ಜೈಲಿನಿಂದ ಹೊರಬರಲು ದರ್ಶನ್ ಕಸರತ್ತು: ಪ್ರತಿನಿತ್ಯ ವಿಚಾರಣೆಗಾಗಿ ಮನವಿ
x

ಜೈಲಿನಿಂದ ಹೊರಬರಲು ದರ್ಶನ್ ಕಸರತ್ತು: ಪ್ರತಿನಿತ್ಯ ವಿಚಾರಣೆಗಾಗಿ ಮನವಿ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಹೊರ ಬರಲು ಹರಸಾಹಸ ಪಡುತ್ತಿದ್ದು, ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.


Click the Play button to hear this message in audio format

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ನಟ ದರ್ಶನ್‌ ಹೊರ ಬರಲು ಹರಸಾಹಸ ಪಡುತ್ತಿದ್ದು, ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಿ ಮುಗಿಸಬೇಕು ಎಂದು ಕೋರಿದ್ದಾರೆ.

2025ರ ಆ.14 ರಂದು ಜಾಮೀನು ರದ್ದುಗೊಂಡ ಬಳಿಕ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳು ಜೈಲು ಸೇರಿದ್ದರು. ಇದೀಗ ದರ್ಶನ್ ಜೈಲು ಸೇರಿ ಆರು ತಿಂಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಅವರ ಕಾನೂನು ತಂಡ ಹೊಸ ತಂತ್ರ ರೂಪಿಸಿದೆ. ದರ್ಶನ್ ಪರ ವಕೀಲರದ ತಂಡವು ಸಿಆರ್‌ಪಿಸಿ ಸೆಕ್ಷನ್ 309ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಮೂಲಕ ಚಾಣಾಕ್ಷ ನಡೆಗೆ ಮುಂದಾಗಿದೆ. ಈ ಸೆಕ್ಷನ್ ಪ್ರಕಾರ, ಒಮ್ಮೆ ವಿಚಾರಣೆ ಪ್ರಾರಂಭವಾದರೆ ಅದನ್ನು ಸತತವಾಗಿ ನಡೆಸಬೇಕು ಮತ್ತು ಯಾವುದೇ ಅನಿವಾರ್ಯ ಕಾರಣಗಳಿಲ್ಲದೆ ಮುಂದೂಡುವಂತಿಲ್ಲ.

ಈ ನಡೆಯನ್ನು ಅನುಸರಿಸಲು ಕೆಲವೊಂದು ಕಾರಣಗಳಿವೆ. ಸಾಮಾನ್ಯವಾಗಿ ಹೈ-ಪ್ರೊಫೈಲ್ ಪ್ರಕರಣಗಳಲ್ಲಿ ಸಾಕ್ಷ್ಯ ನಾಶ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗುತ್ತದೆ. ಪ್ರಮುಖ ಸಾಕ್ಷಿಗಳ ವಿಚಾರಣೆ ನ್ಯಾಯಾಲಯದಲ್ಲಿ ಬೇಗ ಮುಗಿದರೆ, ಆ ಕಾರಣವನ್ನೇ ಮುಂದಿಟ್ಟುಕೊಂಡು ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ದರ್ಶನ್ ತಂಡಕ್ಕೆ ಬಲ ಸಿಗುತ್ತದೆ. ಈಗಾಗಲೇ ಆರು ತಿಂಗಳು ಕಳೆದಿದ್ದು, ವಿಚಾರಣೆ ನಿಧಾನಗತಿಯಲ್ಲಿ ಸಾಗಿದರೆ ಇನ್ನೂ ವರ್ಷಗಟ್ಟಲೆ ಜೈಲಿನಲ್ಲಿ ಇರಬೇಕಾಗಬಹುದು ಎಂಬುದು ದರ್ಶನ್ ಆತಂಕವಾಗಿವೆ. ಪ್ರಕರಣವನ್ನು ಎದುರಿಸಲು ತಾವು ಸಿದ್ಧರಿದ್ದೇವೆ. ಅಲ್ಲದೇ, ಕಾನೂನಿನ ಪ್ರಕ್ರಿಯೆಗೆ ಸಹಕರಿಸುತ್ತಿದ್ದೇವೆ ಎಂಬ ಸಂದೇಶವನ್ನು ರವಾನಿಸುವುದು ಸಹ ಇದರ ಹಿಂದಿನ ಉದ್ದೇಶವಾಗಿರಬಹುದು ಎಂಬುದು ವಕೀಲರ ಅಭಿಪ್ರಾಯವಾಗಿದೆ.

ಸಾಧ್ಯತೆ ಕಡಿಮೆ

ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವಕೀಲರು ಸುಲಭವಾಗಿ ಪ್ರತಿನಿತ್ಯದ ವಿಚಾರಣೆಗೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಪ್ರಕರಣದಲ್ಲಿ 200ಕ್ಕೂ ಹೆಚ್ಚು ಸಾಕ್ಷಿಗಳಿದ್ದು, ಸಾವಿರಾರು ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. ಜತೆಗೆ ಡಿಎನ್‌ಎ ವರದಿಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋರೆನ್ಸಿಕ್ ದಾಖಲೆಗಳ ವಿಶ್ಲೇಷಣೆ ನಡೆಯಬೇಕಿದೆ. ಪ್ರತಿದಿನ ವಿಚಾರಣೆ ನಡೆಸುವುದರಿಂದ ಪ್ರಾಸಿಕ್ಯೂಷನ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಾಕ್ಷಿಗಳನ್ನು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವುದು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಮಂಡಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ, ಪ್ರಾಸಿಕ್ಯೂಷನ್ ಈ ಅರ್ಜಿಗೆ ಬಲವಾದ ಆಕ್ಷೇಪಣೆ ಸಲ್ಲಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಸೆಷನ್ಸ್ ನ್ಯಾಯಾಲಯವು ಈ ಅರ್ಜಿಯನ್ನು ಹೇಗೆ ಪರಿಗಣಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ನ್ಯಾಯಾಲಯದ ಮೇಲೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಿದ್ದು, ಕೇವಲ ಒಂದು ಪ್ರಕರಣಕ್ಕಾಗಿ ಪ್ರತಿದಿನ ಸಮಯ ಮೀಸಲಿಡುವುದು ಪ್ರಾಯೋಗಿಕವಾಗಿ ಕಷ್ಟವಾಗಬಹುದು. ಆದರೂ, ಸುಪ್ರೀಂಕೋರ್ಟ್‌ನ ಹಲವು ನಿರ್ದೇಶನಗಳ ಪ್ರಕಾರ, ವಿಚಾರಣಾಧೀನ ಕೈದಿಗಳ ಹಕ್ಕುಗಳನ್ನು ರಕ್ಷಿಸಲು ತ್ವರಿತ ವಿಚಾರಣೆ ನಡೆಸಬಹುದಾಗಿದೆ.

Read More
Next Story