
ದಕ್ಷಿಣ ಪಿನಾಕಿನಿ: ಕಾವೇರಿ ಹಾದಿಯಲ್ಲೇ ʼಜಲ ಸಂಕಟʼ: ಸುಪ್ರೀಂ ಆದೇಶದಿಂದ ಕರ್ನಾಟಕಕ್ಕೆ ಹಿನ್ನಡೆ
ದಕ್ಷಿಣ ಪಿನಾಕಿನಿ ನದಿಯು ಪೂರ್ವಕ್ಕೆ ಹರಿದು ತಮಿಳುನಾಡು ಮೂಲಕ ಬಂಗಾಲಕೊಲ್ಲಿ ಸೇರುತ್ತದೆ. ವಿವಾದದ ಕೇಂದ್ರಬಿಂದುವಾಗಿರುವುದು ಇದರ ಉಪನದಿ ಮಾರ್ಕಂಡೇಯ ನದಿಗೆ ಕರ್ನಾಟಕ ಸರ್ಕಾರವು ನಿರ್ಮಿಸಿರುವ ಚೆಕ್ ಡ್ಯಾಂಗಳು.
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಲವಿವಾದಗಳ ಇತಿಹಾಸದಲ್ಲಿ ಮತ್ತೊಂದು ಹೊಸ ಅಧ್ಯಾಯ ಸೋಮವಾರ (ಫೆಬ್ರುವರಿ 2ರಂದು) ತೆರೆದುಕೊಂಡಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದದ ಸದಾ ಬಿಸಿಯಾಗಿರುವ ನಡುವೆಯೇ ಈಗ 'ದಕ್ಷಿಣ ಪಿನಾಕಿನಿ' (ಪೆನ್ನಾರ್) ನದಿ ವಿವಾದವೂ ಮುನ್ನೆಲೆಗೆ ಬಂದಿದೆ.
ಅದಕ್ಕೆ ಕಾರಣ, ಸೋಮವಾರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು. ನದಿ ನೀರು ಹಂಚಿಕೆ ವಿವಾದ ಇತ್ಯರ್ಥಪಡಿಸಲು ಒಂದು ತಿಂಗಳೊಳಗೆ 'ಜಲವಿವಾದ ನ್ಯಾಯಮಂಡಳಿ' ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಕರ್ನಾಟಕದ ಪಾಲಿಗೆ ಕಾನೂನಾತ್ಮಕ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ಏನಾದರೂ ಟ್ರಿಬ್ಯೂನಲ್ ರಚನೆಯಾದರೆ ಕರ್ನಾಟಕ ಸರ್ಕಾರವು ಈ ನದಿಯಲ್ಲಿ ತನ್ನ ಪಾಲನ್ನು ಪಡೆಯಲು ದಾಖಲೆಗಳು ಹಾಗೂ ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ. ಹೀಗಾಗಿ ನದಿಯ ನೀರನ್ನು ಪಡೆಯುವ ಹಲವಾರು ಚೆಕ್ಡ್ಯಾಮ್ಗಳ ಯೋಜನೆಗೆ ಹಿನ್ನಡೆ ಉಂಟಾಗುವ ಎಲ್ಲ ಸಾಧ್ಯತೆಗಳಿವೆ.
ನೀರಾವರಿ ತಜ್ಱ ಕ್ಯಾಪ್ಟನ್ ರಾಜಾರಾವ್ ಅವರು ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಸುಪ್ರೀಂ ಕೋರ್ಟ್ನ ತೀರ್ಪಿನ ಬಗ್ಗೆ ಮಾತನಾಡಿ, "ಸರ್ವೋಚ್ಛ ನ್ಯಾಯಾಲಯ ನ್ಯಾಯಾಧಿಕರಣ ರಚನೆ ಮಾಡಲು ನಿರ್ದೇಶನ ನೀಡುವುದರಿಂದ ಯಾವುದೇ ರಾಜ್ಯಕ್ಕೆ ಹಿನ್ನಡೆ ಅಥವಾ ಮುನ್ನಡೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಕರ್ನಾಟಕ ಸರ್ಕಾರಕ್ಕೆ ಸವಾಲು ಎದುರಾಗುವುದೇ ನ್ಯಾಯಾಧೀಕರಣದ ಮುಂದೆ ಸಮರ್ಥವಾಗಿ ವಾದ ಮಂಡಿಸುವ ವಿಚಾರದಲ್ಲಿ. ಕರ್ನಾಟಕ ಸರ್ಕಾರ ಟ್ರಿಬ್ಯೂನಲ್ ಮುಂದೆ ಸಮರ್ಥವಾಗಿ ವಾದ ಮಂಡಿಸುವ ವಕೀಲರ ನೇಮಕಕ್ಕೆ ಗಮನ ಹರಿಸಬೇಕು ಹಾಗೂ ದಾಖಲೆಗಳನ್ನು ನೀಡುವಾಗಲೂ ಹೆಚ್ಚಿನ ಬದ್ಥತೆಯನ್ನು ತೋರಿಸಬೇಕು, ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾಗಿರುವ ಬಗ್ಗೆ ಕರ್ನಾಟಕ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಮುಂದಿನ ಹೋರಾಟದ ಬಗ್ಗೆ ಹಾಗೂ ನ್ಯಾಯಾಧಿಕರಣ ರಚನೆಯಾದರೆ ಅಲ್ಲಿನ ಅವಕಾಶಗಳ ಬಗ್ಗೆ ಸಿದ್ಧತೆ ನಡೆಸಲು ಕಾನೂನು ತಂಡ ಸಿದ್ದತೆ ನಡೆಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ದಕ್ಷಿಣ ಪಿನಾಕಿನಿ ವಿವಾದ? ಯಾಕೆ ತಮಿಳುನಾಡಿನ ತಗಾದೆ?
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಉಗಮಿಸುವ ದಕ್ಷಿಣ ಪಿನಾಕಿನಿ ನದಿಯು ಪೂರ್ವಕ್ಕೆ ಹರಿದು ತಮಿಳುನಾಡು ಮೂಲಕ ಬಂಗಾಲಕೊಲ್ಲಿ ಸೇರುತ್ತದೆ. ಆದರೆ, ವಿವಾದದ ಕೇಂದ್ರಬಿಂದುವಾಗಿರುವುದು ಈ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಕರ್ನಾಟಕ ಸರ್ಕಾರವು ನಿರ್ಮಿಸಿರುವ ಚೆಕ್ ಡ್ಯಾಂಗಳು.
ವಿಶೇಷವಾಗಿ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ತಾಲೂಕುಗಳ ಕುಡಿಯುವ ನೀರಿನ ಬವಣೆ ನೀಗಿಸಲು ರಾಜ್ಯ ಸರ್ಕಾರವು ಮಾಲೂರು ತಾಲೂಕಿನ ಯರಗೋಳದಲ್ಲಿ ಬೃಹತ್ ಚೆಕ್ ಡ್ಯಾಂ (ಜಲಾಶಯ) ನಿರ್ಮಿಸಿದೆ. ಸುಮಾರು 240 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಜಲಾಶಯಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯವೂ ಅನುಮೋದನೆ ನೀಡಿತ್ತು. ಆದರೆ, ಕರ್ನಾಟಕದ ಈ ಕ್ರಮವನ್ನು ವಿರೋಧಿಸಿ ತಮಿಳುನಾಡು ಸರ್ಕಾರ 2018ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ತಮಿಳುನಾಡಿನ ತಗಾದೆ ಏನು?
"ಅಂತರರಾಜ್ಯ ನದಿಗಳು ರಾಷ್ಟ್ರೀಯ ಆಸ್ತಿ. ಇದರ ಮೇಲೆ ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸಲು ಸಾಧ್ಯವಿಲ್ಲ," ಎಂಬುದು ತಮಿಳುನಾಡಿನ ಪ್ರಬಲ ವಾದ. ಕರ್ನಾಟಕವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಮತ್ತು ನದಿ ನೀರನ್ನು ತಿರುಗಿಸುವುದರಿಂದ, ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ನೆರೆ ರಾಜ್ಯದ ಸರ್ಕಾರದ ಆರೋಪ.
ತಮಿಳುನಾಡಿನಲ್ಲಿ ಈ ನದಿಯನ್ನು 'ಪೊನ್ನೈಯರ್' ಎಂದು ಕರೆಯಲಾಗುತ್ತದೆ. ಇದು ಕಾವೇರಿ ನಂತರದ ಅಲ್ಲಿನ ಎರಡನೇ ಅತಿ ಉದ್ದದ ನದಿ. ಹೊಸೂರು ಬಳಿಯ ಕೆಲವರಪಲ್ಲಿ ಜಲಾಶಯ ಮತ್ತು ತಿರುವಣ್ಣಾಮಲೈ ಬಳಿಯ ಸಾತನೂರ್ ಅಣೆಕಟ್ಟುಗಳಿಗೆ ಈ ನದಿಯೇ ಆಧಾರ. ಹೀಗಾಗಿ, ಮೇಲ್ಭಾಗದಲ್ಲಿ ಕರ್ನಾಟಕ ಯಾವುದೇ ಕಾಮಗಾರಿ ನಡೆಸಿದರೂ ಕೆಳಭಾಗದ ಹರಿವು ಕಡಿಮೆಯಾಗುತ್ತದೆ ಎಂದು ತಮಿಳುನಾಡು ತಕರಾರು ಎತ್ತಿದೆ.
ನ್ಯಾಯಮಂಡಳಿ ರಚನೆ: ಕರ್ನಾಟಕಕ್ಕೆ ಏಕೆ ಹಿನ್ನಡೆ?
ಯಾವುದೇ ಅಂತರರಾಜ್ಯ ನದಿ ವಿವಾದದಲ್ಲಿ 'ನ್ಯಾಯಮಂಡಳಿ' ರಚನೆಯಾದರೆ, ಅದು ಅಂತಿಮವಾಗಿ ನೀರಿನ ನಿರ್ದಿಷ್ಟ ಪ್ರಮಾಣವನ್ನು ಹಂಚಿಕೆ ಮಾಡುತ್ತದೆ. ಕಾವೇರಿ ವಿಷಯದಲ್ಲಿ ನೀರು ಹಂಚಿಕೆಯ ಸೂತ್ರವೇ ಇದಕ್ಕೆ ಉತ್ತಮ ಉದಾಹರಣೆ.
ಕೇಂದ್ರ ಜಲಶಕ್ತಿ ಸಚಿವರು ಇತ್ತೀಚೆಗೆ ಕರೆದಿದ್ದ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಧಾನ ಸಭೆ ಕರೆದಿತ್ತು. ಅದನ್ನು ತಮಿಳುನಾಡು ಸರ್ಕಾರ ತಿರಸ್ಕರಿಸಿತ್ತು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕರ್ನಾಟಕ ಸಿದ್ಧವಿತ್ತಾದರೂ ಕಾನೂನಿನ ಮೊರೆ ಹೋಗುವುದೇ ತಮಿಳುನಾಡು ಸರ್ಕಾರದ ಕೊನೆಯ ನಿರ್ಧಾರವಾಗಿತ್ತು. ಆದರೆ, ಸರ್ವೋಚ್ಛ ನ್ಯಾಯಾಲಯದ ಆದೇಶದದಂತೆ ನ್ಯಾಯಮಂಡಳಿ ರಚನೆಯಾಗುತ್ತಿರುವುದರಿಂದ, ವಿವಾದವು ಸಂಪೂರ್ಣವಾಗಿ ಕಾನೂನಿನ ಚೌಕಟ್ಟಿಗೆ ಒಳಪಡುತ್ತದೆ.
ಕರ್ನಾಟಕಕ್ಕೆ ಇನ್ನೊಂದು ಆತಂಕ ಏನೆಂದರೆ, ನ್ಯಾಯಮಂಡಳಿ ವಿಚಾರಣೆ ನಡೆಯುವಾಗ, ಯರಗೋಳ ಜಲಾಶಯ ಸೇರಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಅಥವಾ ಯೋಜಿತ ಕಾಮಗಾರಿಗಳಿಗೆ ತಡೆ ನೀಡುವ ಅಥವಾ ನೀರಿನ ಬಳಕೆಯ ಮೇಲೆ ಮಿತಿ ಹೇರುವ ಸಾಧ್ಯತೆಗಳಿರುತ್ತವೆ. ಹೀಗಾದರೆ, ಕರ್ನಾಟಕದ ಹಾಲಿ ಉದ್ದೇಶಗಳಿಗೆ ಸಮಸ್ಯೆ ಎದುರಾಗುತ್ತದೆ.
ತಮಿಳುನಾಡು ತನ್ನಲ್ಲಿನ 20,000 ಚ.ಕಿ.ಮೀ.ಗೂ ಅಧಿಕ ಜಲಾನಯನ ಪ್ರದೇಶದ ವಿಸ್ತೀರ್ಣವನ್ನು ಮುಂದಿಟ್ಟುಕೊಂಡು ಹೆಚ್ಚು ನೀರಿಗಾಗಿ ಬೇಡಿಕೆ ಇಡುತ್ತಿದೆ. ನ್ಯಾಯಾಧಿಕರಣದ ಮುಂದೆಯೂ ಅದೇ ಬೇಡಿಕೆ ಮುಂದುವರಿಯಲಿದೆ. ಕರ್ನಾಟಕದಲ್ಲಿ ಇದರ ಜಲಾನಯನ ಪ್ರದೇಶ ಕೇವಲ 3,687 ಚದರ ಕಿಲೋಮೀಟರ್ ಮಾತ್ರವಿದ್ದು ಈ ನಿಟ್ಟಿನಲ್ಲಿಯೂ ನೀರಿನ ಹಂಚಿಕೆಯಲ್ಲಿ ಹಿನ್ನಡೆ ಉಂಟಾಗಬಹುದು.
ಮಾಲಿನ್ಯ ಮತ್ತು ವಾಸ್ತವ
ಇಲ್ಲಿನ ಮತ್ತೊಂದು ಆಸಕ್ತಿದಾಯದ ಹಾಗೂ ಕಟು ವಾಸ್ತವ ಏನೆಂದರೆ ನದಿ ನೀರಿನ ಗುಣಮಟ್ಟ. ದಕ್ಷಿಣ ಪಿನಾಕಿನಿ ನದಿ ಕಣಿವೆಯ ವ್ಯಾಪ್ತಿಯಲ್ಲೇ ಬೆಂಗಳೂರಿನ ಕುಖ್ಯಾತ ಕಲುಷಿತಗೊಂಡಿರುವ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿವೆ. ಬೆಂಗಳೂರಿನ ಸಂಸ್ಕರಿಸದ ತ್ಯಾಜ್ಯ ನೀರು, ಕೈಗಾರಿಕಾ ತ್ಯಾಜ್ಯಗಳು ಈ ನದಿಯ ಮೂಲಕವೇ ತಮಿಳುನಾಡು ಸೇರುತ್ತಿವೆ.
ಪರಿಸರವಾದಿ ಸಿ. ಚೌಡಪ್ಪ ಅವರು ದ ಫೆಡರಲ್ ಕರ್ನಾಟಕದ ಜತೆ ಇತ್ತೀಚೆಗೆ ಮಾತನಾಡಿ, "ಬೆಂಗಳೂರಿನ ಕಲುಷಿತ ನೀರು ತಮಿಳುನಾಡಿನ ಕೆಳವಾರಿಪಲ್ಲಿ ಜಲಾಶಯ ಸೇರುತ್ತಿದೆ. ಅಲ್ಲಿ ಅದು ತಿಳಿಗೊಂಡು ಸಾತನೂರ್ ಜಲಾಶಯಕ್ಕೆ ಹರಿಯುತ್ತದೆ. ಇದೇ ನೀರಿನಿಂದ ತಮಿಳುನಾಡು ರೈತರು ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಶುದ್ಧ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ನಿರ್ಮಿಸಿದ ಯರಗೋಳ ಜಲಾಶಯಕ್ಕೆ ತಮಿಳುನಾಡು ಅಡ್ಡಿಪಡಿಸುತ್ತಿದೆ." ಇದು ಒಕ್ಕೂಟ ವ್ಯವಸ್ಥೆಯ ವಿಪರ್ಯಾಸವೇ ಸರಿ.
ಬಯಲುಸೀಮೆಯ ಕನಸು ಭಗ್ನ?
ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಶಾಶ್ವತ ಬರಪೀಡಿತ ಪ್ರದೇಶಗಳು. ಅಂತರ್ಜಲ ಕುಸಿತದಿಂದ ತತ್ತರಿಸಿರುವ ಈ ಭಾಗಕ್ಕೆ ಯರಗೋಳ ಜಲಾಶಯ ಒಂದು ಸಂಜೀವಿನಿ.. ಕುಡಿಯುವ ನೀರಿಗಾಗಿಯೇ ಮೀಸಲಿಟ್ಟ ಈ ಯೋಜನೆಯೂ ಈಗ ಎರಡು ರಾಜ್ಯಗಳ ಕಾನೂನು ವ್ಯಾಪ್ತಿಯಲ್ಲಿ ಸಿಲುಕಿರುವುದು ದುರದೃಷ್ಟಕರ. ಈಗಾಗಲೇ ಎತ್ತಿನಹೊಳೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದು, ಈ ಪ್ರದೇಶದ ಜನರಲ್ಲಿ ನಿರಾಶೆ ಮೂಡಿಸಿದೆ. ಈಗ ದಕ್ಷಿಣ ಪಿನಾಕಿನಿಗೂ ಟ್ರಿಬ್ಯೂನಲ್ ರಚನೆಯಾಗುವುದರಿಂದ ಕುಡಿಯುವ ನೀರಿನ ಯೋಜನೆಗೆ ಇನ್ನಷ್ಟು ಹಿನ್ನಡೆಯಾಗುವ ಸಾಧ್ಯತೆಗಳಿವೆ.
ಮುಂದೇನಾಗಬಹುದು? ಕರ್ನಾಟಕದ ಆತಂಕವೇನು?
ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಒಂದು ತಿಂಗಳೊಳಗೆ ನ್ಯಾಯಮಂಡಳಿ ರಚಿಸಬೇಕಿದೆ. ಇದರರ್ಥ, ಇನ್ನು ಕೆಲವೇ ದಿನಗಳಲ್ಲಿ ಕಾವೇರಿ ಮಾದರಿಯಲ್ಲೇ ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆಗಾಗಿ ಕಾನೂನು ಹೋರಾಟದ ಸುದೀರ್ಘ ಕಲಾಪಗಳು ಆರಂಭವಾಗಲಿವೆ. ರಾಜ್ಯ ಸರ್ಕಾರವು ಈಗ ಸಮರ್ಥವಾಗಿ ವಾದ ಮಂಡಿಸಲು ಬೇಕಾದ ತಾಂತ್ರಿಕ ದಾಖಲೆಗಳು, ಮಳೆಯ ಪ್ರಮಾಣ, ನೀರಿನ ಲಭ್ಯತೆ ಮತ್ತು ಕುಡಿಯುವ ನೀರಿನ ಅಗತ್ಯತೆಯ ಬಗ್ಗೆ ನಿಖರ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಕಾವೇರಿ ವಿಚಾರದಲ್ಲಿ ಆದಂತೆ, ಇಲ್ಲೂ ಕೂಡ ಭಾವನಾತ್ಮಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ, ವಾಸ್ತವಿಕ ಅಂಕಿ-ಅಂಶಗಳೇ ರಾಜ್ಯದ ಹಿತರಕ್ಷಣೆಗೆ ಅಸ್ತ್ರವಾಗಬೇಕಿದೆ. ರಾಜಾರಾವ್ ಅವರು ಹೇಳುವ ಪ್ರಕಾರ, ನ್ಯಾಯಾಧಿಕರಣ ರಚನೆಯನ್ನೇ ಹಿನ್ನಡೆ ಎಂದು ಭಾವಿಸದೇ ಅಲ್ಲಿ ತನ್ನ ಪಾಲನ್ನು ಪಡೆಯಲು ಇರುವ ಅವಕಾಶವನ್ನು ಬಳಕೆ ಮಾಡಿಕೊಳ್ಳಬೇಕಾಗಿದೆ.

