾನದ ಆಧಾರದ ಮೇಲೆ ಬಜೆಟ್ ಗಾತ್ರ ನಿರ್ಧಾರವಾಗಲಿದೆ. ಬಜೆಟ್ ಮಂಡನೆಯಾದ ಬಳಿಕ ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾದರೆ, ಅವರು ಈ ಬಜೆಟ್ ಬಗ್ಗೆ ಎಂತಹ ವಿರೋಧ ವ್ಯಕ್ತಪಡಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಜೆಟ್ ಗಾತ್ರದ ಹೆಚ್ಚಳ
ಜಿಬಿಎ ಮಂಡಿಸಲಿರುವ ಈ ಮೊದಲ ಬಜೆಟ್ ಕೇವಲ ಆಡಳಿತಾತ್ಮಕ ಸುಧಾರಣೆಯಲ್ಲ. ಇದು "ಬ್ರಾಂಡ್ ಬೆಂಗಳೂರು" ಕನಸನ್ನು ನನಸು ಮಾಡುವತ್ತ ಸರ್ಕಾರ ಇಡುತ್ತಿರುವ ಮೊದಲ ಹೆಜ್ಜೆ. ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ನಿವಾರಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಕಳೆದ ಬಾರಿ ಬಿಬಿಎಂಪಿ ಬಜೆಟ್ ಸುಮಾರು 12,371 ಕೋಟಿ ರೂ.,ಗಳಿತ್ತು. ಆದರೆ ಜಿಬಿಎ ಅಡಿಯಲ್ಲಿ ಈ ಮೊತ್ತ 15 ಸಾವಿರ ಕೋಟಿಯಿಂದ 18 ಸಾವಿರ ಕೋಟಿರೂ.,ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಅಂದರೆ ಬಜೆಟ್ ಗಾತ್ರದಲ್ಲಿ ಸುಮಾರು ಶೇ. 25 ರಿಂದ ಶೇ. 40 ರಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಈ ಮೊದಲು ಬಜೆಟ್ 198 ವಾರ್ಡ್‌ಗಳಿಗೆ ಸೀಮಿತವಾಗಿತ್ತು, ಈಗ ವಾರ್ಡ್‌ಗಳ ಸಂಖ್ಯೆ 369ಕ್ಕೆ ಏರಿರುವುದರಿಂದ ಅನುದಾನದ ಅಗತ್ಯವೂ ಹೆಚ್ಚಿದೆ.
ಎದುರಾಗಿರುವ ಸವಾಲುಗಳು
ಹೊಸ ವ್ಯವಸ್ಥೆ ಜಾರಿಗೆ ಬರುವಾಗ ಕೆಲವು ಆಡಳಿತಾತ್ಮಕ ಗೊಂದಲಗಳು ಸಹಜ. ಈವರೆಗೆ ಬಿಬಿಎಂಪಿ, ಬಿಡಿಎ (BDA) ಮತ್ತು ಜಲಮಂಡಳಿ ಸ್ವತಂತ್ರವಾಗಿ ಬಜೆಟ್ ರೂಪಿಸುತ್ತಿದ್ದವು. ಈಗ ಜಿಬಿಎ ಅಡಿಯಲ್ಲಿ ಇವೆಲ್ಲವೂ ಬರುವುದರಿಂದ ಹಣಕಾಸಿನ ನಿಯಂತ್ರಣ ಯಾರ ಕೈಲಿರುತ್ತದೆ ಎಂಬ ಗೊಂದಲ ಅಧಿಕಾರಿಗಳಲ್ಲಿದೆ. ಆಸ್ತಿ ತೆರಿಗೆ ಮತ್ತು ಇತರ ಶುಲ್ಕಗಳನ್ನು ಜಿಬಿಎ ಹೇಗೆ ಹಂಚಿಕೆ ಮಾಡುತ್ತದೆ? ಬಿಬಿಎಂಪಿ ವ್ಯಾಪ್ತಿಯ ಹಣವನ್ನು ಹೊರವಲಯದ ಅಭಿವೃದ್ಧಿಗೆ ಬಳಸಿದರೆ ನಗರದ ಒಳಗಿನ ವಾರ್ಡ್‌ಗಳ ಸ್ಥಿತಿ ಏನಾಗಬಹುದು ಎಂಬ ಆತಂಕ ಭಾವಿ ಸದಸ್ಯರಲ್ಲಿದೆ.
ಸಾಲದ ಹೊರೆ ಮತ್ತು ಬಾಕಿ ಬಿಲ್‌ಗಳು
ಬಿಬಿಎಂಪಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಸಾಲದಲ್ಲಿದೆ. ಕೆಐಎಡಿಬಿ (KIADB) ಮತ್ತು ವಿವಿಧ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲದ ಅಸಲು ಹಾಗೂ ಬಡ್ಡಿಯೇ ವರ್ಷಕ್ಕೆ ನೂರಾರು ಕೋಟಿ ರೂಪಾಯಿಗಳಾಗುತ್ತವೆ.
ಪಾಲಿಕೆಯು ತನ್ನ ಕೆಲವು ವಾಣಿಜ್ಯ ಸಂಕೀರ್ಣ ಮತ್ತು ಮಾರುಕಟ್ಟೆಗಳನ್ನು ಅಡಮಾನವಿಟ್ಟು ಸಾಲ ಪಡೆದಿರುವ ಉದಾಹರಣೆಗಳೂ ಇವೆ. ಇದರೊಂದಿಗೆ ರಸ್ತೆ ದುರಸ್ತಿ, ಕಸ ವಿಲೇವಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಸುಮಾರು 3 ಸಾವಿರ ಕೋಟಿಯಿಂದ 4 ಸಾವಿರ ಕೋಟಿ ರೂ., ಮೊತ್ತದ ಬಿಲ್‌ಗಳು ಬಾಕಿ ಇವೆ.
ಈ ಹಳೆಯ ಸಾಲವನ್ನು ಐದು ಪಾಲಿಕೆಗಳಿಗೆ ಸಮಾನವಾಗಿ ಹಂಚುವ ಸಾಧ್ಯತೆಯಿದೆ. ಇದರಿಂದ ಹೊಸದಾಗಿ ಘೋಷಿಸಿರುವ 'ಸುರಂಗ ರಸ್ತೆ' ಅಥವಾ 'ಬಿಸಿನೆಸ್ ಕಾರಿಡಾರ್' ಯೋಜನೆಗಳಿಗೆ 27 ಸಾವಿರ ಕೋಟಿ ಅವಶ್ಯಕತೆ ಇದೆ. ಈ ಬೃಹತ್ ಯೋಜನೆಯ ಭೂಸ್ವಾಧೀನ ಮತ್ತು ಕಾಮಗಾರಿ ಹಂಚಿಕೆಗಳು ಜಿಬಿಎ ಬಜೆಟ್ ಮೇಲೆ ಪರಿಣಾಮ ಬೀರಲಿವೆ. ಬಾಕಿ ಹಣ ಪಾವತಿಸದಿದ್ದರೆ ಹೊಸ ಕಾಮಗಾರಿ ನಡೆಸಲು ಗುತ್ತಿಗೆದಾರರು ಹಿಂದೇಟು ಹಾಕುವ ಸಾಧ್ಯತೆಯಿದೆ.
ಸಂಪನ್ಮೂಲ ಕ್ರೋಢೀಕರಣ ಮತ್ತು ಪರಿಹಾರ
ಈ ಆರ್ಥಿಕ ಸುಳಿಯಿಂದ ಹೊರಬರಲು ಜಿಬಿಎ ಸರ್ಕಾರದಿಂದ ವಿಶೇಷ ಅನುದಾನವನ್ನು ನಿರೀಕ್ಷಿಸುತ್ತಿದೆ. ಆಸ್ತಿ ತೆರಿಗೆಯನ್ನು 'ಬಂಡವಾಳ ಮೌಲ್ಯ' (Capital Value System) ಆಧಾರಿತವಾಗಿ ಪರಿಷ್ಕರಿಸಿರುವುದರಿಂದ ಪಾಲಿಕೆಯ ಸ್ವಂತ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ. ಪರಿಷ್ಕೃತ ಆಸ್ತಿ ತೆರಿಗೆಯಿಂದ 8 ಸಾವಿರ ಕೋಟಿಗೂ ಅಧಿಕ ಆದಾಯದ ಗುರಿ ಹೊಂದಲಾಗಿದೆ. ಇದರೊಂದಿಗೆ ಅಭಿವೃದ್ಧಿ ಶುಲ್ಕಗಳು (Betterment Charges) ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನಗಳು ಜಿಬಿಎಗೆ ಆಸರೆಯಾಗಲಿವೆ.
ಬಜೆಟ್‌ನ ಪ್ರಮುಖ ನಿರೀಕ್ಷೆಗಳು:
ಸಮಗ್ರ ಸಾರಿಗೆ: ಮೆಟ್ರೋ, ಬಿಎಂಟಿಸಿ ಮತ್ತು ರೈಲ್ವೆ ನಡುವೆ ಒಂದೇ ಟಿಕೆಟ್ ವ್ಯವಸ್ಥೆ (Common Mobility) ಹಾಗೂ ಕೊನೆಯ ಮೈಲಿ ಸಂಪರ್ಕಕ್ಕೆ ಆದ್ಯತೆ.
ಸುರಂಗ ರಸ್ತೆ: ಸಂಚಾರ ದಟ್ಟಣೆ ಕಡಿಮೆ ಮಾಡಲು ಆಯ್ದ ಭಾಗಗಳಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಅಡಿಪಾಯ.
ಬ್ರಾಂಡ್ ಬೆಂಗಳೂರು: ಕಸ ವಿಲೇವಾರಿಗೆ ಆಧುನಿಕ ತಂತ್ರಜ್ಞಾನ ಮತ್ತು ಕೆರೆಗಳ ಪುನಶ್ಚೇತನಕ್ಕೆ ಭಾರಿ ಅನುದಾನ.
ಉಪನಗರ ಅಭಿವೃದ್ಧಿ: ಬೆಂಗಳೂರಿನ ಹೊರವಲಯದ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲು ಪ್ರತ್ಯೇಕ ಪ್ಯಾಕೇಜ್.
ಬೆಂಗಳೂರಿಗರ ಮೇಲಿನ ಪರಿಣಾಮ
ಜಿಬಿಎ ಬಜೆಟ್ ನೇರವಾಗಿ ಬೆಂಗಳೂರಿಗರ ಜೀವನದ ಮೇಲೆ ಪರಿಣಾಮ ಬೀರಲಿದೆ. ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯಬಹುದು ಎಂಬುದು ಒಂದು ಕಡೆಯಾದರೆ, ಸೇವಾ ಶುಲ್ಕಗಳು ಅಥವಾ ಅಭಿವೃದ್ಧಿ ಶುಲ್ಕಗಳು ಏರಿಕೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಸಂಪನ್ಮೂಲ ಎಲ್ಲಿಂದ ಬರುತ್ತದೆ?
ಬಜೆಟ್ ಗಾತ್ರ ಹೆಚ್ಚಾದಂತೆ ಆದಾಯದ ಮೂಲಗಳನ್ನೂ ಸರ್ಕಾರ ವಿಸ್ತರಿಸಲಿದೆ. ಪರಿಷ್ಕೃತ ಆಸ್ತಿ ತೆರಿಗೆಯ ನೀತಿಯಿಂದ ಸುಮಾರು 8 ಸಾವಿರ ಕೋಟಿಗೂ ಅಧಿಕ ಆದಾಯದ ಗುರಿ ಇದೆ. ದೊಡ್ಡ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಪಡೆಯುವ ಅಭಿವೃದ್ಧಿ ಶುಲ್ಕಗಳು ('Betterment Charges'), ರಾಜ್ಯ ಸರ್ಕಾರದಿಂದ ವಿಶೇಷ ರಾಜ್ಯ ಅನುದಾನ ಮತ್ತು ಕೇಂದ್ರ ಸರ್ಕಾರದ ಯೋಜನಾ ಅನುದಾನಗಳಿಂದ ಜಿಬಿಎ ಸಂಪನ್ಮೂಲ ಕ್ರೂಢೀಕರಿಸಲಿದೆ.
ಬಜೆಟ್ ಮಂಡನೆ ಯಾವಾಗ?
ಮಾರ್ಚ್ 6 ರಂದು ರಾಜ್ಯ ಸರ್ಕಾರ ಬಜೆಟ್ ಮಂಡಿಸಲಿದೆ. ಇದಾದ 15 ರಿಂದ 16 ದಿನಗಳ ಒಳಗೆ ಜಿಬಿಎ ತನ್ನ ಬಜೆಟ್ ಮಂಡಿಸಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದೊಂದಿಗೆ ತನ್ನ ಸ್ವಂತ ಆದಾಯವನ್ನು ಕ್ರೋಢೀಕರಿಸಿ ಜಿಬಿಎ ಬಜೆಟ್ ಗಾತ್ರವನ್ನು ಅಂತಿಮಗೊಳಿಸಲಿದೆ.
ಮಾಜಿ ಉಪ ಮೇಯರ್ ಬಿ. ಹರೀಶ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಈ ಹಿಂದೆ ಬಿಬಿಎಂಪಿ ಅಸ್ತಿತ್ವದಲ್ಲಿದ್ದ ವೇಳೆ ಕಡಿಮೆ ಸಿಬ್ಬಂದಿ ಇದ್ದರು. ಅವರುಗಳಿಗೆ ವೇತನ ನೀಡಲು 600 ಕೋಟಿ ಹಣ ಬೇಕಿತ್ತು. ಈಗಿನ ಜಿಬಿಎಗೆ 6,300 ಸಿಬ್ಬಂದಿ ಅಗತ್ಯವಿದ್ದು, ಅವರುಗಳಿಗೆ ವೇತನ ನೀಡಲು 1300 ಕೋಟಿ ರೂ.,ಗಳ ಅವಶ್ಯಕತೆ ಇದೆ," ಎಂದಿದ್ದಾರೆ.
"ಈ ವರೆಗೂ ಮೂರು ಸಾವಿರ ಕೋಟಿ ತೆರಿಗೆ ವಸೂಲಿ ಮಾಡಿರುವುದೆ ಹೆಚ್ಚು. ಈಗ ಐದು ಪಾಲಿಕೆಗಳಿಂದ ಆರು ಸಾವಿರ ಕೋಟಿ ತೆರಿಗೆ ಸಂಗ್ರಹಿಸಬೇಕು. "ತಿನ್ನೊಕೆ ಹಿಟ್ಟಿಲ್ಲ ಎಂದರೂ, ಜುಟ್ಟಿಗೆ ಮಲ್ಲಿಗೆ ಹೂ" ಎನ್ನುವಂತಾಗಿದೆ ಜಿಬಿಎ ಕಥೆ. ಮತ್ತೆ ಬಿಬಿಎಂಪಿ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ. ಈ ಬಾರಿಯ ಜಿಬಿಎ ಬಜೆಟ್ ಹೇಗೆ ಮಾಡುತ್ತಾರೆ ಎನ್ನುವುದೆ ನನ್ನಲ್ಲಿಯು ಗೊಂದಲ ಸೃಷ್ಟಿಸಿದೆ," ಎಂದರು.

