
Namma Metro| ಮೆಟ್ರೋ ದರ ಏರಿಕೆಗೆ ಅನುಮತಿ ನೀಡಿದ್ದು ಯಾರು? ಕೇಂದ್ರವೇ, ರಾಜ್ಯವೇ? ಮತ್ತೆ ಜಟಾಪಟಿ
ನಮ್ಮ ಮೆಟ್ರೋ ಯೋಜನೆಯು ರಾಜ್ಯ ಹಾಗೂ ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿದ್ದರೂ ರಾಜ್ಯದ ಹಣಕಾಸು ಹಾಗೂ ಭೂಸ್ವಾಧೀನದ ಹೊಣೆಗಾರಿಕೆ ಇರುವುದರಿಂದ ರಾಜ್ಯದ ಆಣತಿಯಂತೆ ದರ ಪರಿಷ್ಕರಣೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಮ್ಮ ಮೆಟ್ರೋ' ಪ್ರಯಾಣ ದರ ಏರಿಕೆ ವಿಚಾರ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಜನ ಪ್ರತಿನಿಧಿಗಳ ತಿಕ್ಕಾಟಕ್ಕೆ ವೇದಿಕೆಯಾಗಿ ಪರಿಣಮಿಸಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಪ್ರಯಾಣ ದರದಲ್ಲಿ ಶೇ. 5 ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ, ಸಾರ್ವಜನಿಕ ವಲಯದಲ್ಲಿ ಬಿಎಂಆರ್‌ಸಿಎಲ್ ಮತ್ತು ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವರ್ಷ ಮೆಟ್ರೋ ಪ್ರಯಾಣ ದರವನ್ನು ಶೇ. 71ರಷ್ಟು ಹೆಚ್ಚಿಸಿದಾಗ ಕೇಂದ್ರದಲ್ಲಿರುವ ಬಿಜೆಪಿ ನಾಯಕರು ಹಾಗೂ ರಾಜ್ಯದ ಕಾಂಗ್ರೆಸ್ ನೇತಾತರ ನಡುವೆ ನಡೆದಿದ್ದ ವಾಕ್ಸಮರ ಇನ್ನೂ ಮಾಸಿಲ್ಲ. ಇದೀಗ ಹೊಸ ದರ ಏರಿಕೆಯ ಪ್ರಸ್ತಾಪವು ಮತ್ತೆ ಹಳೆಯ ವಿವಾದಕ್ಕೆ ಜೀವ ನೀಡಿದ್ದು, ದರ ಏರಿಸಿದ್ದು ಯಾರು? ರಾಜ್ಯವೋ ಅಥವಾ ಕೇಂದ್ರವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ರಾಜ್ಯದ ಅನುಮತಿ, ಪ್ರತಿಪಕ್ಷಗಳ ಆಕ್ರೋಶ
ಕಳೆದ ಬಾರಿ ತೀವ್ರ ವಿರೋಧದ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಶೇ. 100ರಷ್ಟಿದ್ದ ದರ ಏರಿಕೆಯನ್ನು ಶೇ. 71ಕ್ಕೆ ಇಳಿಸಲಾಗಿತ್ತು. ಆದರೆ, ಈಗ ರಾಜ್ಯ ಸರ್ಕಾರವೇ ಶೇ. 5ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಿರುವುದು ಪ್ರತಿಪಕ್ಷ ಬಿಜೆಪಿ ಮತ್ತು ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. ಬಿಜೆಪಿ ನಾಯಕರು ದರ ಏರಿಕೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.
ದರ ನಿಗದಿ ಯಾರ ಅಧಿಕಾರ? ಕೇಂದ್ರವೋ? ರಾಜ್ಯವೋ?
'ನಮ್ಮ ಮೆಟ್ರೋ' ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿದ್ದರೂ, ದರ ನಿಗದಿಯ ಅಧಿಕಾರ ಯಾರದ್ದು ಎಂಬ ಗೊಂದಲ ಮುಂದುವರಿದಿದೆ.
ಭೂಸ್ವಾಧೀನ, ನಿರ್ಮಾಣ, ನಿರ್ವಹಣೆ, ಮೇಲ್ವಿಚಾರಣೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ರಾಜ್ಯ ಸರ್ಕಾರದ್ದು. ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿಯವರ ಎದುರೇ ಸಿಎಂ ಸಿದ್ದರಾಮಯ್ಯ, "ಯೋಜನೆಯಲ್ಲಿ ರಾಜ್ಯದ ಪಾಲು ಶೇ. 87.37ರಷ್ಟಿದ್ದರೆ, ಕೇಂದ್ರದ ಪಾಲು ಕೇವಲ ಶೇ. 12.63," ಎಂದು ಅಂಕಿ-ಅಂಶ ಸಹಿತ ಸ್ಪಷ್ಟಪಡಿಸಿದ್ದರು. ರಾಜ್ಯವೇ ಸಿಂಹಪಾಲು ಬಂಡವಾಳ ಹೂಡಿರುವುದರಿಂದ, ದರ ಪರಿಷ್ಕರಣೆಯೂ ರಾಜ್ಯದ ಆಣತಿಯಂತೆಯೇ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಾಂತ್ರಿಕ ಅನುಮೋದನೆ, ಸಾಲದ ಗ್ಯಾರಂಟಿ, ರೈಲ್ವೆ ಕಾಯ್ದೆಯಡಿ ಸುರಕ್ಷತಾ ನಿಯಂತ್ರಣ ಮತ್ತು ಡಿಪಿಆರ್‌ಗೆ ಒಪ್ಪಿಗೆ ನೀಡುವುದು ಕೇಂದ್ರದ ಜವಾಬ್ದಾರಿ. ತಜ್ಞರ ಪ್ರಕಾರ, ದೈನಂದಿನ ಆಡಳಿತದಲ್ಲಿ ಕೇಂದ್ರದ ಪಾತ್ರ ಸೀಮಿತ.
ಸ್ವತಂತ್ರ ದರ ನಿಗದಿ ಸಮಿತಿ (FFC)
ಮೆಟ್ರೋ ದರ ಏರಿಕೆಗೆ ಯಾವುದೇ ಸರ್ಕಾರದ ನೇರ ಹಸ್ತಕ್ಷೇಪದ ಅಗತ್ಯವಿಲ್ಲದಂತಹ ವ್ಯವಸ್ಥೆ ಜಾರಿಯಲ್ಲಿದೆ. 'ದರ ನಿಗದಿ ಸಮಿತಿ' (Fare Fixation Committee - FFC) ಹಣದುಬ್ಬರ ಮತ್ತು ಕಾರ್ಯಾಚರಣೆ ವೆಚ್ಚಗಳನ್ನು ಪರಿಗಣಿಸಿ, ಸ್ವಯಂಚಾಲಿತ ಸೂತ್ರದ ಮೂಲಕ ದರ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ. ಈ ಸಮಿತಿಯು ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ನಿಯಮವಾದರೂ, ಅಂತಿಮ ಅನುಮೋದನೆಯ ವಿಚಾರದಲ್ಲಿ ಸರ್ಕಾರದ ಪಾತ್ರವಿದ್ದೇ ಇರುತ್ತದೆ.
ಹೈಕೋರ್ಟ್ ಏನು ಹೇಳಿತ್ತು?
2025 ನವೆಂಬರ್ ತಿಂಗಳಲ್ಲಿ ನಮ್ಮ ಮೆಟ್ರೋಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಿಎಂಆರ್‌ಸಿಎಲ್ ಸಂಸ್ಥೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದು ಹೇಳಿತ್ತು.
ಮೆಟ್ರೋ ಕಾರ್ಯಾಚರಣೆಯ ಉಸ್ತುವಾರಿ ಹೊಂದಿರುವ ರಾಜ್ಯ ಸರ್ಕಾರವು ಕೇಂದ್ರದಿಂದ ಅಗತ್ಯ ಅನುಮತಿ ಪಡೆದ ನಂತರವೇ ಸೇವೆ ಆರಂಭಿಸುವ ಹಾಗೂ ನಿರ್ವಹಣೆ ಮಾಡುವ ಅಧಿಕಾರ ಪಡೆಯಲಿದೆ. ರೈಲ್ವೆ ಸಂಸ್ಥೆ ಕೇಂದ್ರ ಸರ್ಕಾರದ ಒಪ್ಪಿಗೆ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ, ಅದಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಏರ್ಪಟ್ಟರೆ ಅದನ್ನು ಕೈಗಾರಿಕಾ ವಿವಾದಗಳ ಕಾಯ್ದೆಯಡಿ ಪರಿಹರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ ಎಂಬ ಹೈಕೋರ್ಟ್ ಹೇಳಿಕೆ ಗೊಂದಲ ಸೃಷ್ಟಿಸಿತ್ತು. ಇದರಿಂದ ಮತ್ತೆ ʼನಮ್ಮ ಮೆಟ್ರೋʼ ಮೇಲಿನ ನಿಯಂತ್ರಣ ವಿಚಾರವು ಚರ್ಚೆಗೆ ಕಾರಣವಾಗಿತ್ತು.
ʼಬಿಎಂಆರ್‌ಸಿಎಲ್ ಸಾರ್ವಜನಿಕ ಉಪಯುಕ್ತವಾದ ಸೇವೆʼ ಎಂದು 2019 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆಯ(ಎಸ್ಮಾ) ಅಡಿ ಬಿಎಂಆರ್‌ಸಿಎಲ್ ಸೇವೆಗಳನ್ನು 'ಅತ್ಯವಶ್ಯಕ ಸೇವೆ' ಎಂದು 2017ರಲ್ಲಿ ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸಿ ನೀಡಿದ ಆದೇಶದಲ್ಲಿ ಹೈಕೋರ್ಟ್ ಈ ಮೇಲಿನಂತೆ ಅಭಿಪ್ರಾಯಪಟ್ಟಿತ್ತು.
ಬಿಎಂಆರ್‌ಸಿಎಲ್ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣವಿರಲಿದ್ದು, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಸೀಮಿತ. ರಾಜ್ಯ ಸರ್ಕಾರ ಯಾವುದಾದರೂ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕಾದರೆ ಕೇಂದ್ರದ ಅನುಮತಿ ಪಡೆಯಬೇಕು ಎಂದು ಹೇಳಿತ್ತು. ಹೈಕೋರ್ಟ್‌ನ ಈ ಆದೇಶದ ಬಳಿಕ ರಾಜ್ಯದಲ್ಲಿ ಮತ್ತೆ ಮೆಟ್ರೋ ದರ ಪರಿಷ್ಕರಣೆ ಅಧಿಕಾರದ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರವೋ, ಕೇಂದ್ರ ಸರ್ಕಾರವೋ ಎಂಬ ಪ್ರಶ್ನೆ ಮೂಡಿಸಿದೆ. ಆದರೆ, ಉಭಯ ಸರ್ಕಾರಗಳಿಂದ ಈವರೆಗೆ ಯಾವುದೇ ನಿರ್ದಿಷ್ಟ ಹೇಳಿಕೆ ಬಾರದಿರುವುದು ಗೊಂದಲ ಹೆಚ್ಚುವಂತೆ ಮಾಡಿದೆ.
ಅನಿವಾರ್ಯ ಎನ್ನುತ್ತಿದೆ ಬಿಎಂಆರ್‌ಸಿಎಲ್
"ಭವಿಷ್ಯದ ಮೂಲಸೌಕರ್ಯ ಯೋಜನೆಗಳಿಗೆ ಬಂಡವಾಳ ಕ್ರೋಢೀಕರಿಸಲು ಮತ್ತು ಆದಾಯ ಹೆಚ್ಚಿಸಿಕೊಳ್ಳಲು ದರ ಪರಿಷ್ಕರಣೆ ಅನಿವಾರ್ಯ," ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದಾರೆ.
ಒಟ್ಟಿನಲ್ಲಿ, ದರ ಏರಿಕೆಯ ಬಿಸಿ ಮಾತ್ರ ಸಾಮಾನ್ಯ ಪ್ರಯಾಣಿಕನಿಗೆ ತಟ್ಟುತ್ತಿದ್ದು, ಇದು ಕೇಂದ್ರದ ನಿಯಮವೋ ಅಥವಾ ರಾಜ್ಯದ ನಿರ್ಧಾರವೋ ಎಂಬ ಸ್ಪಷ್ಟನೆ ಸಿಗದೆ ಜನಸಾಮಾನ್ಯರು ಕಂಗಾಲಾಗಿದ್ದಾರೆ.

