
ದೂರುದಾರ ಸಂಸ್ಥೆಯ ಸಂಸ್ಥಾಪಕ ಮೊಹಮ್ಮದ್ ಅಯಾಜ್ ಮುಲ್ಲಾ
'ಆಂಥ್ರೊಪಿಕ್' ಹೆಸರಿಗಾಗಿ ಫೈಟ್: ಅಮೆರಿಕದ ಎಐ ದೈತ್ಯ ಸಂಸ್ಥೆಗೆ ಸಮನ್ಸ್ ನೀಡಿದ ಕರ್ನಾಟಕದ ಕೋರ್ಟ್!
ಅಮೆರಿಕದ ಆಂಥ್ರೊಪಿಕ್ ಸಂಸ್ಥೆ ತನ್ನ ಕಚೇರಿಯನ್ನು ಸೋಮವಾರವಷ್ಟೇ ಬೆಂಗಳೂರಿನಲ್ಲಿ ಆರಂಭಿಸಿತ್ತು. ಭಾರತವನ್ನು ತನ್ನ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಬಣ್ಣಿಸಿತ್ತು. ಇದರ ಬೆನ್ನಲ್ಲೇ ಈಗ ಹೆಸರಿನ ವಿವಾದ ಕೋರ್ಟ್ ಮೆಟ್ಟಿಲೇರಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಜಾಗತಿಕವಾಗಿ ಸಂಚಲನ ಮೂಡಿಸಿರುವ ಅಮೆರಿಕ ಮೂಲದ 'ಆಂಥ್ರೊಪಿಕ್' ಸಂಸ್ಥೆಗೆ ಕರ್ನಾಟಕದಲ್ಲಿ ಕಾನೂನು ಸಂಕಷ್ಟ ಎದುರಾಗಿದೆ. ಕಂಪನಿಯ ಹೆಸರಿನ ಬಳಕೆಯ ವಿಚಾರವಾಗಿ ಬೆಳಗಾವಿ ಮೂಲದ ಸಾಫ್ಟ್‌ವೇರ್ ಸಂಸ್ಥೆಯೊಂದು ಹೂಡಿದ ದಾವೆಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಅಮೆರಿಕದ ಸಂಸ್ಥೆಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.
ಬೆಳಗಾವಿಯ 'ಆಂಥ್ರೊಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು ಅಮೆರಿಕದ ಎಐ ದಿಗ್ಗಜ ಸಂಸ್ಥೆಯ ವಿರುದ್ಧ ವಾಣಿಜ್ಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ. "ನಾವು 2017ರಲ್ಲೇ ಈ ಹೆಸರಿನಲ್ಲಿ ಕಂಪನಿ ಸ್ಥಾಪಿಸಿದ್ದೇವೆ. ಆದರೆ, ಅಮೆರಿಕದ ಸಂಸ್ಥೆ ಬಂದು ಅದೇ ಹೆಸರನ್ನು ಬಳಸುತ್ತಿರುವುದರಿಂದ ನಮ್ಮ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ," ಎಂದು ಸ್ಥಳೀಯ ಸಂಸ್ಥೆ ಆರೋಪಿಸಿದೆ.
2017 vs 2021: ಯಾವುದು ಮೊದಲು?
ದೂರುದಾರ ಸಂಸ್ಥೆಯ ಸಂಸ್ಥಾಪಕ ಮೊಹಮ್ಮದ್ ಅಯಾಜ್ ಮುಲ್ಲಾ ಅವರ ಪ್ರಕಾರ, ಬೆಳಗಾವಿ ಮೂಲದ ತಮ್ಮ ಕಂಪನಿ 2017ರಲ್ಲಿ ಸ್ಥಾಪನೆಯಾಗಿದೆ. ಆದರೆ, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಐ ಕಂಪನಿ ಆರಂಭವಾಗಿದ್ದು 2021ರಲ್ಲಿ. "ನಾವು ಚಿಕ್ಕ ಸಂಸ್ಥೆಯಾಗಿರಬಹುದು, ಆದರೆ 'ಆಂಥ್ರೊಪಿಕ್' ಎಂಬ ಹೆಸರಿನ ಪೂರ್ವ ಬಳಕೆದಾರರು ನಾವೇ ಆಗಿದ್ದೇವೆ," ಎಂದು ಮುಲ್ಲಾ ಹೇಳಿದ್ದಾರೆ.
ಮಾರ್ಚ್ 9ಕ್ಕೆ ವಿಚಾರಣೆ
ಟ್ರೇಡ್‌ಮಾರ್ಕ್ ಉಲ್ಲಂಘನೆ ಆರೋಪದಡಿ ಬೆಳಗಾವಿಯ ವಾಣಿಜ್ಯ ವಿಭಾಗದ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಫೆಬ್ರವರಿ 16ರಂದು ವಿಚಾರಣೆಗೆ ಹಾಜರಾಗಲು ಅಮೆರಿಕದ ಕಂಪನಿ ವಿಫಲವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಮಾರ್ಚ್ 9ರಂದು ಹಾಜರಾಗುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಹೊಸದಾಗಿ ಸಮನ್ಸ್ ನೀಡಿದೆ.
ವಿಪರ್ಯಾಸವೆಂದರೆ, ಅಮೆರಿಕದ ಆಂಥ್ರೊಪಿಕ್ ಸಂಸ್ಥೆ (Claude.ai ಖ್ಯಾತಿಯ) ತನ್ನ ಕಚೇರಿಯನ್ನು ಸೋಮವಾರವಷ್ಟೇ ಬೆಂಗಳೂರಿನಲ್ಲಿ ಅಧಿಕೃತವಾಗಿ ಆರಂಭಿಸಿತ್ತು. ಭಾರತವನ್ನು ತನ್ನ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಬಣ್ಣಿಸಿತ್ತು. ಇದರ ಬೆನ್ನಲ್ಲೇ ಈಗ ಹೆಸರಿನ ವಿವಾದ ಕೋರ್ಟ್ ಮೆಟ್ಟಿಲೇರಿದೆ.

