
Namma metro: ಮೆಟ್ರೋ 'ರೆಡ್ ಲೈನ್'ಗೆ ಕೇಂದ್ರದಿಂದ ರೆಡ್ ಸಿಗ್ನಲ್..!
ಸರ್ಜಾಪುರ - ಹೆಬ್ಬಾಳ ನಡುವಿನ ಕೆಂಪು ಮಾರ್ಗ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಲು ನಿರಾಕರಿಸಿದೆ. ಮೆಟ್ರೋ ದರ ಏರಿಕೆ ಜಟಾಪಟಿ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಈ ಮೂಲಕ ಶಾಕ್ ನೀಡಿದೆ.
ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಸೃಷ್ಟಿಯಾಗಬೇಕಾಗಿದ್ದ ದಾಖಲೆಯೊಂದಕ್ಕೆ ತಾತ್ಕಾಲಿಕ ತಡೆಯಾಗಿದೆ. ಸರ್ಜಾಪುರ - ಹೆಬ್ಬಾಳ ನಡುವಿನ ಕೆಂಪು ಮಾರ್ಗ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಲು ನಿರಾಕರಿಸಿದೆ. ಮೆಟ್ರೋ ದರ ಏರಿಕೆ ಜಟಾಪಟಿ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಈ ಮೂಲಕ ಶಾಕ್ ನೀಡಿದೆ. ಕೆಲವು ಕಡೆಗಳಲ್ಲಿ ಡಬಲ್ ಡೆಕ್ಕರ್ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ.
ಡಬಲ್ ಡೆಕ್ಕರ್ ವ್ಯವಸ್ಥೆ ಮಾಡಿದರೆ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆ. ಹೀಗಾಗಿ ಕೆಂಪು ಮಾರ್ಗ ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಬೇಡವಾಗಿದೆ. ಅಲ್ಲದೇ, ಈ ವಿನ್ಯಾಸ ಸಮೂಹ ಸಾರಿಗೆ ವ್ಯವಸ್ಥೆಯ ಉದ್ದೇಶ ದುರ್ಬಲಗೊಳಿಸಬಹುದು. ಈ ಕಾರಣಕ್ಕಾಗಿ ಮರುಪರಿಶೀಲಿಸಬೇಕು ಎಂದು ಕೇಂದ್ರ ಹೇಳಿದೆ. 36.59 ಕಿಮೀ ಉದ್ದದ ಈ ಮಾರ್ಗವು ಬೆಂಗಳೂರು ಮೆಟ್ರೋ ರೈಲು ನಿಗಮದ 3ಎ ಹಂತದ ಯೋಜನೆಯಾಗಿದ್ದು, ಎರಡನೇ ಬಾರಿಗೆ ಕೇಂದ್ರವು ಈ ಯೋಜನೆ ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಕುರಿತು ಸಂಸದ ಪಿ.ಸಿ.ಮೋಹನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಡುವೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರಿನಂತಹ ನಗರದಲ್ಲಿ ರಸ್ತೆ ಅಗಲೀಕರಣ ಮಾಡುವುದು ಅತ್ಯಂತ ಕಷ್ಟ ಮತ್ತು ದುಬಾರಿಯಾಗಿದೆ. ಹೀಗಾಗಿ ಒಂದೇ ಜಾಗದಲ್ಲಿ ಕೆಳಗೆ ರಸ್ತೆ, ಮೇಲೆ ಫ್ಲೈ ಓವರ್ ಮತ್ತು ಅದರ ಮೇಲೆ ಮೆಟ್ರೋ (ಡಬಲ್ ಡೆಕ್ಕರ್) ನಿರ್ಮಿಸುವುದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಇದೀಗ ಇದು ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವಿನ ತಿಕ್ಕಾಟಕ್ಕೆ ಮತ್ತೊಂದು ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಸರ್ಜಾಪುರದಿಂದ ಹೆಬ್ಬಾಳದವರೆಗೆ ಸುಮಾರು 37 ಕಿ.ಮೀ ಉದ್ದದ ಈ ಮೆಟ್ರೋ ಕಾರಿಡಾರ್‌ಗೆ 25,405 ಕೋಟಿ ರೂ.ಗಳ ಬೃಹತ್ ಯೋಜನಾ ವರದಿ ಸಿದ್ಧಪಡಿಸಲಾಗಿತ್ತು. ಇದರಲ್ಲಿ 28 ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋದ ಕೆಳಗಡೆ ರಸ್ತೆ ಮೇಲ್ಸೇತುವೆ (ಡಬಲ್ ಡೆಕ್ಕರ್) ನಿರ್ಮಿಸುವ ಯೋಜನೆಯು ರಾಜ್ಯ ಸರ್ಕಾರ ಮಾಡಿದೆ. ಇದಕ್ಕೆ ಮರುಪರಿಶೀಲನೆ ನಡೆಸುವಂತೆ ಕೇಂದ್ರ ಹೇಳಿದೆ.
ಕೇಂದ್ರ ಸರ್ಕಾರದ ಆಕ್ಷೇಪಣೆಗಳೇನು?
ಕೇಂದ್ರ ಸರ್ಕಾರ ಮುಖ್ಯವಾಗಿ ಎರಡು ಕಾರಣಗಳನ್ನು ನೀಡಿ ಈ ಯೋಜನೆಗೆ ತಡೆ ಹಾಕಿದೆ. ಮೆಟ್ರೋ ಹಳಿಯ ಕೆಳಗೆ ಸುಸಜ್ಜಿತವಾದ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಿಸಿದರೆ, ಖಾಸಗಿ ವಾಹನ ಸವಾರರು ಮೆಟ್ರೋ ಬಳಸುವ ಬದಲು ತಮ್ಮ ವಾಹನಗಳಲ್ಲೇ ಫ್ಲೈ ಓವರ್ ಮೇಲೆ ಸಂಚರಿಸುತ್ತಾರೆ. ಇದರಿಂದ ಮೆಟ್ರೋಗೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ಯೋಜನೆಯು ಆರ್ಥಿಕವಾಗಿ ನಷ್ಟ ಅನುಭವಿಸಬಹುದು. 25 ಸಾವಿರ ಕೋಟಿ ರೂ.ಗಿಂತ ಅಧಿಕ ವೆಚ್ಚದ ಈ ಯೋಜನೆಗೆ ಕೇಂದ್ರದ ಅನುಮೋದನೆ ಪಡೆಯುವುದು ಸವಾಲಿನ ಕೆಲಸವಾಗಿತ್ತು. ಡಬಲ್ ಡೆಕ್ಕರ್ ನಿರ್ಮಾಣದಿಂದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರದ ಸಮರ್ಥನೆ
ರಾಜ್ಯ ಸರ್ಕಾರದ ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ರಸ್ತೆ ಅಗಲೀಕರಣ ಮಾಡುವುದು ಅತ್ಯಂತ ಕಷ್ಟ ಮತ್ತು ದುಬಾರಿಯಾಗಿದೆ. ಹೀಗಾಗಿ ಒಂದೇ ಜಾಗದಲ್ಲಿ ಕೆಳಗೆ ರಸ್ತೆ, ಮೇಲೆ ಫ್ಲೈ ಓವರ್ ಮತ್ತು ಅದರ ಮೇಲೆ ಮೆಟ್ರೋ (ಡಬಲ್ ಡೆಕ್ಕರ್) ನಿರ್ಮಿಸುವುದು ಅತ್ಯುತ್ತಮ ಆಯ್ಕೆ. ಈ ಯೋಜನೆಯ ವೆಚ್ಚವನ್ನು ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ 50:50 ಅನುಪಾತದಲ್ಲಿ ಹಂಚಿಕೊಳ್ಳಲಿವೆ. ಇದರಿಂದ ಕೇಂದ್ರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ. ರಸ್ತೆಯಲ್ಲಿ ಓಡಾಡುವ ವಾಹನ ಸವಾರರೇ ಬೇರೆ, ಮೆಟ್ರೋ ಬಳಸುವವರೇ ಬೇರೆ. ಫ್ಲೈ ಓವರ್ ಇರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕೇಂದ್ರದ ನಡೆಯಿಂದಾಗುವ ಪರಿಣಾಮಗಳು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಟಾಪಟಿಯಿಂದಾಗಿ ಬೆಂಗಳೂರಿನ ಸಾರಿಗೆ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಕೇಂದ್ರ ಸರ್ಕಾರ ಡಿಪಿಆರ್ ಅನ್ನು ವಾಪಸ್ ಕಳಿಸಿರುವುದರಿಂದ ಯೋಜನೆ ಜಾರಿಯಾಗುವುದು ವಿಳಂಬವಾಗಬಹುದು. ಇದು ಯೋಜನಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ. ಸರ್ಜಾಪುರ-ಹೆಬ್ಬಾಳ ಮಾರ್ಗವು ಬೆಂಗಳೂರಿನ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಭಾಗಗಳಲ್ಲಿ ಒಂದಾಗಿದೆ. ಈ ಯೋಜನೆಗೆ ತಡೆ ಬಿದ್ದಿರುವುದರಿಂದ ಆ ಭಾಗದ ನಾಗರಿಕರು ಇನ್ನಷ್ಟು ವರ್ಷ ಸಂಚಾರದಟ್ಟಣೆಯ ಬಿಸಿ ಅನುಭವಿಸಬೇಕಾಗುತ್ತದೆ. ಅಲ್ಲದೇ, ಮೆಟ್ರೋ ದರ ಏರಿಕೆ ವಿಚಾರದಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯದ ನಡುವೆ ಶೀತಲ ಸಮರ ನಡೆಯುತ್ತಿದೆ. ಈಗ ಕೆಂಪು ಮಾರ್ಗಕ್ಕೆ ತಡೆ ನೀಡಿರುವುದು ಈ ರಾಜಕೀಯ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಲಿದೆ.

