
ದಕ್ಷಿಣ ಪಿನಾಕಿನಿ ನದಿ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ.
ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್‌ನಿಂದ ಇಂದು ಮಹತ್ವದ ತೀರ್ಪು
ಕರ್ನಾಟಕ ಸರ್ಕಾರವು ದಕ್ಷಿಣ ಪಿನಾಕಿನಿ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ಮತ್ತು ಬೆಂಗಳೂರಿನ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಯೋಜನೆಗಳನ್ನು ತಮಿಳುನಾಡು ವಿರೋಧಿಸುತ್ತಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು (ಸೋಮವಾರ) ಪ್ರಕಟಿಸಲಿದೆ. ಅಂತರರಾಜ್ಯ ಜಲವಿವಾದವಾಗಿ ಮಾರ್ಪಟ್ಟಿರುವ ಈ ಪ್ರಕರಣದ ತೀರ್ಪು ಉಭಯ ರಾಜ್ಯಗಳ ಪಾಲಿಗೂ ನಿರ್ಣಾಯಕವಾಗಿದೆ.
ವಿವಾದದ ಹಿನ್ನೆಲೆ ಏನು?
ದಕ್ಷಿಣ ಪಿನಾಕಿನಿ ನದಿ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ.ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಯೋಜನೆ ಮತ್ತು ಬ್ಯಾಲಹಳ್ಳಿ ಗ್ರಾಮದ ಬಳಿ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕರ್ನಾಟಕ ಕೈಗೆತ್ತಿಕೊಂಡಿದೆ.
ಈ ಯೋಜನೆಗಳಿಂದ ತನ್ನ ರಾಜ್ಯಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ವ್ಯತ್ಯಯವಾಗಲಿದೆ ಎಂದು ಆರೋಪಿಸಿರುವ ತಮಿಳುನಾಡು, ಕರ್ನಾಟಕದ ಯೋಜನೆಗಳಿಗೆ ತಡೆ ನೀಡಬೇಕೆಂದು ಕೋರಿ 2018ರ ಮೇ 18ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ನ್ಯಾಯಮಂಡಳಿಗೆ ತಮಿಳುನಾಡು ಪಟ್ಟು:
ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಲು ಕಾವೇರಿ ಜಲವಿವಾದದ ಮಾದರಿಯಲ್ಲೇ ಪ್ರತ್ಯೇಕ 'ಜಲವಿವಾದ ನ್ಯಾಯಮಂಡಳಿ'ಯನ್ನು (Water Disputes Tribunal) ಸ್ಥಾಪಿಸಬೇಕೆಂಬುದು ತಮಿಳುನಾಡು ಸರ್ಕಾರದ ಪ್ರಮುಖ ವಾದವಾಗಿದೆ.
ಸಂಧಾನ ವಿಫಲ:
ನ್ಯಾಯಮಂಡಳಿ ರಚನೆ ಸಂಬಂಧ ತಮಿಳುನಾಡು ಸರ್ಕಾರವು 2019ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪರಿಗಣಿಸಿ ಕೇಂದ್ರ ಜಲಶಕ್ತಿ ಸಚಿವಾಲಯವು 2020ರಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳೊಂದಿಗೆ ಸಂಧಾನ ಸಭೆಯನ್ನೂ ನಡೆಸಿತ್ತು. ಆದರೆ, ಈ ಸಭೆಯಲ್ಲಿ ಯಾವುದೇ ಒಮ್ಮತ ಮೂಡದ ಕಾರಣ ಸಮಸ್ಯೆ ಇತ್ಯರ್ಥವಾಗಿರಲಿಲ್ಲ. ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಇಂದು ತಮಿಳುನಾಡು ಸಲ್ಲಿಸಿರುವ ಅರ್ಜಿಯ ಅಂತಿಮ ತೀರ್ಪನ್ನು ಪ್ರಕಟಿಸಲಿದೆ.

