ಡಿಜಿಪಿ ಅಲೋಕ್ ಕುಮಾರ್ ಹೆಸರು ಕೆಡಿಸಲು ಕೈದಿಗಳ ಸಂಚು: ಪರಪ್ಪನ ಅಗ್ರಹಾರದ 3 ಸಿಬ್ಬಂದಿ ಅಮಾನತು
x

ಜೈಲಿನ ಶೌಚಾಲಯದ ಪೈಪ್​ನಲ್ಲಿ ಮೊಬೈಲ್ ಅಡಗಿಸಿಟ್ಟಿರುವುದುನ್ನು ಹೊರಕ್ಕೆ ತೆಗೆಸುತ್ತಿರುವುದು

ಡಿಜಿಪಿ ಅಲೋಕ್ ಕುಮಾರ್ ಹೆಸರು ಕೆಡಿಸಲು ಕೈದಿಗಳ ಸಂಚು: ಪರಪ್ಪನ ಅಗ್ರಹಾರದ 3 ಸಿಬ್ಬಂದಿ ಅಮಾನತು

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಿಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿ ಅಮಾನತುಗೊಂಡಿದ್ದು, ಡಿಜಿಪಿ ಅಲೋಕ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದಾರೆ.


Click the Play button to hear this message in audio format

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಬಿಂಬಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ತೀವ್ರ ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯ ಲೋಪದ ಆರೋಪದ ಮೇಲೆ ಜೈಲಿನ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ್ ಕಾಮತ್ ಹಾಗೂ ಹನುಮಂತಪ್ಪ ಹಡಪದ ಎಂಬ 3 ಸಿಬ್ಬಂದಿಯನ್ನು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಡಿಜಿಪಿ ಅಲೋಕ್‍ ಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜೈಲರ್ ವಿರುದ್ಧವೂ ಕ್ರಮದ ಎಚ್ಚರಿಕೆ

'ಜೈಲಿನಲ್ಲಿ ಕಾಸು ಕೊಟ್ಟರೆ ಮೊಬೈಲ್, ಟಿ.ವಿ ಹಾಗೂ ನೆಟ್‌ಫ್ಲಿಕ್ಸ್‌ ವೀಕ್ಷಿಸುವ ಸೌಲಭ್ಯಗಳಿವೆ. ನಾಳೆ ಐಪಿಎಲ್ ಪಂದ್ಯವಿದ್ದು ಈ ಸಲ ಕಪ್ ನಮ್ದೇ' ಎಂದು ಸ್ವತಃ ವಿಚಾರಣಾ ಕೈದಿಗಳೇ ವಿಡಿಯೊದಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜೈಲಿನ 9 ಮತ್ತು 6ನೇ ಬ್ಯಾರಕ್‌ಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳ ಕಣ್ತಪ್ಪಿಸಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಶೌಚಗುಂಡಿಯ ಕೊಳವೆಯಲ್ಲಿ ಬಚ್ಚಿಡಲಾಗಿದ್ದ 9 ಮೊಬೈಲ್ ಫೋನ್‌ಗಳು, 6 ಸಿಮ್‌ ಕಾರ್ಡ್‌ಗಳು, ಇಯರ್‌ಫೋನ್ ಹಾಗೂ ಚಾರ್ಜರ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲರ್ ಅವರ ವಿಚಾರಣೆ ನಡೆಸಿ ಅವರ ವಿರುದ್ಧವೂ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮಗಳಿಗೆ ಬೆದರಿ ಅಧಿಕಾರಿಗಳ ವಿರುದ್ಧವೇ ಷಡ್ಯಂತ್ರ

ಡಿಜಿಪಿ ಅಲೋಕ್ ಕುಮಾರ್ ಅವರು ಕಾರಾಗೃಹದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೈಲಿನಲ್ಲಿ ನಡೆಯುತ್ತಿದ್ದ ಎಲ್ಲಾ ಅಕ್ರಮಗಳಿಗೂ ಬ್ರೇಕ್ ಹಾಕಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸುಂಕದಕಟ್ಟೆ ರಕ್ಷಿತ್ ಗ್ಯಾಂಗ್‌ನ ಸದಸ್ಯರಾದ ದರ್ಶನ್, ಅಭಿ ಹಾಗೂ ಜಿಪ್ಸಿನ್ ಡೇನಿಯಲ್ ಎಂಬ ಕೈದಿಗಳು ಸೇರಿಕೊಂಡು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಷಡ್ಯಂತ್ರ ರೂಪಿಸಿದ್ದಾರೆ. ಅಧಿಕಾರಿಗಳ ಮನೋಬಲ ಕುಗ್ಗಿಸಲು ಮತ್ತು ದುರುದ್ದೇಶಪೂರ್ವಕವಾಗಿ ಡಿಜಿಪಿ ಅವರ ಹೆಸರು ಕೆಡಿಸಲು ಈ ವಿಡಿಯೊ ಮಾಡಿ ಹರಿಬಿಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ವಿಡಿಯೊ ಸತ್ಯಾಸತ್ಯತೆ ಬಗ್ಗೆ ತನಿಖೆ, ಆರೋಪಿಗಳು ಕ್ವಾರಂಟೈನ್‌ಗೆ ಶಿಫ್ಟ್

ಈ ಕೃತ್ಯದಲ್ಲಿ ಭಾಗಿಯಾದ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಅಭಿ ಮತ್ತು ಜಿಪ್ಸಿನ್ ಡೇನಿಯಲ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ, ಅವರನ್ನು ಜೈಲಿನ ಕ್ವಾರಂಟೈನ್ ಸೆಲ್‍ಗೆ ಸ್ಥಳಾಂತರಿಸಲಾಗಿದೆ. ಜೈಲಿನ ಕೆಲವು ಭಾಗಗಳಲ್ಲಿ ಇನ್ನೂ ಏರ್‌ಟೆಲ್ ನೆಟ್‌ವರ್ಕ್ ಸಿಗ್ನಲ್ ಲಭ್ಯವಿರುವುದನ್ನು ಪತ್ತೆಹಚ್ಚಲಾಗಿದ್ದು, ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಸೂಚಿಸಲಾಗಿದೆ. ಜೈಲಿನ ಒಳಗೆ ವಿಡಿಯೊ ಚಿತ್ರೀಕರಿಸಲಾಗಿದೆಯೇ ಅಥವಾ ತಂತ್ರಜ್ಞಾನದ ನೆರವಿನಿಂದ ನಕಲಿ ವಿಡಿಯೊ ಸೃಷ್ಟಿಸಲಾಗಿದೆಯೇ ಎಂಬ ಬಗ್ಗೆ ಕಾರಾಗೃಹದ ಅಧಿಕಾರಿಗಳು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

Read More
Next Story