
ಸಾಂದರ್ಭಿಕ ಚಿತ್ರ
ಸರ್ಜಾಪುರದಲ್ಲಿ 70 ಎಕರೆ ವಿಸ್ತೀರ್ಣದ 'B1 AI ಸೂಪರ್‌ಪಾರ್ಕ್': ಭರತ್1.ಎಐ ನಿಂದ 650 ಮಿಲಿಯನ್ ಡಾಲರ್ ಹೂಡಿಕೆ
ಬೆಂಗಳೂರನ್ನು ಜಾಗತಿಕ ಎಐ ನಕ್ಷೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿರುವ ಈ ಬೃಹತ್ ಹೂಡಿಕೆಯು 250 ಮಿಲಿಯನ್ ಡಾಲರ್ ಈಕ್ವಿಟಿ ಮತ್ತು 400 ಮಿಲಿಯನ್ ಡಾಲರ್ ಸಾಲ ಒಳಗೊಂಡಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಕೃತಕ ಬುದ್ಧಿಮತ್ತೆ (AI) ನಾವೀನ್ಯತೆಯ ಕೇಂದ್ರವಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026'ರಲ್ಲಿ ಮಾಡಲಾದ ಮಹತ್ವದ ಘೋಷಣೆಯಂತೆ, 'ಭರತ್1.ಎಐ' ಸಂಸ್ಥೆಯು ನಗರದ ಸರ್ಜಾಪುರದಲ್ಲಿ 70 ಎಕರೆ ವಿಸ್ತೀರ್ಣದ ಬೃಹತ್ 'ಬಿ1 ಎಐ ಸೂಪರ್‌ಪಾರ್ಕ್' ನಿರ್ಮಾಣಕ್ಕಾಗಿ 650 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.
ಬೆಂಗಳೂರನ್ನು ಜಾಗತಿಕ ಎಐ ನಕ್ಷೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿರುವ ಈ ಬೃಹತ್ ಹೂಡಿಕೆಯು 250 ಮಿಲಿಯನ್ ಡಾಲರ್ ಈಕ್ವಿಟಿ ಮತ್ತು 400 ಮಿಲಿಯನ್ ಡಾಲರ್ ಸಾಲ ಒಳಗೊಂಡಿದೆ. ಈ ಅತ್ಯಾಧುನಿಕ ಯೋಜನೆಗಾಗಿ ಜಾಗತಿಕ ಟೆಕ್ ದೈತ್ಯ ಎನ್ವಿಡಿಯಾ ಜೊತೆಗೆ ಮೂಲಸೌಕರ್ಯ ಒದಗಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅದೇ ರೀತಿ, ಉನ್ನತ ಮಟ್ಟದ ಎಐ ಸಂಶೋಧನೆಗಾಗಿ ಐಐಟಿ ಕಾನ್ಪುರದೊಂದಿಗೆ ಸಂಸ್ಥೆ ಪಾಲುದಾರಿಕೆ ಹೊಂದಿದೆ.
ಏಜೆಂಟಿಕ್ ಎಐಗಾಗಿ ಬೃಹತ್ ಡೇಟಾ ಉತ್ಪಾದನೆ
ಸುಮಾರು 5,00,000 ಚದರ ಅಡಿ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಈ ಕ್ಯಾಂಪಸ್, 400 Gbps ವೇಗದ ಇಂಟರ್ನೆಟ್ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸಲಿದೆ. ನೈಜ-ಪ್ರಪಂಚದ ಎಐ ಮೌಲ್ಯೀಕರಣಕ್ಕಾಗಿ ವಾರ್ಷಿಕವಾಗಿ ಬರೋಬ್ಬರಿ 1 ಎಕ್ಸಾಬೈಟ್ (Exabyte) ಡೇಟಾವನ್ನು ಉತ್ಪಾದಿಸುವ ಬೃಹತ್ ಗುರಿಯನ್ನು ಇದು ಹೊಂದಿದೆ. ವಿಶೇಷವಾಗಿ ಮಲ್ಟಿಮೋಡಲ್ ಡೇಟಾ ಉತ್ಪಾದನೆ ಮತ್ತು ಭವಿಷ್ಯದ ತಂತ್ರಜ್ಞಾನವಾದ ಏಜೆಂಟಿಕ್ ಎಐ ಮಾಡೆಲ್‌ಗಳ ಅಭಿವೃದ್ಧಿಯ ಮೇಲೆ ಈ ಪಾರ್ಕ್ ಪ್ರಧಾನ ಗಮನ ಹರಿಸಲಿದೆ.
'ಮಾನವ ಕೇಂದ್ರಿತ ಎಐ ಸಿಟಿ' ನಿರ್ಮಾಣದ ಗುರಿ
ನೈತಿಕ ಎಐ ಅಭಿವೃದ್ಧಿಗೆ ಒತ್ತು ನೀಡುವ ಈ ಯೋಜನೆಯು, ಭಾರತದ ಮೊದಲ 'ಮಾನವ-ಕೇಂದ್ರಿತ ಎಐ ಸಿಟಿ'ಯನ್ನು ನಿರ್ಮಿಸುವ ಬಹುದೊಡ್ಡ ದೃಷ್ಟಿಕೋನದ ಮೊದಲ ಹಂತವಾಗಿದೆ. ಸುಸ್ಥಿರ ತಂತ್ರಜ್ಞಾನ ಕ್ಯಾಂಪಸ್‌ಗಳ ನಿರ್ಮಾಣದತ್ತ ಜಗತ್ತು ವಾಲುತ್ತಿರುವ ಈ ಹೊತ್ತಿನಲ್ಲಿ, ಸರ್ಜಾಪುರದ ಈ ಉಪಕ್ರಮವು ಬೆಂಗಳೂರನ್ನು ಸುಸ್ಥಿರ ಮತ್ತು ನೈತಿಕ ಎಐ ಅಭಿವೃದ್ಧಿಯ ಜಾಗತಿಕ ಹಬ್ ಆಗಿ ಮುಂಚೂಣಿಗೆ ತರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

