
ಇಂದು ನಟ ದರ್ಶನ್ ಜನ್ಮದಿನ: ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್!
ಜೈಲಿನಲ್ಲಿರುವ ನಟ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಭಾವುಕ ವೀಡಿಯೊ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಇಂದು (ಫೆಬ್ರವರಿ 16) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಹಿನ್ನೆಲೆಯಲ್ಲಿ, ಸತತ ಎರಡನೇ ವರ್ಷವೂ ದರ್ಶನ್ ತಮ್ಮ ಅಭಿಮಾನಿಗಳ ಜೊತೆ ಇರಲು ಸಾಧ್ಯವಾಗಿಲ್ಲ. ನೆಚ್ಚಿನ ನಟನ ಅನುಪಸ್ಥಿತಿಯಲ್ಲೂ ಅಭಿಮಾನಿಗಳು ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ.
ಪತ್ನಿ ಮತ್ತು ಮಗನ ಸ್ಪೆಶಲ್ ವಿಶ್
ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ವೀಡಿಯೊ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಪ್ರತಿ ದಿನವನ್ನೂ ಸಂಭ್ರಮಿಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು" ಎಂದು ಬರೆದು, ಪತಿ ದರ್ಶನ್ ಮತ್ತು ಮಗ ವಿನೀಶ್ ಜೊತೆಗಿನ ಸುಂದರ ಕ್ಷಣಗಳ ಝಲಕ್ ಹಂಚಿಕೊಂಡಿದ್ದಾರೆ. ವೀಡಿಯೊದ ಕೊನೆಯಲ್ಲಿ ಮಗ ವಿನೀಶ್ ತಂದೆಗೆ ಶುಭಕೋರಿರುವ ಆಡಿಯೋ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯ
ದರ್ಶನ್ ಅವರು ಈ ಹಿಂದೆ ನೀಡಿದ್ದ ಕರೆಯಂತೆ, ಅಭಿಮಾನಿಗಳು ಹಾರ, ಪಟಾಕಿ ಮತ್ತು ಕೇಕ್ ಕತ್ತರಿಸುವ ಬದಲು ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ದವಸ-ಧಾನ್ಯ ಮತ್ತು ದಿನಬಳಕೆಯ ವಸ್ತುಗಳನ್ನು ದಾನ ಮಾಡುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಬರ್ತ್‌ಡೇ ಸಿಡಿಪಿ' ಹಾಗೂ ವಿಶೇಷ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.
'ಕರಿಯ' ರೀ-ರಿಲೀಸ್ ಅಬ್ಬರ
ದರ್ಶನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಪೂರಕವಾಗಿ 2003ರ ಬ್ಲಾಕ್ ಬಸ್ಟರ್ ಹಿಟ್ 'ಕರಿಯ' ಸಿನಿಮಾ ರಾಜ್ಯಾದ್ಯಂತ ಮತ್ತೆ ಬಿಡುಗಡೆಯಾಗಿದೆ. ಮೂರನೇ ಬಾರಿಗೆ ತೆರೆಕಾಣುತ್ತಿರುವ ಈ ಸಿನಿಮಾವನ್ನು ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಹಬ್ಬದಂತೆ ಆಚರಿಸುತ್ತಿದ್ದಾರೆ. 'ಡೆವಿಲ್' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದರೂ, ಓಟಿಟಿಗೆ ಬರುವುದು ತಡವಾಗುತ್ತಿರುವುದು ಅಭಿಮಾನಿಗಳಲ್ಲಿ ಸಣ್ಣ ನಿರಾಸೆ ಮೂಡಿಸಿದೆ.
ದರ್ಶನ್ ಪುತ್ರ ವಿನೀಶ್ ಪೋಸ್ಟ್
Happiest Birthday Boss ❤️🥺
— BOSS 🔥 (@Boss79996) February 15, 2026
ಅಪ್ಪ 🥹❤️ಮಗ#DBoss #HappyBirthdayDBoss#DBoss𓃰 #BossOfSandalwood pic.twitter.com/NFXrvzSOYN
ಜೈಲು ವಾಸದ ಹಿನ್ನೆಲೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೂನ್ 11, 2024ರಂದು ಬಂಧನಕ್ಕೊಳಗಾಗಿದ್ದ ದರ್ಶನ್, 5 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಆ ಸಮಯದಲ್ಲಿ 'ಡೆವಿಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಆದರೆ, ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಪರಿಣಾಮ, ಕಳೆದ ವರ್ಷ ಆಗಸ್ಟ್ 14ರಂದು ಅವರು ಮತ್ತೆ ಜೈಲು ಸೇರಬೇಕಾಯಿತು. ಸದ್ಯ ಅವರು 6 ತಿಂಗಳಿನಿಂದ ಜೈಲಿನಲ್ಲೇ ದಿನ ಕಳೆಯುತ್ತಿದ್ದು, ಕಾನೂನು ಹೋರಾಟ ಮುಂದುವರಿದಿದೆ.
ದರ್ಶನ್ ಶೀಘ್ರವೇ ಬಿಡುಗಡೆಯಾಗಿ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲಿ ಎಂಬುದು ಅವರ ಲಕ್ಷಾಂತರ 'ಸೆಲೆಬ್ರಿಟಿ'ಗಳ (ಅಭಿಮಾನಿಗಳ) ಆಶಯವಾಗಿದೆ.

