
Shivalik LPG tanker| ಭಾರತಕ್ಕೆ ಬಿಗ್ ರಿಲೀಫ್! ಗುಜರಾತ್ ತಲುಪಿದ ಎಲ್‌ಪಿಜಿ ಹೊತ್ತ ʻಶಿವಾಲಿಕ್' ನೌಕೆ
Iran Israel war 2026| ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಸೀಳಿ ಭಾರತದ ಶಿವಾಲಿಕ್ ಮತ್ತು ನಂದಾದೇವಿ ನೌಕೆಗಳು ಸುರಕ್ಷಿತವಾಗಿ ಮರಳಿವೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆಯೂ ಭಾರತದ ಎರಡು ಪ್ರಮುಖ ಎಲ್‌ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಸೇರಿದ 'ಶಿವಾಲಿಕ್' ಹಡಗು ಸೋಮವಾರ ಸಂಜೆ 5 ಗಂಟೆಗೆ ಗುಜರಾತ್‌ನ ಮುದ್ರಾ ಬಂದರನ್ನು ತಲುಪಿದೆ. ಮತ್ತೊಂದು ಹಡಗು 'ನಂದಾದೇವಿ' ಮಂಗಳವಾರ ಮುಂಜಾನೆ ಗುಜರಾತ್‌ನ ಕಾಂಡ್ಲಾ ಬಂದರನ್ನು ತಲುಪುವ ನಿರೀಕ್ಷೆಯಿದೆ.
ಸುಮಾರು 92,700 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು (LPG) ಹೊತ್ತೊಯ್ಯುತ್ತಿರುವ ಈ ನೌಕೆಗಳ ಸುರಕ್ಷಿತ ಪ್ರಯಾಣದ ಹಿಂದೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ತೀವ್ರ ರಾಜತಾಂತ್ರಿಕ ಪ್ರಯತ್ನಗಳಿವೆ. ಇರಾನ್ ಅಧ್ಯಕ್ಷರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ, ಈ ಪ್ರಮುಖ ಜಲಮಾರ್ಗದಲ್ಲಿ ಭಾರತೀಯ ಹಡಗುಗಳಿಗೆ ಹಸಿರು ನಿಶಾನೆ ಸಿಕ್ಕಿದೆ.
ಫೆಬ್ರವರಿ 28, 2026 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವಾಯುದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್, ವಿಶ್ವದ ಒಟ್ಟು ತೈಲ ಮತ್ತು ಅನಿಲ ವ್ಯಾಪಾರದ ಶೇ. 20ರಷ್ಟು ಭಾಗ ಸಾಗುವ ಹಾರ್ಮುಜ್ ಜಲಸಂಧಿಯಲ್ಲಿ ಅನಧಿಕೃತ ದಿಗ್ಬಂಧನ ಹೇರಿತ್ತು. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100ಡಾಲರ್ ದಾಟಿತ್ತು.
ಭಾರತೀಯ ಹಡಗುಗಳ ಯಶಸ್ವಿ ಸಂಚಾರ
ಈ ಬಿಕ್ಕಟ್ಟಿನ ನಡುವೆಯೂ ಭಾರತದ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಸೇರಿದ ಎರಡು ಪ್ರಮುಖ ಎಲ್‌ಪಿಜಿ (LPG) ಟ್ಯಾಂಕರ್‌ಗಳು ಸುರಕ್ಷಿತವಾಗಿ ಭಾರತಕ್ಕೆ ಮರಳಿವೆ. ಕತಾರ್‌ನಿಂದ ಸುಮಾರು 55,000 ಟನ್ ಎಲ್‌ಪಿಜಿ ಹೊತ್ತು ಬಂದ ಶಿವಾಲಿಕ್ ಹಡಗು ಸೋಮವಾರ ಸಂಜೆ 5 ಗಂಟೆಗೆ ಗುಜರಾತ್‌ನ ಮುದ್ರಾ ಬಂದರನ್ನು ತಲುಪಿದೆ. ಇದು ಭಾರತದ ಒಂದು ದಿನದ ಒಟ್ಟು ಎಲ್‌ಪಿಜಿ ಬಳಕೆಗೆ ಸಮನಾದ ಅನಿಲವನ್ನು ಹೊತ್ತು ತಂದಿದೆ.
ಸುಮಾರು 46,000 ಟನ್ ಎಲ್‌ಪಿಜಿ ಹೊಂದಿರುವ ನಂದಾದೇವಿ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಮಂಗಳವಾರ ಮುಂಜಾನೆ ಮುಂಬೈ ಅಥವಾ ಕಾಂಡ್ಲಾ ಬಂದರನ್ನು ತಲುಪುವ ನಿರೀಕ್ಷೆಯಿದೆ. ಓಮನ್‌ನಿಂದ ಆಫ್ರಿಕಾಕ್ಕೆ ಪೆಟ್ರೋಲ್ ಸಾಗಿಸುತ್ತಿರುವ ಮತ್ತೊಂದು ಭಾರತೀಯ ಹಡಗು ಜಗ್ ಪ್ರಕಾಶ್ ಜಲಸಂಧಿಯ ಪೂರ್ವ ಭಾಗದಿಂದ ಯಶಸ್ವಿಯಾಗಿ ಪ್ರಯಾಣ ಬೆಳೆಸಿದೆ.
ರಾಜತಾಂತ್ರಿಕ ಚದುರಂಗದಾಟ
ಈ ಹಡಗುಗಳ ಸುರಕ್ಷಿತ ಸಂಚಾರವು ಕೇವಲ ಆಕಸ್ಮಿಕವಲ್ಲ; ಇದು ಭಾರತದ ತೀವ್ರಗತಿಯ ರಾಜತಾಂತ್ರಿಕ ಪ್ರಯತ್ನದ ಫಲ ಎನ್ನಲಾಗಿದೆ. ಪ್ರಧಾನಿ ಮೋದಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಹಡಗುಗಳ ಸಂಚಾರದ ಬಗ್ಗೆ ಮಾತುಕತೆ ನಡೆಸಿದ್ದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ನಾಲ್ಕು ಸುತ್ತಿನ ಮಾತುಕತೆ ನಡೆಸಿ, ಭಾರತದ ಇಂಧನ ಭದ್ರತೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಭಾರತವು "ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಇರಾನ್ ಜೊತೆ ನೇರ ಮಾತುಕತೆ ನಡೆಸುವುದು ಹೆಚ್ಚು ಪರಿಣಾಮಕಾರಿ" ಎಂಬ ನಿಲುವನ್ನು ತಳೆದಿದೆ.
ಸಂಘರ್ಷದ ಆತಂಕ ಮತ್ತು ಸಾವು-ನೋವು
ಜಲಸಂಧಿಯಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಕಳೆದ ವಾರವಷ್ಟೇ ಗುಜರಾತ್‌ನ ಕಾಂಡ್ಲಾಕ್ಕೆ ಬರುತ್ತಿದ್ದ ಥೈಲ್ಯಾಂಡ್ ಧ್ವಜದ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದಾಳಿ ನಡೆಸಿದ್ದವು. ಈ ಸಂಘರ್ಷದ ಅವಧಿಯಲ್ಲಿ ಈವರೆಗೆ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

