Karnataka By Election | ಗ್ಯಾರಂಟಿ ಹೊರತುಪಡಿಸಿ ರಾಜ್ಯದಲ್ಲಿ ಶೂನ್ಯ ಅಭಿವೃದ್ಧಿ; ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ
x

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ

Karnataka By Election | ಗ್ಯಾರಂಟಿ ಹೊರತುಪಡಿಸಿ ರಾಜ್ಯದಲ್ಲಿ ಶೂನ್ಯ ಅಭಿವೃದ್ಧಿ; ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಅಹಿಂದ ವರ್ಗದ ಜನತೆಗೆ ದೊಡ್ಡ ಕೊಡುಗೆ ಕೊಟ್ಟಿದ್ದಾಗಿ ಸಿಎಂ ಹೇಳುತ್ತಾರೆ. ಆದರೆ, ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದುದನ್ನು ಮುಖ್ಯಮಂತ್ರಿಯೇ ಸದನದಲ್ಲಿ ಒಪ್ಪಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.


Click the Play button to hear this message in audio format

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಣದಲ್ಲಿ ಕಾಣಿಸಿಕೊಂಡಿದ್ದು, ಐದು ಗ್ಯಾರಂಟಿಗಳನ್ನು ಹೊರತುಪಡಿಸಿ ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾನುವಾರ (ಏ.5) ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಬೇರೆ ಸಾಧನೆಯನ್ನು ಹುಡುಕಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮುಖ್ಯಮಂತ್ರಿ ಪದವಿಯ ಘನತೆಗೆ ಮೀರಿ ಪದ ಬಳಸುವುದು ಅವರಿಗೆ ಗೌರವ ತರುವುದಿಲ್ಲ ಎಂದರು.

ಮುಖ್ಯಮಂತ್ರಿ ಕುರ್ಚಿಗೆ ಪ್ರಾಮುಖ್ಯತೆ ಕೊಟ್ಟದ್ದನ್ನು ಹೊರತುಪಡಿಸಿದರೆ, ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ಘಟನೆಗಳನ್ನು ನಾವು ಹೆಚ್ಚು ಕಾಣುತ್ತಿದ್ದೇವೆ. ಅಹಿಂದ ವರ್ಗದ ನಾಯಕ ನಾನು, ಅಹಿಂದ ವರ್ಗದ ಜನತೆಗೆ ದೊಡ್ಡ ಕೊಡುಗೆ ಕೊಟ್ಟಿದ್ದಾಗಿ ಸಿಎಂ ಹೇಳುತ್ತಾರೆ. ಆದರೆ, ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದುದನ್ನು ಮುಖ್ಯಮಂತ್ರಿಯೇ ಸದನದಲ್ಲಿ ಒಪ್ಪಿದ್ದಾರೆ. ನೀವು ಹೇಳಿದಷ್ಟು ದುಡ್ಡು ಹೊಡೆದಿಲ್ಲ. ಆದರೆ, ದುಡ್ಡು ಹೊಡೆದಿರುವುದು ನಿಜ ಎಂದು ಹೇಳಿದ್ದರು ಎಂದು ತಿಳಿಸಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು.

ಗಂಗಾ ಕಲ್ಯಾಣ ಯೋಜನೆಯಲ್ಲೂ ಲೂಟಿ

ಬಡವರಿಗೆ ಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲೂ ಲೂಟಿಯಾಗಿದೆ. ಕಾಂತರಾಜು ವರದಿಯನ್ನು ಎಚ್‌.ಡಿ. ಕುಮಾರಸ್ವಾಮಿ ತಡೆಹಿಡಿದಿದ್ದರೆಂದು ಮುಖ್ಯಮಂತ್ರಿ ಹೇಳುತ್ತಾರೆ. ಕಾಂತರಾಜು- ಜಯಪ್ರಕಾಶ್ ಹೆಗ್ಡೆ ವರದಿ ಸ್ವೀಕರಿಸಿ ಎಷ್ಟು ವರ್ಷಗಳಾಗಿವೆ? ಯಾವ ಕಾರಣಕ್ಕಾಗಿ ಇನ್ನೂ ಅದನ್ನು ಕೋಲ್ಡ್ ಸ್ಟೋರೇಜ್‍ನಲ್ಲಿ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಅದನ್ನು ನೀವಿನ್ನೂ ಏಕೆ ಅನುಷ್ಠಾನ ಮಾಡಿಲ್ಲ ಎಂದು ಪ್ರಶ್ನಿಸಿದರು.

ಒಳ ಮೀಸಲಾತಿ ವಿಚಾರದಲ್ಲಿ ಮೌನವೇಕೆ?

ಒಳ ಮೀಸಲಾತಿ ವಿಚಾರದಲ್ಲಿ ಹಲವಾರು ಪ್ರತಿಭಟನೆಗಳು ನಡೆಯುತ್ತಿದ್ದರೂ ಸಿಎಂ ಮೌನವಾಗಿರುವುದು ಏಕೆ ? ಗ್ಯಾರಂಟಿ ಯೋಜನೆಗಳು ದೊಡ್ಡ ಸಾಧನೆಯಲ್ಲ. ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆ ತರಲು ಸ್ವಾತಂತ್ರ್ಯಾನಂತರ ಬೇಕಾದಷ್ಟು ಯೋಜನೆಗಳನ್ನು ತಂದಿದ್ದೇವೆ. ಇದು ಯಾರೂ ಮಾಡದ ವಿಶೇಷ ಕಾರ್ಯಕ್ರಮವಲ್ಲ. ತಲಾದಾಯದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎನ್ನುತ್ತೀರಿ. ಹಾಗಿದ್ದರೆ, ಕರ್ನಾಟಕದ ಪ್ರತಿ ಕುಟುಂಬಗಳು ಆರ್ಥಿಕವಾಗಿ ಸದೃಢ ಎಂಬುದು ನಿಮ್ಮ ಹೇಳಿಕೆಯ ಅರ್ಥ. ಆರ್ಥಿಕ ಸುಭದ್ರತೆ ಇದ್ದರೆ 2 ಸಾವಿರ ಕೊಡುವ ಈ ರೀತಿಯ ಉಚಿತ ಗ್ಯಾರಂಟಿಗಳ ಅವಶ್ಯಕತೆ ಏನಿದೆ ಎಂದರು.

Read More
Next Story