
ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯಕ್ಕೆ ವಿರೋಧ: ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಕೆ
ವಂದೇ ಮಾತರಂನಲ್ಲಿನ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ ವಂದೇ ಮಾತರಂʼ ಗೀತೆ ನ್ಯಾಯಾಂಗದ ಅಂಗಳ ತಲುಪಿದೆ. ಕೇಂದ್ರ ಸರ್ಕಾರವು ರಾಷ್ಟ್ರಗೀತೆಯ ಮಾದರಿಯಲ್ಲಿಯೇ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕು ಎಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.
ವಕೀಲ ಸೋಮಶೇಖರ್ ರಾಜವಂಶಿ ಎಂಬವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಕೇವಲ ಒಂದು ಗೀತೆಯ ಸಾಲುಗಳ ಬಗ್ಗೆಯಲ್ಲ, ಬದಲಿಗೆ ಭಾರತದ ಸಂವಿಧಾನದ ಮೂಲತತ್ವಗಳಾದ ಜ್ಯಾತ್ಯತೀತತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಹಕ್ಕುಗಳ ಕುರಿತು ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದೆ.
ವಂದೇ ಮಾತರಂನಲ್ಲಿನ ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಯಾಗಬೇಕಿದೆ. ಮುಂದಿನ ವಾರದಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ಪೀಠದ ಮುಂದೆ ವಿಚಾರಣೆ ಬರುವ ನಿರೀಕ್ಷೆ ಇದೆ.
ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು 1870ರ ದಶಕದಲ್ಲಿ ರಚಿಸಿದ್ದ ವಂದೇ ಮಾತರಂ ಗೀತೆ ಭಾರತದ ಸ್ವಾತಂತ್ರ್ಯ ಚಳವಳಿಯ ಮಂತ್ರವಾಗಿತ್ತು. ಆದರೆ, ಈ ಗೀತೆಯ ಸಂಪೂರ್ಣ ಆವೃತ್ತಿಯು ಧಾರ್ಮಿಕ ರೂಪಕಗಳಿಂದ ಕೂಡಿದೆ ಎಂಬ ಕಾರಣಕ್ಕೆ ಅಂದಿನಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ.
1950ರ ಜ.24ರಂದು ದೇಶದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಒಂದು ಮಹತ್ವದ ಘೋಷಣೆ ಮಾಡಿದರು. ಅದರಂತೆ, ಜನ ಗಣ ಮನ ದೇಶದ ರಾಷ್ಟ್ರಗೀತೆಯಾಗಿ ಅಂಗೀಕರಿಸಲ್ಪಟ್ಟರೆ, ವಂದೇ ಮಾತರಂ ಗೀತೆಯನ್ನು ರಾಷ್ಟ್ರೀಯ ಗೀತೆಯಾಗಿ ಸಮಾನ ಗೌರವದೊಂದಿಗೆ ಸ್ವೀಕರಿಸಲಾಯಿತು.
ಆದರೆ, ಸಂವಿಧಾನ ರಚನಾ ಸಭೆಯು ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಅಧಿಕೃತವಾಗಿ ಬಳಸಲು ಒಪ್ಪಿಗೆ ನೀಡಿತ್ತು. ಇದಕ್ಕೆ ಕಾರಣ, ಮೊದಲ ಎರಡು ಚರಣಗಳು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗದೆ, ಮಾತೃಭೂಮಿಯನ್ನು ಪ್ರಕೃತಿಯ ರೂಪದಲ್ಲಿ ವರ್ಣಿಸುತ್ತವೆ. ಆದರೆ ಮುಂದಿನ ಚರಣಗಳು ಹಿಂದೂ ದೇವತೆಗಳಾದ ದುರ್ಗಾ ಮತ್ತು ಲಕ್ಷ್ಮಿಯ ಉಲ್ಲೇಖಗಳನ್ನು ಹೊಂದಿರುವುದರಿಂದ, ಬಹುಧರ್ಮೀಯ ಭಾರತದಲ್ಲಿ ಎಲ್ಲರಿಗೂ ಒಪ್ಪಿತವಾಗುವಂತೆ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.
ಅರ್ಜಿದಾರರ ಪ್ರಮುಖ ಆಕ್ಷೇಪಣೆಗಳು
ವಕೀಲ ಸೋಮಶೇಖರ್ ರಾಜವಂಶಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಮೂರು ಮುಖ್ಯ ಕಾರಣಗಳಿಗಾಗಿ ಪ್ರಶ್ನಿಸಲಾಗಿದೆ. ಗೃಹ ಸಚಿವಾಲಯವು ತನ್ನ ಜಾಲತಾಣದಲ್ಲಿ ಆರು ಚರಣಗಳ ಸಂಪೂರ್ಣ ಗೀತೆಯನ್ನು ಅಧಿಕೃತ ಎಂದು ಘೋಷಿಸಿರುವುದು ಸಂವಿಧಾನ ರಚನಾ ಸಭೆಯ ಮೂಲ ಆಶಯಕ್ಕೆ ವಿರುದ್ಧವಾಗಿದೆ. 3 ರಿಂದ 6ನೇ ಚರಣಗಳಲ್ಲಿ ಬರುವ ದೇವತೆಗಳ ಉಲ್ಲೇಖವು ಒಂದು ನಿರ್ದಿಷ್ಟ ಧರ್ಮದ ಆಚರಣೆಯಂತೆ ಭಾಸವಾಗುತ್ತದೆ. ಇದನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸುವುದು ಇತರ ಧರ್ಮದ ಅಥವಾ ಧರ್ಮದಲ್ಲಿ ನಂಬಿಕೆಯಿಲ್ಲದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶಭಕ್ತಿಯನ್ನು ವ್ಯಕ್ತಪಡಿಸಲು ಒಂದು ನಿರ್ದಿಷ್ಟ ಧಾರ್ಮಿಕ ಸ್ವರೂಪದ ಗೀತೆಯನ್ನು ಕಡ್ಡಾಯಗೊಳಿಸುವುದು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂಬುದು ಅರ್ಜಿದಾರರ ವಾದ.
ಸಾಂವಿಧಾನಿಕ ಆಯಾಮಗಳ ವಿಶ್ಲೇಷಣೆ
ಅರ್ಜಿದಾರರು ಸಂವಿಧಾನದ ಮೂರು ಪ್ರಮುಖ ವಿಧಿಗಳನ್ನು ಉಲ್ಲೇಖಿಸಿದ್ದಾರೆ. ಪರಿಚ್ಛೇದ 25 (ಆತ್ಮಸಾಕ್ಷಿಯ ಮತ್ತು ಧರ್ಮದ ಮುಕ್ತ ಅನುಸರಣೆಯ ಹಕ್ಕು) ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ತನಗೆ ಇಷ್ಟ ಬಂದ ಧರ್ಮವನ್ನು ನಂಬುವ ಅಥವಾ ನಂಬದಿರುವ ಹಕ್ಕನ್ನು ನೀಡುತ್ತದೆ. ಶಾಲೆಗಳಲ್ಲಿ ದೇವತೆಗಳ ಸ್ತುತಿಯನ್ನು ಒಳಗೊಂಡ ಚರಣಗಳನ್ನು ಹಾಡುವಂತೆ ಒತ್ತಾಯಿಸುವುದು, ಅಲ್ಪಸಂಖ್ಯಾತರು ಅಥವಾ ನಾಸ್ತಿಕ ಕುಟುಂಬಗಳ ಮಕ್ಕಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಪರಿಚ್ಛೇದ 28 ಮತ್ತು 28(1)ನೇ (ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧ) ವಿಧಿಯ ಪ್ರಕಾರ, ಸಂಪೂರ್ಣವಾಗಿ ಸರ್ಕಾರದ ಅನುದಾನದಿಂದ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಬೋಧನೆಯನ್ನು ಮಾಡುವಂತಿಲ್ಲ. ವಂದೇ ಮಾತರಂನ ಕೊನೆಯ ನಾಲ್ಕು ಚರಣಗಳು ದೇವತೆಗಳ ಆರಾಧನೆಯ ರೂಪದಲ್ಲಿರುವುದರಿಂದ, ಅವುಗಳನ್ನು ಕಡ್ಡಾಯಗೊಳಿಸುವುದು ಪರೋಕ್ಷವಾಗಿ ಧಾರ್ಮಿಕ ಬೋಧನೆಯೇ ಆಗುತ್ತದೆ. ಪರಿಚ್ಛೇದ 14 (ಸಮಾನತೆಯ ಹಕ್ಕು) ಪ್ರಕಾರ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣಬೇಕಾದ ಸರ್ಕಾರವು, ಒಂದು ಧರ್ಮದ ಆಚರಣೆಯ ಭಾಗವಾಗಿರುವ ಅಂಶಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಎಲ್ಲರ ಮೇಲೆ ಹೇರುವುದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂಬುದು ಅರ್ಜಿದಾರರ ಅಭಿಪ್ರಾಯವಾಗಿದೆ.
ಸುಪ್ರೀಂಕೋರ್ಟ್‌ನ ಹಳೆಯ ತೀರ್ಪುಗಳ ಉಲ್ಲೇಖ
ಕೇಶವಾನಂದ ಭಾರತಿ ಮತ್ತು ಎಸ್.ಆರ್. ಬೊಮ್ಮಾಯಿ ಪ್ರಕರಣಗಳನ್ನು ಉಲ್ಲೇಖಿಸಿರುವ ಅರ್ಜಿದಾರರು ಈ ಎರಡು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಜ್ಯಾತ್ಯತೀತತೆ ಭಾರತದ ಸಂವಿಧಾನದ ಮೂಲ ರಚನೆ ಎಂದು ಘೋಷಿಸಿದೆ. ಸರ್ಕಾರದ ಯಾವುದೇ ಆದೇಶ ಅಥವಾ ಕಾನೂನು ಸಂವಿಧಾನದ ಈ ಮೂಲ ರಚನೆಯನ್ನು ಬದಲಿಸುವಂತಿಲ್ಲ. ಒಂದು ವೇಳೆ ಗೃಹ ಸಚಿವಾಲಯದ ಆದೇಶವು ಕೇವಲ ಹಿಂದೂ ಧರ್ಮದ ದೇವತೆಗಳನ್ನು ಸ್ತುತಿಸುವ ಚರಣಗಳನ್ನು ಕಡ್ಡಾಯಗೊಳಿಸಿದರೆ, ಅದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅರ್ಜಿಯ ಸಾರಾಂಶವಾಗಿದೆ. ಅಲ್ಲದೆ, ಈ ಹಿಂದೆ ಬಿಜೋ ಎಮ್ಯಾನುಯೆಲ್ ಮತ್ತು ಕೇರಳ ರಾಜ್ಯ (1986) ಪ್ರಕರಣದಲ್ಲಿ, ರಾಷ್ಟ್ರಗೀತೆಯನ್ನು ಗೌರವಿಸುವುದು ಎಂದರೆ ಅದನ್ನು ಕಡ್ಡಾಯವಾಗಿ ಹಾಡಲೇಬೇಕು ಎಂದಲ್ಲ, ಬದಲಿಗೆ ಅದಕ್ಕೆ ಗೌರವ ಸೂಚಿಸಿ ನಿಂತುಕೊಂಡರೆ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ತೀರ್ಪು ಇಲ್ಲಿ ಬಹುಮುಖ್ಯವಾಗುತ್ತದೆ ಎನ್ನಲಾಗಿದೆ.
ಅರ್ಜಿಯಲ್ಲಿ ಮತ್ತೊಂದು ಪ್ರಮುಖ ಬೇಡಿಕೆಯೆಂದರೆ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ವರದಿ ಪಡೆಯುವುದಾಗಿದೆ. ಬಲವಂತವಾಗಿ ಧಾರ್ಮಿಕ ಅಂಶಗಳನ್ನು ಒಳಗೊಂಡ ಗೀತೆಯನ್ನು ಹಾಡಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ತಜ್ಞರ ಅಧ್ಯಯನದ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದಾರೆ. ಇದು ಕೇವಲ ಕಾನೂನು ಹೋರಾಟವಲ್ಲದೆ, ಮಾನವ ಹಕ್ಕುಗಳ ಹೋರಾಟವೂ ಹೌದು ಎಂದು ಹೇಳಲಾಗಿದೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ವಕೀಲ ಸೋಮಶೇಖರ್ ರಾಜವಂಶಿ, ವಂದೇಮಾತರಂನ ಎಲ್ಲಾ ಚರಣಗಳನ್ನು ಹಾಡಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧ. ಹೀಗಾಗಿ ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಪಿಐಎಲ್ ಅರ್ಜಿ ಸಲ್ಲಿಕೆಯಾಗಿದೆ. ಮುಂದಿನ ವಾರದಲ್ಲಿ ವಿಚಾರಣೆ ಬರಲಿದೆ ಎಂಬ ನಿರೀಕ್ಷೆ ಇದೆ. ಕೋಲ್ಕತ್ತಾ ಹೈಕೋರ್ಟ್‌ನಲ್ಲಿಯೂ ಈ ಬಗ್ಗೆ ಪಿಐಎಲ್ ಸಲ್ಲಿಕೆಯಾಗಿದೆ ಎಂದಿದ್ದಾರೆ.
"ವಂದೇ ಮಾತರಂ ಗೀತೆಯು ಭಾರತದ ಇತಿಹಾಸದಲ್ಲಿ ಅತ್ಯುನ್ನತ ಸ್ಥಾನ ಹೊಂದಿದೆ. ಅದರ ಮೊದಲ ಎರಡು ಚರಣಗಳು ದೇಶದ ನಿಸರ್ಗವನ್ನು ವರ್ಣಿಸುತ್ತಾ ಭಾರತೀಯರೆಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ. ಆದರೆ, 3 ರಿಂದ 6ನೇ ಚರಣಗಳು ಪೌರಾಣಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುವುದು ವಾಸ್ತವ. ಭಾರತವು ವೈವಿಧ್ಯತೆಯಲ್ಲಿ ಏಕತೆ ನಂಬುವ ದೇಶ. ಇಲ್ಲಿ ಸರ್ಕಾರವು ಯಾವುದೇ ಒಂದು ಧರ್ಮದ ಸಂಕೇತಗಳನ್ನು ರಾಷ್ಟ್ರೀಯತೆಯ ಭಾಗವಾಗಿ ಕಡ್ಡಾಯಗೊಳಿಸುವಾಗ ಅತ್ಯಂತ ಜಾಗರೂಕವಾಗಿರಬೇಕಾಗುತ್ತದೆ. ರಾಷ್ಟ್ರೀಯತೆಯು ಒಳಗೊಳ್ಳುವಿಕೆಯ ಮೇಲೆ ನಿಂತಿರಬೇಕೇ ಹೊರತು ಹೇರಿಕೆಯ ಮೇಲಲ್ಲ," ಎಂದು ಅಭಿಪ್ರಾಯಪಟ್ಟಿದ್ದಾರೆ.

