
ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಸೇಫ್, 4 ದಿನಗಳ ಕಾರ್ಯಾಚರಣೆ ಬಳಿಕ ಪತ್ತೆ
ಬೆಟ್ಟದ ವ್ಯಾಪ್ತಿಯಲ್ಲಿರುವ ದಟ್ಟ ಅರಣ್ಯ ಪ್ರದೇಶದೊಳಗೆ ಅವರು ಪತ್ತೆಯಾಗಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ವಾಪಸ್ ಕರೆತರುತ್ತಿದ್ದಾರೆ.
ಈ ಬೆಟ್ಟದ ವ್ಯಾಪ್ತಿಯಲ್ಲಿರುವ ದಟ್ಟ ಅರಣ್ಯ ಪ್ರದೇಶದೊಳಗೆ ಅವರು ಪತ್ತೆಯಾಗಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ವಾಪಸ್ ಕರೆತರುತ್ತಿದ್ದಾರೆ. ಅವರು ಕಾಡಿನಲ್ಲಿ ಹೇಗೆ ನಾಪತ್ತೆಯಾದರು ಹಾಗೂ ಸದ್ಯ ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತಾದ ಹೆಚ್ಚಿನ ಹಾಗೂ ನಿಖರ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ಮೂಲತಃ ಕೇರಳದ ಕೋಯಿಕ್ಕೋಡ್ ನಿವಾಸಿಯಾಗಿರುವ ಶರಣ್ಯ, ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಕಳೆದ ಗುರುವಾರ (ಏಪ್ರಿಲ್ 2) ಕಕ್ಕಬ್ಬೆ ಗ್ರಾಮದ ಹೋಂಸ್ಟೇಯಿಂದ ಬೆಳಿಗ್ಗೆ 8.30ರ ಸುಮಾರಿಗೆ ಚಾರಣಕ್ಕೆ ತೆರಳಿದ್ದರು. ನಿಯಮದ ಪ್ರಕಾರ ಒಂಟಿ ಚಾರಣಕ್ಕೆ ಅವಕಾಶವಿಲ್ಲದ ಕಾರಣ, ಅಲ್ಲಿಗೆ ಬಂದಿದ್ದ 15 ಮಂದಿಯಿದ್ದ ಮತ್ತೊಂದು ತಂಡದೊಂದಿಗೆ ಅರಣ್ಯ ಸಿಬ್ಬಂದಿ ಅವರನ್ನು ಕಳುಹಿಸಿಕೊಟ್ಟಿದ್ದರು. ಆದರೆ, ನಾಯಿಗಳೊಂದಿಗೆ ಆಟವಾಡುತ್ತಾ ಹಿಂದೆ ಉಳಿದಿದ್ದ ಅವರು ಬಳಿಕ ದಾರಿ ತಪ್ಪಿ ನಾಪತ್ತೆಯಾಗಿದ್ದರು.
ನಾನು ದಾರಿ ತಪ್ಪಿದ್ದೇನೆ ಎಂದಿದ್ದ ಶರಣ್ಯ
ಗುರುವಾರ ಸಂಜೆ ತಾನು ತಂಗಿದ್ದ ಹೋಂಸ್ಟೇ ಮಾಲೀಕರಿಗೆ ಕರೆ ಮಾಡಿದ್ದ ಶರಣ್ಯ, 'ನಾನು ದಾರಿ ತಪ್ಪಿದ್ದೇನೆ' ಎಂದು ಮಾಹಿತಿ ನೀಡಿದ್ದರು. ಆ ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. ಕಾಡಾನೆಗಳ ಹಾವಳಿ ಹೆಚ್ಚಿರುವ ದಟ್ಟ ಅರಣ್ಯದಲ್ಲಿ ಯುವತಿ ನಾಪತ್ತೆಯಾಗಿದ್ದರಿಂದ ಆತಂಕ ಮನೆಮಾಡಿತ್ತು.
ಬಿರುಸಿನ ಕಾರ್ಯಾಚರಣೆ
ಯುವತಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಪತ್ತೆ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, "ಆರಂಭದಲ್ಲಿ ಪೊಲೀಸ್, ನಕ್ಸಲ್ ನಿಗ್ರಹ ದಳ (ANF), ಶ್ವಾನದಳ ಹಾಗೂ ಅರಣ್ಯ ಸಿಬ್ಬಂದಿ ಸೇರಿ 50 ಜನರ 5 ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಸಿಎಂ ಸೂಚನೆ ಮೇರೆಗೆ ಹೆಚ್ಚುವರಿಯಾಗಿ 40 ಸಿಬ್ಬಂದಿಗಳ 4 ತಂಡಗಳನ್ನು ನಿಯೋಜಿಸಲಾಗಿತ್ತು. ಒಟ್ಟು 9 ತಂಡಗಳು ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾಗಳ (Drone) ನೆರವಿನೊಂದಿಗೆ ಹಗಲಿರುಳು ಶೋಧ ನಡೆಸಿದ್ದವು" ಎಂದಿದ್ದರು.
ಸ್ಥಳೀಯ ಬುಡಕಟ್ಟು ಜನಾಂಗದವರು ಕೂಡ ಯುವತಿ ಸುರಕ್ಷಿತವಾಗಿ ಮರಳಲಿ ಎಂದು 'ಮಲೆ ತಮ್ಮಚ್ಚ' ದೇವರಿಗೆ ಹರಕೆ ಹೊತ್ತಿದ್ದರು. ಹಗಲಿರುಳು ನಡೆದ ಈ ಬಿರುಸಿನ ಮತ್ತು ಸಾಹಸಮಯ ಕಾರ್ಯಾಚರಣೆಗೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಶರಣ್ಯ ಪತ್ತೆಯಾಗಿರುವುದು ಕುಟುಂಬಸ್ಥರು ಹಾಗೂ ಕಾರ್ಯಾಚರಣೆ ತಂಡ ನಿಟ್ಟುಸಿರು ಬಿಡುವಂತೆ ಮಾಡಿದೆ.

