ಬೆಂಗಳೂರಿನಲ್ಲಿ ಬಾಂಗ್ಲಾ ಹಾವಳಿ: ಒಂದೇ ತಿಂಗಳಲ್ಲಿ 35ಕ್ಕೂ ಹೆಚ್ಚು ಅಕ್ರಮ ವಲಸಿಗರ ಬಂಧನ..!
x

ಎಐ ಆಧಾರಿತ ಚಿತ್ರ

ಬೆಂಗಳೂರಿನಲ್ಲಿ ಬಾಂಗ್ಲಾ ಹಾವಳಿ: ಒಂದೇ ತಿಂಗಳಲ್ಲಿ 35ಕ್ಕೂ ಹೆಚ್ಚು ಅಕ್ರಮ ವಲಸಿಗರ ಬಂಧನ..!

ಅಕ್ರಮ ವಲಸಿಗರಲ್ಲಿ ಕೆಲವರು ನಗರದ ಡ್ರಗ್ಸ್ ಮಾಫಿಯಾದಂತಹ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವುದು ಕಂಡುಬಂದಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.


ಇತ್ತೀಚೆಗಿನ ವರ್ಷದಲ್ಲಿ ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳ ಪತ್ತೆ ಮತ್ತು ಬಂಧನ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದ ಭದ್ರತಾ ವ್ಯವಸ್ಥೆಯ ಕುರಿತು ಆತಂಕಕ್ಕೆ ಕಾರಣವಾಗಿದೆ. ವರ್ಷದ ಮೊದಲ ತಿಂಗಳಲ್ಲಿ ಪೊಲೀಸರು 35 ಕ್ಕೂ ಹೆಚ್ಚು ಮಂದಿ ಬಾಂಗ್ಲಾದೇಶಿಗರನ್ನು ಬಂಧಿಸಿರುವುದು ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಇವರು ಕೇವಲ ಗಡಿ ದಾಟಿ ಬಂದಿಲ್ಲ, ಬದಲಿಗೆ ಭಾರತೀಯ ನಾಗರಿಕರಿಗೆ ಮಾತ್ರ ದೊರೆಯುವ 'ಆಧಾರ್ ಕಾರ್ಡ್' ಮತ್ತು ಇತರ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅರ್ಥೈಸಲಾಗಿದೆ.

ಬಂಧಿತ ಬಾಂಗ್ಲಾದೇಶಿಯರ ಪೈಕಿ ಹೆಚ್ಚಿನವರು ಜೀವನೋಪಾಯಕ್ಕಾಗಿ ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದವರಾಗಿದ್ದಾರೆ. ಇವರು ನಗರದ ವಿವಿಧೆಡೆ ಕೂಲಿ ಕಾರ್ಮಿಕರಾಗಿ, ಕಸ ವಿಲೇವಾರಿ ಮಾಡುವವರಾಗಿ ಅಥವಾ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ಗುಪ್ತವಾಗಿ ವಾಸಿಸುತ್ತಿದ್ದರು. ಆದರೆ, ಅತ್ಯಂತ ಆತಂಕಕಾರಿ ವಿಷಯವೆಂದರೆ, ಈ ಅಕ್ರಮ ವಲಸಿಗರಲ್ಲಿ ಕೆಲವರು ನಗರದ ಡ್ರಗ್ಸ್ ಮಾಫಿಯಾದಂತಹ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವುದು ಕಂಡುಬಂದಿದೆ. ಇವರನ್ನು ಹೆಚ್ಚಿನ ತನಿಖೆಗಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಾಜರುಪಡಿಸಲಾಗಿದ್ದು, ಇವರ ಬಳಿ ಇದ್ದ ನಕಲಿ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಹೆಬ್ಬಗೋಡಿ ಪೊಲೀಸರು 17 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದರು. ಬಂಧಿತರಾದ ಜಹಿದುಲ್ ಇಸ್ಲಾಂ ಮತ್ತು ಫೈರೋಜ್ ಎಂಬುವವರು ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂಬುದು ಆತಂಕಕಾರಿ ಸಂಗತಿಯಾಗಿದೆ. ಬಳಿಕ ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ಬಾಂಗ್ಲಾದೇಶಿಗರನ್ನು ಬಂಧಿಸಲಾಯಿತು. ನಗರದ ಹಲವೆಡೆ ಐಟಿ ಮತ್ತು ಕೈಗಾರಿಕಾ ಹಬ್‌ಗಳಿವೆ. ಇಲ್ಲಿ ನೂರಾರು ಸಂಖ್ಯೆಯಲ್ಲಿ ನಿರ್ಮಾಣ ಹಂತದ ಕಟ್ಟಡಗಳು ಮತ್ತು ಕಾರ್ಖಾನೆಗಳಿರುವುದರಿಂದ, ಕಡಿಮೆ ಕೂಲಿಗೆ ಸಿಗುವ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದೆ. ಈ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡ ಅಕ್ರಮ ವಲಸಿಗರು, ಈ ಪ್ರದೇಶಗಳ ಸಮೀಪವಿರುವ ಶೆಡ್‌ಗಳಲ್ಲಿ ಗುಟ್ಟಾಗಿ ವಾಸಿಸುತ್ತಿದ್ದರು. ಯಾವುದೇ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆ ಇಷ್ಟು ವರ್ಷಗಳ ಕಾಲ ಇವರು ಪೊಲೀಸರ ಕಣ್ಣಿಗೆ ಬೀಳದೆ ನೆಲೆಸಿದ್ದು ಹೇಗೆ ಎಂಬುದು ತನಿಖೆಯ ಪ್ರಮುಖ ವಿಷಯವಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಹೇಳಿವೆ.

ಅಕ್ರಮ ನುಸುಳುವಿಕೆಯ ಜಾಲ

ಪೊಲೀಸರು ತನಿಖೆಯ ವೇಳೆ ಬಾಂಗ್ಲಾದೇಶದಿಂದ ಭಾರತಕ್ಕೆ ಒಳನುಸುಳುವ ಪ್ರಕ್ರಿಯೆಯ ಹಿಂದೆ ದೊಡ್ಡ ಜಾಲವೇ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಪಶ್ಚಿಮ ಬಂಗಾಳದ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವ ಬಾಂಗ್ಲಾದವರು ವಿವಿಧ ಏಜೆಂಟ್‌ಗಳ ಮೂಲಕ ದಕ್ಷಿಣ ಭಾರತದ ನಗರಗಳಿಗೆ, ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ವಲಸೆ ಬರುತ್ತಾರೆ. ಪಶ್ಚಿಮ ಬಂಗಾಳ ಅಥವಾ ಅಸ್ಸಾಂನಿಂದ ಬಂದ ಕಾರ್ಮಿಕರು ಎಂದು ಹೇಳಿಕೊಳ್ಳುವುದು ಇವರಿಗೆ ಸುಲಭವಾಗುತ್ತದೆ. ಏಕೆಂದರೆ ಅವರ ಭಾಷೆ ಮತ್ತು ರೂಪದಲ್ಲಿ ಹೆಚ್ಚಿನ ಸಾಮ್ಯತೆಯಿದೆ. ಇವರಲ್ಲಿ ಅನೇಕರು ನಕಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾನದ ಗುರುತಿನ ಚೀಟಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದು ದೇಶದ ಡಿಜಿಟಲ್ ಗುರುತಿನ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಅಪರಾಧ ಜಾಲದ ನಂಟು

ಕೇವಲ ಅಕ್ರಮ ವಾಸ್ತವ್ಯವಷ್ಟೇ ಸಮಸ್ಯೆಯಲ್ಲ. ಅಕ್ರಮವಾಗಿ ನೆಲೆಸಿರುವವರ ಹಿನ್ನೆಲೆ ಯಾರಿಗೂ ಮಾಹಿತಿ ಇರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದ ಡ್ರಗ್ಸ್ ಮಾಫಿಯಾ, ಮಾನವ ಕಳ್ಳಸಾಗಣೆ ಮತ್ತು ಕಳ್ಳತನದಂತಹ ಪ್ರಕರಣಗಳಲ್ಲಿ ಬಾಂಗ್ಲಾದೇಶಿ ಪ್ರಜೆಗಳ ಕೈವಾಡವಿರುವುದು ಸಾಬೀತಾಗಿದೆ. ಪಾಸ್‌ಪೋರ್ಟ್ ಇಲ್ಲದ ಪ್ರಜೆಗಳು ಅಪರಾಧ ಎಸಗಿ ತಲೆಮರೆಸಿಕೊಂಡರೆ ಅವರನ್ನು ಪತ್ತೆಹಚ್ಚುವುದು ಕಷ್ಟಕರ. ಇನ್ನು ಕೆಲವರು ಭಯೋತ್ಪಾದನಾ ಸಂಘಟನೆಗಳ ಸ್ಲೀಪರ್ ಸೆಲ್‌ಗಳಾಗಿ ಕೆಲಸ ಮಾಡುವ ಸಾಧ್ಯತೆಯೂ ಇರುವುದರಿಂದ ಇದು ರಾಷ್ಟ್ರೀಯ ಭದ್ರತೆಗೆ ನೇರ ಸವಾಲಾಗಿದೆ ಎಂದು ಹೇಳಲಾಗಿದೆ.

ಅಕ್ರಮ ವಲಸಿಗರು ಅತ್ಯಂತ ಕಡಿಮೆ ಕೂಲಿಗೆ ಕೆಲಸ ಮಾಡಲು ಸಿದ್ಧರಿರುತ್ತಾರೆ. ಇದರಿಂದಾಗಿ ಸ್ಥಳೀಯ ಕರ್ನಾಟಕ ಅಥವಾ ಇತರ ರಾಜ್ಯಗಳ ಅಧಿಕೃತ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ. ನಗರದ ಕೊಳಚೆ ಪ್ರದೇಶಗಳಲ್ಲಿ ಮತ್ತು ಶಿಬಿರಗಳಲ್ಲಿ ಅಕ್ರಮವಾಗಿ ನೆಲೆಸುವ ಇವರು, ನಗರದ ಸೀಮಿತ ಸಂಪನ್ಮೂಲಗಳಾದ ನೀರು, ವಿದ್ಯುತ್ ಮತ್ತು ನೈರ್ಮಲ್ಯ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕುತ್ತಾರೆ.

ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿದ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು, ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ 35 ಮಂದಿ ಬಾಂಗ್ಲಾದೇಶಿಗರ ಬಂಧನವು ಒಂದು ದೊಡ್ಡ ಅಪಾಯದ ಮುನ್ಸೂಚನೆಯಾಗಿದೆ. ಆರ್ಥಿಕ ಪ್ರಗತಿಗೆ ಕಾರ್ಮಿಕರ ಅಗತ್ಯವಿದೆ ಎಂಬುದು ನಿಜ. ಆದರೆ ಆ ಕಾರ್ಮಿಕರು ಕಾನೂನುಬದ್ಧವಾಗಿರಬೇಕು. ಗಡಿ ಕಾಯುವ ಕೇಂದ್ರ ಸರ್ಕಾರ ಮತ್ತು ನಗರದ ಸುರಕ್ಷತೆಯನ್ನು ನೋಡಿಕೊಳ್ಳುವ ರಾಜ್ಯ ಸರ್ಕಾರ ಎರಡೂ ಪರಸ್ಪರ ಆರೋಪಗಳನ್ನು ಬಿಟ್ಟು ಸಮನ್ವಯದಿಂದ ಕೆಲಸ ಮಾಡಬೇಕಿದೆ. ನಗರದ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದು ಭವಿಷ್ಯದಲ್ಲಿ ದೊಡ್ಡ ಬೆಲೆ ತೆರಬೇಕಾಗಬಹುದು. ಅಕ್ರಮ ವಲಸಿಗರ ವಿರುದ್ಧದ ಈ ಕಾರ್ಯಾಚರಣೆಯು ಕೇವಲ ಒಂದು ವಾರಕ್ಕೆ ಸೀಮಿತವಾಗದೆ, ನಿರಂತರ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ಬೆಂಗಳೂರು ತನ್ನ ಸುಭದ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ರಾಜಕೀಯ ಕೆಸೆರೆರಾಚಾಟ

ಅಕ್ರಮ ವಲಸಿಗರನ್ನು ಪತ್ತೆಹಚ್ಚುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ವಲಸಿಗರನ್ನು ರಕ್ಷಿಸುತ್ತಿದೆ ಎಂದು ಬಿಜೆಪಿ ಟೀಕಿಸುತ್ತಿದೆ. ಗೃಹ ಸಚಿವರ ಅಸಮರ್ಥತೆಯೇ ಇದಕ್ಕೆ ಕಾರಣ ಎಂಬುದು ಬಿಜೆಪಿಯ ಆರೋಪವಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಅಂತಾರಾಷ್ಟ್ರೀಯ ಗಡಿಯನ್ನು ಕಾಯುವುದು ಕೇಂದ್ರ ಸರ್ಕಾರದ ಮತ್ತು ಬಿಎಸ್ಎಫ್‌ನ ಜವಾಬ್ದಾರಿಯಾಗಿರುತ್ತದೆ. ಕೇಂದ್ರ ಸರ್ಕಾರವು ಗಡಿಯಲ್ಲಿ ಸರಿಯಾದ ಕಣ್ಗಾವಲು ಇಟ್ಟಿದ್ದರೆ ಇವರು ಒಳಗೆ ಬರುತ್ತಿರಲಿಲ್ಲ ಎಂದು ತಿರುಗೇಟು ನೀಡಿದೆ.

ಕೈಗೊಳ್ಳಬಹುದಾದ ಕ್ರಮಗಳು

ಆಧಾರ್ ಮತ್ತು ಪಡಿತರ ಚೀಟಿ ನೀಡುವ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು. ನಕಲಿ ದಾಖಲೆ ತಯಾರಿಸುವ ಜಾಲವನ್ನು ಬೇರುಸಹಿತ ಕಿತ್ತುಹಾಕಬೇಕು. ಹೊರರಾಜ್ಯಗಳಿಂದ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಥವಾ ಆಯಾ ಕಾರ್ಮಿಕ ಇಲಾಖೆಗಳಲ್ಲಿ ನೋಂದಣಿ ಮಾಡಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಇದರಿಂದ ಅಕ್ರಮ ವಲಸಿಗರು ಮತ್ತು ಅಧಿಕೃತ ವಲಸಿಗರ ನಡುವಿನ ವ್ಯತ್ಯಾಸ ತಿಳಿಯುತ್ತದೆ. ಸ್ಕ್ರ್ಯಾಪ್ ಯಾರ್ಡ್‌ಗಳು, ನಿರ್ಮಾಣ ಹಂತದ ಕಟ್ಟಡಗಳು ಮತ್ತು ಕೊಳೆಗೇರಿಗಳಲ್ಲಿ ಕಾಲಕಾಲಕ್ಕೆ ತಪಾಸಣೆ ನಡೆಸಬೇಕು. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಮತ್ತು ಸಂಶಯ ಬಂದಲ್ಲಿ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಜಾಗೃತಿ ಮೂಡಿಸಬೇಕು ಎಂಬುದು ಪೊಲೀಸರ ಸಲಹೆಯಾಗಿದೆ.

Read More
Next Story