
ಬೆಂಗಳೂರು-ಪುಣೆ ಹೈಸ್ಪೀಡ್ ರೈಲು (ಸಾಂದರ್ಭಿಕ ಚಿತ್ರ)
ರಾಜ್ಯಕ್ಕೆ ಶುಭ ಸುದ್ದಿ: ಬೆಂಗಳೂರು-ಪುಣೆ ಹೈಸ್ಪೀಡ್ ರೈಲು, ಮುಂಬೈಗೆ ಹೊಸ ಟ್ರೈನ್ ಘೋಷಣೆ
ಐಟಿ ರಾಜಧಾನಿ ಬೆಂಗಳೂರು - ಪುಣೆ ನಡುವೆ ಹೈಸ್ಪೀಡ್ ರೈಲು ಹಾಗೂ ವಾಣಿಜ್ಯ ನಗರಿ ಮುಂಬೈನಿಂದ ಬೆಂಗಳೂರಿಗೆ ಹೊಸ ರೈಲು ಘೋಷಿಸಿದ್ದು, ಮೂರು ಬೃಹತ್ ನಗರಗಳ ನಡುವೆ ವ್ಯಾಪರ, ಉದ್ಯೋಗ ಹಾಗೂ ಪ್ರವಾಸೋದ್ಯಮ ಮತ್ತಷ್ಟು ಹೆಚ್ಚಾಗಲಿದೆ.
ಕೇಂದ್ರ ಸರ್ಕಾರ ರಾಜ್ಯ ರೈಲ್ವೆ ವಲಯಕ್ಕೆ ಸಿಹಿ ಸುದ್ದಿಯೊಂದನ್ನು ನೀಡಲಿದೆ. ಐಟಿ ರಾಜಧಾನಿ ಬೆಂಗಳೂರು - ಪುಣೆ ನಡುವೆ ಹೈಸ್ಪೀಡ್ ರೈಲು ಹಾಗೂ ವಾಣಿಜ್ಯ ನಗರಿ ಮುಂಬೈನಿಂದ ಉದ್ಯಾನ ನಗರಿ ಬೆಂಗಳೂರಿಗೆ ಹೊಸ ರೈಲು ಘೋಷಿಸಿದ್ದು, ಮೂರು ಬೃಹತ್ ನಗರಗಳ ನಡುವೆ ವ್ಯಾಪಾರ, ಉದ್ಯೋಗ ಹಾಗೂ ಪ್ರವಾಸೋದ್ಯಮ ಮತ್ತಷ್ಟು ಹೆಚ್ಚಾಗಲಿದೆ.
ಫೆ.1ರಂದು ನಡೆದ ಬಜೆಟ್‌ನಲ್ಲಿ ಬೆಂಗಳೂರು-ಹೈದಾರಾಬಾದ್ ಹಾಗೂ ಬೆಂಗಳೂರು - ಚೆನ್ನೈ ನಡುವೆ ಹೈಸ್ಪೀಡ್ ರೈಲು ಘೋಷಿಸಲಾಗಿತ್ತು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬುಧವಾರ(ಫೆ.4) ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ರೈಲ್ವೆ ಮೂಲಸೌಕರ್ಯ ವೃದ್ಧಿಸುವ ಹಾಗೂ ರಾಜ್ಯದ ಇನ್ನೂ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದಾಗ ಈ ಮಾಹಿತಿ ಸಿಕ್ಕಿದೆ.
ಹೊಸ ಮಾರ್ಗಗಳಿಂದ ಆರ್ಥಿಕ ಅಭಿವೃದ್ಧಿ
"ಹೊಸದಾಗಿ ಘೋಷಿಸಲಾಗಿರುವ ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ಮಾರ್ಗವು ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದು ಹೋಗಲಿದ್ದು, ಬೆಂಗಳೂರು-ಮುಂಬೈಗೆ ಹೊಸ ರೈಲು ಆರಂಭಿಸಲಾಗುವುದು ಎನ್ನುವ ಮಾಹಿತಿಯನ್ನು ರೈಲ್ವೇ ಸಚಿವರು ನೀಡಿದರು. ಈ ಎರಡು ಹೊಸ ರೈಲಿನಿಂದ ಕರ್ನಾಟಕಕ್ಕೆ ಮತ್ತಷ್ಟು ಅನುಕೂಲ ಆಗಲಿದೆ. ಹೊಸ ರೈಲು ಸಂಪರ್ಕ ಮತ್ತು ಹಾಲಿ ರೈಲು ಮಾರ್ಗಗಳಲ್ಲಿ ವನ್ಯಜೀವಿಗಳ ಅಪಘಾತಗಳನ್ನು ತಡೆಗಟ್ಟಲು ರೈಲ್ವೆ ಬೇಲಿ ಮತ್ತು ಬ್ಲಾಕ್ ಕಾರಿಡಾರ್‌ಗಳ ಅನುಷ್ಠಾನದ ಕುರಿತು ವಿವರವಾದ ಮಾತುಕತೆ ನಡೆಸಲಾಯಿತು," ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದರು.
ರಾಮನಗರದಲ್ಲಿ ನಿಲ್ಲಲಿದೆ ಒಡೆಯರ್ ಎಕ್ಸ್‌ಪ್ರೆಸ್
ಮಂಡ್ಯ ಲೋಕಸಭೆ ಕ್ಷೇತ್ರವೂ ಸೇರಿದಂತೆ ಕರ್ನಾಟಕದ ಎಲ್ಲಾ ಬಾಕಿ ಇರುವ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ʼಒಡೆಯರ್ ಎಕ್ಸ್‌ಪ್ರೆಸ್ʼ ರಾಮನಗರದಲ್ಲಿ ನಿಲುಗಡೆಯನ್ನು ಕೋರಿ ಮನವಿ ಮಾಡಲಾಯಿತು. ಅಲ್ಲದೆ, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮಂಡ್ಯ ಜಿಲ್ಲೆಯಲ್ಲಿ ಸುಧಾರಿತ ಆಧಾರ್ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಮನವರಿಕೆ ಮಾಡಲಾಯಿತು. ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ, ಸಂಪರ್ಕ ಮತ್ತು ಸಾರ್ವಜನಿಕ ಸೇವಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರ ಜತೆ ನಡೆಸಿದ ಫ್ರಲಪ್ರದವಾಗಿತ್ತು ಎಂದು ಸಚಿವ ಎಚ್‌ಡಿಕೆ ತಿಳಿಸಿದರು.
ಸಕಾರಾತ್ಮಕ ಸ್ಪಂದನೆ
ತಮ್ಮ ಮನವಿಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್, ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಅವರು ಉಪಸ್ಥಿತರಿದರು ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

