
ಮಂಡ್ಯ, ರಾಮನಗರ ರೈಲ್ವೆ ಕಾಮಗಾರಿಗಳಿಗೆ ವೇಗ, ರಾಜ್ಯಕ್ಕೆ ಮತ್ತಷ್ಟು ಹೊಸ ರೈಲು ?
ಬೆಂಗಳೂರು-ಮೈಸೂರು ನಡುವೆ ಹೆಚ್ಚು ಪ್ರಯಾಣಿಕರು ಸಂಚರಿಸುವುದರಿಂದ ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಬೇಕು ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ಹಾಗೂ ಮುಂಬೈಗೆ ನೂತನ ರೈಲು ಸಿಕ್ಕಿದ್ದ ಸಂತಸದ ನಡುವೆಯೇ ರಾಜ್ಯದ ವಿವಿಧ ರೈಲು ಮಾರ್ಗಗಳು ಮತ್ತು ಹೊಸ ರೈಲುಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಸಲ್ಲಿಸಿದರು.
ಗುರುವಾರ(ಫೆ.5) ಮಧ್ಯಾಹ್ನ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದ ಎಚ್.ಡಿ. ಕುಮಾರಸ್ವಾಮಿ, "ಬೆಂಗಳೂರು - ಮಂಗಳೂರು - ಮುರುಡೇಶ್ವರ ನಡುವೆ ಸಂಚರಿಸುವ ರೈಲು ( ಸಂಖ್ಯೆ 16585) ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ಮಾಡಬೇಕು. ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದರಿಂದ ಮದ್ದೂರು ರೈಲು ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆರಿಸಬೇಕು. ಮಂಡ್ಯ - ಮೇಲುಕೋಟೆ ರಸ್ತೆಯ ವಿ.ಸಿ. ಫಾರ್ಮ್ ಗೇಟ್, ಮಂಡ್ಯದಿಂದ ತೂಬಿನಕೆರೆ, ಪಾಂಡವಪುರದಿಂದ ಕೆಆರ್‌ಎಸ್ ಮತ್ತು ಕೆ.ಆರ್. ಪೇಟೆ ಮತ್ತು ಮಡಿಕೇರಿ ಕಡೆಗೆ ಪ್ರಯಾಣಿಸುವ ವಾಹನಗಳು ದೊಡ್ಡಬ್ಯಾಡರಹಳ್ಳಿಯಲ್ಲಿನ ಲೆವೆಲ್ ಕ್ರಾಸಿಂಗ್‌ನಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು ಓವರ್ ಬ್ರಿಡ್ಜ್ ನಿರ್ಮಿಸಬೇಕು ಎಂದು ತಿಳಿಸಿದರು.
ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್
ಪಾಂಡವಪುರ ಪಟ್ಟಣವು ಕೆ.ಆರ್. ಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ವ್ಯಾಪಾರ ಕೇಂದ್ರ ಸ್ಥಾನವಾಗಿದ್ದು, ಕೃಷಿ ಮತ್ತು ವಾಣಿಜ್ಯ ಸರಕುಗಳ ದಕ್ಷ ಸಾಗಣೆಗೆ ಅನುಕೂಲವಾಗುವಂತೆ ರೈತರು ಮತ್ತು ವ್ಯಾಪಾರಿಗಳಿಗೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದರು.
ಚನ್ನಪಟ್ಟಣದಲ್ಲಿ ರೈಲು ನಿಲುಗಡೆಗೆ ಮನವಿ
ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಕ್ಸ್ ಪ್ರೆಸ್ ರೈಲುಗಳು ಚನ್ನಪಟ್ಟಣದಲ್ಲಿ ನಿಲುಗಡೆ ಮಾಡುವುದು ಅಗತ್ಯವಾಗಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ (ಸಂಖ್ಯೆ 16215) ಬೋಗಿಗಳನ್ನು ಹೆಚ್ಚಿಸಿ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸಬೇಕು. ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಇರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಅನ್ನು ಮೇಲ್ದರ್ಜೆಗೇರಿಸಬೇಕು. ಮಂಡ್ಯ ಜಿಲ್ಲೆಯ ನೊಡೇಕೊಪ್ಪಲು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಬರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 44) ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಹೊಸ ರೈಲು ಮಂಜೂರಾತಿಗೆ ಮನವರಿಕೆ
ಮಂಗಳೂರು ಮತ್ತು ಹಾಸನ ಮಾರ್ಗವಾಗಿ ಮುಂಬೈ - ಬೆಂಗಳೂರು ನಗರಗಳಿಗೆ ಸಂಪರ್ಕಿಸಲು ಹಾಗೂ ಹೆಜ್ಜಾಲ - ಚಾಮರಾಜನಗರ ಈ ಮಾರ್ಗವು ಹೆಜ್ಜಾಲ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಸಂಚರಿಸಲಿದ್ದು, ಈ ಮಾರ್ಗವು ಬಹಳ ಮುಖ್ಯವಾಗಿದೆ. ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟರು.
ಅನುದಾನ ಬಿಡುಗಡೆಗೆ ಮನವಿ
ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಹಾಸನ ಜಿಲ್ಲೆಯ ಸಕಲೇಶಪುರ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡುವುದು, ಹೊಸಕೋಟೆ ತಾಲೂಕಿನ ತಿಂಡ್ಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಮ್ಯಾಜಿಕ್ ಬಾಕ್ಸ್ ಗಳನ್ನು ಅಳವಡಿಸುವುದು ಸೇರಿ ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಬೇಡಿಕೆಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತ್ವರಿತವಾಗಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

