Body of Tamil Nadu youth killed in Canada returned to homeland: Funeral today
x

ಮೃತ ಚಂದನ್‌ ಕುಮಾರ್‌

ಕೆನಡಾದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಕನ್ನಡಿಗನ ಮೃತದೇಹ ತಾಯ್ನಾಡಿಗೆ: ಇಂದು ಅಂತ್ಯಕ್ರಿಯೆ

ಯುವಕ ಚಂದನ್ ಕುಮಾರ್‌ ಮಾಲ್ ಸಮೀಪ ಕಾರಿನಲ್ಲಿ ಸಾಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದರು.


Click the Play button to hear this message in audio format

ಕೆನಡಾದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದ ನೆಲಮಂಗಲದ ಯುವಕ ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ಕೊನೆಗೂ ತಾಯ್ನಾಡಿಗೆ ಮರಳಿದೆ. ಇಂದು (ಸೋಮವಾರ) ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೃತದೇಹವನ್ನು ಅಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ತ್ಯಾಮಗೊಂಡ್ಲು ಗ್ರಾಮದಲ್ಲಿ ಶೋಕಸಾಗರ ಮುಗಿಲು ಮುಟ್ಟಿದೆ. ಸೋಮವಾರ (ಫೆ.16) ಮುಂಜಾನೆ ಆಗಮಿಸಿದ ಮೃತ ದೇಹವನ್ನು ಮೃತರ ಸ್ವಗ್ರಾಮ ತ್ಯಾಮಗೊಂಡ್ಲುವಿಗೆ ಕೊಂಡೊಯ್ದಿದ್ದು, ಮಧ್ಯಾಹ್ನ 3ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ನಂತರ ಅವರ ಜಮೀನಿನಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ ?

ಕೆನಡಾದಲ್ಲಿ ವಾಸವಾಗಿದ್ದ ಚಂದನ್‌ ಕುಮಾರ್‌(37) ಅಪರಿಚಿತ ದುಷ್ಕರ್ಮಿಗಳು ಗುಂಡೇಟಿಗೆ (ಫೆ. 8) ರಂದು ಬಲಿಯಾಗಿದ್ದರು. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹತ್ತಿರದಿಂದ ಹಲವು ಬಾರಿ ಗುಂಡು ಹಾರಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿಯನ್ನು ಮೃತರ ತಂದೆ ಸ್ಪಷ್ಟಪಡಿಸಿದ್ದರು. ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದ ಅವರು, ಎಲ್ ಆ್ಯಂಡ್​ ಟಿ (L&T) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆನಡಾದ ವುಡ್‌ಬೈನ್ ಮಾಲ್ ಬಳಿ ಇದ್ದ ವೇಳೆ ಗುಂಡಿನ ದಾಳಿ ನಡೆದಿತ್ತು.

ವೈಯಕ್ತಿಕ ದ್ವೇಷವೋ, ದರೋಡೆ ಪ್ರಯತ್ನವೋ?

ಲಭ್ಯ ಮಾಹಿತಿಯ ಪ್ರಕಾರ, ಚಂದನ್ ಮಾಲ್ ಸಮೀಪ ಕಾರಿನಲ್ಲಿ ಸಾಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಗುಂಡಿನ ದಾಳಿಯ ತೀವ್ರತೆಯಿಂದ ಚಂದನ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ದಾಳಿಯ ಹಿಂದೆ ವೈಯಕ್ತಿಕ ದ್ವೇಷವೋ, ದರೋಡೆ ಪ್ರಯತ್ನವೋ ಅಥವಾ ಬೇರೆ ಕಾರಣವೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದೇನು?

ಶೂಟೌಟ್ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ಸ್ಥಳೀಯರು ಘಟನೆ ಕುರಿತು ಕೆನಡಾ ಮಾಧ್ಯಮಗಳಿಗೆ ಮಾತನಾಡಿದ್ದರು. ಮಾಲ್ ಹೊರಗೆ ಕಾರಿನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ 5ರಿಂದ 6 ಸುತ್ತು ಗುಂಡು ಹಾರಿಸಿದ ಶಬ್ದ ಕೇಳಿತ್ತೆಂದು ಹೇಳಿರುವ ವಿವರಗಳು ಪ್ರಕಟವಾಗಿದ್ದವು. ಕಾರಿನ ಮಿರರ್​ ಮೂಲಕ ಮೂಲಕ ನೋಡಿದಾಗ ಗನ್ ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬರು ಕಾಣಿಸಿಕೊಂಡರು ಎಂದು ಇನ್ನೊಬ್ಬರು ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ದಾಖಲಾಗಿದೆ. ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಗಳು, ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ಕುಟುಂಬಕ್ಕೆ ಮಾಹಿತಿ

ಚಂದನ್ ಅವರ ತಂದೆ ನಂದಕುಮಾರ್ ಅವರು ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಹಾಗೂ ಕುಟುಂಬದವರು ನೆಲಮಂಗಲದ ತ್ಯಾಮಗೊಂಡ್ಲು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಘಟನೆ ನಡೆದ ತಕ್ಷಣ ಕೆನಡಾದ ಪೊಲೀಸರು ಚಂದನ್ ಅವರ ಬಳಿ ದೊರಕಿದ ಫೋನ್ ಸಂಖ್ಯೆಯ ಮೂಲಕ ಕುಟುಂಬವನ್ನು ಸಂಪರ್ಕಿಸಿದ್ದರು. ಭಾಷಾ ಅಡೆತಡೆ ಉಂಟಾದ ಕಾರಣ ಅಲ್ಲಿದ್ದ ಭಾರತೀಯರೊಬ್ಬರ ನೆರವಿನಿಂದ ತಂದೆ-ತಾಯಿಗೆ ವಿಷಯ ತಿಳಿಸಲಾಗಿದೆ ಎಂದು ಮೃತರ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಕನ್ನಡ ಭಾಷೆ-ಸಂಸ್ಕೃತಿಗೆ ಕೈಜೋಡಿಸಿದ್ದ ವ್ಯಕ್ತಿ

ಚಂದನ್ ಅವರು ಉದ್ಯೋಗದ ಜೊತೆಗೆ ಕೆನಡಾಕ್ಕೆ ಹೋಗುವ ಕನ್ನಡಿಗರು ಹಾಗೂ ಕೆಲಸಕ್ಕಾಗಿ ಕೆನಡಾಗೆ ಸೇರುವ ಭಾರತೀಯರಿಗೆ ನೆರವಾಗುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದರು. ಅಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಚಾರದ ಕೆಲಸವನ್ನೂ ಮಾಡುತ್ತಿದ್ದರು. ಕನ್ನಡಿಗರ ಸಂಘಟನೆಗಳ ಮೂಲಕ ಕೆಲವು ಸೇವಾ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದರು ಎಂದು ತಿಳಿಸಿದ್ದರು.

Read More
Next Story