Congress delegation requests Commission to correct irregularities in voter list
x

ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ನಿಯೋಗವು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಆಯುಕ್ತರಿಗೆ ಮನವಿ ಸಲ್ಲಿಸಿದರು. 

ಮತದಾರರ ಪಟ್ಟಿ ಅಕ್ರಮವೇ; ಆಯೋಗಕ್ಕೆ ಕಾಂಗ್ರೆಸ್‌ ಮನವಿ ಏನು?

ಬಿಎಲ್ಒಗಳಿಂದ ವೋಟರ್‌ಲಿಸ್ಟ್‌ನಲ್ಲಿ ಅಕ್ರಮಗಳಾಗುತ್ತಿವೆ. ಕಳೆದ ಬಾರಿ ಒಂದು ಕುಟುಂಬದ ಮತಗಳನ್ನು ಬೇರೆ ಬೇರೆ ಬೂತ್‌ಗಳಿಗೆ ಸೇರಿಸಲಾಗಿತ್ತು ಎಂಬುದು ಕಾಂಗ್ರೆಸ್‌ ನಿಯೋಗದ ದೂರು.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಗೆ ಸಿದ್ಧತೆಗಳು ಆರಂಭವಾದ ಬೆನ್ನಲ್ಲೇ ಚುನಾವಣಾ ಆಯೋಗ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಗೆ ಆಡಳಿತ ರೂಢ ಕಾಂಗ್ರೆಸ್‌ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ಮತಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿದ್ದು, ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಪಟ್ಟಿ ಪರಿಷ್ಕರಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸದಸ್ಯರ ನಿಯೋಗ ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಕದ ತಟ್ಟಿದೆ.

ಮಂಗಳವಾರ(ಫೆ.17) ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ಅವರನ್ನು ಭೇಟಿಯಾದ ನಿಯೋಗವು ಮತದಾರರ ಪಟ್ಟಿಯ ಲೋಪಗಳು ಸೇರಿ ತ್ವರಿತವಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿದೆ. ಇದರಿಂದ ಚುನಾವಣಾ ಆಯೋಗವು ಜಿಬಿಎ ಚುನಾವಣೆ ಸಂಬಂಧ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳು ಹೆಚ್ಚಿವೆ.

"ಬಿಎಲ್ಒಗಳು ಮತಪಟ್ಟಿಯಲ್ಲಿ ಅಕ್ರಮ ಎಸಗುತ್ತಿದ್ದಾರೆ. ಕಳೆದ ಬಾರಿ ಒಂದೇ ಕುಟುಂಬದ ಮತಗಳನ್ನು ಬೇರೆ ಬೇರೆ ಬೂತ್‌ಗಳಿಗೆ ಸೇರಿಸಲಾಗಿತ್ತು. ಸಮರ್ಪಕವಾದ ಮ್ಯಾಪಿಂಗ್ ಕಾರ್ಯ ನಡೆಯುತ್ತಿಲ್ಲ. ಆಯೋಗ ನೇಮಿಸಿರುವ ಬಿಎಲ್ಒಗಳ ಜತೆಗೆ ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟರನ್ನು(ಬಿಎಲ್‌ಎ) ಕರೆದುಕೊಂಡು ಹೋಗಿ ಪರಿಷ್ಕರಣೆ ಮಾಡಬೇಕು. ಮತದಾರರ ಪಟ್ಟಿಯ ಜತೆಗೆ, ಮನೆಗಳು ಹಾಗೂ ಮತಗಳ ಮ್ಯಾಪಿಂಗ್ ಕೂಡ ಆಗಬೇಕು" ಎಂದು ಮನವಿ ಮಾಡಿದೆ.

ರಾಜ್ಯ ಚುನಾವಣಾ ಆಯೋಗದ ಆಯುಕ್ತರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, “ ರಾಜ್ಯ ಚುನಾವಣಾ ಆಯೋಗವು ಮುಂಬರುವ ಜಿಬಿಎ ಪಾಲಿಕೆ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಿದೆ. ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದು, ಈ ಹಿಂದೆ ನೀಡಿದ್ದ ಮತದಾರರ ಪಟ್ಟಿ ಆಧಾರವಾಗಿ ಇಟ್ಟುಕೊಂಡು ಪರಿಷ್ಕರಣೆ ಮಾಡುತ್ತಿದೆ. ಈಗ ಬಿಡುಗಡೆಯಾಗಿರುವ ಮತದಾರರ ಕರಡು ಪಟ್ಟಿಯಲ್ಲಿ ಕೆಲವು ಲೋಪಗಳಿವೆ. ಅವನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

ಪಟ್ಟಿಯ ಲೋಪಗಳ ಮಾಹಿತಿ ಕೊಟ್ಟ ನಿಯೋಗ

"ಕಳೆದ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳು ಹಾಗೂ ಬೂತ್‌ಗಳಲ್ಲಿ ಆಗಿದ್ದ ಲೋಪಗಳನ್ನು ಸರಿಪಡಿಸಬೇಕು. ನ್ಯಾಯಬದ್ಧವಾಗಿ ಕಾನೂನು ಚೌಕಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಈ ಹಿಂದೆ ಮತದಾರರ ಬದಲಿಗೆ ಬೇರೆಯವರು ಫಾರಂ ಡಿಲೀಟ್ ಮಾಡಿಸಿದ್ದಾರೆ. ಇದೆಲ್ಲವನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು. ಮತದಾರರ ಪಟ್ಟಿಯನ್ನು ಈಗಲೇ ಪರಿಷ್ಕರಿಸಬೇಕು. ನಾಳೆ ತಪ್ಪುಗಳಾದರೆ ಆಯೋಗಕ್ಕೂ, ಸರ್ಕಾರಕ್ಕೂ ಕೆಟ್ಟ ಹೆಸರು ಬರಲಿದೆ ಎಂಬುದನ್ನು ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈವರೆಗೂ ಮತದಾರರ ಪಟ್ಟಿಯಲ್ಲಿ ನಾವು ಕಂಡಿರುವ ಲೋಪದೋಷಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ" ಎಂದರು.

ಮತಗಳನ್ನು ಬೇರೆ ಬೂತ್‌ಗಳಿಗೆ ವಿಂಗಡಿಸುವುದು, ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಅಕ್ರಮವಾಗಿ ತೆಗೆದಿರುವವರು, ನಕಲಿ ಮತಗಳನ್ನು ಸೇರಿಸಿರುವ ಬಿಎಲ್ಒಗಳನ್ನು ಅಮಾನತುಗೊಳಿಸಬೇಕು. ಕಾನೂನು ಚೌಕಟ್ಟಿನಲ್ಲಿ ಮತದಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದೇವೆ. ” ಎಂದು ಹೇಳಿದರು.

ಮ್ಯಾಪಿಂಗ್ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಿ

"ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಜವಾಬ್ದಾರಿಯನ್ನು ರಾಜ್ಯ ಚುನಾವಣಾ ಆಯೋಗ ಹೊತ್ತಿದೆ. ಈ ಹಿಂದೆ ಇದ್ದ ಮತದಾರರ ಪಟ್ಟಿ ಸರಿಯಿಲ್ಲ. ಮತ್ತೊಮ್ಮೆ ಮ್ಯಾಪಿಂಗ್ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಯಾರಿಗೆ ಮತದಾನ ಮಾಡುವ ಅರ್ಹತೆ ಇದೆಯೋ, ಅವರಿಗೆ ಮತದಾನದ ಹಕ್ಕು ನೀಡಬೇಕು” ಎಂದು ಅಭಿಪ್ರಾಯಪಟ್ಟರು.

Read More
Next Story