
ಕೆನಡಾದಲ್ಲಿ ನೆಲಮಂಗಲ ಮೂಲದ ಕನ್ನಡಿಗನ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಲಭ್ಯ ಮಾಹಿತಿಯ ಪ್ರಕಾರ, ಚಂದನ್ ಮಾಲ್ ಸಮೀಪ ಕಾರಿನಲ್ಲಿ ಸಾಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ.
ಕೆನಡಾದಲ್ಲಿ ಉದ್ಯೋಗದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಗ್ರಾಮದ ಮೂಲದ ಯುವಕನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಭಾನುವಾರ (ಫೆ. 8) ನಡೆದಿದೆ. ಚಂದನ್ ಕುಮಾರ್ (37) ಆಗಂತುಕರ ದಾಳಿಗೆ ಮೃತಪಟ್ಟವರು. ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹತ್ತಿರದಿಂದ ಹಲವು ಬಾರಿ ಗುಂಡು ಹಾರಿಸಲಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಘಟನೆಯನ್ನು ಮೃತರ ತಂದೆ ಸ್ಪಷ್ಟಪಡಿಸಿದ್ದಾರೆ.
ಚಂದನ್ ಕುಮಾರ್ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿದೆ. ಅಲ್ಲಿ ಅವರು ಎಲ್ ಆ್ಯಂಡ್ ಟಿ (L&T) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆನಡಾದ ವುಡ್‌ಬೈನ್ ಮಾಲ್ (Woodbine Mall) ಬಳಿ ಇದ್ದ ವೇಳೆ ಗುಂಡಿನ ದಾಳಿ ನಡೆದಿದೆ.
ಏನಿದು ಘಟನೆ?
ಲಭ್ಯ ಮಾಹಿತಿಯ ಪ್ರಕಾರ, ಚಂದನ್ ಮಾಲ್ ಸಮೀಪ ಕಾರಿನಲ್ಲಿ ಸಾಗುತ್ತಿದ್ದಾಗ ಏಕಾಏಕಿ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಗುಂಡಿನ ದಾಳಿಯ ತೀವ್ರತೆಯಿಂದ ಚಂದನ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ದಾಳಿಯ ಹಿಂದೆ ವೈಯಕ್ತಿಕ ದ್ವೇಷವೋ, ದರೋಡೆ ಪ್ರಯತ್ನವೋ ಅಥವಾ ಬೇರೆ ಕಾರಣವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳುವುದೇನು?
ಶೂಟೌಟ್ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ಸ್ಥಳೀಯರು ಘಟನೆ ಕುರಿತು ಕೆನಡಾ ಮಾಧ್ಯಮಗಳಿಗೆ ಮಾತನಾಡಿದ್ದಾರೆ. ಮಾಲ್ ಹೊರಗೆ ಕಾರಿನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ 5ರಿಂದ 6 ಸುತ್ತು ಗುಂಡು ಹಾರಿಸಿದ ಶಬ್ದ ಕೇಳಿತ್ತೆಂದು ಹೇಳಿರುವ ವಿವರಗಳು ಪ್ರಕಟವಾಗಿವೆ. ಕಾರಿನ ಮಿರರ್ ಮೂಲಕ ಮೂಲಕ ನೋಡಿದಾಗ ಗನ್ ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬರು ಕಾಣಿಸಿಕೊಂಡರು ಎಂದು ಇನ್ನೊಬ್ಬರು ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ದಾಖಲಾಗಿದೆ. ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಗಳು, ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕುಟುಂಬಕ್ಕೆ ಮಾಹಿತಿ
ಚಂದನ್ ಅವರ ತಂದೆ ನಂದಕುಮಾರ್ ಅವರು ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಹಾಗೂ ಕುಟುಂಬದವರು ನೆಲಮಂಗಳಲದ ತ್ಯಾಮಗೊಂಡ್ಲು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಘಟನೆ ನಡೆದ ತಕ್ಷಣ ಕೆನಡಾದ ಪೊಲೀಸರು ಕುಟುಂಬವನ್ನು ಚಂದನ್ ಅವರ ಬಳಿ ದೊರಕಿದ ಫೋನ್ ಸಂಖ್ಯೆಯ ಮೂಲಕ ಸಂಪರ್ಕಿಸಿದ್ದಾರೆ. ಭಾಷಾ ಅಡೆತಡೆ ಉಂಟಾದ ಕಾರಣ ಅಲ್ಲಿದ್ದ ಭಾರತೀಯರೊಬ್ಬರ ನೆರವಿನಿಂದ ತಂದೆ-ತಾಯಿಗೆ ವಿಷಯ ತಿಳಿಸಲಾಗಿದೆ ಎಂದು ಮೃತರ ಸಂಬಂಧಿಯೊಬ್ಬರು ಕರ್ನಾಟಕದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆ-ಸಂಸ್ಕೃತಿಗೆ ಕೈಜೋಡಿಸಿದ್ದ ವ್ಯಕ್ತಿ
ಚಂದನ್ ಅವರು ಉದ್ಯೋಗದ ಜೊತೆಗೆ ಕೆನಡಾಕ್ಕೆ ಹೋಗುವ ಕನ್ನಡಿಗರು ಹಾಗೂ ಕೆಲಸಕ್ಕಾಗಿ ಕೆನಡಾಗೆ ಸೇರುವ ಭಾರತೀಯರಿಗೆ ನೆರವಾಗುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಪ್ರಚಾರದ ಕೆಲಸವನ್ನೂ ಮಾಡುತ್ತಿದ್ದರು, ಕನ್ನಡಿಗರ ಸಂಘಟನೆಗಳ ಮೂಲಕ ಕೆಲವು ಸೇವಾ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದರೆಂದು ಹೇಳಿದ್ದಾರೆ.

