
ʼದ ಫೆಡರಲ್ʼ COGNI ಬೋರ್ಡ್ ರೂಂ ಸರಣಿ ; ನಿರ್ಧಾರ ಮರು ರೂಪಿಸುವ ʼಕೃತಕ ಬುದ್ದಿಮತ್ತೆʼ
“ದ ಫೆಡರಲ್” ಏರ್ಪಡಿಸಿದ್ದ 'ಕಾಗ್ನಿ: ದಿ ಬೋರ್ಡ್ ರೂಂ ಸರಣಿ' ಕಾರ್ಯಕ್ರಮವು ಕೃತಕ ಬುದ್ದಿಮತ್ತೆ ಪರಿಣಾಮಕಾರಿ ಬಳಕೆ, ಮಿತಿಗಳ ರಚನಾತ್ಮಕ ಚರ್ಚೆಗೆ ವೇದಿಕೆಯಾಯಿತು.
"ನಿರ್ದೇಶಕರ ಮಂಡಳಿ ಅಥವಾ ಆಡಳಿತ ಮಂಡಳಿಗಳಲ್ಲಿ( ಬೋರ್ಡ್ ರೂಂ) ಕೃತಕ ಬುದ್ದಿಮತ್ತೆಯ (ಎಐ) ಪ್ರವೇಶ" ಕುರಿತಂತೆ ಚೆನ್ನೈನ ಮದ್ರಾಸ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಂಎಎಂಎ) ಸಹಯೋಗದಲ್ಲಿ “ದ ಫೆಡರಲ್” ಏರ್ಪಡಿಸಿದ್ದ 'ಕಾಗ್ನಿ: ದಿ ಬೋರ್ಡ್ ರೂಂ ಸರಣಿ' ಕಾರ್ಯಕ್ರಮವು ಕೃತಕ ಬುದ್ದಿಮತ್ತೆ ಪರಿಣಾಮಕಾರಿ ಬಳಕೆ, ಮಿತಿಗಳ ರಚನಾತ್ಮಕ ಚರ್ಚೆಗೆ ವೇದಿಕೆಯಾಯಿತು.
'ಇನ್ಸೈಟ್ನಿಂದ ಇಂಪ್ಯಾಕ್ಟ್ವರೆಗೆ: ಬೋರ್ಡ್ ರೂಂನಲ್ಲಿ ಎಐ' ಎಂಬ ಶೀರ್ಷಿಕೆಯಡಿ ನಡೆದ ಸಂವಾದದಲ್ಲಿ ಎಐ ತಂತ್ರಜ್ಞಾನವು ಅತ್ಯುನ್ನತ ಅನ್ವೇಷಣೆಯಲ್ಲದೇ ಉನ್ನತ ಮಟ್ಟದ ನೀತಿ ನಿರೂಪಣೆಯಲ್ಲೂ ಮಾರ್ಗದರ್ಶಕನ ಪಾತ್ರ ವಹಿಸುತ್ತಿರುವ ಬಗ್ಗೆ ಕೈಗಾರಿಕೋದ್ಯಮಿಗಳು ಚರ್ಚೆ ನಡೆಸಿದರು.
ಕಾರ್ಯಕ್ರಮದ ಶೀರ್ಷಿಕೆ ಪ್ರಾಯೋಜಕತ್ವವನ್ನು ʼತುನೈ ಎಐʼ ವಹಿಸಿದ್ದರೆ, ʼದಿ ನ್ಯೂರಲ್ʼ ಜ್ಞಾನ ಸಹಭಾಗಿಯಾಗಿ ಜೊತೆಯಾಗಿ ಅರ್ಥಪೂರ್ಣ ಚರ್ಚೆಗೆ ಅವಕಾಶ ಕಲ್ಪಿಸಿತು.
ಮಾಧ್ಯಮಗಳಲ್ಲಿ ಎಐ ಚರ್ಚೆ ಅಗತ್ಯ
“ದ ಫೆಡರಲ್” ಸಂಸ್ಥೆ ಆಯೋಜಿಸಿದ್ದ 'ಕಾಗ್ನಿ: ದಿ ಬೋರ್ಡ್ ರೂಂ ಸರಣಿ' ಕಾರ್ಯಕ್ರಮವನ್ನು “ದ ಫೆಡರಲ್” ಸುದ್ದಿ ಸಂಪಾದಕಿಯಾದ ಇಂದಿರಾ ಬಾಲಾಜಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, "ಕೃತಕ ಬುದ್ದಿಮತ್ತೆಯು ಬೋರ್ಡ್ ರೂಂನಲ್ಲಿ ನಿರ್ಧಾರ ಕೈಗೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದೆ. ನೀತಿ ನಿರೂಪಣೆ ಮಾಡುವವರ ನಡುವೆ ಏಣಿಯಾಗಿ ಮಾರ್ಪಟ್ಟಿದ್ದರೂ ಭಾರತದ ಮಾಧ್ಯಮಗಳಲ್ಲಿ ಈ ಕುರಿತಂತೆ ಗಂಭೀರವಾದ ಚರ್ಚೆ ನಡೆಸದೇ ಮೌನ ವಹಿಸಿವೆ. ಆದರೆ, “ದ ಫೆಡರಲ್” ಮಾಧ್ಯಮ ಸಂಸ್ಥೆ ಎಐ ತಂತ್ರಜ್ಞಾನದ ಕುರಿತು ಅರ್ಥಪೂರ್ಣ ಸಂವಾದ ಆರಂಭಿಸಿದೆ" ಎಂದು ಹೇಳಿದರು.
"ದಿ ಫೆಡರಲ್" ಕೇವಲ ವೀಕ್ಷಿಸಿ ವರದಿ ಮಾಡುವುದಿಲ್ಲ. ಬದಲಿಗೆ ಒಳನೋಟ ಹೊಂದಿರುವ, ಸಮತೋಲಿತ ಪತ್ರಿಕೋದ್ಯಮಕ್ಕೆ ಬದ್ಧವಾಗಿರುವ ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆ ಆರಂಭಿಸಲು ಬಯಸುತ್ತೇವೆ" ಎಂದು ಹೇಳಿದರು.
ಎಐ ತಂತ್ರಜ್ಞಾನ ಸಾಧನವಲ್ಲ, ತಂತ್ರಜ್ಞಾನದ ಸಹಚರ
“ದ ಫೆಡರಲ್ “ ಪ್ರಧಾನ ಸಂಪಾದಕ ಎಸ್. ಶ್ರೀನಿವಾಸನ್ ಅವರು ಕಿಸ್ಫ್ಲೋ ನ ಸಿಪಿಒ ದಿನೇಶ್ ವರದರಾಜನ್ ಅವರ ಜೊತೆ ಫೈರ್ಸೈಡ್ ಚಾಟ್ ನಡೆಸಿದರು.
"ಎಐ ಕೈಗಾರಿಕಾ ಕ್ರಾಂತಿಯಷ್ಟು ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಯಂತ್ರಗಳು ಮಾನವನನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ ಎಂಬುದು ಕೆಲವರ ನಂಬಿಕೆಯಾದರೆ, ಮತ್ತೆ ಕೆಲವರು ಇದೊಂದು ಸರಳ ತಂತ್ರಜ್ಞಾನದ ಪ್ರಗತಿ ಎಂದು ಅಭಿಪ್ರಾಯಪಡುತ್ತಾರೆ. ನನಗೆ ಮಾತ್ರ ಇದು ಎರಡಕ್ಕೂ ಮಧ್ಯದ ನೈಜತೆ ಎಂದು ಭಾಸವಾಗುತ್ತಿದೆ. ಎಐ ತಂತ್ರಜ್ಞಾನವು ಇಡೀ ಕೆಲಸದ ಮಾದರಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ" ಎಂದು ಹೇಳಿದರು.
"ಯಂತ್ರಗಳು ಶೀಘ್ರದಲ್ಲೇ ಮನುಷ್ಯರನ್ನು ಬದಲಾಯಿಸಬಹುದು ಎಂಬ ಮಾತುಗಳು ಸಿಲಿಕಾನ್ ವ್ಯಾಲಿಯಂತಹ ಸ್ಥಳಗಳಿಂದ ಬರುತ್ತಿವೆ. ಇದು ಒಂದು ದೃಷ್ಟಿಕೋನ. ಮತ್ತೊಂದೆಡೆ, ಕೆಲವರಲ್ಲಿ ಹೆಚ್ಚಿನ ಸಂಶಯವಿದೆ. ಎಐ ಕೇವಲ ತಾಂತ್ರಿಕ ಪ್ರಗತಿ ಎಂದಷ್ಟೇ ಹೇಳುವವರಿದ್ದಾರೆ. ಎರಡೂ ಅಭಿಪ್ರಾಯಗಳನ್ನು ಗಮನಿಸಿದರೆ ಎರಡರ ಮಧ್ಯೆ ಸತ್ಯ ಅಡಗಿದೆ ಎಂದು ಭಾವಿಸುತ್ತೇನೆ" ಎಂದು ಹೇಳಿದರು.
ದಿನೇಶ್ ವರದರಾಜನ್ ಮಾತನಾಡಿ, "ಪ್ರತಿಯೊಂದು ಹೊಸ ಪರಿಕಲ್ಪನೆಯು ಬದಲಾವಣೆಯ ಹೊಸ ಅವಕಾಶಗಳನ್ನು ತೆರೆಯಲಿದೆ. ಬೋರ್ಡ್ ರೂಂಗಳಲ್ಲಿರುವವರಿಗೆ ಎಐ ಬಳಕೆ ನೆರವು ನೀಡುತ್ತಿದೆ. ಕೇವಲ ನಿರ್ದೇಶನ ಅನುಸರಿಸುವವರೇ ಎಐ ಮೂಲಕ ಬದಲಾಯಿಸಬಹುದಾದ ದೊಡ್ಡ ಸಮೂಹವಾಗಿದೆ. ನಿರ್ಧಾರ ಕೈಗೊಳ್ಳುವವರಿಗೆ ಅಗತ್ಯ ಮಾಹಿತಿ ಒದಗಿಸುತ್ತಿದೆ. ಆದರೆ, ಪ್ರಾಥಮಿಕವಾಗಿ ಸೂಚನೆ ಅನುಸರಿಸುವವರಿಗೆ ಎಐ ಸವಾಲಾಗಿ ಬದಲಾಗಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯತಂತ್ರದಲ್ಲಿ ಎಐ ಹೇಗೆ ಸೇರಿಸಬೇಕು?
'ಎಐ ಬಳಕೆಯಿಂದ ಕಳೆದುಕೊಳ್ಳುತ್ತಿರುವ ಯಂತ್ರಗಳ ಮೇಲಿನ ನಂಬಿಕೆ ಹಾಗೂ ವಿಶ್ವಾಸವನ್ನು ಹೇಗೆ ಮರು ನಿರ್ಮಿಸಬೇಕು?' ಎಂಬ ವಿಷಯದ ತಜ್ಞರೊಂದಿಗೆ ಸಂವಾದ ನಡೆಯಿತು.
ʼದ ನ್ಯೂರಲ್ʼ ಸ್ಥಾಪಕ ರಂಜಿತ್ ಮೆಲಾರ್ಕೋಡ್ ಅವರು ನಿರೂಪಣೆ ಮಾಡಿದರು. ಚರ್ಚೆಯಲ್ಲಿ ತುನೈ ಎಐ ಸಿಇಒ ಜಗನ್ ಸೆಲ್ವರಾಜ್, ಹೆಡ್ ಆಫ್ ಎಂಟರ್ಪ್ರೈಸ್ ಐಟಿ ಸೊಲ್ಯೂಶನ್ಸ್ ನ (ಮ್ಯಾನೇಜ್ ಎಂಜಿನ್-ಝೋಹೊ ) ಅಪರ್ಣ ಟಿಎ, ಎಸ್ವಿಪಿ ಸ್ವಿಪಿ ಎಂಜಿನಿಯರಿಂಗ್ ಪ್ರತಿನಿಧಿ ಮನೀಷ್ ಬಫ್ನಾ, ಅಗ್ಲೀಸಿಯಂ ಸ್ಥಾಪಕ ಮತ್ತು ಸಿಇಒ ರಾಜ್ ಬಾಬು ಭಾಗವಹಿಸಿದ್ದರು.
ಚರ್ಚೆಯ ಪ್ರಮುಖ ಅಂಶಗಳು
• ಎಐ(ಕೃತಕ ಬುದ್ದಿಮತ್ತೆ) ಯನ್ನು ಕಾರ್ಯಾಚರಣಾ ಹಂತದಿಂದ ತಂತ್ರಜ್ಞಾನದ ತಂತ್ರಮಟ್ಟಕ್ಕೆ ಹೇಗೆ ತರುವುದು.
• ನಿರ್ಧಾರಮಟ್ಟದಲ್ಲಿ ಎಐಯನ್ನು ಒಪ್ಪಿಕೊಳ್ಳಲು CXO ಗಳು ( ಚೀಫ್ ಎಕ್ಸ್ಪೀರಿಯನ್ಸ್ ಆಫೀಸರ್) ಹೇಗೆ ಸಿದ್ಧರಾಗಬೇಕು.
• ಯಂತ್ರಗಳ ಮೇಲಿನ ನಂಬಿಕೆ ಹೇಗೆ ಪುನರ್ ನಿರ್ಮಿಸಬೇಕು.
'ತುನೈ ಎಐ' ಮಾದರಿ; ಮಾನವ-ಎಐ ಸಹಕಾರ
ಅದಿತ್ಯ ಸಂತಾನಂ (ಸಂಸ್ಥಾಪಕ, ತುನೈ ಎಐ) ಅವರು ತಮ್ಮ ಕಂಪನಿಯ ಎಐ ವೇದಿಕೆಯಾದ 'ತುನೈ ಎಐ' ಕುರಿತು ವಿಡಿಯೊ ಪ್ರಸ್ತುತಿಪಡಿಸಿದರು.
"ತುನೈ ಒಂದು ಎಐ ಮಿದುಳು. ಶಕ್ತಿಶಾಲಿ ಮಿದುಳಾಗಿ(ಬ್ರೈನ್) ಕೆಲಸ ಮಾಡುತ್ತಿದೆ. 'ಇಂಟೆಲಿಜೆಂಟ್ ಟೀಮ್ಮೇಟ್' ಆಗಿ ಸಹಜವಾಗಿ ಸಂವಹನ ನಡೆಸುತ್ತದೆ ಎಂದು ವಿವರಿಸಿದರು.
"ಮಾನವ-ಎಐ ಸಹಕಾರವು ವಿಭಿನ್ನ ಮೂಲಗಳಿಂದ ಜ್ಞಾನವನ್ನು ಸಂಯೋಜಿಸಿ, ವಿವಿಧ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ಸಾಧ್ಯವಾಗಿಸಿದೆ. ಅಗತ್ಯವಿದ್ದಾಗ ಹ್ಯೂಮನ್ ಇನ್ ದ ಲೂಪ್ ವಿಧಾನವನ್ನು ಬಳಸಬಹುದಾಗಿದೆ ಎಂದರು.
ಕಾರ್ಯಕ್ರಮದ ಸಮಾರೋಪ
ಕಾರ್ಯಕ್ರಮದ ಕೊನೆಯಲ್ಲಿ “ದ ಫೆಡರಲ್” ನ ವ್ಯವಹಾರ ನಿರ್ವಾಹಕ ಜೆ ಜಾನ್ಸನ್ ಅವರು ಅತಿಥಿಗಳಿಗೆ ಧನ್ಯವಾದ ಅರ್ಪಿಸಿ, ಈ ಚರ್ಚೆಗಳು ಎಐ ಭವಿಷ್ಯವನ್ನು ತಂತ್ರಜ್ಞಾನದ ನಾಯಕತ್ವದ ಮಟ್ಟಕ್ಕೆ ರೂಪಿಸುತ್ತಿವೆ. ಇಂತಹ ಇನ್ನಷ್ಟು ಚರ್ಚೆಗಳು ಮುಂದಿನ ದಿನಗಳಲ್ಲಿ ಹೆಚ್ಚು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಂವಾದದಿಂದ ಬಂದ ಸಂದೇಶ
ಎಐ ಬೋರ್ಡ್ ರೂಮ್ಗಳಲ್ಲಿ ತಂತ್ರಜ್ಞಾನ ಸಾಧನವಲ್ಲದೆ, ನಿರ್ಧಾರಮಟ್ಟದ ತಂತ್ರನೀತಿಯಲ್ಲಿ ಮಾರ್ಗದರ್ಶಕ ಶಕ್ತಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಕಂಪನಿಗಳ ತಂತ್ರನೀತಿಯನ್ನು ರೂಪಿಸುವಲ್ಲಿ ಎಐ ಪ್ರಮುಖ ಪಾತ್ರ ವಹಿಸಲಿದೆ ಎಂಬುದು “ದ ಫೆಡರಲ್” ಆಯೋಜಿಸಿದ್ದ 'ಕಾಗ್ನಿ: ದಿ ಬೋರ್ಡ್ ರೂಂ ಸರಣಿ' ಕಾರ್ಯಕ್ರಮದಿಂದ ವ್ಯಕ್ತವಾಯಿತು.