
ಸರ್ಜಾಪುರ ಟು ಹೆಬ್ಬಾಳ ಜಸ್ಟ್ 45 ನಿಮಿಷ! ನಮ್ಮ ಮೆಟ್ರೋ ರೆಡ್ ಲೈನ್‌ಗೆ ಗ್ರೀನ್ ಸಿಗ್ನಲ್
ಬೆಂಗಳೂರಿನ ಹೃದಯಭಾಗದಲ್ಲಿರುವ ಟೌನ್ ಹಾಲ್, ಶಾಂತಿನಗರದಂತಹ ಪ್ರದೇಶಗಳಲ್ಲಿ ಜಾಗದ ಅಭಾವವಿರುವುದರಿಂದ ಸುರಂಗ ಮಾರ್ಗ ಅನಿವಾರ್ಯ ಎಂಬುದನ್ನು ತಜ್ಞರ ಸಮಿತಿ ಒಪ್ಪಿಕೊಂಡಿದೆ.
ಬೆಂಗಳೂರಿಗರೇ ಸಜ್ಜಾಗಿ! ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಅಂತ್ಯ ಹಾಡಲು ಬರುತ್ತಿದೆ ನಮ್ಮ ಮೆಟ್ರೋದ ರೆಡ್ ಲೈನ್! ಸುಮಾರು 37 ಕಿಲೋಮೀಟರ್ ಉದ್ದದ, ಅತಿ ಸುದೀರ್ಘವಾದ 'ಸರ್ಜಾಪುರ-ಹೆಬ್ಬಾಳ ಕೆಂಪು ಮಾರ್ಗ'ಕ್ಕೆ ಈಗ ತಜ್ಞರ ಸಮಿತಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡರೆ ಇನ್ನು ಮುಂದೆ ಸರ್ಜಾಪುರದಿಂದ ಹೆಬ್ಬಾಳಕ್ಕೆ ಕೇವಲ 45 ನಿಮಿಷಗಳಲ್ಲಿ ತಲುಪಬಹುದು!
ನಮ್ಮ ಮೆಟ್ರೋ ಯೋಜನೆಯು ನಗರದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಸಿರು, ನೇರಳೆ ಮತ್ತು ಹಳದಿ ಮಾರ್ಗಗಳ ನಂತರ, ಗುಲಾಬಿ ಮಾರ್ಗ ಸಹ ಶೀಘ್ರದಲ್ಲೇ ಜನರ ಸೇವೆಗೆ ಸಿದ್ಧವಾಗುತ್ತಿದೆ. ಈ ನಡುವೆ ನೂತನ ಕೆಂಪು ರೈಲು ಮಾರ್ಗದ ಯೋಜನೆಯು ಸಹ ಸಿದ್ಧವಾಗುತ್ತಿದೆ. ಸರ್ಜಾಪುರದಿಂದ ಹೆಬ್ಬಾಳ ಸಂಪರ್ಕಿಸುವ ನಮ್ಮ ಮೆಟ್ರೋದ ಬಹುನಿರೀಕ್ಷಿತ ಕೆಂಪು ಮಾರ್ಗ ಯೋಜನೆಯ ಅಂದಾಜು ವೆಚ್ಚದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ಕೇಳಿದ್ದು, ತಜ್ಞರ ಸಮಿತಿಯು ಪರಿಶೀಲನಾ ವರದಿ ತಯಾರಿಸಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.
ಕೇಂದ್ರ ಸರ್ಕಾರವು ಈ ಹಿಂದೆ ಕೇಳಿದ್ದ "ವೆಚ್ಚ ಕಡಿತ ಸಾಧ್ಯವಿಲ್ಲವೇ?" ಎಂಬ ಪ್ರಶ್ನೆಗೆ ಉತ್ತರವಾಗಿ, ಫ್ರೆಂಚ್ ಮೂಲದ ಸಲಹಾ ಸಂಸ್ಥೆ SYSTRA ಮತ್ತು ಸ್ವತಂತ್ರ ತಜ್ಞರ ಸಮಿತಿಯು ನೀಡಿದ ವರದಿಯ ನಂತರ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಪ್ರಮುಖ ಬದಲಾವಣೆಗಳು ಇಲ್ಲಿವೆ
1. ವೆಚ್ಚದಲ್ಲಿ ಭಾರಿ ಇಳಿಕೆ: ಈ ಹಿಂದೆ ₹28,405 ಕೋಟಿ ಎಂದು ಅಂದಾಜಿಸಲಾಗಿದ್ದ ಯೋಜನಾ ವೆಚ್ಚವನ್ನು ಈಗ ₹25,485 ಕೋಟಿಗೆ ಇಳಿಸಲಾಗಿದೆ. ಅಂದರೆ ಸುಮಾರು ₹2,920 ಕೋಟಿ ಉಳಿತಾಯ ಮಾಡಲು ತಜ್ಞರು ದಾರಿ ತೋರಿಸಿದ್ದಾರೆ.
2. ಪ್ರತಿ ಕಿ.ಮೀ. ವೆಚ್ಚ ಕಡಿತ: ಪ್ರತಿ ಕಿಲೋಮೀಟರ್‌ಗೆ ತಗಲುವ ವೆಚ್ಚವನ್ನು ₹776 ಕೋಟಿಯಿಂದ ₹688 ಕೋಟಿಗೆ ತಗ್ಗಿಸಲಾಗಿದೆ. ಇದು ಕೇಂದ್ರ ಸರ್ಕಾರ ಕೇಳಿದ್ದ ಆರ್ಥಿಕ ಕಾರ್ಯಸಾಧ್ಯತೆಯ ಮಾನದಂಡಕ್ಕೆ ಹತ್ತಿರವಾಗಿದೆ.
3. ಸುರಂಗ ಮಾರ್ಗದ ವಿನ್ಯಾಸ ಬದಲಾವಣೆ: 14.45 ಕಿ.ಮೀ ಉದ್ದದ ಸುರಂಗ ಮಾರ್ಗದ ವೆಚ್ಚವನ್ನು ಕಡಿಮೆ ಮಾಡಲು, ಭೂಗತ ನಿಲ್ದಾಣಗಳ ಉದ್ದವನ್ನು 240 ಮೀಟರ್‌ನಿಂದ 170-180 ಮೀಟರ್‌ಗೆ ಕಡಿತಗೊಳಿಸಲು ಸಮಿತಿ ಶಿಫಾರಸು ಮಾಡಿದೆ. ಇದರಿಂದ ರೈಲು ಸಂಚಾರಕ್ಕೆ ತೊಂದರೆಯಾಗದಂತೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ.
ಎತ್ತರಿಸಿದ ಮಾರ್ಗ ಸಾಧ್ಯವೇ?
ಕೇಂದ್ರವು ಸುರಂಗದ ಬದಲು ಎತ್ತರಿಸಿದ ಮಾರ್ಗ (Elevated) ನಿರ್ಮಿಸಲು ಸಾಧ್ಯವಿಲ್ಲವೇ ಎಂದು ಕೇಳಿತ್ತು. ಆದರೆ ನಗರದ ಹೃದಯಭಾಗದಲ್ಲಿ (ಕೋರಮಂಗಲ ಮತ್ತು ಕೆ.ಆರ್. ಮಾರುಕಟ್ಟೆ) ಜಾಗದ ಕೊರತೆ ಇರುವುದರಿಂದ ಮತ್ತು ಹಳೆಯ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಸುರಂಗ ಮಾರ್ಗವೇ ಅನಿವಾರ್ಯ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಸುರಂಗ ಮಾರ್ಗ ಅನಿವಾರ್ಯ
ಕೇಂದ್ರದ ಸೂಚನೆಯ ಮೇರೆಗೆ, ಬಿಎಂಆರ್‌ಸಿಎಲ್ ಮತ್ತು ಕೇಂದ್ರ ಸರ್ಕಾರವು ತಜ್ಞರನ್ನು ಒಳಗೊಂಡ ಒಂದು ಸ್ವತಂತ್ರ ಪರಿಶೀಲನಾ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಟೌನ್ ಹಾಲ್, ಶಾಂತಿನಗರ ಮತ್ತು ಪ್ಯಾಲೇಸ್ ಗುಟ್ಟಹಳ್ಳಿಯಂತಹ ಪ್ರದೇಶಗಳಲ್ಲಿ ಜಾಗದ ಅಭಾವವಿರುವುದರಿಂದ ಸುರಂಗ ಮಾರ್ಗ ಅನಿವಾರ್ಯ ಎಂಬುದನ್ನು ಸಮಿತಿ ಒಪ್ಪಿಕೊಂಡಿದೆ. ಸರ್ಜಾಪುರ ಭಾಗದಲ್ಲಿ ಐಟಿ ಕಾರಿಡಾರ್ ವೇಗವಾಗಿ ಬೆಳೆಯುತ್ತಿರುವುದರಿಂದ, ಈ ಮಾರ್ಗವು ಭವಿಷ್ಯದಲ್ಲಿ ಉತ್ತಮ ಪ್ರಯಾಣಿಕರ ಸಂಖ್ಯೆಯನ್ನು ಹೊಂದಿರಲಿದೆ ಮತ್ತು ಹೂಡಿಕೆಗೆ ತಕ್ಕ ಪ್ರತಿಫಲ ನೀಡಲಿದೆ ಎಂದು ವರದಿ ಹೇಳಿದೆ. ಅಲ್ಲದೇ, ಸಾಧ್ಯವಿರುವ ಕಡೆಗಳಲ್ಲಿ ನಿಲ್ದಾಣಗಳ ವಿನ್ಯಾಸವನ್ನು ಸರಳಗೊಳಿಸುವ ಮೂಲಕ ಮತ್ತು ಆಧುನಿಕ ನಿರ್ಮಾಣ ತಂತ್ರಜ್ಞಾನ ಬಳಸಿ ವೆಚ್ಚವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು ಎಂದು ಸಮಿತಿ ಸೂಚಿಸಿದೆ ಎಂದು ಮೆಟ್ರೋ ಮೂಲಗಳು ಹೇಳಿವೆ.
ಸಮಿತಿಯ ವರದಿಯು ಕೇಂದ್ರ ಸಚಿವಾಲಯದ ಕೈಯಲ್ಲಿದ್ದು, ಸಚಿವಾಲಯವು ಇದನ್ನು ಪರಿಶೀಲಿಸಿದ ನಂತರ, ಅಂತಿಮ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸಿಕೊಡಲಿದೆ. ಅನುಮೋದನೆ ಸಿಕ್ಕ ನಂತರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಅಥವಾ ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಮೂಲಕ ನಿಧಿ ಸಂಗ್ರಹಣೆಯ ಅಧಿಕೃತ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರದಿಂದ ಹಸಿರು ನಿಶಾನೆ ಸಿಕ್ಕ ಕೂಡಲೇ ಬಿಎಂಆರ್‌ಸಿಎಲ್ ಭೂಸ್ವಾಧೀನ ಮತ್ತು ನಿರ್ಮಾಣ ಕಾಮಗಾರಿಯ ಟೆಂಡರ್ ಕರೆಯಲು ಸಜ್ಜಾಗಲಿದೆ. ಯಾವುದೇ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡುವ ಮೊದಲು ಇಂತಹ ಸ್ವತಂತ್ರ ಸಮಿತಿಯ ವರದಿಯನ್ನು ಪಡೆಯುವುದು ಒಂದು ಕಡ್ಡಾಯ ಪ್ರಕ್ರಿಯೆಯಾಗಿದೆ. ಸಮಿತಿಯು ವರದಿ ನೀಡಿರುವುದರಿಂದ, ಯೋಜನೆಗೆ ಕೇಂದ್ರದಿಂದ ಅನುಮೋದನೆ ಸಿಗುವ ಸಾಧ್ಯತೆಗಳು ಈಗ ಶೇ. 90ರಷ್ಟು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಹೃದಯ ಭಾಗ ಸಂಪರ್ಕಿಸುವ ಮಾರ್ಗ
ಸರ್ಜಾಪುರದಿಂದ ಹೆಬ್ಬಾಳವರೆಗಿನ 'ಕೆಂಪು ಮಾರ್ಗ' ಯೋಜನೆಯು ನಗರದ ಸಾರಿಗೆ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದೆ. ಸುಮಾರು 36.59 ಕಿ.ಮೀ ಉದ್ದದ ಈ ಬೃಹತ್ ಯೋಜನೆಯು ನಗರದ ದಕ್ಷಿಣ-ಪೂರ್ವ ತುದಿಯಿಂದ ಉತ್ತರದ ಹೆಬ್ಬಾಳಕ್ಕೆ ಜೋಡಿಸುವ ಮೂಲಕ ಬೆಂಗಳೂರಿನ ಹೃದಯಭಾಗವನ್ನು ಸಂಪರ್ಕಿಸಲಿದೆ. ಈ ಮಾರ್ಗದ ವಿನ್ಯಾಸವು ನಗರದ ಭೌಗೋಳಿಕ ಮತ್ತು ಜನದಟ್ಟಣೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಎತ್ತರಿಸಿದ ಮಾರ್ಗವು ಸುಮಾರು 22.14 ಕಿ.ಮೀ ಉದ್ದದ ಹಾದಿಯು ಭೂಮಿಯಿಂದ ಮೇಲೆ ಪಿಲ್ಲರ್‌ಗಳ ಮೇಲೆ ಸಾಗಲಿದೆ. ಈ ಭಾಗದಲ್ಲಿ 17 ನಿಲ್ದಾಣಗಳು ಬರಲಿವೆ. ವಿಶೇಷವಾಗಿ ಸರ್ಜಾಪುರದಿಂದ ಆಗರದವರೆಗಿನ ಪ್ರದೇಶಗಳಲ್ಲಿ ಜಾಗದ ಲಭ್ಯತೆ ಇರುವುದರಿಂದ ಈ ಮಾದರಿಯನ್ನು ಅನುಷ್ಠಾನಗೊಳಿಸಲು ನಮ್ಮ ಮೆಟ್ರೋ ತೀರ್ಮಾನಿಸಿದೆ.
ನಗರದ ಅತ್ಯಂತ ಜನನಿಬಿಡ ಮತ್ತು ಕಿರಿದಾದ ರಸ್ತೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ 14.45 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ 11 ಸುರಂಗ ನಿಲ್ದಾಣಗಳು ನಿರ್ಮಾಣವಾಗಲಿವೆ. ಕೋರಮಂಗಲ, ಡೈರಿ ಸರ್ಕಲ್, ಶಾಂತಿನಗರ ಮತ್ತು ಟೌನ್ ಹಾಲ್‌ನಂತಹ ಪ್ರದೇಶಗಳಲ್ಲಿ ಸುರಂಗ ಮಾರ್ಗವು ಅನಿವಾರ್ಯವಾಗಿದೆ. ಈ ಬೃಹತ್ ಯೋಜನೆಗೆ ಅಂದಾಜು 28,405 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸರಾಸರಿ ಒಂದು ಕಿಲೋಮೀಟರ್ ಮೆಟ್ರೋ ಮಾರ್ಗಕ್ಕೆ ಸುಮಾರು 776 ಕೋಟಿ ರೂ. ವೆಚ್ಚವಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಮತ್ತು ಸುರಂಗ ಮಾರ್ಗ ನಿರ್ಮಾಣದಲ್ಲಿ ಉಂಟಾಗಬಹುದಾದ ತಾಂತ್ರಿಕ ವಿಳಂಬಗಳು ಯೋಜನೆಯ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದರೂ, ದೀರ್ಘಕಾಲಿಕ ಆರ್ಥಿಕ ಲಾಭದ ದೃಷ್ಟಿಯಿಂದ ಈ ಹೂಡಿಕೆ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಲಾಗಿದೆ.
ಮಾರ್ಗದ ಪ್ರಮುಖ ನಿಲ್ದಾಣಗಳು
ಈ ಕೆಂಪು ಮಾರ್ಗವು ಬೆಂಗಳೂರಿನ ಮೂರು ಪ್ರಮುಖ ವಲಯಗಳನ್ನು ಜೋಡಿಸುತ್ತದೆ. ಸರ್ಜಾಪುರ, ಬೆಳ್ಳಂದೂರು ಮತ್ತು ಇಬ್ಲೂರು ಭಾಗದಲ್ಲಿರುವ ಐಟಿ ಕಂಪನಿಗಳು ಮತ್ತು ಲಕ್ಷಾಂತರ ಉದ್ಯೋಗಿಗಳಿಗೆ ಇದು ನೇರ ಸಂಪರ್ಕ ನೀಡಲಿದೆ. ನಿಮ್ಹಾನ್ಸ್, ಸೈಂಟ್ ಜಾನ್ಸ್ ಆಸ್ಪತ್ರೆ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳಿರುವ ಡೈರಿ ಸರ್ಕಲ್ ಭಾಗಕ್ಕೆ ಇದು ಸುಲಭ ಪ್ರವೇಶ ನೀಡಲಿದೆ. ಟೌನ್ ಹಾಲ್, ಕೆ.ಆರ್. ಸರ್ಕಲ್ ಮತ್ತು ಬಸವೇಶ್ವರ ಸರ್ಕಲ್‌ನಂತಹ ನಗರದ ಮಧ್ಯಭಾಗದ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ದೊಡ್ಡ ಸಾಧನೆಯಾಗಲಿದೆ. ಗಂಗಾನಗರ, ಪಶುವೈದ್ಯಕೀಯ ಕಾಲೇಜು, ಮೇಕ್ರಿ ಸರ್ಕಲ್, ಹೆಬ್ಬಾಳಕ್ಕೆ ಸಂಚರಿಸುವ ಮೂಲಕ ನಗರದ ಪ್ರಮುಖ ವಾಣಿಜ್ಯ ಮತ್ತು ಐಟಿ ವಲಯಗಳನ್ನು ಹಾದುಹೋಗುತ್ತದೆ.
ಕಾಲಮಿತಿ ವಿಸ್ತರಣೆ
ಮೆಟ್ರೋ ಸಂಸ್ಥೆಯ ಹೇಳಿಕೆಯ ಪ್ರಕಾರ ಈ ಯೋಜನೆಯು ಮೊದಲು 2030ಕ್ಕೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿತ್ತು. ಆದರೆ, ಪ್ರಕ್ರಿಯೆಗಳ ವಿಳಂಬ ಮತ್ತು ಅನುಮೋದನೆಯ ಹಂತಗಳನ್ನು ಗಮನಿಸಿದರೆ, ಇದು 2031ರ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ.
ಸರ್ಜಾಪುರದಿಂದ ಹೆಬ್ಬಾಳಕ್ಕೆ ರಸ್ತೆಯ ಮೂಲಕ ಪ್ರಯಾಣಿಸಲು ಪ್ರಸ್ತುತ ಕನಿಷ್ಠ 1.5 ರಿಂದ 2 ಗಂಟೆ ಬೇಕಾಗುತ್ತದೆ. ಮೆಟ್ರೋ ಮೂಲಕ ಇದನ್ನು 45-50 ನಿಮಿಷಕ್ಕೆ ಇಳಿಸಬಹುದು. ಲಕ್ಷಾಂತರ ಜನರು ಖಾಸಗಿ ವಾಹನ ಬಿಟ್ಟು ಮೆಟ್ರೋ ಬಳಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗುತ್ತದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಮತ್ತು ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತವೆ.
ನಗರದ ಮಧ್ಯಭಾಗದಲ್ಲಿ ಸುರಂಗ ಮಾರ್ಗ ಮತ್ತು ನಿಲ್ದಾಣಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಬಿಎಂಆರ್‌ಸಿಎಲ್‌ಗೆ ದೊಡ್ಡ ಸವಾಲು ಆಗಲಿದೆ. ನಗರದ ಗಟ್ಟಿ ಶಿಲೆ ಮತ್ತು ಮಣ್ಣಿನ ವಿನ್ಯಾಸವು ಸುರಂಗ ಕೊರೆಯುವ ಯಂತ್ರಗಳಿಗೆ ಸವಾಲಾಗಬಹುದು. ನಿರ್ಮಾಣ ಹಂತದಲ್ಲಿ ರಸ್ತೆ ಸಂಚಾರಕ್ಕೆ ಉಂಟಾಗುವ ಅಡಚಣೆಯನ್ನು ನಿರ್ವಹಿಸುವುದು ಬಿಎಂಆರ್‌ಸಿಎಲ್‌ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

