
ಎಐ ಫ್ಯಾನ್ (ಫೋಟೋ: ಎಕ್ಸ್ ಕೃಪೆ)
ಮುದುಡಿ ಮಲಗಿದರೆ ಫ್ಯಾನ್ ಆಫ್; ಎಐ ಫ್ಯಾನ್ ಸಿದ್ದಪಡಿಸಿದ ಬೆಂಗಳೂರು ಟೆಕಿ
ಪಂಕಜ್ ಅವರು ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು 'ಪೋಸ್ ಡಿಟೆಕ್ಷನ್' ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಅವರು 'ಮೀಡಿಯಾಪೈಪ್' ಎಂಬ ಸಾಫ್ಟ್‌ವೇರ್ ಅನ್ನು ಹೋಮ್ ಸರ್ವರ್‌ನಲ್ಲಿ ಅಳವಡಿಸಿದ್ದಾರೆ.
ನಸುಕಿನ ಜಾವ 3 ಗಂಟೆಯ ಸಮಯ. ಇದ್ದಕ್ಕಿದ್ದಂತೆ ಹವಾಮಾನ ಬದಲಾಗಿ ಚಳಿ ಶುರುವಾದಾಗ ಅಥವಾ ಸೆಕೆ ಹೆಚ್ಚಾದಾಗ ಹೊದಿಕೆಯ ಒಳಗಿಂದ ಎದ್ದು ಹೋಗಿ ಫ್ಯಾನ್ ಸ್ವಿಚ್ ಅಡ್ಜಸ್ಟ್ ಮಾಡುವುದು ದೊಡ್ಡ ಆಲಸ್ಯದ ಕೆಲಸ. ಬೆಂಗಳೂರಿನ ಎಂಜಿನಿಯರ್ ಪಂಕಜ್ ಎಂಬುವವರು ಈ ಸಣ್ಣ ಕಿರಿಕಿರಿಯನ್ನು ಹೋಗಲಾಡಿಸಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವಿಶಿಷ್ಟ ಸಿಸ್ಟಮ್ ಒಂದನ್ನು ಸಿದ್ಧಪಡಿಸಿದ್ದಾರೆ.
ಪಂಕಜ್ ಅವರು ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು 'ಪೋಸ್ ಡಿಟೆಕ್ಷನ್' ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಅವರು 'ಮೀಡಿಯಾಪೈಪ್' ಎಂಬ ಸಾಫ್ಟ್‌ವೇರ್ ಅನ್ನು ಹೋಮ್ ಸರ್ವರ್‌ನಲ್ಲಿ ಅಳವಡಿಸಿದ್ದಾರೆ. ಬೆಚ್ಚಗೆ ಮಲಗಿರುವಾಗ ನಿಮ್ಮ ಕೈಗಳು ಅಥವಾ ಕಾಲುಗಳು ಹೊದಿಕೆಯಿಂದ ಹೊರಗೆ ಬಂದರೆ, ನಿಮಗೆ ಸೆಕೆಯಾಗುತ್ತಿದೆ ಎಂದು ಎಐ ಲೆಕ್ಕ ಹಾಕುತ್ತದೆ. ತಕ್ಷಣವೇ ರೋಬೋಟಿಕ್ ರಿಮೋಟ್ ಮೂಲಕ ಫ್ಯಾನ್ ವೇಗವನ್ನು ಹೆಚ್ಚಿಸುತ್ತದೆ. ಒಂದು ವೇಳೆ ನೀವು ಚಳಿಯಾಗಿ ಮುದುಡಿ ಮಲಗಿದರೆ, ಸಿಸ್ಟಮ್ ಅದನ್ನು ಗುರುತಿಸಿ ಫ್ಯಾನ್ ವೇಗವನ್ನು ತಗ್ಗಿಸುತ್ತದೆ ಅಥವಾ ಆಫ್ ಮಾಡುತ್ತದೆ.
ಹಾಸಿಗೆ ಬಿಟ್ಟು ಏಳುವ ಪ್ರಮೇಯವೇ ಇಲ್ಲ
ಸಾಮಾನ್ಯವಾಗಿ ಸ್ಮಾರ್ಟ್ ಫ್ಯಾನ್‌ಗಳು ಅಪ್ಲಿಕೇಶನ್ ಮೂಲಕ ನಿಯಂತ್ರಿಸಲ್ಪಡುತ್ತವೆ. ಆದರೆ ಈ ಕೆಲಸಕ್ಕೆ ಫೋನ್ ಹುಡುಕಬೇಕಾಗುತ್ತದೆ. ಆದರೆ, ಪಂಕಜ್ ಅಭಿವೃದ್ಧಿ ಮಾಡಿದ ತಂತ್ರದಲ್ಲಿ ಆ ಕೆಲಸವೂ ಇರುವುದಿಲ್ಲ. ಸೀಲಿಂಗ್ ಫ್ಯಾನ್‌ನ ರೆಗ್ಯುಲೇಟರ್‌ಗೆ ಒಂದು ಪುಟ್ಟ ರೋಬೋಟಿಕ್ ಬಟನ್ ಪ್ರೆಸರ್ ಅನ್ನು ಅಳವಡಿಸಲಾಗಿದ್ದು, ಅದು ಎಐ ನೀಡುವ ಸೂಚನೆಯಂತೆ ಕಾರ್ಯನಿರ್ವಹಿಸುತ್ತದೆ. ಭಾರತದ ಅನಿಶ್ಚಿತ ಬೇಸಿಗೆ ಕಾಲದ ಹವಾಮಾನಕ್ಕೆ ಈ ತಂತ್ರಜ್ಞಾನ ಅತ್ಯಂತ ಸೂಕ್ತ ಎಂದು ವಿಶ್ಲೇಷಿಸಲಾಗುತ್ತಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ಮತ್ತು ಪ್ರೈವೆಸಿ ಆತಂಕ
ಪಂಕಜ್ ಅವರು ಹಂಚಿಕೊಂಡಿರುವ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅನೇಕರು ಈ ಕ್ರಿಯಾಶೀಲತೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವು ಬಳಕೆದಾರರು ಪ್ರೈವೆಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮಲಗುವ ಕೋಣೆಯಲ್ಲಿ ಕ್ಯಾಮೆರಾ ಕಣ್ಣು ಅಥವಾ ಸೆನ್ಸರ್ ಇರುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ಕೆಲವರು ವ್ಯಂಗ್ಯವಾಗಿ, "ಸೊಳ್ಳೆ ಕಚ್ಚುವಿಕೆಯನ್ನು ಪತ್ತೆಹಚ್ಚುವ ಅಥವಾ ಗೊರಕೆ ಹೊಡೆಯುವುದನ್ನು ನಿಲ್ಲಿಸುವ ಎಐ ಕೂಡ ಸಿದ್ಧಪಡಿಸಿ" ಎಂದು ಕಾಮೆಂಟ್ ಮಾಡಿದ್ದಾರೆ.

