60 ಗಂಟೆಗಳ ಮೆಗಾ ಆಪರೇಷನ್: ಟೆಕ್ಕಿ ಶರಣ್ಯ ಕೊನೆಗೂ ಪತ್ತೆಯಾಗಿದ್ದು ಹೇಗೆ? ಇಲ್ಲಿದೆ ಕಾರ್ಯಾಚರಣೆಯ ವಿವರ
x
ಕಾಡಿನಲ್ಲಿ ಪತ್ತೆಯಾದ ಶರಣ್ಯ ಅವರು ರಕ್ಷಣಾ ಸಿಬ್ಬಂದಿ ಜತೆ.

60 ಗಂಟೆಗಳ 'ಮೆಗಾ ಆಪರೇಷನ್': ಟೆಕ್ಕಿ ಶರಣ್ಯ ಕೊನೆಗೂ ಪತ್ತೆಯಾಗಿದ್ದು ಹೇಗೆ? ಇಲ್ಲಿದೆ ಕಾರ್ಯಾಚರಣೆಯ ವಿವರ

ಮನುಷ್ಯನ ದೇಹದ ಉಷ್ಣಾಂಶವನ್ನು ಗ್ರಹಿಸಬಲ್ಲ ಅತ್ಯಾಧುನಿಕ 'ಥರ್ಮಲ್ ಇಮೇಜಿಂಗ್ ಡ್ರೋನ್‌'ಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು ಹಾಗೂ ಇನ್ನಲವು ಮಾದರಿಯಲ್ಲಿ ಶೋಧ ನಡೆಸಲಾಗಿತ್ತು.


Click the Play button to hear this message in audio format

ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಐಟಿ ಉದ್ಯೋಗಿ ಶರಣ್ಯ (36) ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಕಾಡಾನೆಗಳು, ದುರ್ಗಮ ಕಣಿವೆಗಳು ಹಾಗೂ ದಟ್ಟ ಅರಣ್ಯದ ನಡುವೆ 4 ದಿನಗಳ ಕಾಲ ಒಂಟಿಯಾಗಿ ಸಿಲುಕಿದ್ದ ಯುವತಿಯನ್ನು ರಕ್ಷಣಾ ಪಡೆಗಳು ಅತ್ಯಂತ ಸಾಹಸಮಯವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿವೆ.

ದಾರಿ ತಪ್ಪಿ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿದ್ದ ಶರಣ್ಯ ಅವರು ಪಾಳು ಬಂಗಲೆಯೊಂದನ್ನು ನಿತ್ರಾಣಗೊಂಡ ಉಳಿದುಕೊಂಡಿದ್ದರು. ಆಲ್ಲಿಂದ ಸ್ಥಳೀಯ ಬುಡಕಟ್ಟು ಸಮುದಾಯಗಳ ಜನರ ನೆರವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಶರಣ್ಯ ಅವರನ್ನು ಪತ್ತೆ ಮಾಡಿದ್ದಾರೆ.

ಅರಣ್ಯ ಇಲಾಖೆ, ಪೊಲೀಸ್ ಹಾಗೂ ಸ್ಥಳೀಯರನ್ನೊಳಗೊಂಡ 90ಕ್ಕೂ ಹೆಚ್ಚು ಸಿಬ್ಬಂದಿಯ ಬೃಹತ್ ತಂಡ ಸತತ 60 ಗಂಟೆಗಳ ಕಾಲ ಹಗಲಿರುಳು ನಡೆಸಿದ ಈ 'ಕಾರ್ಯಾಚರಣೆ ಹೇಗಿತ್ತು? ಯುವತಿ ಪತ್ತೆಯಾಗಿದ್ದು ಹೇಗೆ? ಎನ್ನುವ ರೋಚಕ ವಿವರ ಇಲ್ಲಿದೆ.

ಮೊಬೈಲ್ ಲೊಕೇಷನ್ ಮತ್ತು 'ಗ್ರಿಡ್' ಮಾದರಿ ಶೋಧ

ಗುರುವಾರ ಮಧ್ಯಾಹ್ನ ಶರಣ್ಯ ಅವರು "ನಾನು ದಾರಿ ತಪ್ಪಿದ್ದೇನೆ" ಎಂದು ತಾವು ಉಳಿದುಕೊಂಡಿದ್ದ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿದ್ದೇ ಈ ಕಾರ್ಯಾಚರಣೆಗೆ ಪ್ರಮುಖ ಸುಳಿವಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆಕೆಯ ಮೊಬೈಲ್‌ನ ಸಿಡಿಆರ್ (CDR) ಡೇಟಾ ಮತ್ತು ಕೊನೆಯ ಟವರ್ ಲೊಕೇಷನ್ ಅನ್ನು ಟ್ರ್ಯಾಕ್ ಮಾಡಿದ್ದರು. ಆ ಲೊಕೇಷನ್ ಆಧಾರದ ಮೇಲೆ, ದಟ್ಟ ಅರಣ್ಯವನ್ನು ಹಲವು 'ಗ್ರಿಡ್' ಗಳಾಗಿ ವಿಂಗಡಿಸಲಾಗಿತ್ತು. ಒಂದೊಂದು ತಂಡಕ್ಕೆ ಒಂದೊಂದು ಗ್ರಿಡ್ ಜವಾಬ್ದಾರಿ ನೀಡಿ, ಇಂಚಿಂಚೂ ಕಾಡನ್ನು ಜಾಲಾಡಲು ಆರಂಭಿಸಲಾಗಿತ್ತು.

ಕತ್ತಲಲ್ಲಿ ಕಣ್ಣಾದ 'ಥರ್ಮಲ್ ಡ್ರೋನ್'ಗಳು

ಸಾಮಾನ್ಯ ಡ್ರೋನ್‌ಗಳ ಮೂಲಕ ದಟ್ಟ ಮರಗಳ ಕೆಳಗೆ ಸಿಲುಕಿರುವವರನ್ನು ಪತ್ತೆ ಹಚ್ಚುವುದು ಅಸಾಧ್ಯ. ಹೀಗಾಗಿ, ಮನುಷ್ಯನ ದೇಹದ ಉಷ್ಣಾಂಶವನ್ನು ಗ್ರಹಿಸಬಲ್ಲ ಅತ್ಯಾಧುನಿಕ 'ಥರ್ಮಲ್ ಇಮೇಜಿಂಗ್ ಡ್ರೋನ್‌'ಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು.ಇದರಿಂದ ಹಗಲು-ರಾತ್ರಿ ಎನ್ನದೆ ಆಕಾಶದಿಂದಲೂ ಶೋಧ ಕಾರ್ಯ ನಿರಂತರವಾಗಿ ನಡೆಸಲಾಗಿತ್ತು.

ಕಾನನದ ಮೂಲೆ ಮೂಲೆ ಅರಿತಿದ್ದ ಸ್ಥಳೀಯರ ನೆರವು

ತಂತ್ರಜ್ಞಾನದ ಜೊತೆಗೆ ರಕ್ಷಣಾ ಪಡೆಗಳಿಗೆ ಅತಿ ದೊಡ್ಡ ಬಲವಾಗಿದ್ದು ಸ್ಥಳೀಯ ಮಲೆ ಕುಡಿಯ ಜನಾಂಗದವರು. ದಟ್ಟ ಕಾಡಿನ ಮೂಲೆ ಮೂಲೆ, ಕಣಿವೆ, ನೀರಿನ ಹಳ್ಳಗಳು ಹಾಗೂ ಮೃಗಗಳ ಓಡಾಟದ ಬಗ್ಗೆ ಸ್ಪಷ್ಟ ಅರಿವಿದ್ದ ಈ ಬುಡಕಟ್ಟು ಯುವಕರು, ಅರಣ್ಯ ಸಿಬ್ಬಂದಿಯೊಂದಿಗೆ ಮುಂಚೂಣಿಯಲ್ಲಿ ನಿಂತು ಹುಡುಕಾಟ ನಡೆಸಿದ್ದರು. ಜೊತೆಗೆ, ಏಪ್ರಿಲ್ 3ರಿಂದಲೇ ಶ್ವಾನದಳವನ್ನು ಟ್ರೆಕ್ಕಿಂಗ್ ಹಾದಿಯಲ್ಲಿ ಬಿಟ್ಟು ಸುಳಿವು ಕಲೆಹಾಕಲಾಗಿತ್ತು.

ಸಿಎಂ ಸ್ಪಂದನೆ, ವಿಶೇಷ ಪಡೆಗಳ ಬೆಂಬಲ

ಪ್ರಕರಣದ ಗಂಭೀರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ, ಕಾರ್ಯಾಚರಣೆ ತೀವ್ರಗೊಳಿಸಲು ಸೂಚಿಸಿದ್ದರು. ತಕ್ಷಣವೇ ಮಡಿಕೇರಿ ಮತ್ತು ವಿರಾಜಪೇಟೆ ವಿಭಾಗದಿಂದ ತಲಾ 20ರಂತೆ 40 ಹೆಚ್ಚುವರಿ ಸಿಬ್ಬಂದಿ, ಹಾಗೂ ಉಡುಪಿಯಿಂದ ನಕ್ಸಲ್ ನಿಗ್ರಹ ದಳದ ವಿಶೇಷ ತಂಡವೂ ಕಾಡಿಗೆ ಇಳಿದಿತ್ತು. ಕೊಡಗು ಜಿಲ್ಲೆಯ ಎಲ್ಲಾ ಆ್ಯಂಟಿ ಪೋಚಿಂಗ್ ಕ್ಯಾಂಪ್‌ಗಳನ್ನು ಹೈ ಅಲರ್ಟ್ ಮಾಡಿ, ಕೇರಳ ಗಡಿಭಾಗದವರೆಗೂ ಶೋಧ ವಿಸ್ತರಿಸಲಾಗಿತ್ತು.

ಈ ಎಲ್ಲಾ ವ್ಯವಸ್ಥಿತ ಮತ್ತು ವೈಜ್ಞಾನಿಕ ಕಾರ್ಯಾಚರಣೆಯ ಫಲವಾಗಿ, ಕಾಡಿನ ದುರ್ಗಮ ಕಣಿವೆಯೊಂದರಲ್ಲಿದ್ದ ಪಾಳು ಮನೆಯೊಂದರಲ್ಲಿ ಹಸಿವು-ಆಯಾಸದಿಂದ ಕಂಗೆಟ್ಟಿದ್ದ ಶರಣ್ಯ ಅವರನ್ನು ಪತ್ತೆಹಚ್ಚುವಲ್ಲಿ ರಕ್ಷಣಾ ತಂಡಗಳು ಕೊನೆಗೂ ಯಶಸ್ವಿಯಾಗಿವೆ. ಸತತ ನಾಲ್ಕು ದಿನಗಳ ಕಾಲ ಕಾಡಾನೆಗಳ ಆವಾಸಸ್ಥಾನದಲ್ಲಿ ಒಂಟಿಯಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಯುವತಿಯನ್ನು ಕಂಡ ತಕ್ಷಣ ಕುಟುಂಬಸ್ಥರು ಹಾಗೂ ಶೋಧನಾ ತಂಡ ನಿಟ್ಟುಸಿರು ಬಿಟ್ಟಿದೆ. ಸದ್ಯ ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಕರೆತರಲಾಗುತ್ತಿದೆ.

Read More
Next Story