ಕ್ಯಾಲಿಫೋರ್ನಿಯಾದಲ್ಲಿ ಸಾಕೇತ್ ನಿಗೂಢ ಸಾವು; ರೂಮ್‌ಮೇಟ್‌ ಹೇಳಿದ್ದೇನು?
x
ರೂಮ್‌ಮೇಟ್‌ ಬನೀಟ್‌ ಸಿಂಗ್‌ ಜತೆ ಸಾಕೇತ್‌

ಕ್ಯಾಲಿಫೋರ್ನಿಯಾದಲ್ಲಿ ಸಾಕೇತ್ ನಿಗೂಢ ಸಾವು; ರೂಮ್‌ಮೇಟ್‌ ಹೇಳಿದ್ದೇನು?

ಜ.21ರಂದೇ ಸಾಕೇತ್ ನನ್ನನು (ಬನೀಟ್ ಸಿಂಗ್) ಅಂಜಾ ಕೆರೆಯ ಬಳಿ ಹೋಗೋಣ ಎಂದು ಕರೆದಿದ್ದ. ಆದರೆ, ಅಂದು ಕೆಲಸದ ಒತ್ತಡದಿಂದ ನಾನು ಹೋಗಿರಲಿಲ್ಲ ಎಂದು ಸಾಕೇತ್‌ ರೂಮ್‌ಮೇಟ್‌ ಆಗಿದ್ದ ಬನೀಟ್‌ ಸಿಂಗ್‌ ಹೇಳಿದ್ದಾರೆ.


ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಕರ್ನಾಟಕದ ತುಮಕೂರು ಮೂಲದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಸಾವಿನ ಹಿಂದೆ ಅನುಮಾನಗಳು ಹುಟ್ಟಿಕೊಂಡಿವೆ.

ಒಂದೆಡೆ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಮೃತದೇಹವನ್ನು ತುಮಕೂರಿಗೆ ತರಲು ಕಾನೂನು ಪ್ರಕ್ರಿಯೆಗಳನ್ನೂ ಆರಂಭಿಸಲಾಗಿದೆ. ಈ ಮಧ್ಯೆ, ಸಾಕೇತ್ ಅವರ ರೂಮ್‌ಮೇಟ್‌ ಆಗಿದ್ದ ಪಂಜಾಬ್‌ ಮೂಲದ ಬನೀಟ್‌ ಸಿಂಗ್ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದು, ಸಾಕೇತ್ ತನ್ನ ಸಾವಿಗೆ ಮಾನಸಿಕವಾಗಿ ಸಿದ್ಧರಾಗಿದ್ದರೇ ಎಂಬ ಶಂಕೆ ಮೂಡಿಸಿದೆ.

ʼʼಕಳೆದ ಎರಡು ವಾರಗಳಿಂದ ಸಾಕೇತ್ ಜೀವನಶೈಲಿ ಬದಲಾಗಿತ್ತು. 15 ದಿನಗಳಿಂದ ಸಾಕೇತ್ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಕೇಳಿದರೆ ಏನೂ ಇಲ್ಲ ಎಂದು ಉತ್ತರಿಸುತ್ತಿದ್ದ. ಕೇವಲ ಚಿಪ್ಸ್ ತಿಂದು ಕಾಲ ಕಳೆಯುತ್ತಿದ್ದ. ಸಾಕೇತ್ ಒಮ್ಮೆ ತರಗತಿಯಿಂದ ಕೆಂಪು ನಿಲುವಂಗಿ ಧರಿಸಿ ಹಿಂತಿರುಗುತ್ತಿರುವುದನ್ನು ನೋಡಿದೆ. ನೀನು ಯಾಕೆ ತರಗತಿಗೆ ನಿಲುವಂಗಿಯಲ್ಲಿ ಬಂದಿದ್ದೀಯಾ ʼ ಎಂದು ಕೇಳಿದಾಗ, ನಾನು ಕಾಳಜಿ ವಹಿಸುವುದನ್ನು ನಿಲ್ಲಿಸಿದ್ದೇನೆ, ನನಗೆ ಚಳಿಯಾಗುತ್ತಿದೆ, ನನಗೆ ಯಾವುದರ ಬಗ್ಗೆಯೂ ಕಾಳಜಿ ಇಲ್ಲ. ನಾನೇ ನನ್ನ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟಿದ್ದೇನೆ" ಎನ್ನುತ್ತಿದ್ದ ಎಂದು ಸಾಕೇತ್‌ ಜತೆ ನಡೆಸಿದ ಕೊನೆಯ ಸಂಭಾಷಣೆಯನ್ನು ಬನೀಟ್‌ ಸಿಂಗ್‌ ಪೋಸ್ಟ್‌ ಮಾಡಿದ್ದಾರೆ.

ಸಾಕೇತ್‌ ಶ್ರೀನಿವಾಸಯ್ಯ

ಜ.21ರಂದೇ ಸಾಕೇತ್ ನನ್ನನು (ಬನೀಟ್ ಸಿಂಗ್) ಅಂಜಾ ಕೆರೆಯ ಬಳಿ ಹೋಗೋಣ ಎಂದು ಕರೆದಿದ್ದ. ಆದರೆ, ಅಂದು ಕೆಲಸದ ಒತ್ತಡದಿಂದ ನಾನು ಹೋಗಿರಲಿಲ್ಲ. ಅದೇ ಕೆರೆಯಲ್ಲಿ ಈಗ ಸಾಕೇತ್‌ ಜೀವ ಕಳೆದುಕೊಂಡಿದ್ದಾನೆ, ಇದನ್ನು ನಾನು ಊಹಿಸಿರಲಿಲ್ಲ. ನನ್ನ ಜೊತೆ ನಗುತ್ತಿದ್ದ, ಊಟ ಮಾಡುತ್ತಿದ್ದ, ಪ್ರಯಾಣಿಸುತ್ತಿದ್ದ. ತಮಾಷೆ ಮಾಡಿಕೊಂಡು ಇದ್ದವನು ಈ ರೀತಿ ಸಾವಿಗೆ ಶರಣಾಗುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಬೇರೆ ದೇಶದಲ್ಲಿ ವಿದ್ಯಾರ್ಥಿಗಳ ಜೀವನ ಹೊರಗೆ ಕಾಣುವಷ್ಟು ಸುಲಭವಲ್ಲ." ಎಂದು ಬನೀಟ್ ಸಿಂಗ್ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಫೆ.9 ರಂದು ನಾಪತ್ತೆಯಾಗಿದ್ದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹ ಶನಿವಾರ ಕೆರೆಯ ಬಳಿ ಪತ್ತೆಯಾಗಿತ್ತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (ಯುಸಿ ಬರ್ಕ್ಲಿ) ಕೆಮಿಕಲ್ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಸಾಕೇತ್‌ ಸಾವಿನ ಸುದ್ದಿ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸಾಕೇತ್‌ ಸಾವಿನ ಕುರಿತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.

“ಸಾಕೇತ್ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ಅಗತ್ಯ ನೆರವು ನೀಡಲಾಗುವುದು. ಈ ಕಠಿಣ ಸಮಯದಲ್ಲಿ ಮೃತರ ಕುಟುಂಬ ಮತ್ತು ಆಪ್ತರಿಗೆ ರಾಯಭಾರ ಕಚೇರಿ ಸಂತಾಪ ಸೂಚಿಸುತ್ತೇವೆ” ಎಂದು ಹೇಳಿದೆ.

ರೂಮ್‌ಮೇಟ್‌ ಬನೀಟ್‌ ಸಿಂಗ್‌ ಜೊತೆ ಸಾಕೇತ್‌ ಶ್ರೀನಿವಾಸಯ್ಯ

ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆ

ಸಾಕೇತ್‌ ಸಾವಿನ ಸುದ್ದಿಯನ್ನು ನಂಬಲಾಗದೇ ಗೊಂದಲದಲ್ಲಿದ್ದೇವೆ, ಪೋಷಕರು ಚಿಂತಿತರಾಗಿದ್ದಾರೆ. ದಯವಿಟ್ಟು ಅಧಿಕಾರಿಗಳು ದೃಢೀಪಡಿಸಬೇಕು, ಸಾಕೇತ್‌ ಸಾವಿಗೆ ಸಂಬಂಧಿಸಿದ ಫೋಟೋಗಳು, ವಿಡಿಯೊ ಮತ್ತು ವೈದ್ಯಕೀಯ ವರದಿಯನ್ನು ನೀಡಿ ಎಂದು ಗಣೇಶ್ ಎಂಬುವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮತ್ತೊಬ್ಬ ಎಕ್ಸ್‌ ಬಳಕೆದಾರ ರಾಜೀವ್‌ ಸಕ್ಸೇನಾ ಎಂಬುವರು, ʼಕಳೆದ 2 ವರ್ಷಗಳಿಂದ ಅಮೆರಿಕದಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹತ್ಯೆಗಳು ನಡೆದಿವೆ. ಇದೂ ಸಹ ಅದೇ ಮಾದರಿಯಲ್ಲಿರುವಂತೆ ತೋರುತ್ತಿದೆʼ ಎಂದಿದ್ದಾರೆ.

ಭರತ್‌ ಎಂಬುವರು ಹಾಕಿರುವ ಪೋಸ್ಟ್‌ನಲ್ಲಿ, ʼಸಾಕೇತ್ ಶ್ರೀನಿವಾಸಯ್ಯ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಆತನ ರೂಮ್‌ಮೇಟ್‌ ಬನೀಟ್‌ ಸಿಂಗ್ ಅವರನ್ನು ಕಸ್ಟಡಿ ಪಡೆದು ವಿಚಾರಣೆ ನಡೆಸಬೇಕು. ಇದರಿಂದ ಸಾಕೇತ್ ಕಣ್ಮರೆಯ ರಹಸ್ಯ ಬಯಲಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ಎಸ್‌ಕೆಪಿ ಎಂಬ ಬಳಕೆದಾರರ ಖಾತೆಯಿಂದ ʼಭಾರತ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಅಮೆರಿಕದಲ್ಲಿ ನಡೆದ ಭಾರತ ಮೂಲದವರ ಸಾವಿನ ವಿವರ ಮತ್ತು ಸಾವಿಗೆ ಕಾರಣ ಒದಗಿಸಬೇಕು. ಈ ವಿವರಗಳನ್ನು ಪಡೆಯಬಹುದಾದ ವೆಬ್‌ಸೈಟ್ ತಿಳಿಸಿʼ ಎಂದು ಆಗ್ರಹಿಸಿದ್ದಾರೆ.

ಶೋಧ ಕಾರ್ಯ ನಡೆದಿದ್ದು ಹೇಗೆ?

ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಸಾಕೇತ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಲೇಕ್ ಅಂಝಾ ಮತ್ತು ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು. ಇದಕ್ಕೂ ಮುನ್ನ, ಟೆಲ್ಡನ್ ರೀಜನಲ್ ಪಾರ್ಕ್ ಬಳಿಯ ನಿವಾಸವೊಂದರ ಹತ್ತಿರ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಬ್ಯಾಗ್ (ಬ್ಯಾಕ್‌ಪ್ಯಾಕ್) ಪತ್ತೆಯಾಗಿತ್ತು. ಸಾಮಾಜಿಕ ಜಾಲತಾಣ ರೆಡ್ಡಿಟ್ (Reddit) ಮೂಲಕವೂ ಸಮುದಾಯದ ಸದಸ್ಯರು ಅವರನ್ನು ಹುಡುಕಲು ಸಂಘಟಿತ ಪ್ರಯತ್ನ ನಡೆಸಿದ್ದರು.

ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ

ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿಯಾಗಿದ್ದ ಸಾಕೇತ್, ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಶ್ರೀವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪೂರೈಸಿದ್ದರು. ಲಿಂಕ್ಸ್ ಇನ್ ಪ್ರೊಫೈಲ್ ಪ್ರಕಾರ, ಹೈಪರ್‌ಲೂಪ್‌ಗಾಗಿ ಮೈಕ್ರೋಚಾನಲ್ ಕೂಲಿಂಗ್ ಸಿಸ್ಟಮ್‌ಗೆ ಸಂಬಂಧಿಸಿದ ಪೇಟೆಂಟ್ ಹೊಂದಿದ್ದ ಆರು ಸಂಶೋಧಕರಲ್ಲಿ ಇವರೂ ಒಬ್ಬರಾಗಿದ್ದರು. ಅವರನ್ನು ಚುರುಕು ಬುದ್ದಿಯ, ವಿನಮ್ರ ಮತ್ತು ಪ್ರತಿಭಾವಂತ ವ್ಯಕ್ತಿ ಎಂದು ಗುರುತಿಸಲಾಗಿತ್ತು.

ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಲೋಕಸಭೆಯಲ್ಲಿ ಇತ್ತೀಚೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ವಿದೇಶಾಂಗ ಸಚಿವಾಲಯ, ವಿದ್ಯಾರ್ಥಿಗಳ ರಕ್ಷಣೆಗಾಗಿ ನಿರಂತರ ಸಂಪರ್ಕ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿತ್ತು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಶ್ರೀನಿವಾಸಯ್ಯ ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಸಾಕೇತ್ ದೊಡ್ಡ ಮಗನಾಗಿದ್ದ. ಕುಟುಂಬದ ಹೆಮ್ಮೆಯಾಗಿದ್ದ ಸಾಕೇತ್ ನಾಪತ್ತೆಯಾಗಿದ್ದು, ಆ ನಂತರ ಆರಂಭವಾದ ಹುಡುಕಾಟ ಆರು ದಿನಗಳ ಕಾಲ ನಡೆದಿದೆ. ಆದರೆ ಪ್ರಾರ್ಥನೆ ಫಲಿಸಲಿಲ್ಲ. ಸಾಕೇತ್ ಶವವಾಗಿ ಪತ್ತೆಯಾದ ಸುದ್ದಿ ಕುಟುಂಬಕ್ಕೆ ಭಾರೀ ಆಘಾತ ನೀಡಿದೆ.

Read More
Next Story