Mangalore News| ಐರ್ಲೆಂಡ್‌ನಲ್ಲಿ ಕನ್ನಡಿಗನ ನಿಗೂಢ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
x
ಮೃತ ಯುವಕ ಸಾಂಜೋ ಸುನೀಲ್

Mangalore News| ಐರ್ಲೆಂಡ್‌ನಲ್ಲಿ ಕನ್ನಡಿಗನ ನಿಗೂಢ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೆನಡಾ,ಕ್ಯಾಲಿಫೋರ್ನಿಯಾ ಬೆನ್ನಲ್ಲೇ ಇದೀಗ ಐರ್ಲೆಂಡ್‌ನಲ್ಲೂ ದಕ್ಷಿಣ ಕನ್ನಡದ ಸಾಂಜೋ ಸುನೀಲ್ ಎಂಬ ಯುವಕ ನಿಗೂಢವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.


ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕೆನಡಾದಲ್ಲಿ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಚಂದನ್ ಕುಮಾರ್ ಗುಂಡೇಟಿಗೆ ಬಲಿ, ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸಾಕೇತ್ ಶ್ರೀನಿವಾಸಯ್ಯ ನಿಗೂಢ ಸಾವಿನ ಬೆನ್ನಲ್ಲೇ, ಈಗ ಐರ್ಲೆಂಡ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಐರ್ಲೆಂಡ್‌ನಲ್ಲಿ ನಡೆದಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಾಂಜೋ ಸುನೀಲ್ (31) ಮೃತಪಟ್ಟ ದುರ್ದೈವಿ. ಐರ್ಲೆಂಡ್‌ನ ಡಬ್ಲಿನ್‌ನ ಫಿಂಗ್ಲಾಸ್‌ನಲ್ಲಿರುವ ಮನೆಯೊಂದರಲ್ಲಿ ಸುನೀಲ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ನಿ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ಐರ್ಲೆಂಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಂಜೋ ಸುನೀಲ್ ಅವರು ವರ್ಷದ ಹಿಂದೆಯಷ್ಟೇ ಕಡಬ ಮೂಲದ ಯುವತಿಯನ್ನು ವಿವಾಹವಾಗಿದ್ದರು. ಈ ಮೊದಲು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಪತ್ನಿ ಐರ್ಲೆಂಡ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕಾರಣ ಕೆಲವು ತಿಂಗಳ ಹಿಂದಷ್ಟೇ ಅಲ್ಲಿಗೆ ತೆರಳಿ ವಾಸವಾಗಿದ್ದರು. ಸುನೀಲ್ ಅವರ ಈ ಸಾವು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೆನಡಾದಲ್ಲಿ ಚಂದನ್ ಕುಮಾರ್ ಹತ್ಯೆ ಪ್ರಕರಣ

ಇತ್ತೀಚೆಗಷ್ಟೇ ಕೆನಡಾದಲ್ಲಿ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕೆನಡಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಚಂದನ್, ಅಲ್ಲಿನ ಕನ್ನಡ ಸಂಘಟನೆಗಳ ಮೂಲಕ ಕನ್ನಡಿಗರ ಧ್ವನಿಯಾಗಿ ಗುರುತಿಸಿಕೊಂಡಿದ್ದರು.

ಹತ್ತು ದಿನಗಳ ಹಿಂದೆ ನಡೆದ ಈ ಬರ್ಬರ ಹತ್ಯೆಯ ತನಿಖೆಯನ್ನು ಟೊರಾಂಟೋ ಪೊಲೀಸರು ನಡೆಸುತ್ತಿದ್ದಾರೆ. ಆದರೆ, ಹತ್ಯೆಗೆ ನಿಖರ ಕಾರಣವೇನು ಮತ್ತು ಹಂತಕರು ಯಾರು ಎಂಬ ಬಗ್ಗೆ ಪೊಲೀಸರು ಇದುವರೆಗೆ ಯಾವುದೇ ಸುಳಿವು ನೀಡಿಲ್ಲ. ಇತ್ತೀಚೆಗಷ್ಟೇ ಚಂದನ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಿನಲ್ಲಿ ನೆರವೇರಿತ್ತು.

ನಿಗೂಢವಾಗಿ ಮೃತಪಟ್ಟಿದ್ದ ಸಾಕೇತ್ ಶ್ರೀನಿವಾಸಯ್ಯ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಬೆಂಗಳೂರು ಮೂಲದ ಸಾಕೇತ್ ಶ್ರೀನಿವಾಸಯ್ಯ ಅವರ ಬಂಧನದ ಪ್ರಕರಣವು ಅನಿವಾಸಿ ಕನ್ನಡಿಗರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚೆಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಇವರನ್ನು ಸ್ಥಳೀಯ ಪೊಲೀಸರು ಬಂಧಿಸಿರುವ ಮಾಹಿತಿ ಲಭ್ಯವಾಗಿದ್ದು, ಅವರ ಮೇಲಿನ ಆರೋಪಗಳ ಕುರಿತು ಇನ್ನೂ ನಿಖರವಾದ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ವಿದೇಶಗಳಲ್ಲಿ ಕನ್ನಡಿಗರ ಸುರಕ್ಷತೆಯ ಪ್ರಶ್ನೆ ಮೂಡುತ್ತಿರುವ ಈ ಸಂದರ್ಭದಲ್ಲಿ, ಸಾಕೇತ್ ಅವರ ಕುಟುಂಬದವರು ಭಾರತ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದು, ಭಾರತೀಯ ರಾಯಭಾರ ಕಚೇರಿಯು ಈ ಬಗ್ಗೆ ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಕೆನಡಾ ಮತ್ತು ಐರ್ಲೆಂಡ್‌ನಲ್ಲಿ ಕನ್ನಡಿಗರ ಸಾವು ಸಂಭವಿಸಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ನ್ಯಾಯಕ್ಕಾಗಿ ಆಗ್ರಹಕ್ಕೆ ಕಾರಣವಾಗಿದೆ.

ವಿದೇಶದ ನೆಲದಲ್ಲಿ ಒಂದರ ಹಿಂದೆ ಒಂದರಂತೆ ಕನ್ನಡಿಗರು ಸಾವನ್ನಪ್ಪುತ್ತಿರುವುದು ಅವರ ಕುಟುಂಬಸ್ಥರಲ್ಲಿ ಮತ್ತು ಅನಿವಾಸಿ ಕನ್ನಡಿಗರಲ್ಲಿ ತೀವ್ರ ಆತಂಕ ಮೂಡಿಸಿದೆ.

Read More
Next Story