
ʼವಂದೇ ಮಾತರಂʼಗೆ 150 ವರ್ಷ; ಕೈಬಿಟ್ಟಿರುವ ಚರಣದ ಬಗ್ಗೆ ಈಗ್ಯಾಕೆ ಇಷ್ಟೊಂದು ಚರ್ಚೆ?
ಸಂಸತ್‌ನಲ್ಲಿ ʼವಂದೇ ಮಾತರಂʼ ಕುರಿತ ಚರ್ಚೆ ಪ್ರಾರಂಭಗೊಂಡಿದೆ. ಇದೊಂದು ಐತಿಹಾಸಿಕ ಚರ್ಚೆಯಾಗಿದೆ. ಹಾಗಿದ್ದರೆ ಈ ಹಾಡಿನ ಹುಟ್ಟು ಹೇಗಾಯ್ತು? ಅದರ ಸುತ್ತ ವಿವಾದಗಳು ಹೇಗೆ ಹುಟ್ಟಿಕೊಂಡವು? ಇಲ್ಲಿದೆ ಡಿಟೇಲ್ಸ್.
ಸಂಸತ್ ಅಧಿವೇಶನವು ಸೋಮವಾರ ಐತಿಹಾಸಿಕ ಚರ್ಚೆಗೆ ಸಾಕ್ಷಿಯಾಯಿತು. ರಾಷ್ಟ್ರೀಯ ಗೀತೆ ʼವಂದೇ ಮಾತರಂʼಗೆ 150 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಕುರಿತ ವಿಶೇಷ ಚರ್ಚೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದಾರೆ. ಚರ್ಚೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಪಾಲ್ಗೊಳ್ಳುತ್ತಿದ್ದು, ಉಭಯ ಸದನಗಳಲ್ಲಿ ʼವಂದೇ ಮಾತರಂʼ ಚರ್ಚೆ ರಂಗೇರಿದೆ.
ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ಮತ್ತು ಜದುನಾಥ್ ಭಟ್ಟಾಚಾರ್ಯ ಅವರು ರಾಗ ಸಂಯೋಜಿಸಿದ ಈ ಐತಿಹಾಸಿಕ ಕವಿತೆಯ ವರ್ಷಪೂರ್ತಿ ಆಚರಣೆ ಭಾಗವಾಗಿ ಲೋಕಸಭೆಯಲ್ಲಿ 'ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಮೇಲಿನ ಚರ್ಚೆ' ಎಂಬ ಶೀರ್ಷಿಕೆಯಡಿ ಕಲಾಪ ನಡೆಯುತ್ತಿದೆ. ಇದರ ಚರ್ಚೆಗೆ ಬರೋಬ್ಬರಿ 10 ಗಂಟೆಗಳ ಕಾಲಾವಕಾಶ ಮೀಸಲಿಡಲಾಗಿದೆ. ಈ ಚರ್ಚೆಯು ರಾಷ್ಟ್ರೀಯ ಗೀತೆಯ ಕುರಿತಾದ "ಹಲವು ಪ್ರಮುಖ ಮತ್ತು ಅಜ್ಞಾತ ಸಂಗತಿಗಳನ್ನು" ಅನಾವರಣಗೊಳಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಈಗ ಏಕೆ ಚರ್ಚೆ?
ಕಳೆದ ತಿಂಗಳು ʼವಂದೇ ಮಾತರಂʼನ 150ನೇ ವರ್ಷಾಚರಣೆಗೆ ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ʼವಂದೇ ಮಾತರಂʼ ಹಾಡಿನ ಪ್ರಮುಖ ಚರಣವೊಂದನ್ನು 1937ರಲ್ಲಿ ಫೈಜಾಬಾದ್ ಸಭೆಯಲ್ಲಿ ತೆಗೆದು ಹಾಕಲಾಗಿತ್ತು. ಜನರ ಮನಸ್ಸಿನಲ್ಲಿ ದೇಶ ವಿಭಜನೆ ವಿಷ ಬೀಜ ಬಿತ್ತುವ ಉದ್ದೇಶದಿಂದ ಚರಣ ಕೈ ಬಿಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಮೂಲ ಕಾರಣ ಎಂದು ದೂರಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಇದು ದೇಶ ವಿಭಜನೆಯ ಉದ್ದೇಶ ಇಟ್ಟುಕೊಂಡು ತೆಗೆದುಕೊಂಡ ನಿರ್ಧಾರವಲ್ಲ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್, ರಾಜೇಂದ್ರ ಪ್ರಸಾದ್, ಸರೋಜಿನಿ ನಾಯ್ಡು ಸೇರಿ ಹಲವು ಪ್ರಮುಖರಿದ್ದ ಕಾರ್ಯಕಾರಿ ಸಮಿತಿಯೇ ʼವಂದೇ ಮಾತರಂʼ ಗೀತೆಯಲ್ಲಿ ಬದಲಾವಣೆ ತರಲು ಮುಂದಾಗಿತ್ತು. ಮೊದಲ ಎರಡು ಚರಣಗಳು ಮಾತ್ರ ರಾಷ್ಟ್ರೀಯತೆ ಸಾರುತ್ತವೆ. ಇತರೆ ಚರಣಗಳು ಧಾರ್ಮಿಕ ಚಿತ್ರಣ ಹೊಂದಿರುವ ಕಾರಣ ಕೆಲವು ನಾಗರಿಕರಿಂದ ವಿರೋಧ ವ್ಯಕ್ತವಾಗಿರುವುದು ಸಮಿತಿಯ ಗಮನಕ್ಕೆ ಬಂದಿತ್ತು. ಹೀಗಾಗಿ ಸಮಿತಿಯೇ ಆ ಚರಣಗಳನ್ನು ಕೈಬಿಡುವ ನಿರ್ಧಾರಕ್ಕೆ ಬಂದಿತ್ತು. ಪ್ರಧಾನಿ ಸುಖಾಸುಮ್ಮನೆ ಬೇಡದ ವಿಚಾರ ಚರ್ಚೆಗೆಳೆಯುತ್ತಿದ್ದಾರೆ ಎಂದು ಕಿಡಿಕಾರಿತ್ತು.
ದೇಶದಲ್ಲಿ ತಲೆದೋರಿರುವ ನಿರುದ್ಯೋಗ, ಅಸಮಾನತೆ, ವಿದೇಶಿ ನೀತಿ ಸವಾಲುಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಬದಲು ಪ್ರಧಾನಿ ಮೋದಿಯವರು ಭಾರತದ ಸ್ವಾತಂತ್ರ್ಯ ಹೋರಾಟ ಪರಂಪರೆಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.ಈ ರಾಜಕೀಯ ವಾಕ್ಸಮರ ಇದೀಗ ಸಂಸತ್ ಅಂಗಳಕ್ಕೆ ಬರುವಂತಾಗಿದೆ.
ವಂದೇ ಮಾತರಂ ಹುಟ್ಟು(1870–1880)
ಹಾಗಿದ್ದರೆ ವಂದೇ ಮಾತರಂ ಹೇಗೆ ಹುಟ್ಟಿಕೊಂಡಿತು ಮತ್ತು ಅದು ಹೇಗೆ ಜನಜನಿತವಾಯಿತು ಎಂಬುದನ್ನು ನೋಡುವುದಾದರೆ ಇದರ ಬಗ್ಗೆ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅರಬಿಂದೋ ಅವರ ಲೇಖನದಲ್ಲಿ ಪ್ರಸ್ತಾಪ ಆಗಿತ್ತು. ಇದರ ಬೆನ್ನಲ್ಲೇ ಬಂಕಿಮ್ ಚಂದ್ರ ಚಟರ್ಜಿಯವರ ಕಾದಂಬರಿ ಆನಂದಮಠದ ನಂತರ ಇದು ಬಹಳ ವ್ಯಾಪಕವಾಗಿ ಪ್ರಚಾರ ಪಡೆದುಕೊಂಡಿತು.
ದೇಶವನ್ನು ದಾಸ್ಯಮುಕ್ತಗೊಳಿಸಲು ತಮ್ಮನ್ನು ತಾವೇ ದೇಶಕ್ಕೆ ಅರ್ಪಿಸಿಕೊಂಡಿದ್ದ ಕೆಲವು ಸನಾತನಿಗಳು, ಬಲ ಪಂಥೀಯ ಕಾರ್ಯಕರ್ತರು ಈ ಗೀತೆಯನ್ನು ದೇಶಭಕ್ತಿಗೀತೆಯನ್ನಾಗಿ ಪ್ರಚಾರಗೊಳಿಸಿದರು. ಈ ಗೀತೆಯನ್ನು ಕೇವಲ ಒಂದು ಧರ್ಮಕ್ಕೆ ಸಂಬಂಧಿಸಿದ ಗೀತೆಯನ್ನಾಗಿ ಮಾಡುವ ಉದ್ದೇಶ ಅವರದ್ದಾಗಿರಲಿಲ್ಲ. ಆದರೆ ಅನೇಕ ವಿಮರ್ಶಕರು ಈ ಗೀತೆಯಲ್ಲಿ ಎರಡು ಚರಣಗಳಲ್ಲಿ ಹಿಂದೂ ದೇವತೆಗಳ ಉಲ್ಲೇಖ ಇದೆ. ಹೀಗಾಗಿ ಇದು ಸಮುದಾಯಗಳ ನಡುವೆ ಧಾರ್ಮಿಕ ಭಿನ್ನತೆ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ಹಾಡೇ ಘೋಷಣೆಯಾಗಿ ಬದಲಾಯ್ತು (1900–1910)
ವಂದೇ ಮಾತರಂ ಹಾಡು ಒಂದು ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಬದಲಾಯಿತು. 1905ರಲ್ಲಿ ಲಾರ್ಡ್ ಕರ್ಜನ್ ಅವರ ಬಂಗಾಳ ವಿಭಜನೆ ಸಮಯದಲ್ಲಿ ಈ ಘೋಷಣೆ ಪ್ರಮುಖ ಪಾತ್ರ ವಹಿಸಿತ್ತು. 10ಸಾವಿರಕ್ಕೂ ಅಧಿಕ ಹಿಂದೂ, ಮುಸ್ಲಿಮರು ಜಂಟಿಯಾಗಿ ಬೀದಿಗಿಳಿದು ಹೋರಾಟ ನಡೆಸಿ ವಂದೇ ಮಾತರಂ ಘೋಷಣೆ ಕೂಗಿದ್ದರು.
ಇದಾದ ನಂತರ ಬಂಗಾಳದಿಂದ ಬಾಂಬೆ ಪ್ರಾಂತ್ಯದವರೆಗೆ ವಂದೇ ಮಾತರಂ ಜನಜನಿತ ಘೋಷಣೆಯಾಗಿ ಬದಲಾಯಿತು. 1907ರಲ್ಲಿ ಮೇಡಂ ಬೀಕಾಜಿ ಕಾಮಾ ಅವರು ಮೊದಲ ಬಾರಿಗೆ ವಂದೇ ಮಾತರಂ ಎಂಬ ಘೋಷಣೆ ಇರುವ ತ್ರಿವರ್ಣ ಧ್ವಜವನ್ನು ಜರ್ಮನಿಯ ಸ್ಟಟ್‌ಗರ್ಟ್ ನಗರದಲ್ಲಿ ಹಾರಿಸಿದರು.
ವಂದೇ ಮಾತರಂ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಕಾಂಗ್ರೆಸ್ ವಂದೇ ಮಾತರಂ ಅನ್ನು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ, ವಿಧ್ಯುಕ್ತವಾಗಿಯೂ ಅಳವಡಿಸಿಕೊಂಡಿತು.
1896-ಮೊದಲ ಕಾಂಗ್ರೆಸ್ ಪ್ರತಿಷ್ಠಾಪನೆ: ಕಲ್ಕತ್ತಾ ಅಧಿವೇಶನದಲ್ಲಿ, ರವೀಂದ್ರನಾಥ ಟ್ಯಾಗೋರ್ ಹಾಡನ್ನು ಹಾಡುವ ಮೂಲಕ ಅದಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ನೀಡಿದರು.
1905 ರಾಷ್ಟ್ರವ್ಯಾಪಿ ದತ್ತು: ವಾರಣಾಸಿ ಅಧಿವೇಶನದಲ್ಲಿ, ಕಾಂಗ್ರೆಸ್ ಔಪಚಾರಿಕವಾಗಿ ದೇಶವ್ಯಾಪಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಅಳವಡಿಸಿಕೊಂಡಿತು.
1937ರ CWC ನಿರ್ಧಾರ: ಚರಣ ತೆಗೆದುಹಾಕಲಾಯಿತೇ?
1930ರ ಹೊತ್ತಿಗೆ, ಹಾಡಿನ ಧಾರ್ಮಿಕ ಚಿತ್ರಣದ ಸುತ್ತಲಿನ ಚರ್ಚೆಗಳು ರಾಜಕೀಯ ಸ್ವರೂಪ ಪಡೆದುಕೊಂಡಿತು. ಭಾರತದ ರಾಷ್ಟ್ರೀಯತಾವಾದಿ ನಾಯಕತ್ವವು ಚಳವಳಿಯನ್ನು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಮುಂದಾಯಿತು. ಮುಸ್ಲಿಂ ನಾಯಕರು ಹಿಂದೂ ದೇವತೆಗಳನ್ನು ಆಹ್ವಾನಿಸುವ ಕೆಲವು ಚರಣಗಳಿಗೆ ಆಕ್ಷೇಪಣೆಗಳನ್ನು ಎತ್ತಿದರು. ಇದಾದ ನಂತರ ಈ ಸಮಸ್ಯೆಗೆ ಪರಿಹಾರ ರೂಪವಾಗಿ CWC ಕೆಲವೊಂದು ಪ್ರಮುಖ ನಿರ್ಧಾರ ತೆಗೆದುಕೊಂಡು ಕೆಲವು ಘೋಷಣೆ ಮಾಡಿತು.
- ಮೊದಲ ಎರಡು ಚರಣಗಳು ವ್ಯಾಪಕವಾಗಿ ಬಳಕೆಯಾಗುತ್ತಿದ್ದವು ಮತ್ತು ಯಾವುದೇ ವಿವಾದಾತ್ಮಕ ಚಿತ್ರಣ ಹೊಂದಿಲ್ಲ.
- ಉಳಿದ ಚರಣಗಳು ಇತರ ಧಾರ್ಮಿಕ ಗುಂಪುಗಳ ನಂಬಿಕೆಗಳಿಗೆ ಹೊಂದಿಕೆಯಾಗದ ಧಾರ್ಮಿಕ ಸಿದ್ಧಾಂತವನ್ನು ಒಳಗೊಂಡಿವೆ.
- ರಾಷ್ಟ್ರೀಯ ಸಭೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು.
- ಸಂಘಟಕರು ಬಯಸಿದರೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬಹುದಾಗಿದೆ.
- ಬಿಜೆಪಿ ಈ ವಿಷಯಕ್ಕೆ ಈಗ ಏಕೆ ಪ್ರಾಮುಖ್ಯತೆ ಕೊಡುತ್ತಿದೆ?
ಕಾಂಗ್ರೆಸ್‌ನ ಹೊಂದಾಣಿಕೆ, ಓಲೈಕೆ ರಾಜಕೀಯವನ್ನು ಆಗಾಗೆ ಎತ್ತಿ ತೋರಿಸುವ ಬಿಜೆಪಿಗೆ ವಂದೇ ಮಾತರಂ ಕೂಡ ಒಂದು ಅಸ್ತ್ರವಾಗಿ ಕಂಡಿದೆ. ಕಾಂಗ್ರೆಸ್ ಒಂದು ಸಮುದಾಯದ ಓಲೈಕೆಗಾಗಿ ರಾಷ್ಟ್ರೀಯ ಗೀತೆಯನ್ನು ಹೇಗೆ ಬದಲಿಸಿತು ಎಂಬುದನ್ನು ಜನರೆದುರು ತೋರಿಸುವುದೇ ಬಿಜೆಪಿಯ ಪ್ರಮುಖ ಉದ್ದೇಶ. ವಂದೇ ಮಾತರಂಗೆ 150 ವರ್ಷ ಪೂರೈಸಿರುವ ಈ ಸಂದರ್ಭ ಬಿಜೆಪಿ ಸೂಕ್ತ ವಾತಾವರಣ ಕಲ್ಪಿಸಿದೆ.
ಕಾಂಗ್ರೆಸ್ ಪ್ರತಿತಂತ್ರ ಏನು?
- ವಂದೇ ಮಾತರಂ ಹಾಡನ್ನು ಮೊದಲು ಎತ್ತಿ ಹಿಡಿದ, ಐತಿಹಾಸಿಕ ಕ್ಷಣಗಳಲ್ಲಿ ಅದನ್ನು ಹಾಡಿದ ಮತ್ತು ವಂದೇ ಮಾತರಂ ಘೋಷಣೆ ಕೂಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪಕ್ಷ ತಮ್ಮದು ಎಂಬುದು ಕಾಂಗ್ರೆಸ್ ವಾದ.
- 1937 ರ ನಿರ್ಧಾರವು ಧರ್ಮವಿಭಜನೆ ಉದ್ದೇಶ ಹೊಂದಿಲ್ಲ ಬದಲಾಗಿ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಎಂದು ಕಾಂಗ್ರೆಸ್ ಹೇಳುತ್ತದೆ.
- ಸಮಕಾಲೀನ ಆಡಳಿತ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಇತಿಹಾಸವನ್ನು ಅಸ್ತ್ರವಾಗಿ ಬಳಸುತ್ತಿದೆ.
ಜಮಿಯತ್ ಉಲಮಾ-ಇ-ಹಿಂದ್ ಹೇಳುವುದೇನು?
ಮೌಲಾನಾ ಮಹಮೂದ್ ಮದನಿ ನೇತೃತ್ವದ ಜಮಿಯತ್ ಉಲಮಾ-ಇ-ಹಿಂದ್, ವಂದೇ ಮಾತರಂ ಚರ್ಚೆಯ ಬಗ್ಗೆ ಬದ್ಧ ನಿಲುವನ್ನು ಹೊಂದಿದೆ. ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳು ದೇಶಭಕ್ತಿಯನ್ನು ಸಾರುವಂತಿದೆ. ಅದನ್ನು ಸ್ವಾಗತಿಸಲಾಗುತ್ತದೆ. ಆದರೆ ಉಳಿದ ಚರಣಗಳಲ್ಲಿ ಹಿಂದೂ ದೇವತೆಗಳ ಉಲ್ಲೇಖವಿದೆ. ಅಲ್ಲಾಹನನ್ನು ಹೊರತುಪಡಿಸಿ ಬೇರೆ ದೇವರನ್ನು ಆರಾದಿಸುವ ಪದ್ಯಗಳು ನಿಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿವೆ ಎಂದು ಜಮಿಯತ್‌ನ ಹೇಳಿಕೆ ತಿಳಿಸಿದೆ.

