
ಒಂದೇ ತಕ್ಕಡಿಯಲ್ಲಿ ಗಣಿಗಾರಿಕೆ, ಅರಣ್ಯೀಕರಣ: ಸರ್ಕಾರದ ದ್ವಂದ್ವ ನೀತಿಗೆ ಪರಿಸರ ಪ್ರೇಮಿಗಳ ವಿರೋಧ
ಸರ್ಕಾರವು ಆರ್ಥಿಕ ಪ್ರಗತಿ ಹೆಸರಿನಲ್ಲಿ ಗಣಿಗಾರಿಕೆಗೆ, ವಿಶೇಷವಾಗಿ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಾರಿಕೆಗೆ ಹೊಸ ಪರವಾನಗಿಗಳನ್ನು ನೀಡಲು ಮತ್ತು ಹಳೆಯ ಗುತ್ತಿಗೆಗಳನ್ನು ನವೀಕರಿಸಲು ಮುಂದಾಗಿದೆ.
ಒಂದಡೆ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಕೋಟ್ಯಂತರ ರೂ. ವಹಿಸಿ ರಾಜ್ಯವನ್ನು ಹಸಿರುಕರಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರವು ಮತ್ತೊಂದೆಡೆ ಅದೇ ಅರಣ್ಯ ಪ್ರದೇಶಗಳ ಬುಡಕ್ಕೆ ಗಣಿಗಾರಿಕೆಯ ಕೊಡಲಿಪೆಟ್ಟು ನೀಡಲು ಮುಂದಾಗಿದೆ. ಗಣಿಗಾರಿಕೆ ಮತ್ತು ಅರಣೀಕರಣವನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಸರ್ಕಾರದ ಈ ದ್ವಂದ್ವ ನಿಲುವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ (ಕೆಎಂಎಂಇಆರ್‌ಸಿ) ಸಂಗ್ರಹಿಸಿರುವ ಸುಮಾರು 25 ಸಾವಿರ ಕೋಟಿ ರೂ.ಗಳ ಬೃಹತ್ ನಿಧಿಯಲ್ಲಿ 2023-24 ರಿಂದ 2025-26ನೇ ಸಾಲಿನವರೆಗೆ ಅರಣ್ಯ ಪ್ರದೇಶದ ಪುನಶ್ಚೇತನಕ್ಕಾಗಿ 114.99 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಬಳ್ಳಾರಿಗೆ 26.54 ಕೋಟಿ ರೂ., ವಿಜಯನಗರಕ್ಕೆ 27.49 ಕೋಟಿ ರೂ., ಚಿತ್ರದುರ್ಗಕ್ಕೆ 37.04 ಕೋಟಿ ರೂ. ಮೀಸಲಿಟ್ಟಿದ್ದೆ. ಗಣಿಗಾರಿಕೆಯಿಂದ ಹಾಳಾದ ಪ್ರದೇಶಗಳಲ್ಲಿ ಮತ್ತೆ ಹಸಿರು ಮೂಡಿಸುವುದು, ಕೃಷಿ, ಕುಡಿಯುವ ನೀರು, ರಸ್ತೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಇದರ ಮೂಲ ಉದ್ದೇಶವೆಂದು ಸರ್ಕಾರ ಹೇಳಿಕೊಂಡಿದೆ.
ರಾಜ್ಯ ಸರ್ಕಾರವು ಪ್ರತಿ ವರ್ಷ ವನಮಹೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಕೋಟ್ಯಂತರ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದೆ. ಅರಣ್ಯ ಇಲಾಖೆಯ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸಲು, ಹವಾಮಾನ ಬದಲಾವಣೆಯನ್ನು ತಡೆಯಲು ಮತ್ತು ಜೀವವೈವಿಧ್ಯವನ್ನು ಸಂರಕ್ಷಿಸಲು ಬದ್ಧವಾಗಿರುವುದಾಗಿ ತಿಳಿಸಿದೆ. ಇದಕ್ಕೆ ಸಾರ್ವಜನಿಕರ ತೆರಿಗೆ ಹಣವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಮೂಲಕ ತಾನು ಪರಿಸರಸ್ನೇಹಿ ಎಂಬ ವರ್ಚಸ್ಸನ್ನು ಸೃಷ್ಟಿಸಲು ಸರ್ಕಾರ ಪ್ರಯತ್ನಿಸುತ್ತದೆ. ಈ ನಡುವೆ, ಸರ್ಕಾರವು ಆರ್ಥಿಕ ಪ್ರಗತಿ, ಸಂಪನ್ಮೂಲ ಕ್ರೋಢೀಕರಣ ಮತ್ತು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಗಣಿಗಾರಿಕೆಗೆ, ವಿಶೇಷವಾಗಿ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಾರಿಕೆಗೆ ಹೊಸ ಪರವಾನಗಿಗಳನ್ನು ನೀಡಲು ಮತ್ತು ಹಳೆಯ ಗುತ್ತಿಗೆಗಳನ್ನು ನವೀಕರಿಸಲು ಮುಂದಾಗಿದೆ. ಬಳ್ಳಾರಿ, ವಿಜಯನಗರದಂತಹ ಗಣಿಧೂಳಿನಿಂದ ಈಗಾಗಲೇ ತತ್ತರಿಸಿರುವ ಜಿಲ್ಲೆಗಳಲ್ಲದೆ, ಪಶ್ಚಿಮಘಟ್ಟದಂಚಿನಲ್ಲಿರುವ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲ್ಪಟ್ಟಿರುವ ಚಿತ್ರದುರ್ಗ ಜಿಲ್ಲೆಗಳಲ್ಲೂ ಗಣಿಗಾರಿಕೆಗೆ ಅವಕಾಶ ನೀಡುತ್ತಿರುವುದು ಈ ದ್ವಂದ್ವ ನೀತಿಯ ಸ್ಪಷ್ಟ ನಿದರ್ಶನವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಒಂದು ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಲು ಸಾವಿರಾರು ಎಕರೆ ಅರಣ್ಯವನ್ನು ನಾಶ ಮಾಡಲು ಮುಂದಾಗಿದೆ. ಒಂದೆಡೆ ಸಸಿ ನೆಟ್ಟು, ಇನ್ನೊಂದೆಡೆ ದಟ್ಟ ಅರಣ್ಯವನ್ನು ನಾಶಪಡಿಸುವುದು ಸರ್ಕಾರದ ನೀತಿಗಳಲ್ಲಿನ ಸ್ಪಷ್ಟತೆಯ ಕೊರತೆ ಮತ್ತು ದೂರದೃಷ್ಟಿಯ ಕೊರತೆಯನ್ನು ಬಿಂಬಿಸುತ್ತದೆ. ಗಣಿಗಾರಿಕೆಯಿಂದಾಗುವ ದುಷ್ಪರಿಣಾಮಗಳು ಕೇವಲ ಮರಗಳ ನಾಶಕ್ಕೆ ಸೀಮಿತವಾಗಿಲ್ಲ. ಅದು ಒಂದು ಇಡೀ ಪರಿಸರ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.
ಅರಣ್ಯ ನಾಶದ ಭೀತಿ
ಬಳ್ಳಾರಿ ಜಿಲ್ಲೆಯ ಸಂಡೂರು ಭಾಗದಲ್ಲಿ ಈಗಾಗಲೇ 6,181 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರ ನಡುವೆ ಕುದುರೆಮುಖ ಮೈನಿಂಗ್ ಕಂಪನಿಗೆ ಹೆಚ್ಚುವರಿಯಾಗಿ 401 ಹೆಕ್ಟೇರ್ ಪ್ರದೇಶವನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿವೆ. ಈ ಒಂದು ಯೋಜನೆಯಿಂದಲೇ ಲಕ್ಷಾಂತರ ಮರಗಳು ಧರೆಗುರುಳಲಿವೆ. ಇದಲ್ಲದೇ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಾಗಿ 68 ಹೆಕ್ಟೇರ್ ಪ್ರದೇಶದಲ್ಲಿರುವ ಸುಮಾರು 29,300 ಮರಗಳನ್ನು ಕಡಿಯುವ ಪ್ರಸ್ತಾವನೆ ಪರಿಸರ ಪ್ರೇಮಿಗಳನ್ನು ಬೆಚ್ಚಿಬೀಳಿಸಿದೆ. ಇದಲ್ಲದೇ, ಇ-ಹರಾಜು ಮೂಲಕ ಆರ್‌ಬಿಎಸ್‌ಎಸ್‌ಎನ್ ಕಂಪನಿಗೆ 88 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳು ಕೇವಲ ಕಬ್ಬಿಣದ ಅದಿರಿಗೆ ಮಾತ್ರವಲ್ಲ, ವಿಶಿಷ್ಟವಾದ ವನ್ಯಜೀವಿ ಸಂಕುಲಕ್ಕೂ ಹೆಸರಾಗಿವೆ. ಸಂಡೂರಿನ ಗುಡ್ಡಗಾಡು ಪ್ರದೇಶಗಳು ಅಪರೂಪದ ಕರಡಿಗಳು, ಚಿರತೆಗಳು ಮತ್ತು ನೂರಾರು ಪಕ್ಷಿ ಸಂಕುಲಕ್ಕೆ ಆಶ್ರಯತಾಣಗಳಾಗಿವೆ. ಗಣಿಗಾರಿಕೆಯ ಸ್ಫೋಟಗಳು, ಧೂಳು ಮತ್ತು ನಿರಂತರ ವಾಹನ ಸಂಚಾರದಿಂದಾಗಿ ಈ ಪ್ರಾಣಿಗಳ ಅಸ್ತಿತ್ವಕ್ಕೆ ಕುತ್ತು ಬಂದಿದೆ. ಅರಣ್ಯವನ್ನು ಕಡಿದು ಗಣಿಗಾರಿಕೆ ಮಾಡುವುದರಿಂದ ಪ್ರಾಣಿಗಳು ನಾಡಿಗೆ ಬರುವಂತಾಗಿದ್ದು, ಮಾನವ-ವನ್ಯಜೀವಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಅಲ್ಲದೇ, ಸರ್ಕಾರದ ದ್ವಂದ್ವ ನಿಲುವು ಹಲವು ಅನುಮಾನಗಳಿಗೂ ದಾರಿ ಮಾಡಿಕೊಟ್ಟಿದೆ. ಪರಿಸರ ಪುನಶ್ಚೇತನ ಹೆಸರಲ್ಲಿ ಬಿಡುಗಡೆಯಾಗುತ್ತಿರುವ 114 ಕೋಟಿ ರೂ. ಗಣಿಗಾರಿಕೆಯಿಂದಾಗುತ್ತಿರುವ ಸಾವಿರಾರು ಕೋಟಿ ರೂ. ಪರಿಸರ ನಷ್ಟಕ್ಕೆ ಸಮನಾಗಲು ಸಾಧ್ಯವೇ? ರಾಜ್ಯದ ಬೊಕ್ಕಸವನ್ನು ಭರಿಸಲು ಮತ್ತು ಗಣಿ ಮಾಫಿಯಾದ ಒತ್ತಡಕೆಕ ಮಣಿದು ಸರ್ಕಾರ ಇಂತಹ ತೀರ್ಮಾನ ತೆಗೆದುಕೊಳ್ಳುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ, ಅಷ್ಟೇ ಅಲ್ಲದೇ, ಅರಣ್ಯೀಕರಣದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಹಳೆಯ ಗಣಿ ಪ್ರದೇಶಗಳಲ್ಲಿ ಎಷ್ಟು ಮರಗಳು ಉಳಿದಿವೆ ಎಂಬ ಬಗ್ಗೆ ಯಾವುದೇ ಸಮರ್ಪಕ ಲೆಕ್ಕಪರಿಶೋಧನೆ ನಡೆದಿಲ್ಲ. ಸಸಿ ನೆಡುವುದು ಒಂದು ಪ್ರಕ್ರಿಯೆಯಾದರೆ, ಅದನ್ನು ನೈಸರ್ಗಿಕ ಕಾಡಿನಂತೆ ಬೆಳೆಸುವುದು ಅಸಾಧ್ಯದ ಮಾತು ಎಂಬುದು ಪರಿಸರವಾದಿಗಳ ಆಕ್ರೋಶವಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಜನ ಸಂಗ್ರಾಮ ವೇದಿಕೆಯ ಮುಖಂಡ ಮತ್ತು ಪರಿಸರ ಹೋರಾಟಗಾರ ಶ್ರೀಶೈಲ ಆಲದಹಳ್ಳಿ, ಈ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಗಣಿಗಾರಿಕೆಗೆ ಆದಾಯದ ನೆಪವೊಡ್ಡಿ ಅವಕಾಶ ನೀಡುತ್ತಿರುವುದು ಅರಣ್ಯಕ್ಕೆ ಕೊಡಲಿಪೆಟ್ಟು ನೀಡಿದಂತೆ. ಸರ್ಕಾರದ ದ್ವಂದ್ವ ನೀತಿಯು ದುಡ್ಡು ಮಾಡುವ ಕ್ರಮವಾಗಿದೆ. ಅರಣ್ಯೀಕರಣ ಮಾಡಿದರೂ ಹಣ ಗಳಿಕೆ ಮತ್ತು ಗಣಿಗಾರಿಕೆಗೆ ಅನುಮತಿ ನೀಡಿದರೂ ದುಡ್ಡು ಮಾಡಬಹುದು. ಹೀಗಾಗಿ ಸರ್ಕಾರವು ಎರಡೂ ಕಡೆಯು ಕೆಲಸ ಮಾಡುತ್ತಿದೆ. ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಲಾಗುವುದು. ಈಗಾಗಲೇ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಸಾಕಾಷ್ಟು ಗಣಿಕಾರಿಕೆ ನಡೆಯುತ್ತಿದೆ. ಮತ್ತಷ್ಟು ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಸರ್ಕಾರ ಧೋರಣೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಪರಿಹಾರ ಅರಣ್ಯೀಕರಣದ ವೈಫಲ್ಯ
ಗಣಿಗಾರಿಕೆಗೆ ಅರಣ್ಯ ಭೂಮಿಯನ್ನು ನೀಡುವಾಗ, ಅದಕ್ಕೆ ಪ್ರತಿಯಾಗಿ ಬೇರೆಡೆ ಅಷ್ಟೇ ಪ್ರಮಾಣದ ಭೂಮಿಯಲ್ಲಿ ಮರಗಳನ್ನು ಬೆಳೆಸಬೇಕು ಎಂಬುದು ಪರಿಹಾರ ಅರಣ್ಯೀಕರಣದ ನಿಯಮವಾಗಿದೆ. ಆದರೆ, ಇದು ಕೇವಲ ಕಾಗದದ ಮೇಲಿನ ಲೆಕ್ಕಾಚಾರವಾಗಿದೆ. ನೂರಾರು ವರ್ಷಗಳಿಂದ ನೈಸರ್ಗಿಕವಾಗಿ ಬೆಳೆದ, ಸಾವಿರಾರು ಜೀವಿಗಳಿಗೆ ಆಶ್ರಯ ನೀಡಿದ ಅರಣ್ಯವನ್ನು ಕಡಿದು, ಅದಕ್ಕೆ ಬದಲಾಗಿ ಎಲ್ಲೋ ಒಂದು ಬರಡು ಭೂಮಿಯಲ್ಲಿ ಏಕಜಾತಿಯ ಸಸಿಗಳನ್ನು ನೆಡುವುದು ಎಂದಿಗೂ ಸಮನಾಗಲಾರದು. ನೆಟ್ಟ ಸಸಿಗಳಲ್ಲಿ ಎಷ್ಟು ಬದುಕುಳಿಯುತ್ತವೆ ಎಂಬುದರ ಬಗ್ಗೆ ಸರಿಯಾದ ನಿಗಾ ಇರುವುದಿಲ್ಲ. ಬಹುತೇಕ ಯೋಜನೆಗಳು ನಿರ್ವಹಣೆಯ ಕೊರತೆಯಿಂದ ವಿಫಲವಾಗುತ್ತವೆ. ಗಣಿಗಾರಿಕೆಯಿಂದ ನಾಶವಾದ ಪ್ರದೇಶದಲ್ಲಿನ ಜೀವವೈವಿಧ್ಯವನ್ನು ಬೇರೆಲ್ಲಿಯೂ ಮರುಸೃಷ್ಟಿಸಲು ಸಾಧ್ಯವಿಲ್ಲ. ಪರಿಹಾರ ಅರಣ್ಯೀಕರಣವು ಈ ನಷ್ಟವನ್ನು ಎಂದಿಗೂ ತುಂಬಿಕೊಡಲಾರದು ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.
ಪರಿಸರ ಪ್ರೇಮಿಗಳ ಒತ್ತಾಯ
ಸರ್ಕಾರವು ಅರಣ್ಯೀಕರಣ ಮತ್ತು ಗಣಿಗಾರಿಕೆಯನ್ನು ಒಂದೇ ತಕ್ಕಡಿಯಲ್ಲಿ ತೂಗುವುದನ್ನು ನಿಲ್ಲಿಸಬೇಕು. ಆದಾಯಕ್ಕಿಂತ ಜನರ ಹಾಗೂ ಪರಿಸರದ ಹಿತಾಸಕ್ತಿ ಮುಖ್ಯವಾಗಬೇಕಿದೆ. ಹೊಸ ಗಣಿಗಾರಿಕೆ ಯೋಜನೆಗಳಿಗೆ ಅನುಮತಿ ನೀಡುವ ಮುನ್ನ ಆ ಪ್ರದೇಶದ ಜೀವವೈವಿಧ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ನಿಷ್ಪಕ್ಷಪಾತವಾದ ಅಧ್ಯಯನ ನಡೆಯಬೇಕು. ದಟ್ಟ ಅರಣ್ಯವಿರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು. ಬಿಡುಗಡೆಯಾದ 114 ಕೋಟಿ ರೂಪಾಯಿಗಳು ಕೇವಲ ಕಾಗದದ ಮೇಲೆ ಸಸಿ ನೆಡುವ ಕೆಲಸಕ್ಕಲ್ಲದೆ, ಪ್ರಾಯೋಗಿಕವಾಗಿ ಹಸಿರು ಹೊದಿಕೆ ಹೆಚ್ಚಿಸಲು ಬಳಕೆಯಾಗಬೇಕು. ಗಣಿಗಾರಿಕೆಯ ಮೇಲೆ ಅವಲಂಬಿತವಾಗುವ ಬದಲು ಸುಸ್ಥಿರ ಪ್ರವಾಸೋದ್ಯಮ ಮತ್ತು ಕೃಷಿ ಆಧಾರಿತ ಉದ್ಯಮಗಳಿಗೆ ಉತ್ತೇಜನ ನೀಡಬೇಕು ಎಂದು ಶ್ರೀಶೈಲ ಆಲದಹಳ್ಳಿ ಒತ್ತಾಯಿಸಿದ್ದಾರೆ.

