
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಡಾ.ನಾಗೇಂದ್ರಪ್ಪನನ್ನು ವಿಷ ಸೇವಿಸುವುದರಿಂದ ರಕ್ಷಿಸಿದರು.
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಹಚ್ಚಿದ್ದ ವ್ಯಕ್ತಿ ವಿಧಾನಸೌಧದ ಮುಂದೆ ವಿಷ ಸೇವನೆ: ಸ್ಥಿತಿ ಗಂಭೀರ
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ವಲಸಿಗರಿದ್ದಾರೆ ಎಂದು ಡಾ. ನಾಗೇಂದ್ರಪ್ಪ ಮಾಹಿತಿ ನೀಡಿದ್ದರು. ಆದರೆ ಪೊಲೀಸರೇ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ವಲಸಿಗರನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದ್ದರಿಂದ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಡಾ. ನಾಗೇಂದ್ರಪ್ಪ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಘಟನೆ ಶನಿವಾರ ವಿಧಾನಸೌಧದ ಮುಂಭಾಗದಲ್ಲೇ ನಡೆದಿದ್ದು, ಪೊಲೀಸರು ಆಗಬಹುದಾಗಿದ್ದ ಅನಾಹುತ ತಪ್ಪಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಅವರೊಂದಿಗೆ ಡಾ. ನಾಗೇಂದ್ರಪ್ಪ ಕೂಡ ಸಕ್ರಿಯರಾಗಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ವಲಸಿಗರಿದ್ದಾರೆ ಎಂದು ಮಾಹಿತಿ ನೀಡಿದ್ದು, ಪೊಲೀಸರೇ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ವಿಧಾನಸೌಧದ ಗೇಟ್ ಬಳಿ ವಿಷ ಸೇವಿಸುತ್ತಿದ್ದ ಡಾ. ನಾಗೇಂದ್ರಪ್ಪನನ್ನು ಗಮನಿಸಿದ ಕರ್ತವ್ಯನಿರತ ಪೊಲೀಸರು, ತಕ್ಷಣವೇ ಅವರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಿತ್ತುಕೊಂಡಿದ್ದಾರೆ. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
5 ಲಕ್ಷ ಬಾಂಗ್ಲಾ ವಲಸಿಗರು: ಬಿಜೆಪಿ ಮುಖಂಡ ಆರೋಪ
ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಬಾಂಗ್ಲಾ ನುಸುಳುಕೋರರ ಜಾಲವನ್ನು ಬಿಚ್ಚಿಡುವ ಸ್ಪೋಟಕ ಮಾಹಿತಿ ಇದ್ದು, ಶೇ. 75 ರಷ್ಟು ನಕಲಿ ದಾಖಲೆಗಳುಳ್ಳವರಾಗಿದ್ದಾರೆ. ಅಲ್ಲದೇ, ರಾಜ್ಯದ ಬೆಂಗಳೂರು ಮಹಾನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸೇರಿದಂತೆ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮಂಗಳೂರು, ಧಾರವಾಡ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಅಕ್ರಮವಾಗಿ ನುಸುಳಿ ಬಂದು ನೆಲೆಸಿರುವ ಬಾಂಗ್ಲಾ ನುಸುಳುಕೋರರ ಸಂಖ್ಯೆ ಕನಿಷ್ಠ 5 ಲಕ್ಷಕ್ಕಿಂತಲೂ ಹೆಚ್ಚು ಇದೆ ಎಂದು ಬಿಜೆಪಿ ಮುಖಂಡರಾದ ಎನ್.ಆರ್. ರಮೇಶ್ ಮತ್ತು ಸುಧೀರ್ ಶೆಟ್ಟಿ ತಿಳಿಸಿದ್ದರು.
ಕುಟುಕು ಕಾರ್ಯಾಚರಣೆಯಲ್ಲಿ ಹಲವು ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ. ಕೇಂದ್ರ ಗೃಹ ಇಲಾಖೆಗೆ ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡಲಾಗಿದೆ. ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಕಾರ್ಮಿಕರ ಸೋಗಿನಲ್ಲಿ ಕೆಲಸ ಕಾರ್ಯಗಳಿಗೆ ಪೂರೈಸುವ ನೂರಾರು ಏಜೆಂಟರು ಏಕಾಏಕಿ ಸೃಷ್ಟಿಯಾಗಿದ್ದಾರೆ. ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಉಳಿದುಕೊಳ್ಳಲು ನೆಲೆಯನ್ನು ಕಲ್ಪಿಸಿಕೊಡುವುದರ ಜತೆಗೆ ಅವಶ್ಯಕತೆ ಇರುವ ಬಹುತೇಕ ಸಂಸ್ಥೆಗಳಿಗೆ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ಪೂರೈಸುವ ಮಾಫಿಯಾ ಬೃಹದಾಕಾರವಾಗಿ ಬೆಳೆದು ನಿಂತಿದೆ. ಬೆಂಗಳೂರಿನ ಮಾರತ್ತಹಳ್ಳಿ ರಿಂಗ್ ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಆನೇಕಲ್ ಭಾಗಗಳಲ್ಲಿಯೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರು ವಾಸಿಸುತ್ತಿದ್ದಾರೆ ಎಂಬುದು ವರದಿಯಲ್ಲಿ ಉಲ್ಲೇಖಿಸಿದ್ದರು..

