Stray Dog Adoption| ಸುಪ್ರೀಂ ಸೂಚನೆ ಪಾಲನೆ: ಬೀದಿ ನಾಯಿಗಳ ದತ್ತು ಸ್ವೀಕಾರ
x
ಬೆಂಗಳೂರು ನಗರ ಪಾಲಿಕೆ ಸೆರೆಹಿಡಿದಿರುವ ಬೀಡಾಡಿ ನಾಯಿಗಳು

Stray Dog Adoption| ಸುಪ್ರೀಂ ಸೂಚನೆ ಪಾಲನೆ: ಬೀದಿ ನಾಯಿಗಳ ದತ್ತು ಸ್ವೀಕಾರ

ಬೆಂಗಳೂರಿನ 5 ನಗರಪಾಲಿಕೆ ವ್ಯಾಪ್ತಿಗಳಲ್ಲಿ ಸ್ಥಳಾಂತರಕ್ಕೆ ಅರ್ಹವಾದ 4,428 ನಾಯಿಗಳನ್ನು ಗುರುತಿಸಲಾಗಿದೆ. ಈ ನಡುವೆ 2025 ಜನವರಿ-ಜುಲೈವರೆಗೆ 13,821 ನಾಯಿ ಕಡಿತ ಪ್ರಕರಣಗಳಾಗಿವೆ.


Click the Play button to hear this message in audio format

ಬೀದಿನಾಯಿಗಳ ಹಾವಳಿ ಕಡಿಮೆ ಮಾಡಲು ಹಾಗೂ ಸುಪ್ರೀಂ ಕೋರ್ಟ್‌ ರೂಪಿಸಿರುವ ನಿಯಮಗಳ ಪಾಲನೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳ ಮಾನವೀಯ ನಿರ್ವಹಣೆ, ದತ್ತು ಪ್ರೋತ್ಸಾಹ ಮತ್ತು ಪ್ರಾಣಿ ಕಲ್ಯಾಣಕ್ಕೆ ಒತ್ತು ನೀಡುವ ಉದ್ದೇಶದಿಂದ ಆಸಕ್ತ ಶ್ವಾನ ಪ್ರಿಯರಿಗೆ ದತ್ತು ನೀಡಲಾಗುತ್ತಿದೆ.

ಈ ಬಗ್ಗೆ ಆಂದೋಲನ ಕೈಗೊಂಡಿರುಯವ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್‌ ಕುಮಾರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಭಾನುವಾರ(ಫೆ.15) ಉತ್ತರ ನಗರ ಪಾಲಿಕೆಯಿಂದ ಸುಜಯ ಜಗದೀಶ್‌ ಎಂಬವರಿಗೆ ಒಟ್ಟು 20 ಬೀದಿ ನಾಯಿಗಳನ್ನು ದತ್ತು ನೀಡಲಾಗಿದೆ. ಈ ಕಾರ್ಯವನ್ನು ಪ್ರಾಣಿಗಳ ಮೇಲೆ ಕ್ರೂರತೆ ತಡೆ ಕಾಯ್ದೆ, 1960 (PCA Act) ಹಾಗೂ Animal Birth Control (ABC) Rules, 2023 ನಿಯಮಾವಳಿಗಳ ಅನುಸಾರ ಮಾನವೀಯ ವಿಧಾನದಲ್ಲಿ ನಡೆಸಲಾಗಿದೆ.

ದತ್ತು ನೀಡಲಾದ ಎಲ್ಲಾ ನಾಯಿಗಳಿಗೆ ಅಗತ್ಯವಾದ ಲಸಿಕೆ (ARV ಹಾಗೂ ಸಂಯುಕ್ತ ಲಸಿಕೆ) ಸಂತಾನ ಹರಣ ಶಸ್ರ ಚಿಕಿತ್ಸೆ (ABC), ಆರೋಗ್ಯ ಪರಿಶೀಲನೆ ಮತ್ತು ಗುರುತಿಸುವಿಕೆ (Tagging) ಕ್ರಮಗಳನ್ನು ಪಾಲಿಕೆಯ ವತಿಯಿಂದ ಪೂರ್ಣಗೊಳಿಸಲಾಗಿದೆ ಎಂದರು.

ಸಾರ್ವಜನಿಕರು ದತ್ತು ಪಡೆಯಲಿ

ಬೀದಿ ನಾಯಿಗಳ ದತ್ತು ಸ್ವೀಕಾರವು ನಗರದಲ್ಲಿ ನಾಯಿಗಳ ಮಾನವೀಯ ನಿಯಂತ್ರಣ, ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಹಕಾರಿ ಹಾಗೂ ಸಾರ್ವಜನಿಕರು ಬೀದಿ ನಾಯಿಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪಾಲಿಕೆ ವತಿಯಿಂದ ಮುಂದಿನ ದಿನಗಳಲ್ಲಿಯೂ ಬೀದಿ ನಾಯಿಗಳ ದತ್ತು, ABC & ARV ಕಾರ್ಯಕ್ರಮಗಳು ಹಾಗೂ ಪ್ರಾಣಿ ಕಲ್ಯಾಣ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಆಸಕ್ತ ನಾಗರಿಕರು ಪಾಲಿಕೆಯ ಪಶುಪಾಲನಾ ವಿಭಾಗವನ್ನು ಸಂಪರ್ಕಿಸಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ದತ್ತು ಪಡೆಯಲು ಬ್ಯಾಟರಾಯನಪುರದ ಅಮೃತಹಳ್ಳಿ ಮುಖ್ಯ ರಸ್ತೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿಯಲ್ಲಿನ ಪಶುಪಾಲನಾ ವಿಭಾಗದಲ್ಲಿ ಸಂಪರ್ಕಿಸಬಹುದು. ಇ-ಮೇಲ್‌- adyelahanka@gmail.com ಗೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.

ಇಪ್ಪತ್ತು ಬೀದಿ ನಾಯಿಗಳನ್ನು ಪಾಲಿಕೆಯಿಂದ ದತ್ತು ಪಡೆದ ಸುಜಯ ಜಗದೀಶ್

ಬೀದಿ ನಾಯಿಗಳನ್ನು ದತ್ತು ಪಡೆದ ಸುಜಯ ಜಗದೀಶ್ ಮಾತನಾಡಿ, "ಪಾಲಿಕೆಯ ದತ್ತು ಕಾರ್ಯಕ್ರಮದಡಿ ನಾಯಿಗಳಿಗೆ ಸಮರ್ಪಕ ಆಹಾರ, ಆಶ್ರಯ, ವೈದ್ಯಕೀಯ ಆರೈಕೆ ಹಾಗೂ ಮಾನವೀಯ ಸಂರಕ್ಷಣೆ ನೀಡುವುದಾಗಿ ಭರವಸೆ" ನೀಡಿದರು.

ಸುಪ್ರೀಂ ಕೋರ್ಟ್ ಆದೇಶವೇನು?

ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿ ಕಲ್ಯಾಣ ಎರಡನ್ನೂ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಲ್ಲಾ ರಾಜ್ಯಗಳಿಗೂ ಮಹತ್ವದ ಸೂಚನೆ ನೀಡಿತ್ತು. ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ಕ್ರೀಡಾಂಗಣಗಳು ಮತ್ತು ಇತರೆ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ಅವುಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಆದರೆ, ಅವುಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ. ಬದಲಾಗಿ, ಪ್ರತ್ಯೇಕ ಶೆಲ್ಟರ್‌ಗಳನ್ನು (ಆಶ್ರಯ ತಾಣ) ನಿರ್ಮಿಸಿ, ಅಲ್ಲಿಗೆ ಸ್ಥಳಾಂತರಿಸಿ ಲಸಿಕೆ ಹಾಗೂ ಸೂಕ್ತ ಆಹಾರ ನೀಡಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.

ನಗರದಲ್ಲಿ 4,428 ನಾಯಿಗಳ ಗುರುತು

ಬೆಂಗಳೂರಿನ 5 ನಗರಪಾಲಿಕೆ ವ್ಯಾಪ್ತಿಗಳಲ್ಲಿ ಸಮೀಕ್ಷೆ ನಡೆಸಿರುವ ಅಧಿಕಾರಿಗಳು, ಸ್ಥಳಾಂತರಕ್ಕೆ ಅರ್ಹವಾದ 4,428 ನಾಯಿಗಳನ್ನು ಗುರುತಿಸಿದ್ದಾರೆ. ಈ ನಾಯಿಗಳಿಗೆ ಶೆಲ್ಟರ್ ನಿರ್ಮಾಣ, ಸಿಬ್ಬಂದಿ ನಿರ್ವಹಣೆ, ಲಸಿಕೆ ಮತ್ತು ಮುಖ್ಯವಾಗಿ ಆಹಾರ ಪೂರೈಕೆಗಾಗಿ ವಾರ್ಷಿಕ 18 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಪಾಲಿಕೆವಾರು ನಾಯಿಗಳ ಸಂಖ್ಯೆ ಎಷ್ಟು ?

ಬೆಂಗಳೂರು ಉತ್ತರದಲ್ಲಿ 2,339 (ಅತಿ ಹೆಚ್ಚು), ಕೇಂದ್ರ ವಲಯದಲ್ಲಿ 1,223, ಪಶ್ಚಿಮ ವಲಯದಲ್ಲಿ 525, ಪೂರ್ವ ವಲಯದಲ್ಲಿ 274 ಹಾಗೂ ದಕ್ಷಿಣ ವಲಯದಲ್ಲಿ 131 ನಾಯಿಗಳನ್ನು ಗುರುತಿಸಲಾಗಿದೆ.

ಆರು ತಿಂಗಳಲ್ಲಿ 2.81 ಲಕ್ಷ ಪ್ರಕರಣ

2025ರ ಅಂತ್ಯದ ವೇಳೆಗೆ (ಅಕ್ಟೋಬರ್ ವರೆಗೆ) ರಾಜ್ಯದಲ್ಲಿ ಒಟ್ಟು 3,97,894 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳು ತಿಳಿಸಿವೆ. ಇದರಲ್ಲಿ ವಿಜಯಪುರದಲ್ಲಿ ಅತಿ ಹೆಚ್ಚು 15,527 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 13,821 ಪ್ರಕರಣಗಳು ದಾಖಲಾಗಿವೆ. ರೇಬೀಸ್‌ನಿಂದ ಬೆಂಗಳೂರಿನಲ್ಲಿ 9 ಸಾವುಗಳು ಸಂಭವಿಸಿದ್ದವು. 2024 ರಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, 2025ರ ಹತ್ತು ತಿಂಗಳಲ್ಲೇ 3.97ಲಕ್ಷ ಪ್ರಕರಣಗಳು ದಾಖಲಾಗಿರುವುದು ನಾಯಿ ಕಡಿತದ ಹೆಚ್ಚಳವನ್ನು ಸೂಚಿಸುತ್ತದೆ.

ಯಾವ ಜಿಲ್ಲೆಯಲ್ಲಿ ಎಷ್ಟು ನಾಯಿ ಕಡಿತ ಪ್ರಕರಣ?

ವಿಜಯಪುರದಲ್ಲಿ 15,527, ಬೆಂಗಳೂರಿನಲ್ಲಿ 13,821, ಹಾಸನದಲ್ಲಿ 13,388, ದಕ್ಷಿಣ ಕನ್ನಡದಲ್ಲಿ 12,524 ಹಾಗೂ ಬಾಗಲಕೋಟೆಯಲ್ಲಿ 12,392 ಪ್ರಕರಣಗಳು ದಾಖಲಾಗಿದ್ದವು.

Read More
Next Story