
Kathmandu flight| ಕಠ್ಮಂಡು ಹೊರಟಿದ್ದ180 ಪ್ರಯಾಣಿಕರು 30 ಗಂಟೆಗಳ ಕಾಲ ವಿಮಾನದಲ್ಲೇ ಟ್ರ್ಯಾಪ್!
ಹವಾಮಾನ ವೈಪರೀತ್ಯದಿಂದಾಗಿ ಎರಡು ಬಾರಿ ಕಠ್ಮಂಡುವಿನಲ್ಲಿ ಇಳಿಯಲು ಸಾಧ್ಯವಾಗದೆ ಲಕ್ನೋ ಮಾರ್ಗವಾಗಿ ವಾಪಸ್ ಬೆಂಗಳೂರಿಗೆ ಮರಳಿದ್ದಾರೆ.
ನೇಪಾಳದ ಸುಂದರ ತಾಣಗಳನ್ನು ನೋಡುವ ಕನಸಿನೊಂದಿಗೆ ಬೆಂಗಳೂರಿನಿಂದ ನೇಪಾಳದ ಕಠ್ಮಂಡುವಿಗೆ ಹೊರಟಿದ್ದ 180ಕ್ಕೂ ಹೆಚ್ಚು ಪ್ರಯಾಣಿಕರಿಗೆ ಈ ಪ್ರವಾಸ ದುಃಸ್ವಪ್ನವಾಗಿ ಕಾಡಿದೆ. ಬೆಂಗಳೂರಿನಿಂದ ಕಠ್ಮಂಡುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ನೇಪಾಳದಲ್ಲಿ ಇಳಿಯಲು ಸಾಧ್ಯವಾಗದೆ, ಬೆಂಗಳೂರು ತಲುಪಿದೆ.
ಗುರುವಾರ ಬೆಳಗ್ಗೆ 10:30ಕ್ಕೆ ಬೆಂಗಳೂರಿನಿಂದ ಕಠ್ಮಂಡುವಿನತ್ತ ಪ್ರಯಾಣ ಬೆಳೆಸಿದ ವಿಮಾನವು ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಇಳಿಯಲು ಸಾಧ್ಯವಾಗದೆ, ಸುಮಾರು 30 ಗಂಟೆಗಳ ಕಾಲ ಪ್ರಯಾಣಿಕರನ್ನು ಆಕಾಶದಲ್ಲೇ ಅಲೆದಾಡಿಸಿ ಅಂತಿಮವಾಗಿ ಶನಿವಾರ ರಾತ್ರಿ ಮತ್ತೆ ಬೆಂಗಳೂರಿಗೇ ತಂದು ಬಿಟ್ಟಿದೆ. ಸತತ ಎರಡು ದಿನಗಳ ಕಾಲ ಅನಿಶ್ಚಿತತೆ, ಸರಿಯಾದ ಮಾಹಿತಿ ಹಾಗೂ ಕನಿಷ್ಠ ಸೌಲಭ್ಯಗಳಿಲ್ಲದೆ ವಿಮಾನದೊಳಗೆ ಸಿಲುಕಿ ನರಕಯಾತನೆ ಅನುಭವಿಸಿದ 180ಕ್ಕೂ ಹೆಚ್ಚು ಪ್ರಯಾಣಿಕರು, ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿತನದ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಠ್ಮಂಡುವಿಗೆ ಹೊರಟಿದ್ದ ವಿಮಾನವು ನೇಪಾಳದ ಆಕಾಶ ಮಾರ್ಗ ತಲುಪಿದಾಗ ಅಲ್ಲಿನ ಹವಾಮಾನವು ವಿಮಾನ ಇಳಿಯಲು ಪೂರಕವಾಗಿರಲಿಲ್ಲ. ದಟ್ಟ ಮಂಜಿನ ಕಾರಣದಿಂದ ವಿಮಾನವನ್ನು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಳಿಸಲು ಪೈಲಟ್‌ಗೆ ಸಾಧ್ಯವಾಗಲಿಲ್ಲ. ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ವಾಪಸ್ ಬೆಂಗಳೂರಿಗೆ ತಿರುಗಿಸಲಾಯಿತು.
ಲಕ್ನೋಗೆ ತಿರುಗಿದ ವಿಮಾನ
ಮರುದಿನ ಮತ್ತೊಂದು ಪ್ರಯತ್ನದ ಭಾಗವಾಗಿ ವಿಮಾನವು ಬೆಂಗಳೂರಿನಿಂದ ಕಠ್ಮಂಡುವಿನತ್ತ ಪ್ರಯಾಣ ಬೆಳೆಸಿತು. ಈ ಬಾರಿಯಾದರೂ ಅಂತಿಮ ನಿಲ್ದಾಣ ತಲುಪುತ್ತೇವೆ ಎಂಬ ಭರವಸೆಯಲ್ಲಿದ್ದ ಪ್ರಯಾಣಿಕರಿಗೆ ಮತ್ತೊಂದು ಆಘಾತ ಎದುರಾಗಿತ್ತು. ಕಠ್ಮಂಡುವಿನಲ್ಲಿ ಇಳಿಯಲು ಸಾಧ್ಯವಾಗದ ಕಾರಣ ವಿಮಾನವನ್ನು ಹತ್ತಿರದ ಲಕ್ನೋ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಅಂತಿಮವಾಗಿ ಕಠ್ಮಂಡು ತಲುಪಲು ಸಾಧ್ಯವಾಗದ ವಿಮಾನವು ಎಲ್ಲ ಪ್ರಯಾಣಿಕರೊಂದಿಗೆ ಮತ್ತೆ ಬೆಂಗಳೂರಿಗೇ ಮರಳಿತು. ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರ ತಾಳ್ಮೆ ಹದಗೆಟ್ಟಿತ್ತು. ವಿಮಾನಯಾನ ಸಂಸ್ಥೆಯ ಕೌಂಟರ್‌ಗಳ ಮುಂದೆ ಜಮಾಯಿಸಿದ ಪ್ರಯಾಣಿಕರು ಭಾರಿ ಗದ್ದಲ ನಡೆಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮಾಹಿತಿ ಕೊರತೆ
ವಿಮಾನವನ್ನು ಏಕೆ ತಿರುಗಿಸಲಾಯಿತು? ಮುಂದಿನ ವ್ಯವಸ್ಥೆ ಏನು? ಎಂಬ ಪ್ರಶ್ನೆಗಳಿಗೆ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯಿಂದ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಜತೆಗೆ ವಿಮಾನದಲ್ಲಿ ಗಂಟೆಗಟ್ಟಲೆ ಕುಳಿತಿದ್ದ ಮಕ್ಕಳು, ವಯಸ್ಸಾದವರು ಮತ್ತು ಮಹಿಳೆಯರಿಗೆ ಸರಿಯಾದ ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತತ 30 ಗಂಟೆಗಳ ಕಾಲ ಪ್ರಯಾಣಿಕರನ್ನು ಅನಿಶ್ಚಿತತೆಯಲ್ಲಿ ಇರಿಸಿದ್ದು, ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿತನ ಎಂದು ಪ್ರಯಾಣಿಕರು ದೂರಿದ್ದಾರೆ. "ಹವಾಮಾನ ವೈಪರೀತ್ಯವು ಯಾರ ಕೈಯಲ್ಲೂ ಇಲ್ಲ ಎಂಬುದು ನಮಗೆ ತಿಳಿದಿದೆ. ಆದರೆ, ಅಂತಹ ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡುವುದು ಮತ್ತು ಅವರ ಆರೈಕೆ ಮಾಡುವುದು ಸಂಸ್ಥೆಯ ಕನಿಷ್ಠ ಜವಾಬ್ದಾರಿಯಲ್ಲವೇ?" ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಸದ್ಯ ಈ ಘಟನೆಯ ಕುರಿತು ವಿಮಾನಯಾನ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆಗಾಗಿ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

