ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದ ಜಾಗತಿಕ ಕೃತಕ ಬುದ್ಧಿಮತ್ತೆ ದೈತ್ಯ
x
ಸಾಂದರ್ಭಿಕ ಚಿತ್ರ.

ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದ ಜಾಗತಿಕ ಕೃತಕ ಬುದ್ಧಿಮತ್ತೆ ದೈತ್ಯ

ಆಂಥ್ರೋಪಿಕ್, ಭಾರತದ ಪ್ರಮುಖ ಉದ್ಯಮಗಳಾದ ಏರ್ ಇಂಡಿಯಾ, ಫಿನ್‌ಟೆಕ್ ದೈತ್ಯ ಕ್ರೆಡ್ ಮತ್ತು ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್​ನಂಥ ಸಂಸ್ಥೆಗಳೊಂದಿಗೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ.


Click the Play button to hear this message in audio format

ಜಾಗತಿಕ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಅಮೆರಿಕ ಮೂಲದ 'ಆಂಥ್ರೋಪಿಕ್' ಸಂಸ್ಥೆ ಇದೀಗ ಭಾರತದಲ್ಲಿ ತನ್ನ ಅಸ್ತಿತ್ವ ಭದ್ರಪಡಿಸಿಕೊಂಡಿದೆ. ಐಟಿ ರಾಜಧಾನಿ ಬೆಂಗಳೂರಿನಲ್ಲಿ ತನ್ನ ನೂತನ ಕಚೇರಿ ಆರಂಭಿಸುವುದರೊಂದಿಗೆ, ಭಾರತದ ಮಾರುಕಟ್ಟೆಯಲ್ಲಿ ಬೃಹತ್ ವಿಸ್ತರಣೆಗೆ ಮುಂದಾಗಿದೆ. ವಿಶೇಷವೆಂದರೆ, ಸಂಸ್ಥೆಯ ಪ್ರಮುಖ ಉತ್ಪನ್ನವಾದ 'ಕ್ಲಾಡ್ ಎಐ' ಬಳಕೆಯಲ್ಲಿ ಅಮೆರಿಕದ ನಂತರ ಭಾರತವೇ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

ಭಾರತದ ತಂತ್ರಜ್ಞಾನ ವಲಯ ಮತ್ತು ಡೆವಲಪರ್ ಸಮುದಾಯದ ಸಾಮರ್ಥ್ಯವನ್ನು ಕೊಂಡಾಡಿರುವ ಆಂಥ್ರೋಪಿಕ್, ಇಲ್ಲಿನ ಬಳಕೆದಾರರು ಎಐ ತಂತ್ರಜ್ಞಾನವನ್ನು ಅತ್ಯಂತ ಸಂಕೀರ್ಣ ಮತ್ತು ತಾಂತ್ರಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಜಾಗತಿಕವಾಗಿ ಗಮನಿಸಿದರೆ, ಭಾರತದಲ್ಲಿನ ಎಐ ಬಳಕೆ ಕೇವಲ ಸಾಮಾನ್ಯ ಚಾಟ್‌ಬಾಟ್ ಸಂಭಾಷಣೆಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಇಲ್ಲಿ ನಡೆಯುವ ಕ್ಲಾಡ್ ಎಐ ಬಳಕೆಯ ಅರ್ಧದಷ್ಟು ಪಾಲು ಕಂಪ್ಯೂಟರ್ ಪ್ರೋಗ್ರಾಮಿಂಗ್, ಗಣಿತದ ಲೆಕ್ಕಾಚಾರಗಳು, ಅಪ್ಲಿಕೇಶನ್ ಅಭಿವೃದ್ಧಿ ಮತ್ತು ಸಾಫ್ಟ್‌ವೇರ್ ಆಧುನೀಕರಣದಂತಹ ಗಂಭೀರ ತಾಂತ್ರಿಕ ಕೆಲಸಗಳಿಗೆ ಮೀಸಲಾಗಿರುವುದು ವಿಶೇಷವಾಗಿದೆ.

ದೊಡ್ಡ ಕಂಪನಿಗಳ ಜತೆ ಪಾಲುದಾರಿಕೆ

ತನ್ನ ವಿಸ್ತರಣೆಯ ಭಾಗವಾಗಿ ಆಂಥ್ರೋಪಿಕ್, ಭಾರತದ ಪ್ರಮುಖ ಉದ್ಯಮಗಳಾದ ಏರ್ ಇಂಡಿಯಾ, ಫಿನ್‌ಟೆಕ್ ದೈತ್ಯ ಕ್ರೆಡ್ (CRED) ಮತ್ತು ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್​ನಂಥ ಸಂಸ್ಥೆಗಳೊಂದಿಗೆ ಮಹತ್ವದ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಒಪ್ಪಂದಗಳು ಭಾರತೀಯ ಉದ್ಯಮ ವಲಯದಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸಲು ಸಹಕಾರಿಯಾಗಲಿವೆ. ಕೇವಲ ವಾಣಿಜ್ಯ ಉದ್ದೇಶಗಳಿಗಲ್ಲದೇ, ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿಯೂ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಭಾರತೀಯ ಭಾಷೆಗಳಲ್ಲಿ ಎಐ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಭಾಗದ ಜನರಿಗೂ ತಂತ್ರಜ್ಞಾನ ತಲುಪಿಸಲು 'ಕಾರ್ಯ' ಮತ್ತು 'ಡಿಜಿಟಲ್ ಗ್ರೀನ್' ನಂತಹ ಲಾಭರಹಿತ ಸಂಸ್ಥೆಗಳೊಂದಿಗೂ ಒಪ್ಪಂದ ಮಾಡಿಕೊಂಡಿದೆ.

ಚಾಟ್​ ಜಿಪಿಟಿಗೆ ಪ್ರಬಲ ಸ್ಪರ್ಧಿ

ಮೈಕ್ರೋಸಾಫ್ಟ್‌ನ ಮಾಜಿ ಅಧಿಕಾರಿ ಇರಿನಾ ಘೋಷ್ ಅವರು ಆಂಥ್ರೋಪಿಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದು, ಭಾರತದಲ್ಲಿ ಸಂಸ್ಥೆಯ ಬೆಳವಣಿಗೆಯನ್ನು ಮುನ್ನಡೆಸಲಿದ್ದಾರೆ. ಅಮೆಜಾನ್ ಮತ್ತು ಗೂಗಲ್‌ನಂತಹ ಜಾಗತಿಕ ದೈತ್ಯರ ಬೆಂಬಲ ಹೊಂದಿರುವ ಆಂಥ್ರೋಪಿಕ್, ಓಪನ್ ಎಐ ನ ಚಾಟ್‌ಜಿಪಿಟಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಈಗ ಭಾರತದಲ್ಲಿ ನೇರ ಕಾರ್ಯಾಚರಣೆ ಆರಂಭಿಸಿರುವುದರಿಂದ, ದೇಶೀಯ ಎಐ ಸ್ಟಾರ್ಟಪ್‌ಗಳು ಮತ್ತು ಡೆವಲಪರ್‌ಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಿದೆ.

Read More
Next Story