
Bangalore Traffic| 35 ಫ್ಲೈಓವರ್, 101 ಸ್ಕೈವಾಕ್ ನಿರ್ಮಾಣ; ಜಿಬಿಎಗೆ ಸಂಚಾರಿ ಪೊಲೀಸರ ಪ್ರಸ್ತಾವನೆ
103 ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು 63 ಹೊಸ ಬಸ್ ಬೇ ಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 84 ಸ್ಪೀಡ್ ಬ್ರೇಕರ್‌ಗಳ ತೆರವು, ಮಳೆಗಾಲದಲ್ಲಿ ನೀರು ನಿಲ್ಲುವ 137 ಸ್ಥಳಗಳಲ್ಲಿ ಚರಂಡಿ ಸುಧಾರಣೆಗೂ ಸೂಚಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಸಂಚಾರ ಪೊಲೀಸರು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಪ್ರತಿದಿನ ಸುಮಾರು 2 ಸಾವಿರ ಹೊಸ ವಾಹನಗಳು ಬೆಂಗಳೂರಿನ ರಸ್ತೆಗಳಿಗೆ ಇಳಿಯುತ್ತಿದ್ದು, ದಟ್ಟಣೆಯ ಒತ್ತಡ ನಿಭಾಯಿಸಲು 35 ಹೊಸ ಮೇಲ್ಸೇತುವೆಗಳು, 25 ಅಂಡರ್‌ಪಾಸ್‌ಗಳು ಮತ್ತು 101 ಸ್ಕೈವಾಕ್‌ಗಳನ್ನು ನಿರ್ಮಿಸಬೇಕೆಂದ ಪ್ರಸ್ತಾವನೆಯನ್ನು ಬೃಹತ್ ಬೆಂಗಳೂರು ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ.
ಪೂರ್ವ ಬೆಂಗಳೂರಿಗೆ ಹೆಚ್ಚಿನ ಆದ್ಯತೆ
ನಗರದ ಪೂರ್ವ ಭಾಗದಲ್ಲಿರುವ ಮಹದೇವಪುರ ಮತ್ತು ವೈಟ್‌ಫೀಲ್ಡ್ ವಲಯಗಳಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಯಿದೆ. ಹೀಗಾಗಿ ಈ ಭಾಗಗಳಲ್ಲಿ ಹೆಚ್ಚಿನ ಮೇಲ್ಸೇತುವೆ ಮತ್ತು ಪಾದಚಾರಿ ಮೂಲಸೌಕರ್ಯಗಳಿಗೆ ಒತ್ತು ನೀಡಬೇಕೆಂದು ಪ್ರಸ್ತಾವನೆಯಲ್ಲಿ ಕೋರಲಾಗಿದೆ.
ನಗರದ ಹೆಬ್ಬಾಳ, ಸಾರಕ್ಕಿ ಸರ್ಕಲ್ ಹಾಗೂ ಬನ್ನೇರುಘಟ್ಟ ರಸ್ತೆಯ ದಾಲ್ಮಿಯಾ ಜಂಕ್ಷನ್ ಸೇರಿ ಪ್ರಮುಖ 25 ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ನಿರ್ಮಾಣದ ಮೂಲಕ ಸಿಗ್ನಲ್ ಮುಕ್ತಗೊಳಿಸಲು ಯೋಜಿಸಲಾಗಿದೆ. ಅಲ್ಲದೆ, ವರ್ತೂರು ಕೋಡಿ, ದೊಮ್ಮಸಂದ್ರ, ಗುಂಜೂರು, ಎಚ್‌ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆ ಹಾಗೂ ಯಲಹಂಕ ಭಾಗಗಳಲ್ಲಿ ಹೊಸ ಮೇಲ್ಸೇತುವೆ ನಿರ್ಮಿಸಲು ಪ್ರಸ್ತಾಪಿಸಲಾಗಿದೆ.
ಪಾದಚಾರಿಗಳ ಸುರಕ್ಷತೆಗೆ 101 ಸ್ಕೈವಾಕ್
ನಗರದಲ್ಲಿ ವಾರ್ಷಿಕವಾಗಿ ಸುಮಾರು 200 ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದಾರೆ. ಈ ಹಿನ್ನೆಲೆ ಜೀವಹಾನಿ ತಡೆಯಲು ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕಾಗಿ 101 ಹೊಸ ಸ್ಕೈವಾಕ್‌ಗಳ ನಿರ್ಮಾಣ ಅನಿವಾರ್ಯ ಎಂದು ಪೊಲೀಸ್ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸಣ್ಣ ಮಟ್ಟದ ಬದಲಾವಣೆಗಳಿಗೂ ಯೋಜನೆ ರೂಪಿಸಲಾಗಿದೆ.
ನಗರದ ಅಲ್ಲಲ್ಲಿ 2,340 ಹೊಸ ಟ್ರಾಫಿಕ್ ಸೈನ್‌ಬೋರ್ಡ್‌ಗಳ ಅಳವಡಿಸುವುದು, 103 ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು 63 ಹೊಸ ಬಸ್ ಬೇ ಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 84 ಸ್ಪೀಡ್ ಬ್ರೇಕರ್‌ಗಳ ತೆರವು, ಮಳೆಗಾಲದಲ್ಲಿ ನೀರು ನಿಲ್ಲುವ 137 ಸ್ಥಳಗಳಲ್ಲಿ ಚರಂಡಿ ಸುಧಾರಣೆಗೂ ಸೂಚಿಸಲಾಗಿದೆ.
ಬೆಂಗಳೂರು ಸಂಚಾರಿ ಪೊಲೀಸರ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಅಯುಕ್ತ ಮಹೇಶ್ವರರಾವ್ ಅವರು,"ಇದು ಅತ್ಯಂತ ವಿವರವಾದ ಆಡಿಟ್ ವರದಿಯಾಗಿದೆ. ಇಷ್ಟು ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭೂಸ್ವಾಧೀನ ಮತ್ತು ಹಣಕಾಸಿನ ಕ್ರೋಡೀಕರಣ ಬಹಳ ಮುಖ್ಯ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳೊಂದಿಗೆ ಸಮನ್ವಯ ಸಾಧಿಸಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು." ಎಂದು ತಿಳಿಸಿದ್ದಾರೆ.

