HDK responds to viral video | Nanjangud Poojas family assured of accommodation, treatment
x
ಅನಾರೋಗ್ಯದಿಂದ ಬಳಲುತ್ತಿರುವ ಪೂಜಾ ಅವರನ್ನು ಸಂತೈಸಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ 

ವೈರಲ್ ವಿಡಿಯೋಗೆ ಸ್ಪಂದಿಸಿದ ಹೆಚ್‌ಡಿಕೆ| ನಂಜನಗೂಡಿನ ಪೂಜಾ ಕುಟುಂಬಕ್ಕೆ ಸಹಾಯಹಸ್ತ

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ 24 ವರ್ಷದ ಪೂಜಾ ಅವರ ದಯನೀಯ ಸ್ಥಿತಿಯ ಬಗ್ಗೆ ಸ್ಥಳೀಯ ಯುವಕ ಚೇತನ್ ಎಂಬುವವರು ವಿಡಿಯೋ ಮಾಡಿ, ಅದನ್ನು ಎಚ್‌.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತರುವಂತೆ ಮನವಿ ಮಾಡಿದ್ದರು.


Click the Play button to hear this message in audio format

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋವೊಂದಕ್ಕೆ ಸ್ಪಂದಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದ ಪೂಜಾ ಎಂಬುವವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ನೆರವಿನ ಹಸ್ತ ಚಾಚಿದ್ದಾರೆ.

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ 24 ವರ್ಷದ ಪೂಜಾ ಅವರ ದಯನೀಯ ಸ್ಥಿತಿಯ ಬಗ್ಗೆ ಸ್ಥಳೀಯ ಯುವಕ ಚೇತನ್ ಎಂಬುವವರು ವಿಡಿಯೋ ಮಾಡಿ, ಅದನ್ನು ಎಚ್‌.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತರುವಂತೆ ಮನವಿ ಮಾಡಿದ್ದರು. ಈ ವಿಡಿಯೋ ನೋಡಿದ ಸಚಿವರು, ಕೂಡಲೇ ಸ್ಪಂದಿಸಿ ಸಂತ್ರಸ್ತೆಯ ಮನೆಗೆ ಧಾವಿಸಿದರು. ಸುಮಾರು ಮುಕ್ಕಾಲು ಗಂಟೆ ಕಾಲ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ, ಅವರಿಗೆ ಧೈರ್ಯ ತುಂಬಿದ ಸಚಿವರು ಸ್ಥಳದಲ್ಲೇ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದರು.

ಎಚ್‌ಡಿಕೆ ಭರವಸೆ

ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿರುವ ಪೂಜಾ ಅವರ ಎರಡು ಕಾಲುಗಳು ಶಸ್ತ್ರಚಿಕಿತ್ಸೆಯ ಅಡ್ಡಪರಿಣಾಮದಿಂದಾಗಿ ಸ್ವಾಧೀನ ಕಳೆದುಕೊಂಡಿವೆ. ಮಗಳ ಚಿಕಿತ್ಸೆಗಾಗಿ ತಂದೆ ಕುಮಾರ ಅವರು ಇದ್ದ ಅಲ್ಪಸ್ವಲ್ಪ ಜಮೀನು ಮತ್ತು ಮನೆಯನ್ನು ಮಾರಾಟ ಮಾಡಿ ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೆ, ಪೂಜಾ ಅವರ ಪತಿ ರವಿ ಕೂಡ ಕೆಎಸ್‌ಆರ್‌ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಕೆಲಸವಿಲ್ಲದೆ ಹಾಸಿಗೆ ಹಿಡಿದಿದ್ದಾರೆ. ಕುಟುಂಬದ ಈ ದಯನೀಯ ಸ್ಥಿತಿ ಕಂಡು ಸಚಿವರು ಭಾವುಕರಾದರು.

ಅನಾರೋಗ್ಯ ಪೀಡಿತ ಪೂಜಾ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ.

ವಸತಿ ವ್ಯವಸ್ಥೆ

ಬಾಡಿಗೆ ಕಟ್ಟಲಾಗದೆ ತೊಂದರೆಯಲ್ಲಿದ್ದ ಕುಟುಂಬಕ್ಕೆ ಲೀಸ್ ಆಧಾರದ ಮೇಲೆ ಮನೆ ಕೊಡಿಸುವ ಭರವಸೆ ನೀಡಿದ ಸಚಿವರು, ಅದರ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದರು. ಅಪಘಾತಕ್ಕೀಡಾಗಿದ್ದ ಪತಿ ರವಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸ್ಥಳದಲ್ಲೇ ಕರೆ ಮಾಡಿ, ಲೋಕ್ ಅದಾಲತ್ ಮೂಲಕ ಕೂಡಲೇ ಪರಿಹಾರ ಕೊಡಿಸಲು ಸೂಚಿಸಿದರು.

ಕುಟುಂಬದ ಜೀವನ ನಿರ್ವಹಣೆಗಾಗಿ ಸಣ್ಣದೊಂದು ಅಂಗಡಿ ಇಟ್ಟುಕೊಳ್ಳಲು ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದರು. ದಂಪತಿಗಳಿಬ್ಬರಿಗೂ ಮೈಸೂರಿನಲ್ಲಿ ಉತ್ತಮ ಚಿಕಿತ್ಸೆ ಕೊಡಿಸಲು ಸ್ಥಳೀಯ ಜನಪ್ರತಿನಿಧಿಗಳಿಗೆ ಜವಾಬ್ದಾರಿ ವಹಿಸಿದರು. ವಿಡಿಯೋ ಮಾಡುವ ಮೂಲಕ ಸಚಿವರ ಗಮನ ಸೆಳೆದ ಯುವಕ ಚೇತನ್ ಅವರ ಕಾರ್ಯವನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ಇದೇ ವೇಳೆ ಶ್ಲಾಘಿಸಿದರು.

Read More
Next Story