ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಅಶ್ಲೀಲ ಕಾಮೆಂಟ್ಸ್‌; 8 ಮಂದಿ ಬಂಧನ
x

ದರ್ಶನ್ ಪತ್ನಿ ನೀಡಿದ್ದ ದೂರಿನ ಬೆನ್ನಲ್ಲೇ ಎಂಟು ಜನರ ಅರೆಸ್ಟ್

ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಅಶ್ಲೀಲ ಕಾಮೆಂಟ್ಸ್‌; 8 ಮಂದಿ ಬಂಧನ

ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಈಗ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಜೈಲು ಪಾಲಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಕೆಲವು ಕಿಡಿಗೇಡಿಗಳು ಅತ್ಯಂತ ಕೆಟ್ಟದಾಗಿ ಮತ್ತು ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಇದರಿಂದ ಮನನೊಂದ ವಿಜಯಲಕ್ಷ್ಮಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಸುಮಾರು 15ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಐಡಿಗಳು ಮತ್ತು ನೂರಕ್ಕೂ ಹೆಚ್ಚು ಅಶ್ಲೀಲ ಕಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಪೊಲೀಸರಿಗೆ ನೀಡಿದ್ದರು. ಈ ದೂರನ್ನು ಆಧರಿಸಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ಐಪಿ ವಿಳಾಸಗಳ ಆಧಾರದ ಮೇಲೆ ರಾಜ್ಯದ ವಿವಿಧೆಡೆ ದಾಳಿ ನಡೆಸಿ ಇದುವರೆಗೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ದಾವಣಗೆರೆಯ ಸಾಫ್ಟ್‌ವೇರ್ ಇಂಜಿನಿಯರ್ ನಿತಿನ್, ಬೆಂಗಳೂರಿನ ಆಟೋ ಚಾಲಕ ಚಂದ್ರು, ಹುಬ್ಬಳ್ಳಿಯ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ ಹಾಗೂ ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ ಪ್ರಮುಖರು. ಇವರೆಲ್ಲರೂ ತಮ್ಮ ನಿಜವಾದ ಐಡೆಂಟಿಟಿ ಮರೆಮಾಚಿ ಫೇಕ್ ಅಕೌಂಟ್‌ಗಳ ಮೂಲಕ ಅಸಭ್ಯವಾಗಿ ವರ್ತಿಸಿದ್ದರು ಎಂದು ತಿಳಿದುಬಂದಿದೆ.

ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಕೇವಲ 60 ದಿನಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಈಗಾಗಲೇ ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದ್ದು, ಅವರು ಡಿಲೀಟ್ ಮಾಡಿದ್ದ ಸಂದೇಶಗಳನ್ನು ಡಿಜಿಟಲ್ ಫೋರೆನ್ಸಿಕ್ ಮೂಲಕ ಮರುಪಡೆಯಲಾಗಿದೆ. ಈ ಎಲ್ಲ ಡಿಜಿಟಲ್ ಪುರಾವೆಗಳೊಂದಿಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಇನ್ನೂ ಕೆಲವು ಕಿಡಿಗೇಡಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಘಟನೆಯ ಹಿನ್ನೆಲೆ

ದಾವಣೆಗೆರೆಯಲ್ಲಿ ನಡೆದ 'ಡೆವಿಲ್' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ವಿಜಯಲಕ್ಷ್ಮಿ ಅವರು ಪಾಲ್ಗೊಂಡಿದ್ದರು. ಆ ವೇದಿಕೆಯಲ್ಲಿ ತಮ್ಮ ಪತಿಯ ನಟನೆ ಮತ್ತು ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅವರು, "ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ" ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು. ಆದರೆ ಈ ಭಾಷಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ 'ಫ್ಯಾನ್ಸ್ ವಾರ್' ಅತಿರೇಕಕ್ಕೆ ಹೋಗಿದ್ದು, ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿತ್ತು. ಇದು ಅವರ ಕಾನೂನು ಹೋರಾಟಕ್ಕೆ ಕಾರಣವಾಯಿತು.

Read More
Next Story