ಉರ್ದು ಭಾಷೆ ಆಹ್ವಾನ ಪತ್ರಿಕೆ ವಿವಾದ; ಆರೋಗ್ಯ ಇಲಾಖೆ ಸ್ಪಷ್ಟನೆ
x

ಉರ್ದು ಭಾಷೆ ಆಹ್ವಾನ ಪತ್ರಿಕೆ ವಿವಾದ; ಆರೋಗ್ಯ ಇಲಾಖೆ ಸ್ಪಷ್ಟನೆ

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಆಂಬುಲನ್ಸ್ ಸೇವೆ ಉದ್ಘಾಟನೆ ಕಾರ್ಯಕ್ರಮ ಕುರಿತು ಉರ್ದುವಿನಲ್ಲಿ ನೀಡಿದ್ದ ಆಮಂತ್ರಣ ಪತ್ರಿಕೆ ಕುರಿತು ʼದ ಫೆಡರಲ್‌ ಕರ್ನಾಟಕʼ ವರದಿ ಮಾಡಿತ್ತು.


Click the Play button to hear this message in audio format

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಆಂಬುಲನ್ಸ್ ಸೇವೆ ಉದ್ಘಾಟನೆ ಕಾರ್ಯಕ್ರಮದ ಕುರಿತು ಉರ್ದುವಿನಲ್ಲಿ ನೀಡಿದ ಆಮಂತ್ರಣ ಪತ್ರಿಕೆಯು ವಿವಾದಕ್ಕೆ ಕಾರಣವಾದ ಬಳಿಕ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ ನೀಡಿದ್ದಾರೆ.

ಪ್ರತಿಪಕ್ಷ ಬಿಜೆಪಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಒಂದು ಅಧಿಕೃತ ಆಮಂತ್ರಣ ಪತ್ರಿಕೆಗೂ ಮತ್ತು ಪತ್ರಿಕಾ ಜಾಹಿರಾತಿಗೂ ಇರುವ ವ್ಯತ್ಯಾಸ ತಿಳಿಯದ ಮಟ್ಟಿಗೆ ಬಿಜೆಪಿ ನಾಯಕರ ಬುದ್ಧಿ ಮಂಕಾಗಿದೆಯೇ? ಅಥವಾ ಜನರನ್ನು ದಾರಿ ತಪ್ಪಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯ ಜಾಹೀರಾತು ಹಿಡಿದು ನಾಡದ್ರೋಹಿ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ, ವಿಶ್ವ ಗುರು ಫೋಟೋ ಸೇರಿಸಿ ನಿಮ್ಮದೇ ಅಧಿಕಾರಾವಧಿಯ ಎಷ್ಟು ಜಾಹೀರಾತು ನೀಡಿದ್ದೀರಿ ಅಂತ ಒಮ್ಮೆ ತಿರುಗಿ ನೋಡಿ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿದ್ದಾಗ ಉರ್ದು ಪತ್ರಿಕೆಗಳಲ್ಲಿ ಜಾಹೀರಾತುಗಳು ಪ್ರಕಟವಾಗಿರಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ನಿಮ್ಮ ತರ್ಕದ ಪ್ರಕಾರ ನೋಡುವುದಾದರೆ ಅಂದು ಉರ್ದುವಿನಲ್ಲಿ ಜಾಹೀರಾತು ನೀಡಿದ್ದ ಬಿಜೆಪಿ ನಾಯಕರೆಲ್ಲರೂ ನಾಡದ್ರೋಹಿಗಳಾ? ಅಥವಾ ಬಿಜೆಪಿ ಮಾಡಿದಾಗ ಅದು ಮಾಹಿತಿ ಪ್ರಸಾರವಾಗುತ್ತದೆ, ಕಾಂಗ್ರೆಸ್ ಮಾಡಿದರೆ ನಾಡದ್ರೋಹವಾ? ಎಂದು ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇಲ್ಲಿ ಯಾವುದೇ ಆಮಂತ್ರಣ ಪತ್ರಿಕೆ ಉರ್ದುವಿನಲ್ಲಿಲ್ಲ, ಆಯಾ ಭಾಷೆಯ ಓದುಗರಿಗೆ ಮಾಹಿತಿ ತಲುಪಿಸಲು ಪತ್ರಿಕೆಗಳ ಭಾಷೆಯಲ್ಲೇ ಜಾಹೀರಾತು ನೀಡುವುದು ಆಡಳಿತದ ಸಾಮಾನ್ಯ ಪ್ರಕ್ರಿಯೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಇನ್ನೂ ನಮ್ಮ ಮನೆಯ ಆಡುಭಾಷೆಯ ಬಗ್ಗೆ ಅತಿಯಾದ ಆಸಕ್ತಿ ತೋರುತ್ತಿರುವ ನಿಮಗೆ ನಾನೊಂದು ಸೌಹಾರ್ದಯುತ ಆಹ್ವಾನ ನೀಡುತ್ತಿದ್ದೇನೆ. ಒಮ್ಮೆ ನಮ್ಮ ಮನೆಗೆ ಬನ್ನಿ, ನಿಮ್ಮನ್ನು ಸತ್ಕರಿಸುವುದಕ್ಕೆ ನಮಗೆ ಖುಷಿಯಿದೆ. ಜತೆಯಾಗಿ ಕೂತು ಊಟ ಮಾಡೋಣ, ವಿಶ್ವಾಸದಿಂದ ಮಾತಾಡೋಣ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ “ಸರ್ವ ಜನಾಂಗ ಶಾಂತಿಯ ತೋಟ” ನಿರ್ಮಿಸೋಣ. ಇನ್ನೂ ಸತ್ಯದ ಪರಾಮರ್ಶೆ ನಡೆಸದೆ ಬಿಜೆಪಿಯ ಸುಳ್ಳುಗಳನ್ನೇ ನಂಬಿ ಸುದ್ದಿ ಎಂದು ಬಿತ್ತರಿಸುತ್ತಿರುವ ಕೆಲವು ಮಾಧ್ಯಮಗಳೇ, ಇದು ಪತ್ರಿಕಾ ಧರ್ಮವೇ? ಇನ್ನಾದರೂ ಈ ನಡೆಯನ್ನು ನಿಲ್ಲಿಸಬೇಕು ಎಂಬುದು ನನ್ನ ವಿನಂತಿ ಎಂದಿದ್ದಾರೆ.

ಟೀಕೆ ಮಾಡುವುದೇ ಬಿಜೆಪಿ ಚಾಳಿ

ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಜಾಹೀರಾತು ನೀಡುವಾಗ ಉರ್ದು ಪತ್ರಿಕೆಗೆ ಉರ್ದುವಿನಲ್ಲಿ ನೀಡಬೇಕು. ಹೀಗಾಗಿ ಉರ್ದುವಿನಲ್ಲಿ ನೀಡಲಾಗಿದೆ. ಅದು ಆಹ್ವಾನ ಪತ್ರಿಕೆಯಲ್ಲ. ಬಿಜೆಪಿಯವರಿಗೆ ಅಧಿಕಾರದಲ್ಲಿದ್ದಾಗ ಏನೂ ಮಾಡುವುದಿಲ್ಲ. ಪ್ರತಿಪಕ್ಷದಲ್ಲಿದ್ದಾಗ ಪ್ರತಿಭಟನೆ ಮಾಡುವುದೇ ಚಾಳಿ ಆಗಿದೆ ಎಂದು ಟೀಕಿಸಿದ್ದಾರೆ.

Read More
Next Story