
ಭಾಷಾ ವಿವಾದದ ಕಿಚ್ಚು! ಉರ್ದುವಿನಲ್ಲಿ ಸರ್ಕಾರಿ ಆಮಂತ್ರಣ ಪತ್ರಿಕೆ
ಹಿಮೋಫಿಲಿಯಾ ಚಿಕಿತ್ಸಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಬಳಸಿರುವುದು ಕರ್ನಾಟಕದಲ್ಲಿ ಭಾರಿ ವಿವಾದ ಸೃಷ್ಟಿಸಿದೆ.
ಕರ್ನಾಟಕ ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ ಜತೆಗೆ ಉರ್ದು ಭಾಷೆಯಲ್ಲೂ ಮುದ್ರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಏನಿದು ಘಟನೆ?
ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಅಧಿಕೃತ ಆಹ್ವಾನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಮುದ್ರಿಸಲಾಗಿದೆ. ಆದರೆ, ಈ ಹಿಂದೆ ಯಾವ ಕಾರ್ಯಕ್ರಮದಲ್ಲೂ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿರಲಿಲ್ಲ. ಆದರೆ, ಈಗ ಸರ್ಕಾರದ ಹೊಸ ನಡೆಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಾಮಾನ್ಯವಾಗಿ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರುವುದು ಶಿಷ್ಟಾಚಾರ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದನ್ನು ಗಾಳಿಗೆ ತೂರಿ ಉರ್ದುವಿನಲ್ಲೂ ಮುದ್ರಿಸಿರುವುದು ವಿವಾದ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇದು "ಮುಸ್ಲಿಂ ಓಲೈಕೆಯ ರಾಜಕಾರಣ" ಎಂದು ಟೀಕಿಸಿದ್ದಾರೆ.
ಕಾನೂನು ಏನು ಹೇಳುತ್ತದೆ?
1963ರ ಕರ್ನಾಟಕ ರಾಜ್ಯ ಅಧಿಕೃತ ಭಾಷಾ ಕಾಯ್ದೆ ಅನ್ವಯ, ಕರ್ನಾಟಕದ ಏಕೈಕ ಅಧಿಕೃತ ಭಾಷೆ ಕನ್ನಡ. ರಾಜ್ಯದಲ್ಲಿ ಶೇ. 10 ಕ್ಕೂ ಹೆಚ್ಚು ಜನರು ಉರ್ದು ಮಾತನಾಡುತ್ತಾರೆಯಾದರೂ, ಅದಕ್ಕೆ ಅಧಿಕೃತ ಭಾಷೆಯ ಸ್ಥಾನಮಾನವಿಲ್ಲ. ನೆರೆಯ ಆಂಧ್ರಪ್ರದೇಶ (2022) ಮತ್ತು ತೆಲಂಗಾಣ (2017) ರಾಜ್ಯಗಳು ಉರ್ದುವನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿವೆ. ಆದರೆ, ಕರ್ನಾಟಕದಲ್ಲಿ ಅಂತಹ ಯಾವುದೇ ಕಾನೂನು ಇಲ್ಲದಿರುವಾಗ ಸರ್ಕಾರದ ಇಲಾಖೆಯೇ ಹೀಗೆ ವರ್ತಿಸಿರುವುದು ಭಾಷಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸರಣಿ ಉರ್ದು ವಿವಾದಗಳು
ಉರ್ದು ಭಾಷಾ ವಿವಾದ ಇಂದು ನಿನ್ನೆಯದ್ದಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. 2024ರಲ್ಲಿ ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಉರ್ದು ಭಾಷೆ ಕಡ್ಡಾಯಗೊಳಿಸಿದ್ದು ವಿವಾದ ಸೃಷ್ಟಿಸಿತ್ತು. ಇದನ್ನು ಬಿಜೆಪಿ "ಭಾಷಾ ಆಧಾರಿತ ಓಲೈಕೆ" ಎಂದು ಟೀಕಿಸಿತ್ತು. 2026ರಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಉರ್ದು ಶಾಲೆಗಳ ಅವಧಿಯನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ರವರೆಗೆ ಕಡಿತಗೊಳಿಸಿದ್ದು ವಿವಾದಕ್ಕೀಡಾಗಿತ್ತು.
2025ರಲ್ಲಿ ಉರ್ದು ಅಭಿವೃದ್ಧಿಗೆ 100 ಕೋಟಿ ರೂ. ನೀಡಿ, ಕನ್ನಡಕ್ಕೆ ಕೇವಲ 32 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, "ಇದು ಕೇವಲ ಮೂಲಸೌಕರ್ಯಕ್ಕೆ ನೀಡಿದ ಅನುದಾನವೇ ಹೊರತು ಭಾಷಾ ಪ್ರಚಾರಕ್ಕಲ್ಲ" ಎಂದು ಸ್ಪಷ್ಟನೆ ನೀಡಿದ್ದರು.
ಉರ್ದು ಭಾಷೆಯಲ್ಲಿ ಸುದ್ದಿ ಪ್ರಸಾರ ಮಾಡಿದ್ದ ದೂರದರ್ಶನ
ಇಂದಿನ ಈ ವಿವಾದ 1994ರ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸುತ್ತಿದೆ. ಅಂದು ಬೆಂಗಳೂರು ದೂರದರ್ಶನದಲ್ಲಿ 10 ನಿಮಿಷಗಳ ಉರ್ದು ಸುದ್ದಿ ಪ್ರಸಾರ ಆರಂಭಿಸಿದಾಗ ದೊಡ್ಡ ಮಟ್ಟದ ಗಲಭೆ ಸಂಭವಿಸಿತ್ತು. ಇದು ಕರ್ನಾಟಕದ ಇತಿಹಾಸದಲ್ಲಿ ಭಾಷೆ ಮತ್ತು ರಾಜಕೀಯದ ನಡುವಿನ ಸಂಘರ್ಷಕ್ಕೆ ದೊಡ್ಡ ಸಾಕ್ಷಿಯಾಗಿದೆ.

