LPG Shortage| ಎಲ್‌ಪಿಜಿ ಸಿಲಿಂಡರ್ ಅಭಾವ: ಕಳೆಗುಂದಿದ ಮಾಂಸದ ಮಾರುಕಟ್ಟೆ, ಶೇ. 30ರಷ್ಟು ವ್ಯಾಪಾರ ಕುಸಿತ
x

ಅಡುಗೆ ಅನಿಲದ ಕೊರತೆ ಈಗ ಹೋಟೆಲ್ ಮಾತ್ರವಲ್ಲ, ಮಾಂಸದ ಅಂಗಡಿಗಳ ಮೇಲೂ ಪರಿಣಾಮ ಬೀರಿದೆ. 

LPG Shortage| ಎಲ್‌ಪಿಜಿ ಸಿಲಿಂಡರ್ ಅಭಾವ: ಕಳೆಗುಂದಿದ ಮಾಂಸದ ಮಾರುಕಟ್ಟೆ, ಶೇ. 30ರಷ್ಟು ವ್ಯಾಪಾರ ಕುಸಿತ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಇದರ ನೇರ ಹೊಡೆತ ನಗರದ ಮಾಂಸ ಮತ್ತು ಮೀನು ಮಾರುಕಟ್ಟೆಯ ಮೇಲೆ ಬಿದ್ದಿದೆ. ಕಳೆದ ಒಂದು ವಾರದಿಂದ ಮಾಂಸದ ವಹಿವಾಟು ಶೇಕಡಾ 30ರಷ್ಟು ಕುಸಿತ ಕಂಡಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನಗರದ ಪ್ರಮುಖ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅಡುಗೆ ಅನಿಲದ ಕೊರತೆಯಿಂದಾಗಿ ತಮ್ಮ ಮೆನುವನ್ನು ಕಡಿತಗೊಳಿಸಿವೆ ಅಥವಾ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಿಲ್ಲಿಸಿವೆ. ಈ ಬೆಳವಣಿಗೆಯಿಂದಾಗಿ ಮಾಂಸದ ಸಗಟು ಬೇಡಿಕೆಯು ಪಾತಾಳಕ್ಕೆ ಕುಸಿದಿದೆ.

ನಗರದ ಪ್ರಮುಖ ಮಾರುಕಟ್ಟೆಗಳಾದ ಶಿವಾಜಿನಗರದ ರಸೆಲ್ ಮಾರ್ಕೆಟ್ ಮತ್ತು ಯಶವಂತಪುರ ಮೀನು ಮಾರುಕಟ್ಟೆಗಳಲ್ಲಿ ವ್ಯಾಪಾರ ಸಂಪೂರ್ಣ ಮಂಕಾಗಿದೆ. ಹಿಂದೆ ದಿನಕ್ಕೆ 20 ರಿಂದ 30 ಕೆಜಿ ಮೀನು ಖರೀದಿಸುತ್ತಿದ್ದ ಹೋಟೆಲ್‌ಗಳು ಈಗ ಕೇವಲ 3 ರಿಂದ 5 ಕೆಜಿಗೆ ತೃಪ್ತಿಪಡುತ್ತಿವೆ. ರಸೆಲ್ ಮಾರ್ಕೆಟ್‌ನಲ್ಲಿ ಪ್ರತಿದಿನ ಸುಮಾರು 20 ಟನ್ ಮೀನು ವಹಿವಾಟು ನಡೆಯುತ್ತಿತ್ತು, ಆದರೆ ಈಗ ಗ್ಯಾಸ್ ಬಿಕ್ಕಟ್ಟಿನಿಂದಾಗಿ ವ್ಯಾಪಾರವಿಲ್ಲದೆ ಮೀನುಗಳು ಮಾರುಕಟ್ಟೆಯಲ್ಲೇ ಉಳಿಯುವಂತಾಗಿದೆ. ಸುಮಾರು 220ಕ್ಕೂ ಹೆಚ್ಚು ವ್ಯಾಪಾರಿಗಳು ಈ ಬಿಕ್ಕಟ್ಟಿನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಡೆಕ್ಕನ್‌ ಹೆರಾಡ್ಡ್‌ ವರದಿ ಮಾಡಿದೆ.

ಕೋಳಿ ಮಾಂಸದ (ಚಿಕನ್) ಮಾರುಕಟ್ಟೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಸಗಟು ವ್ಯಾಪಾರಿಗಳು ಮಾಹಿತಿ ನೀಡುವಂತೆ, ಈ ಹಿಂದೆ ದಿನಕ್ಕೆ 80 ರಿಂದ 100 ಕೆಜಿ ಚಿಕನ್ ಪಡೆಯುತ್ತಿದ್ದ ಮಧ್ಯಮ ಗಾತ್ರದ ಹೋಟೆಲ್‌ಗಳು ಈಗ ಕೇವಲ 10 ಕೆಜಿಗಿಂತಲೂ ಕಡಿಮೆ ಆರ್ಡರ್ ಮಾಡುತ್ತಿವೆ. ಕೆಲವು ಹೋಟೆಲ್‌ಗಳು ಗ್ಯಾಸ್ ಬದಲಿಗೆ ಕಟ್ಟಿಗೆ ಒಲೆಗಳನ್ನು ಅವಲಂಬಿಸಿವೆ, ಇನ್ನು ಕೆಲವು ಮುಚ್ಚಲ್ಪಟ್ಟಿವೆ. ಇದರಿಂದಾಗಿ ಮಾರಾಟವಾಗದ ಕೋಳಿ ಮಾಂಸವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಬೇಕಾದ ಅನಿವಾರ್ಯತೆ ಎದುರಾಗಿದ್ದು, ವ್ಯಾಪಾರಿಗಳಿಗೆ ವಿದ್ಯುತ್ ಬಿಲ್ ಹೊರೆಯಾಗುತ್ತಿದೆ.

ಮಟನ್ ವ್ಯಾಪಾರಿಗಳೂ ಸಹ ಇದೇ ನೋವನ್ನು ಹಂಚಿಕೊಂಡಿದ್ದಾರೆ. ಯುಗಾದಿ ಹಬ್ಬದ ಸನಿಹದಲ್ಲಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರಬೇಕಿತ್ತು, ಆದರೆ ಹೋಟೆಲ್‌ಗಳಲ್ಲಿ ಅಡುಗೆಯಾಗದಿದ್ದರೆ ನಮಗೆ ವ್ಯಾಪಾರವೇ ಇಲ್ಲ ಎಂದು ವ್ಯಾಪಾರಿ ಸೈಯದ್ ಖಾನ್ ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂದರೆ, ದಾಸ್ತಾನು ಖಾಲಿ ಮಾಡಲು ಸಗಟು ದರದಲ್ಲಿ ಪ್ರತಿ ಕೆಜಿಗೆ 25 ರೂಪಾಯಿ ಇಳಿಕೆ ಮಾಡಿದರೂ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಒಟ್ಟಾರೆಯಾಗಿ ಎಲ್‌ಪಿಜಿ ಕೊರತೆಯು ನಗರದ ಅಡುಗೆ ಮನೆಯಿಂದ ಹಿಡಿದು ಮಾರುಕಟ್ಟೆಯವರೆಗೂ ಸರಪಳಿ ರೂಪದಲ್ಲಿ ಆರ್ಥಿಕ ಹೊಡೆತ ನೀಡುತ್ತಿದೆ.

Read More
Next Story