ಇರಾನ್-ಇಸ್ರೇಲ್ ಸಮರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
x

ಮಂಗಳೂರು ವಿಮಾನ ನಿಲ್ದಾಣ

ಇರಾನ್-ಇಸ್ರೇಲ್ ಸಮರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಮಂಗಳೂರಿನಿಂದ ದುಬೈ ಮತ್ತು ಅಬುಧಾಬಿ ಸೇರಿದಂತೆ ವಿವಿಧ ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ಎಂಟು ವಿಮಾನಗಳ ಹಾರಾಟವನ್ನು ಇಂದು ರದ್ದುಗೊಳಿಸಲಾಗಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ವಾಯುಮಾರ್ಗಗಳನ್ನು ನಿರ್ಬಂಧಿಸಲಾಗಿದ್ದು, ಇದರ ನೇರ ಪರಿಣಾಮ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬೀರಿದೆ. ಮಂಗಳೂರು ಮತ್ತು ಕೊಲ್ಲಿ ರಾಷ್ಟ್ರಗಳ ನಡುವಿನ ವಿಮಾನ ಸಂಚಾರವು ಭಾನುವಾರ ಸಂಪೂರ್ಣವಾಗಿ ರದ್ದಾಗಿದೆ.

ಮಂಗಳೂರಿನಿಂದ ದುಬೈ ಮತ್ತು ಅಬುಧಾಬಿ ಸೇರಿದಂತೆ ವಿವಿಧ ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ಎಂಟು ವಿಮಾನಗಳ ಹಾರಾಟವನ್ನು ಇಂದು ರದ್ದುಗೊಳಿಸಲಾಗಿದೆ. ಅದೇ ರೀತಿ, ಅರಬ್ ರಾಷ್ಟ್ರಗಳಿಂದ ರಾಜ್ಯಕ್ಕೆ ಬರಬೇಕಿದ್ದ ವಿಮಾನಗಳೂ ಸಹ ಹಾರಾಟ ನಡೆಸಿರುವುದಿಲ್ಲ. ಕರ್ನಾಟಕ ಮಾತ್ರವಲ್ಲದೆ ಕೇರಳದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದಲೂ ಕೊಲ್ಲಿ ರಾಷ್ಟ್ರಗಳಿಗೆ ನೀಡಲಾಗುತ್ತಿದ್ದ ಸೇವೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಮಾರ್ಗ ಬದಲಾವಣೆ ಮತ್ತು ಆರ್ಥಿಕ ಹೊರೆ

ಭಾರತದಿಂದ ಅರಬ್ ರಾಷ್ಟ್ರಗಳ ಮಾರ್ಗವಾಗಿ ಯುರೋಪ್ ದೇಶಗಳಿಗೆ ಸಂಚರಿಸುವ ವಿಮಾನಗಳ ಹಾರಾಟದ ಹಾದಿಯನ್ನು ಬದಲಾಯಿಸಲಾಗಿದೆ ಅಥವಾ ಕೆಲವು ಯಾನಗಳನ್ನು ಭಾಗಶಃ ಮೊಟಕುಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಭಾರಿ ಆರ್ಥಿಕ ನಷ್ಟವುಂಟಾಗಿದೆ. ಸಾಮಾನ್ಯವಾಗಿ ನೇರ ವಿಮಾನಗಳಿಗಿಂತ ದುಬೈ ಮೂಲಕ ಸಂಚರಿಸುವ ವಿಮಾನಗಳ ದರವು ಸರಾಸರಿ 50,000 ರೂಪಾಯಿಗಳಷ್ಟು ಕಡಿಮೆಯಿರುತ್ತದೆ. ಹೀಗಾಗಿ ಹೆಚ್ಚಿನ ಜನರು ದುಬೈ ಮಾರ್ಗವನ್ನೇ ಅವಲಂಬಿಸಿದ್ದರು. ಈಗ ಸಂಚಾರ ಸ್ಥಗಿತಗೊಂಡಿರುವುದು ಜನರಿಗೆ ಹೊರೆಯಾಗಿ ಪರಿಣಮಿಸಿದೆ.

ಪ್ರಯಾಣಿಕರ ಅನುಭವ

"ನನ್ನ ಮಗಳು ಮಂಗಳೂರಿನಿಂದ ಹೊರಟಿದ್ದ ವಿಮಾನವು ನಿನ್ನೆ ಸಂಜೆ ತಾಂತ್ರಿಕ ಕಾರಣಗಳಿಂದ ಬೆಂಗಳೂರಿನಲ್ಲಿ ಇಳಿದಿತ್ತು. ಇಂದು ಬೆಳಿಗ್ಗೆ ಆಕೆ ತನ್ನ ಪ್ರಯಾಣ ಮುಂದುವರಿಸಿದ್ದಾಳೆ. ಒಂದು ಕ್ಷಣ ನಮಗೆ ತುಂಬಾ ಆತಂಕವಾಗಿತ್ತು, ಈಗ ನಿರಾಳವಾಗಿದ್ದೇವೆ. ನಾವು ಯಾವಾಗಲೂ ದುಬೈ ಮಾರ್ಗದ ವಿಮಾನಗಳನ್ನೇ ಕಾಯ್ದಿರಿಸುತ್ತೇವೆ, ಏಕೆಂದರೆ ಅದು ತುಲನಾತ್ಮಕವಾಗಿ ಅಗ್ಗವಾಗಿರುತ್ತದೆ," ಎಂದು ಮಂಗಳೂರಿನ ಕೊಂಚಾಡಿ ನಿವಾಸಿ ಕೃಷ್ಣಪ್ಪ ಅವರು ತಿಳಿಸಿದ್ದಾರೆ.

ಟೇಕ್ ಆಫ್‌ಗೆ ಸಿದ್ಧವಾಗಿದ್ದ ವಿಮಾನ ವಾಪಸ್

ನಿನ್ನೆ ಅಪರಾಹ್ನ ಮಂಗಳೂರಿನಿಂದ ದುಬೈಗೆ ಹೊರಡಲು ಸಿದ್ಧವಾಗಿದ್ದ 'ಏರ್ ಇಂಡಿಯಾ ಎಕ್ಸ್‌ಪ್ರೆಸ್' ವಿಮಾನವನ್ನು ವಾಯುಮಾರ್ಗ ನಿರ್ಬಂಧದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಕರೆಯಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ 174 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಯನ್ನು ಕೆಳಗಿಳಿಸಿ ವಿಮಾನಯಾನವನ್ನು ರದ್ದುಪಡಿಸಲಾಯಿತು.

ಕರಾವಳಿಯ ಮೇಲೆ ಪರಿಣಾಮ

ಕೊಲ್ಲಿ ರಾಷ್ಟ್ರಗಳೊಂದಿಗೆ ನಿಕಟ ವ್ಯವಹಾರಿಕ ಮತ್ತು ಉದ್ಯೋಗದ ಸಂಬಂಧ ಹೊಂದಿರುವ ಕರ್ನಾಟಕದ ಕರಾವಳಿ ಜನತೆಗೆ ಈ ಯುದ್ಧವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಮರವು ತಕ್ಷಣವೇ ಕೊನೆಗೊಳ್ಳುವುದೊಂದೇ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ವರದಿ - ರಮೇಶ್​ ಪೆರ್ಲ

Read More
Next Story