Trade unions call for Bharat Bandh today, demand fulfillment of key demands
x

ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದು. (ಸಾಂದರ್ಭಿಕ ಚಿತ್ರ)

ಕಾರ್ಮಿಕ ಸಂಘಟನೆಗಳಿಂದ ಇಂದು ‘ಭಾರತ್ ಬಂದ್’ ಕರೆ- ರಾಜ್ಯದಲ್ಲಿ ಹೇಗಿದೆ ಎಫೆಕ್ಟ್‌?

ಶಾಲಾ ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಅಂಗಡಿ ಮುಂಗಟ್ಟುಗಳು, ಹೋಟೆಲ್, ಮಾರುಕಟ್ಟೆಗಳು ತೆರೆದಿವೆ. ಸರ್ಕಾರದ ಬೆಂಬಲ ನೀಡದಿರುವುದರಿಂದ ಸಾರ್ವಜನಿಕ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.


Click the Play button to hear this message in audio format

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಇಂದು ‘ಭಾರತ್ ಬಂದ್’ಗೆ ಕರೆ ನೀಡಿವೆ. ಸಿಐಟಿಯು ಮತ್ತು ಎಐಟಿಯುಸಿ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಮುಖ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಆದರೆ, ರಾಜ್ಯದಲ್ಲಿ ಬಂದ್‌ಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗದೆ ಜನಜೀವನ ಸಹಜ ಸ್ಥಿತಿಯಲ್ಲಿದೆ.

ಕಾರ್ಮಿಕ ಸಂಘಟನೆಗಳು ಗುರುವಾರ(ಫೆ.12) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ (ಪುರಭವನ) ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ. ಬಂದ್ ಕರೆ ಇದ್ದರೂ ರಾಜ್ಯಾದ್ಯಂತ ಜನಜೀವನ ಸಹಜವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ, ಆಟೋ, ಕ್ಯಾಬ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಶಾಲಾ ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಅಂಗಡಿ ಮುಂಗಟ್ಟುಗಳು, ಹೋಟೆಲ್, ಮಾರುಕಟ್ಟೆಗಳು ತೆರೆದಿವೆ. ಕಾರ್ಮಿಕ ಸಂಘಟನೆಗಳ ಈ ಮುಷ್ಕರಕ್ಕೆ ರಾಜ್ಯ ಸರ್ಕಾರ ಯಾವುದೇ ಬೆಂಬಲ ನೀಡಿಲ್ಲವಾದ್ದರಿಂದ ಸಾರ್ವಜನಿಕ ಸೇವೆಗಳಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.

ಪ್ರಮುಖ ಬೇಡಿಕೆಗಳೇನು?

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಒಕ್ಕೂಟಗಳು ದೇಶಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿವೆ.

  • ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಲೇಬರ್‌ ಕೋಡ್​ಗಳನ್ನು (ಕಾರ್ಮಿಕ ಸಂಹಿತೆ) ತಕ್ಷಣವೇ ರದ್ದುಗೊಳಿಸಬೇಕು.
  • ನರೇಗಾ ಯೋಜನೆಯನ್ನು ಸಮರ್ಪಕವಾಗಿ ಮರುಸ್ಥಾಪಿಸಬೇಕು ಮತ್ತು ಮನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ನೂತನವಾಗಿ ಜಾರಿಗೆ ತಂದಿರುವ ವಿಜಿ ಜಿ ರಾಮ್‌ ಜಿ ಕಾಯ್ದೆಯನ್ನು ರದ್ದುಪಡಿಸಬೇಕು.
  • ರೈತ ವಿರೋಧಿ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು.
  • ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಹಾಗೂ ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು.
  • ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕು.
  • ರೈತರಿಗೆ ಮಾರಕವಾಗುವ ಬೀಜ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು.
  • ವಿಮಾ ತಿದ್ದುಪಡಿ ಕಾಯ್ದೆ ಹಾಗೂ ಶಾಂತಿ ಕಾಯ್ದೆಯನ್ನು ರದ್ದುಗೊಳಿಸಬೇಕು.
  • ರಾಜ್ಯ ಸರ್ಕಾರ ಹೊರಡಿಸಿರುವ ವಿವಾದಾತ್ಮಕ ಗೆಜೆಟ್ ನೋಟಿಫಿಕೇಷನ್‌ ಅನ್ನು ವಾಪಸ್ ಪಡೆಯಬೇಕು.
  • ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಮಸೂದೆಗಳನ್ನು ತೀವ್ರವಾಗಿ ವಿರೋಧಿಸಬೇಕು.
  • ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸ್ಸನ್ನು ಅಧಿಕೃತ ಅಧಿಸೂಚನೆಯಾಗಿ ಹೊರಡಿಸಬೇಕು.
  • ದುಡಿಯುವ ಜನರ ವಿರೋಧಿ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು.

ಒಟ್ಟಾರೆಯಾಗಿ ಕಾರ್ಮಿಕ ಸಂಘಟನೆಗಳು ತಮ್ಮ ಹಕ್ಕುಗಳಿಗಾಗಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಕರ್ನಾಟಕದಲ್ಲಿ ಇದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಖಾನೆಗಳು ಮತ್ತು ಕೆಲವು ನಿರ್ದಿಷ್ಟ ವಲಯಗಳಲ್ಲಿ ಮಾತ್ರ ಮುಷ್ಕರದ ಬಿಸಿ ತಟ್ಟಿದ್ದು, ಸಾರ್ವಜನಿಕರ ದೈನಂದಿನ ಬದುಕಿಗೆ ಯಾವುದೇ ಅಡಚಣೆಯಾಗಿಲ್ಲ.

Read More
Next Story