ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ|ಡ್ರೈನೇಜ್‌ನಲ್ಲಿ ಮೊಬೈಲ್ ಪತ್ತೆ, ಮೂವರು ಕೈದಿಗಳ ವಿರುದ್ಧ ಎಫ್‌ಐಆರ್
x
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತರಾದ ಕೈದಿಗಳು

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ|ಡ್ರೈನೇಜ್‌ನಲ್ಲಿ ಮೊಬೈಲ್ ಪತ್ತೆ, ಮೂವರು ಕೈದಿಗಳ ವಿರುದ್ಧ ಎಫ್‌ಐಆರ್

ಜೈಲಿನಲ್ಲಿ ಟಿವಿ, ಮೊಬೈಲ್ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಐಷಾರಾಮಿ ಸೌಲಭ್ಯ ಬಳಸುತ್ತಿರುವುದಾಗಿ ಕೈದಿಗಳು ಹೇಳಿಕೊಂಡಿದ್ದರು. ಡಿಜಿಪಿ ಅಲೋಕ್ ಕುಮಾರ್ ನಮಗೆ ಮೊಬೈಲ್ ನೀಡಿದ್ದಾರೆ ಎಂದು ಕೈದಿಗಳು ಹೇಳಿಕೆ ನೀಡಿದ್ದರು.


ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ.

ಜೈಲಿನೊಳಗೆ ರಾಜಾತಿಥ್ಯ ಸಿಗುತ್ತಿದೆ ಎಂದು ಕೈದಿಗಳೇ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ವೈರಲ್ ವಿಡಿಯೋ ತಂದ ಫಜೀತಿ

ಜೈಲಿನಲ್ಲೇ ಚಿತ್ರೀಕರಿಸಿ ಹರಿಬಿಡಲಾಗಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಜೈಲಿನಲ್ಲಿ ಟಿವಿ, ಮೊಬೈಲ್ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಐಷಾರಾಮಿ ಸೌಲಭ್ಯ ಬಳಸುತ್ತಿರುವುದಾಗಿ ಕೈದಿಗಳು ಹೇಳಿಕೊಂಡಿದ್ದರು. ಅಚ್ಚರಿಯೆಂದರೆ, ಡಿಜಿಪಿ ಅಲೋಕ್ ಕುಮಾರ್ ಅವರೇ ನಮಗೆ ಮೊಬೈಲ್ ನೀಡಿದ್ದಾರೆ ಎಂದು ಕೈದಿಗಳು ವಿಡಿಯೋದಲ್ಲಿ ಹೇಳಿಕೆ ನೀಡಿದ್ದರು. ಇದು ಇಲಾಖೆಯ ನಿದ್ದೆಗೆಡಿಸಿತ್ತು.

ಡ್ರೈನೇಜ್‌ನಲ್ಲಿ ಅಡಗಿಸಿಟ್ಟಿದ್ದ ಫೋನ್‌ಗಳು

ವಿಡಿಯೋ ವೈರಲ್ ಆದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜೈಲಿನ 9ನೇ ಬ್ಯಾರಕ್ ಮೇಲೆ ದಿಢೀರ್ ದಾಳಿ ನಡೆಸಿದರು. ಈ ವೇಳೆ ಕೈದಿಗಳು ಮೊಬೈಲ್ ಫೋನ್‌ಗಳನ್ನು ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ, ಶೌಚಾಲಯದ ಡ್ರೈನೇಜ್ ಮಾರ್ಗದಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.

ಅಧಿಕಾರಿಗಳು ಕೈದಿಗಳಿಂದಲೇ ಡ್ರೈನೇಜ್‌ನಿಂದ ಫೋನ್‌ಗಳನ್ನು ಹೊರತೆಗೆಸಿದ್ದಾರೆ. ಜೈಲಿನ ಕೆಲವು ಭಾಗಗಳಲ್ಲಿ ಏರ್‌ಟೆಲ್ ಸಿಗ್ನಲ್ ಲಭ್ಯವಿರುವುದು ಇಂತಹ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

ಸೇಡಿನ ದೃಷ್ಟಿಯಿಂದ ಡಿಜಿಪಿ ಹೆಸರು ಬಳಕೆ?

ತನಿಖೆಯ ವೇಳೆ ವಿಡಿಯೋ ಮಾಡಿದವರನ್ನು ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳೆಂದು ಗುರುತಿಸಲಾಗಿದೆ. ಇವರು ಹಳೆಯ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಇತ್ತೀಚೆಗೆ ಇವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿತ್ತು. ಈ ಕ್ರಮದಿಂದ ಅಸಮಾಧಾನಗೊಂಡಿದ್ದ ಕೈದಿಗಳು, ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಚ್ಯುತಿ ತರಲು ಉದ್ದೇಶಪೂರ್ವಕವಾಗಿ ಅವರ ಹೆಸರನ್ನು ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಮೂವರು ಸಿಬ್ಬಂದಿ ಅಮಾನತು

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಡಿಜಿಪಿ ಅಲೋಕ್ ಕುಮಾರ್ ಅವರು ತಕ್ಷಣವೇ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ:

ಜೈಲಿನ ವಾರ್ಡರ್ ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್, ಹನುಮಂತಪ್ಪ ಹಡಪದ್ ಅಮಾನತಾದವರು. ಜೊತೆಗೆ ಸಂಬಂಧಪಟ್ಟ ಜೈಲರ್ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ.

ಆರೋಪಿ ಕೈದಿಗಳನ್ನು ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಾಗಿದೆ.

ಜೈಲಿನಲ್ಲಿ ಮೊಬೈಲ್ ಬಳಕೆ ತಡೆಯಲು ಜಾಮರ್ ಮತ್ತು ಭದ್ರತೆ ಹೆಚ್ಚಳಕ್ಕೆ ಸೂಚಿಸಲಾಗಿದೆ. ಅಲ್ಲದೇ ಕೈದಿಗಳಿಂದ ಸಂಚು, ಮೊಬೈಲ್ ಪತ್ತೆಯಾದ ಬಗ್ಗೆ ಕಾರಾಗೃಹ ಇಲಾಖೆಯಲ್ಲಿ ಆಂತರಿಕ ತನಿಖೆಗೂ ಆದೇಶಿಸಲಾಗಿದೆ.

Read More
Next Story