
Parappana Agrahara Jail | ಕೈದಿಗಳ ಅಟ್ಟಹಾಸ: ತಪಾಸಣೆಗೆ ಹೋದ ಜೈಲಾಧಿಕಾರಿಗಳ ಮೇಲೆ ಹಲ್ಲೆ, ಲಘು ಲಾಠಿ ಪ್ರಹಾರ!
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಪಾಸಣೆಗೆ ಹೋದ ಅಧಿಕಾರಿಗಳ ಮೇಲೆ ಕೈದಿಗಳು ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಅಶಿಸ್ತು ಮತ್ತು ಕಾನೂನುಬಾಹಿರ ಚಟುವಟಿಕೆಗಳು ಮುಂದುವರಿದಿವೆ. ಜೈಲಿನೊಳಗೆ ನಡೆಯುತ್ತಿರುವ 'ರಾಜಾತಿಥ್ಯ'ದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಹೈಡ್ರಾಮಾ ನಡೆದಿದೆ. ಬ್ಯಾರಕ್‌ಗಳ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಅಧಿಕಾರಿಗಳ ಮೇಲೆ ಹಲ್ಲೆ, ಲಾಠಿ ಚಾರ್ಜ್
ಮಾರ್ಚ್ 29 ರಂದು ರಾತ್ರಿ 11.45ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೈಲಿನ ಟವರ್-1ರ ವಿಚಾರಣಾಧೀನ ಕೈದಿಗಳ ವಿಭಾಗದ 5ನೇ ಕೊಠಡಿಯಲ್ಲಿ ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಮುಗಿಬಿದ್ದ ಕೈದಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.
10ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆ
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧವೇ ಗಂಭೀರ ಆರೋಪ ಮಾಡಿ ಕೈದಿಗಳು ವಿಡಿಯೋ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ತೀವ್ರ ಶೋಧ ಕಾರ್ಯದ ವೇಳೆ ಬ್ಯಾರಕ್‌ಗಳಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಯಾಗಿವೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೈದಿಗಳಾದ ಇನಾಕ್ ಜಾಯ್, ವೋಕು ಆರೆಂಜಿ ಪ್ಯಾಟ್ರಿಕ್, ಕೋರಿಲ್ ಡೇನಿಯಲ್ ಮತ್ತು ಥಾಮಸ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಐಷಾರಾಮಿ ಸೌಲಭ್ಯಗಳ ವಿಡಿಯೋ ವೈರಲ್
ಇತ್ತೀಚೆಗಷ್ಟೇ ಜೈಲಿನೊಳಗೆ ಟಿವಿ, ಮೊಬೈಲ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಐಷಾರಾಮಿ ಸೌಲಭ್ಯಗಳು ಸಿಗುತ್ತಿವೆ ಎಂದು ಬಿಂಬಿಸುವ ವಿಡಿಯೋವನ್ನು ಕೈದಿಗಳೇ ಸೆರೆಹಿಡಿದು ವೈರಲ್ ಮಾಡಿದ್ದರು. ಈ ವಿಡಿಯೋ ಮಾಡಿದ ಕೈದಿಗಳನ್ನು ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಜೈಲಿನೊಳಗೆ ಹತ್ತಾರು ಶಿಸ್ತು ಕ್ರಮಗಳನ್ನು ಕೈಗೊಂಡಿದ್ದರೂ, ಕೈದಿಗಳ ದರ್ಪಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

