Metro fare hike is a decision of the Centre: DCM D.K. Shivakumar
x

ಡಿಸಿಎಂ ಡಿ.ಕೆ. ಶಿವಕುಮಾರ್‌

ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ನಿರ್ಧಾರ: ಡಿಸಿಎಂ ಡಿ.ಕೆ. ಶಿವಕುಮಾರ್‌

ಮೆಟ್ರೋ ದರ ಏರಕೆ ಮಾಡಿ ಜನಸಾಮನ್ಯರಿಗೆ ತೊಂದರೆ ನೀಡಲು ಸಾಧ್ಯವಿಲ್ಲ. ಬಿಎಂಆರ್‌ಸಿಎಲ್‌ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.


Click the Play button to hear this message in audio format

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯ ಪ್ರಸ್ತಾವನೆಯಿಂದ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಆಕ್ರೋಶದ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಆರೋಪವನ್ನು ಕೇಂದ್ರ ಸರ್ಕಾರದ ಕಡೆಗೆ ತಿರುಗಿಸಿದ್ದಾರೆ. ಮೆಟ್ರೋ ದರವನ್ನು ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ನೇರ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

ಶನಿವಾರ (ಫೆ.7) ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ ಏರಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ನೇತೃತ್ವದ ಪ್ರತ್ಯೇಕ ದರ ನಿರ್ಧಾರ ಸಮಿತಿ ಎಂದು ಡಿಸಿಎಂ ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಸಮಿತಿ ಈವರೆಗೆ ಕೇಳಿಯೇ ಇಲ್ಲ ಎಂಬ ಅಂಶವನ್ನು ಮುಂದಿಟ್ಟು, ದರ ಏರಿಕೆಯ ಹೊಣೆಯನ್ನು ಕೇಂದ್ರದ ಮೇಲೆ ಹಾಕಿದ್ದಾರೆ. ಅಂದರೆ, ಒಂದು ವೇಳೆ ದರ ಏರಿಕೆಯಾದಲ್ಲಿ ಅದು ಕೇಂದ್ರದ ಸಮಿತಿಯ ನಿರ್ಧಾರವೇ ಹೊರತು ರಾಜ್ಯದ್ದಲ್ಲ ಎಂಬ ಸಂದೇಶವನ್ನು ಅವರು ಜನರಿಗೆ ರವಾನಿಸಿದ್ದಾರೆ.

"ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ" ಎಂದು ತಿಳಿಸಿದರು.

ಸಮಯ ಉತ್ತರ ನೀಡಲಿದೆ

ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ಮಾಧ್ಯಮಗಳಿಗೂ ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ನಾವು ಕೇಳಬೇಕು. ಎಲ್ಲದಕ್ಕೂ ಸಮಯವೇ ಉತ್ತರ ನೀಡಲಿದೆ " ಎಂದು ಹೇಳಿದರು.

ಗೃಹಸಚಿವ ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕು ಎಂದು ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ. ಎಲ್ಲರಿಗೂ ಮುಖ್ಯಮಂತ್ರಿಯಾಗಬೇಕು ಎಂದು ಆಸೆ ಇರುತ್ತದೆ. ಇದನ್ನು ತಪ್ಪು ಎಂದು ಭಾವಿಸಬಾರದು ಎಂದರು.

ಎಷ್ಟು ಹೆಚ್ಚಳ ?

ದರ ನಿಗದಿ ಸಮಿತಿಯ (FFC) ಶಿಫಾರಸಿನಂತೆ ಪ್ರತಿ ವರ್ಷ ಶೇ 5ರಷ್ಟು ದರ ಹೆಚ್ಚಿಸಲು ಅವಕಾಶವಿದೆ. ಇದರಂತೆ ದರಗಳನ್ನು ಹತ್ತಿರದ ರೂಪಾಯಿಗೆ ರೌಂಡ್ ಫಿಗರ್ ಮಾಡಲಾಗಿದೆ. ಕನಿಷ್ಠ ದರ 10ರೂ.ಗಳಿಂದ 11ರೂ.ಗಳಿಗೆ, ಗರಿಷ್ಠ ದರ 90ರೂ. ರಿಂದ 95ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ಒಟ್ಟು ದರ ಏರಿಕೆಯ ಪ್ರಮಾಣ ಕನಿಷ್ಠ 1ರೂ. ರಿಂದ ಗರಿಷ್ಠ 5ರೂ.ಗಳಷ್ಟು ಹೆಚ್ಚಳವಾಗಲಿದೆ.

ಬಿಎಂಆರ್‌ಸಿಎಲ್‌ ಹೇಳುವುದೇನು?

ʼನಮ್ಮ ಮೆಟ್ರೋʼ 2017 ಜೂನ್ ತಿಂಗಳಲ್ಲಿ ಪ್ರಯಾಣ ದರ ಹೆಚ್ಚಿಸಿತ್ತು. ಇದೇ ಕಾರಣ ನೀಡಿ 2025 ರ ಫೆಬ್ರವರಿಯಲ್ಲಿ ಶೇ. 71ರಷ್ಟು ವೇತನ ಹೆಚ್ಚಳ ಮಾಡಿತ್ತು. 2017 ಮಾರ್ಚ್‌ ತಿಂಗಳಿಂದ 2024 ಮಾರ್ಚ್‌ ನಡುವೆ ಬಿಎಂಆರ್‌ಸಿಎಲ್‌ ಸಿಬ್ಬಂದಿ ವೆಚ್ಚವು ಶೇ. 42, ಇಂಧನ ವೆಚ್ಚ ಶೇ. 34 ರಷ್ಟು ಹೆಚ್ಚಾಗಿದೆ. ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು ಶೇ.366 ರಷ್ಟು ದುಬಾರಿಯಾಗಿವೆ.

2024-25 ರಿಂದ 2029-30 ರೊಳಗೆ ಬಿಎಂಆರ್‌ಸಿಎಲ್ 10,422 ಕೋಟಿ ರೂ. ಸಾಲ ಮರು ಪಾವತಿಸಬೇಕಾಗಿದೆ. ಸಾಲ ಪಾವತಿ ಹಾಗೂ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ. ಈ ವರ್ಷ ಶೇ 5ರಷ್ಟು ಹೆಚ್ಚಳ ಮಾಡದೇ ಹೋದರೆ ಮುಂದಿನ ವರ್ಷ ಒಟ್ಟಿಗೆ ಶೇ.10ರಷ್ಟು ಹೆಚ್ಚಳ ಮಾಡಬೇಕಾಗುತ್ತದೆ. ಆಗ ಸಾರ್ವಜನಿಕರಿಂದ ದೊಡ್ಡ ಪ್ರತಿರೋಧ ಎದುರಾಗಬಹುದು ಎಂಬ ಕಾರಣಕ್ಕೆ ಈಗಲೇ ಶೇ.5 ರಷ್ಟು ಪ್ರಯಾಣ ದರ ಏರಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದ್ದರು.

ಕಳೆದ ವರ್ಷ ದರ ಏರಿಕೆ ಹೇಗಿತ್ತು?

2025 ಫೆಬ್ರವರಿ 9 ರಂದು ಬಿಎಂಆರ್‌ಸಿಎಲ್‌ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಕೆಲ ಹಂತಗಳಲ್ಲಿ ಶೇ 100 ರಷ್ಟು ಬೆಲೆ ಏರಿಕೆ ಮಾಡಲಾಗಿತ್ತು. ಇದು ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಫೆ.14 ರಿಂದ ದರವನ್ನು ಶೇ 71 ಕ್ಕೆ ಇಳಿಸಿತು. ಈಗ ಒಂದು ವರ್ಷದ ನಂತರ ಮೆಟ್ರೋ ಪ್ರಯಾಣ ದರವನ್ನು ಶೇ. 5 ರಷ್ಟು ಹೆಚ್ಚಿಸಲು ತೀರ್ಮಾನಿಸಿರುವುದು ಪ್ರಯಾಣಿಕರ ಮೇಲೆ ಬರೆ ಎಳೆದಂತಾಗಿದೆ. 25 ಕಿ.ಮೀ. ಅಂತರದ ಪ್ರಯಾಣಕ್ಕೆ ಗರಿಷ್ಠ 95 ರೂ.ಗಳಿಗೆ ನಿಗದಿಪಡಿಸಿದೆ.


Read More
Next Story