
ಸೋಮವಾರ ಅಮ್ಮನಿಗೆ ಕೊನೆಯ ಕರೆ... ಆಮೇಲೆ ನಾಪತ್ತೆ- ತುಮಕೂರು ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಕಣ್ಮರೆ
ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ತುಮಕೂರು ಮೂಲದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಕಳೆದ ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದಾರೆ.
ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಕಳೆದ ಐದು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತುಮಕೂರು ಮೂಲದ ಈ ಯುವಕನ ಕಣ್ಮರೆ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಅನಿವಾಸಿ ಭಾರತೀಯ ಸಂಘ ಮತ್ತು ವಿದೇಶಾಂಗ ಸಚಿವಾಲಯದ ನೆರವು ಕೋರಿದ್ದಾರೆ .
ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ಕ್ಕೆ ಮಾಹಿತಿ ನೀಡಿದ್ದಾರೆ. ಸಾಕೇತ್ ಅವರ ತಂದೆ ಇಂದು (ಶನಿವಾರ) ನನ್ನನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದಾರೆ. ಸಾಕೇತ್ ಭಾನುವಾರದವರೆಗೂ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದ. ಸೋಮವಾರ ರಾತ್ರಿ ತನ್ನ ತಾಯಿಗೆ ಕರೆ ಮಾಡಿದ್ದ. ಆದರೆ, ಈ ಕಡೆಯಿಂದ ತಾಯಿ ವಾಪಸ್ ಕರೆ ಮಾಡಿದಾಗ ಫೋನ್ ಎತ್ತಿರಲಿಲ್ಲ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ತಿಳಿಸಿದ್ದಾರೆ,'' ಎಂಬುದಾಗಿ ಮಾಹಿತಿ ನೀಡಿದ್ದಾರೆ.
"ಸಾಕೇತ್ ಅವರ ತಂದೆ ತುಮಕೂರಿನವರು. ಮಗನ ನಾಪತ್ತೆಯ ವಿಷಯ ತಿಳಿದು ಕಂಗಾಲಾಗಿದ್ದಾರೆ. ನಾನು ತಕ್ಷಣವೇ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಯುವಕನ ಪತ್ತೆಗೆ ಶೋಧ ಕಾರ್ಯ ಚುರುಕುಗೊಂಡಿದೆ," ಎಂದು ಆರತಿ ಕೃಷ್ಣ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶಿಕ್ಷಣ
ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ನಂತರ ಪ್ರತಿಷ್ಠಿತ ಬೇಸ್ ಪಿಯು ಕಾಲೇಜಿನಲ್ಲಿ ಸಾಕೇತ್ ವ್ಯಾಸಂಗ ಮಾಡಿದ್ದಾರೆ. ಬಳಿಕ ಶೈಕ್ಷಣಿಕವಾಗಿ ಮತ್ತಷ್ಟು ಎತ್ತರಕ್ಕೇರಿದ ಅವರು, ಚೆನ್ನೈ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಉನ್ನತ ವ್ಯಾಸಂಗದ ಕನಸಿನೊಂದಿಗೆ ಅಮೆರಿಕಕ್ಕೆ ತೆರಳಿರುವ ಸಾಕೇತ್, ಪ್ರಸ್ತುತ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ (UC Berkeley) 'ಪ್ರಾಡಕ್ಟ್ ಡೆವಲಪ್‌ಮೆಂಟ್ ಪ್ರೋಗ್ರಾಮ್' ಅಡಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಅವರ ಲಿಂಕ್ಡ್ ಇನ್ ಪ್ರೊಫೈಲ್ನಲ್ಲಿದೆ.
ಬ್ಯಾಗ್ ಪತ್ತೆ: ಪಾಸ್ಪೋರ್ಟ್, ಲ್ಯಾಪ್‌ಟಾಪ್ ಇತ್ತು!
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾಕೇತ್ ಕೊನೆಯದಾಗಿ ಬರ್ಕ್ಲಿ ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕಂಡುಬಂದಿದ್ದರು. ಆತಂಕಕಾರಿ ವಿಷಯವೆಂದರೆ, ತನಿಖಾ ತಂಡಕ್ಕೆ ವಿವಿ ಸಮೀಪದ ಟಿಲ್ಡನ್ ರೀಜನಲ್ ಪಾರ್ಕ್ ಬಳಿಯ ಮನೆಯೊಂದರ ಹತ್ತಿರ ಬ್ಯಾಗ್ ಒಂದು ಸಿಕ್ಕಿದೆ. ಈ ಬ್ಯಾಗ್ ಸಾಕೇತ್ ಅವರದ್ದೇ ಎಂದು ನಂಬಲಾಗಿದ್ದು, ಅದರಲ್ಲಿ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಪತ್ತೆಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
'ಅಪಾಯದಲ್ಲಿದ್ದಾರೆ' ಎಂದ ಪೊಲೀಸ್
ಬರ್ಕ್ಲಿ ಪೊಲೀಸರು ಸಾಕೇತ್ ಅವರನ್ನು 'ಅಪಾಯದಲ್ಲಿರುವ ವ್ಯಕ್ತಿ' (At Risk) ಎಂದು ಪರಿಗಣಿಸಿ ಹುಡುಕಾಟ ನಡೆಸುತ್ತಿದ್ದಾರೆ. 6 ಅಡಿ 1 ಇಂಚು ಎತ್ತರವಿರುವ ಸಾಕೇತ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಲೇಕ್ ಅಂಜಾ (Lake Anza) ಮತ್ತು ಬರ್ಕ್ಲಿ ಹಿಲ್ಸ್ ಸುತ್ತಮುತ್ತಲೂ ಶೋಧ ಕಾರ್ಯ ಮುಂದುವರಿದಿದೆ .
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಟ್ವೀಟ್ ಮೂಲಕ ಕಳವಳ ವ್ಯಕ್ತಪಡಿಸಿದ್ದು, ಸಾಕೇತ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.

