ಭಾರತ್ ಬಂದ್ ಇಂದು: ಯಾರು, ಏಕೆ ಕರೆ ನೀಡಿದರು?
x
ಭಾರತ್ ಬಂದ್‌ ಬೆಂಬಲಿಸಿ ಭೀಮ್ ಆರ್ಮಿ ಬೆಂಬಲಿಗರು ಬುಧವಾರ (ಆಗಸ್ಟ್ 21) ಅರಾಹ್‌ನಲ್ಲಿ ರೈಲು ತಡೆ ನಡೆಸಿದರು.

ಭಾರತ್ ಬಂದ್ ಇಂದು: ಯಾರು, ಏಕೆ ಕರೆ ನೀಡಿದರು?

ಎಸ್‌ಸಿ/ಎಸ್‌ಟಿ ಮೀಸಲು ಕುರಿತ ಸುಪ್ರೀಂ ಕೋರ್ಟ್‌ನ ಆಗಸ್ಟ್ 1 ರ ತೀರ್ಪಿನ ವಿರುದ್ಧ ದೇಶಾದ್ಯಂತ 21 ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ.


ಎಸ್‌ಸಿ/ಎಸ್‌ಟಿ ಮೀಸಲು ಕುರಿತು ಸುಪ್ರೀಂ ಕೋರ್ಟ್‌ ಆಗಸ್ಟ್‌ 1ರಂದು ನೀಡಿರುವ ತೀರ್ಪಿನ ವಿರುದ್ಧ ದೇಶದಾದ್ಯಂತ 21 ಸಂಘಟನೆಗಳು ಬುಧವಾರ (ಆಗಸ್ಟ್‌ 21) ಭಾರತ್‌ ಬಂದ್‌ಗೆ ಕರೆ ನೀಡಿವೆ. ತೀರ್ಪು ಮೀಸಲಿನ ಮೂಲ ತತ್ವಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿವೆ.

ಸುಪ್ರೀಂ ಕೋರ್ಟ್ ತೀರ್ಪು ಏನು?: ಸುಪ್ರೀಂ ಕೋರ್ಟ್ ಆಗಸ್ಟ್ 1 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಮೀಸಲು ನೀಡಲು, ಎಸ್‌ಸಿಗಳೊಳಗೆ ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಸಂವಿಧಾನಾತ್ಮಕವಾಗಿ ಅಧಿಕಾರವಿದೆ ಎಂದು ಹೇಳಿದೆ.

ಆದರೆ, ರಾಜ್ಯಗಳು ಹಿಂದುಳಿದಿರುವಿಕೆ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯದ ʻಪ್ರಮಾಣೀಕರಿಸಬಹುದಾದ ಮತ್ತು ಪ್ರದರ್ಶಿಸಬಹುದಾದ ದತ್ತಾಂಶʼಗಳ ಆಧಾರದಲ್ಲಿ ಉಪ ವರ್ಗೀಕರಣವನ್ನು ಮಾಡಬೇಕೇ ಹೊರತು, ಇಷ್ಟ ಮತ್ತು ರಾಜಕೀಯ ಲಾಭಕ್ಕೆ ಅಲ್ಲ ಎಂದು ಕೋರ್ಟ್ ಹೇಳಿತ್ತು.

ಬೇಡಿಕೆಗಳೇನು?: ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳು ಬುಧವಾರ ನಡೆಯಲಿರುವ ಶಾಂತಿಯುತ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ದಲಿತ ಮತ್ತು ಆದಿವಾಸಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಸಿಡಿಎಒಆರ್‌) ಮನವಿ ಮಾಡಿದೆ. ಸಾಮೂಹಿಕ ಕ್ರಿಯೆ ಮೂಲಕ ಪರಿಶಿಷ್ಟ ಜಾತಿ- ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ನ್ಯಾಯ ಮತ್ತು ಸಮಾನತೆಗೆ ಒತ್ತಾಯಿಸುವುದು ಭಾರತ್ ಬಂದ್‌ನ ಉದ್ದೇಶವಾಗಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ಆಗಸ್ಟ್ 1 ರ ತೀರ್ಪು ಇಂದಿರಾ ಸಾಹ್ನಿ ಪ್ರಕರಣದಲ್ಲಿ 9 ನ್ಯಾಯಾಧೀಶರ ಪೀಠದ ಹಿಂದಿನ ತೀರ್ಪನ್ನು ದುರ್ಬಲಗೊಳಿಸುತ್ತದೆ ಎಂದು ಸಂಘಟನೆ ಹೇಳಿದೆ. ಈ ತೀರ್ಪು ದೇಶದ ಮೀಸಲು ಇತಿಹಾಸದಲ್ಲಿ ಹೆಗ್ಗುರುತಾಗಿದೆ.

ಎಸ್‌ಸಿ ಮತ್ತು ಎಸ್‌ಟಿಗಳ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರುವ ಎಸ್‌ಸಿ ತೀರ್ಪನ್ನು ಸರ್ಕಾರ ತಿರಸ್ಕರಿಸಬೇಕು. ಸಂವಿಧಾನದ ಒಂಬತ್ತನೇ ಪರಿಶಿಷ್ಟಕ್ಕೆ ಸೇರಿಸಲು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲು ಕುರಿತು ಹೊಸ ಕಾಯ್ದೆ ಜಾರಿಗೊಳಿಸಬೇಕು. ಇದರಿಂದ ನ್ಯಾಯಾಂಗ ಹಸ್ತಕ್ಷೇಪ ತಪ್ಪುತ್ತದೆ ಮತ್ತು ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ. ಸರ್ಕಾರಿ ಸೇವೆಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ಪ್ರಾತಿನಿಧ್ಯದ ಜಾತಿ ಆಧಾರಿತ ದತ್ತಾಂಶವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಂಘಟನೆ ಹೇಳಿದೆ.

ಬಂದ್‌ನಿಂದ ಏನು ಪರಿಣಾಮ?: ಸಂಘಟಕರು ಬುಧವಾರ ವ್ಯಾಪಾರ ಸಂಸ್ಥೆಗಳನ್ನು ಮುಚ್ಚುವಂತೆ ಕರೆ ನೀಡಿದ್ದಾರೆ. ಶಾಲೆಗಳು ಮತ್ತು ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. ನೀರು ಸರಬರಾಜು, ವಿದ್ಯುತ್ ಸೇವೆ, ಆಸ್ಪತ್ರೆ, ಆಂಬ್ಯು ಲೆನ್ಸ್‌ ಮತ್ತು ಔಷಧಾಲಯಗಳಂತಹ ಸಾರ್ವಜನಿಕ ಸೇವೆಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕ ಸಾರಿಗೆ ಸೇವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Read More
Next Story