Save Tigers- Part 1| ಅರಣ್ಯ ಇಲಾಖೆ ಎಡವಟ್ಟು; ಸಂತಾನೋತ್ಪತ್ತಿ ಸಮಯದಲ್ಲೇ 27 ಹುಲಿಗಳ ಸೆರೆ
x
ತಾಯಿ ಹುಲಿಯೊಂದಿಗೆ ಮರಿಗಳು ಸಂಗ್ರಹ ಚಿತ್ರ

Save Tigers- Part 1| ಅರಣ್ಯ ಇಲಾಖೆ ಎಡವಟ್ಟು; ಸಂತಾನೋತ್ಪತ್ತಿ ಸಮಯದಲ್ಲೇ 27 ಹುಲಿಗಳ ಸೆರೆ

ಸೆರೆ ಹಿಡಿದ 27 ಹುಲಿಗಳಲ್ಲಿ ನಾಲ್ಕು ಹುಲಿಗಳು ಗಾಯಗೊಂಡಿವೆ. ಗರ್ಭ ಧರಿಸಬೇಕಾಗಿದ್ದ 12 ಹೆಣ್ಣು ಹುಲಿಗಳು ಸೇರಿ ಉಳಿದ 23 ಹುಲಿಗಳನ್ನು ಕಾಡಿನ ಮಧ್ಯಭಾಗಕ್ಕೆ ಬಿಡಲಾಗಿದೆ.


Click the Play button to hear this message in audio format

ಬಂಡೀಪುರ, ನಾಗರಹೊಳೆ ಹಾಗೂ ಬಿಳಿಗಿರಿ ರಂಗನ ಬೆಟ್ಟದ (BRT) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾರ್ಗಸೂಚಿ ಪಾಲಿಸದೇ ಸಮರೋಪಾದಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಂತಾನೋತ್ಪತ್ತಿ ಸಮಯದಲ್ಲೇ ಹುಲಿಗಳನ್ನು ಸೆರೆ ಹಿಡಿದು, ಸ್ಥಳಾಂತರಿಸಿರುವುದು ಅವೈಜ್ಞಾನಿಕ ಕಾರ್ಯಾಚರಣೆಗೆ ಹಿಡಿದ ಕನ್ನಡಿಯಂತಿದೆ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯು ಹುಲಿಗಳ ಮಿಲನ ಕಾಲ. ಹೆಣ್ಣು ಹುಲಿಗಳು ಗರ್ಭ ಧರಿಸಲು ಅಣಿಯಾಗಿರುತ್ತವೆ. ಈ ಅವಧಿಯಲ್ಲಿ ಗಂಡು ಹುಲಿಗಳು ಮಿಲನಕ್ಕಾಗಿ ಹೆಣ್ಣು ಹುಲಿಗಳನ್ನು ಹುಡುಕಿಕೊಂಡು ಬರಲಿವೆ. ಆದರೆ, ಇದೇ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಗಳನ್ನು ಸೆರೆ ಹಿಡಿದು, ಅವುಗಳ ನೈಸರ್ಗಿಕ ಕ್ರಿಯೆಗೆ ಅಡ್ಡಿಪಡಿಸಿರುವುದು ಹುಲಿಗಳ ವಂಶಾಭಿವೃದ್ಧಿಗೆ ಕಂಟಕವಾಗಿದೆ ಎಂಬುದು ವನ್ಯಜೀವಿ ಪ್ರಿಯರ ಕಳವಳಕ್ಕೆ ಕಾರಣವಾಗಿದೆ. ಈ ಬಗ್ಗೆ ದ ಫೆಡರಲ್‌ ಕರ್ನಾಟಕ ಬೆಳಕು ಚೆಲ್ಲಲು ಯತ್ನಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್‌ನಿಂದ ಜನವರಿವರೆಗೆ ಸೆರೆ ಹಿಡಿದಿರುವ 27ಹುಲಿಗಳಲ್ಲಿ ಗಾಯಗೊಂಡಿರುವ ನಾಲ್ಕು ಹುಲಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಗರ್ಭ ಧರಿಸಬೇಕಾಗಿದ್ದ 12 ಹೆಣ್ಣು ಹುಲಿಗಳು ಸೇರಿ ಉಳಿದ 23 ಹುಲಿಗಳನ್ನು ಕಾಡಿನ ಮಧ್ಯೆ ಭಾಗಕ್ಕೆ ಬಿಡಲಾಗಿದೆ. ಸ್ಥಳ ಬದಲಾವಣೆಯಿಂದ ಹುಲಿಗಳ ನಾನಾ ರೀತಿಯ ಸಂಕಷ್ಟಕ್ಕೆ ಒಳಗಾಗಲಿವೆ. ಕೆಲವೊಮ್ಮೆ ಖಿನ್ನತೆಗೆ ಒಳಗಾಗಿ ಸಾಯುವ ಹಂತ ತಲುಪಲಿವೆ. ಹುಲಿಗಳ ಜೀವನ ಕ್ರಮದ ಅರಿವಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳ ಸಣ್ಣ ನಿರ್ಲಕ್ಷ್ಯದಿಂದ ಅವುಗಳ ಸಂತತಿಯೇ ಕ್ಷೀಣಿಸಬಹುದು ಎಂದು ವನ್ಯಜೀವಿ ಪ್ರಿಯರು ಆರೋಪಿಸಿದ್ದಾರೆ.

"ಗಂಡು- ಹೆಣ್ಣು ಹುಲಿಗಳ ಮಿಲನ ಕಾಲದಲ್ಲಿ ಕಾದಾಟ ನಡೆಯಲಿದೆ. ಗಂಡು ಹುಲಿಯ ವ್ಯಾಘ್ರತೆಯ ಅರಿವಿರುವ ಹೆಣ್ಣು ಹುಲಿಗಳು ತಮ್ಮ ಮರಿಗಳನ್ನು ರಕ್ಷಿಸಿಕೊಳ್ಳಲು ಕಾಡಂಚಿನ ಗ್ರಾಮಗಳ ಹೋಗುತ್ತವೆ. ಆಗಲೇ ಮಾನವ - ಪ್ರಾಣಿ ಸಂಘರ್ಷದ ಸನ್ನಿವೇಶ ಸೃಷ್ಟಿಯಾಗುತ್ತದೆ. ಜಾನುವಾರುಗಳ ಮೇಲೆ ಹುಲಿಗಳು ದಾಳಿ ನಡೆಸಿದಾಗ ಪ್ರತೀಕಾರವಾಗಿ ಕಿಡಿಗೇಡಿಗಳು ವಿಷ ಪ್ರಾಶನ ಮಾಡಿ ಹುಲಿಗಳನ್ನು ಕೊಲ್ಲುತ್ತಿರುವುದನ್ನು ಈಗಾಗಲೇ ನೋಡಿದ್ದೇವೆ. ಒಂದೆಡೆ ಅರಣ್ಯ ಇಲಾಖೆ ಅವೈಜ್ಞಾನಿಕ ಕ್ರಮಗಳು, ಮತ್ತೊಂದೆಡೆ ಕಿಡಿಗೇಡಿಗಳ ಬೇಟೆ, ವಿಷಪ್ರಾಶನದಂತ ಕುಕೃತ್ಯಗಳಿಂದ ಹುಲಿ ಸಂತತಿ ಕ್ಷೀಣಿಸಲಿದೆ ಎಂದು ವನ್ಯಜೀವಿ ಪ್ರಯರಾದ ಜೋಸೆಫ್‌ ಹೂವರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಪ್ರಾಣಿ- ಮಾನವ ಸಂಘರ್ಷ ಹೊಸದಲ್ಲ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೊಸದೇನಲ್ಲ. ಇತ್ತೀಚೆಗೆ ಹುಲಿಗಳು ನಾಡಿನತ್ತ ಬಂದು, ದಾಳಿ ಮಾಡುತ್ತಿವೆ. ಹುಲಿಗಳನ್ನು ಸೆರೆ ಹಿಡಿಯುವಂತೆ ಜನಸಾಮಾನ್ಯರು ಒತ್ತಡ ಹಾಕಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಆತುರದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಎನ್‌ಟಿಸಿಎ ಮಾನದಂಡ ಅನುಸರಿಸಿಲ್ಲ.

ಮನುಷ್ಯರ ಮೇಲೆ ದಾಳಿ ನಡೆಸಿದ ಹುಲಿಯನ್ನು ಪತ್ತೆ ಹಚ್ಚದೇ ಏಕಾಏಕಿ ಎಲ್ಲ ಹುಲಿಗಳ ಸೆರೆಗೆ ಮುಂದಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಯಾಗಿದೆ ಎಂದು ವನ್ಯಜೀವಿ ಪರ ಹೋರಾಟಗಾರ ಜೋಸೆಫ್‌ ಹೂವರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಿದ ಬಳಿಕ ವ್ಯಾಘ್ರಗಳ ಸೆರೆ ಕಾರ್ಯಾಚರಣೆಗೆ ಒತ್ತಡ ಬಂದಿತು. ಜನಸಾಮಾನ್ಯರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ, ದಾಳಿ ಮಾಡಿದ ನಿರ್ದಿಷ್ಟ ಹುಲಿಯನ್ನು ಪತ್ತೆ ಮಾಡದೇ ಓತಪ್ರೋತವಾಗಿ ಎಲ್ಲ ಹುಲಿಗಳನ್ನು ಹಿಡಿದಿರುವುದು ಕಳವಳಕಾರಿಯಾಗಿದೆ. ಹುಲಿ ಸೆರೆ ಹಿಡಿಯುವಾಗ ʼಪ್ರಮಾಣಿತ ಕಾರ್ಯಾಚರಣೆ ವಿಧಾನʼ (SOP) ಅನುಸರಿಸದ ಕಾರಣಕ್ಕೆ ಈಗಾಗಲೇ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಅರಣ್ಯ ಇಲಾಖೆಯಿಂದ ಸ್ಪಷ್ಟನೆ ಕೇಳಿದೆ. ಹುಲಿ ಕಾರ್ಯಾಚರಣೆ ವಿಧಾನವನ್ನು ಪ್ರಶ್ನಿಸಿದೆ ಎಂದು ಹೂವರ್‌ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಹೇಳುವುದೇನು?

ʼಕಾಡಂಚಿನ ಗ್ರಾಮಗಳಲ್ಲಿ ಪ್ರಾಣ ಹಾನಿ ತಡೆಯುವುದು ಮೊದಲ ಆದ್ಯತೆ. ಇತ್ತೀಚೆಗೆ ಹುಲಿ ದಾಳಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು. ಹತ್ತು ದಿನಗಳ ಅಂತರದಲ್ಲಿ ಮೂವರು ಹುಲಿ ದಾಳಿಗೆ ಬಲಿಯಾಗಿದ್ದರು. ಹಾಗಾಗಿ, ಕಾರ್ಯಾಚರಣೆ ಆರಂಭಿಸಿದೆವು. ಪ್ರತಿಯೊಂದು ಹುಲಿಯನ್ನು ಸೆರೆ ಹಿಡಿಯುವಾಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿಯೇ ಕಾರ್ಯಾಚರಣೆ ನಡೆಸಲಾಗಿದೆʼ ಎಂಬುದು ಮುಖ್ಯ ವನ್ಯಜೀವಿ ಪಾಲಕ ಕುಮಾರ್ ಪುಷ್ಕರ್ ಅವರ ಸಮರ್ಥನೆ.

ಹುಲಿ ಸೆರೆ ಕಾರ್ಯಾಚರಣೆ (ಸಂಗ್ರಹ ಚಿತ್ರ)

ಆದರೆ, ಅರಣ್ಯ ಅಧಿಕಾರಿಗಳ ಸಮರ್ಥನೆ ಒಪ್ಪದ ವನ್ಯಜೀವಿ ಪ್ರಿಯರು, ʼಹುಲಿ ಸೆರೆ ಕಾರ್ಯಾಚರಣೆ ವೇಳೆ ಯಾವುದೇ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅನುಸರಿಸಿಲ್ಲ. ಎಲ್ಲಾ ಕಡೆಯಿಂದಲೂ ಕಾರ್ಯಾಚರಣೆ ಆರಂಭಿಸಿದ್ದರಿಂದ ಗಾಬರಿಗೊಂಡ ಹುಲಿಗಳು ದಾಳಿ ಮಾಡಿ ಮೂವರನ್ನು ಬಲಿ ಪಡೆದಿವೆ. ಇದಕ್ಕೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣʼ ಎಂದು ಜೋಸೆಫ್‌ ಹೂವರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಹುಲಿ ಸೆರೆಯ ಮಾನದಂಡಗಳೇನು?

ಹುಲಿ ಸೆರೆ ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ʼಪ್ರಮಾಣಿತ ಕಾರ್ಯಾಚರಣೆ ವಿಧಾನʼ ಅನುಸರಿಸಬೇಕು ಎಂಬುದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳುತ್ತದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ರಾತ್ರಿ ವೇಳೆ ಹುಲಿಗಳನ್ನು ಸೆರೆಹಿಡಿಯುವಂತಿಲ್ಲ. ಆದರೆ, ಕರ್ನಾಟಕದ ಅರಣ್ಯ ಇಲಾಖೆ ಈ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಲಿ ಸೆರೆ ಹಿಡಿಯುವಾಗ ಸಾಕಾನೆ, ನುರಿತ ಸಿಬ್ಬಂದಿ, ಡ್ರೋನ್ ಕ್ಯಾಮೆರಾ ಅಥವಾ ಥರ್ಮಲ್ ಕ್ಯಾಮೆರಾಗಳನ್ನು ಬಳಸಬೇಕು. ದಟ್ಟ ಪೊದೆಗಳಲ್ಲಿ ಕೂಂಬಿಂಗ್ (ಪತ್ತೆ ಕಾರ್ಯಾಚರಣೆ) ನಡೆಸುವಾಗ ಬೋನಿನೊಂದಿಗೆ ಪಶುವೈದ್ಯರು, ಶೂಟರ್‌ಗಳ ತಂಡ ಸಿದ್ಧವಿರಬೇಕು. ಹುಲಿಯ ಚಲನವಲನ ಪತ್ತೆ ಮಾಡಿ ಅಗತ್ಯವಿದ್ದರಷ್ಟೇ ಅರವಳಿಕೆ ಮದ್ದು ನೀಡಬೇಕು. ಸೆರೆ ಹಿಡಿದ ಬಳಿಕ ಹುಲಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಕಾಡಿನಲ್ಲಿ ಸೂಕ್ತವಾದ ಪ್ರದೇಶಕ್ಕೆ ಬಿಡಬೇಕು. ಬಿಟ್ಟ ನಂತರ ಆ ಹುಲಿಯ ಚಲನವಲನದ ಮೇಲೆ ನಿಗಾ ಇಡಬೇಕು ಎಂಬ ಮಾನದಂಡಗಳಿವೆ.

ಕಾಡಿನ ಮಧ್ಯಭಾಗದಲ್ಲಿ ಬಿಟ್ಟ ಹುಲಿಗಳು ಏನಾಗಿವೆ, ಯಾವ ರೀತಿ ಹೊಂದಿಕೊಂಡಿವೆ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿಲ್ಲ. ತನ್ನದೇ ಆದ ಭೌಗೋಳಿಕ ವ್ಯಾಪ್ತಿ ಸೃಷ್ಟಿಸಿಕೊಂಡಿರುವ ಹುಲಿಗಳನ್ನು ಸ್ಥಳಾಂತರಿಸಿದರೆ ಬೇರೆ ಹುಲಿಗಳ ಜತೆ ಸಂಘರ್ಷಕ್ಕೆ ಇಳಿಯಲಿವೆ. ಕೆಲ ಹುಲಿಗಳ ಖಿನ್ನತೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಆತಂಕವಿದೆ ಎಂದು ವನ್ಯಜೀವಿ ಪ್ರಿಯರಾದ ಜೋಸೆಫ್‌ ಹೂವರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಹಸಿರು ಅಭಿವೃದ್ಧಿಯಲ್ಲೂ ಲೋಪ

ಅರಣ್ಯ ಇಲಾಖೆಯಲ್ಲಿ ಗ್ರಾಸ್‌ಲ್ಯಾಂಡ್‌ ಡೆವಲಪ್‌ಮೆಂಟ್‌(ಹಸಿರು ಹಾಸು ಅಭಿವೃದ್ಧಿ ಯೋಜನೆ) ಯೋಜನೆಯಿದೆ. ಕಾಡಂಚಿನ ಗ್ರಾಮಸ್ಥರನ್ನು ಬಳಸಿಕೊಂಡು ಹಸಿರು ಬೆಳೆಸುವುದು ಇದರ ಉದ್ದೇಶ. ಇದರಿಂದ ಹುಲಿಗಳ ಆವಾಸ ಸ್ಥಾನ ಕಾಪಾಡಬಹುದು. ಕಾಡಿನಲ್ಲಿ ಬೆಳೆದಿರುವ ಲಂಟಾನ( ಬೇಲಿ) ತೆರವುಗೊಳಿಸಿ ಹಸಿರು ಬೆಳೆಸಬೇಕು. ಎನ್‌ಟಿಸಿಎ ವತಿಯಿಂದ ಒಂದು ಎಕರೆ ಭೂಮಿಯಲ್ಲಿ ಹಸಿರು ಬೆಳೆಸಲು 10 ಸಾವಿರ ಅನುದಾನ ನೀಡಲಾಗುತ್ತದೆ. ಕಳೆದ ವರ್ಷ ಗ್ರಾಸ್‌ಲ್ಯಾಂಡ್‌ ಅಭಿವೃದ್ಧಿಗಾಗಿಯೇ ಎನ್‌ಟಿಸಿಎ ಸುಮಾರು 1.70 ಕೋಟಿ ರೂ. ಒದಗಿಸಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಜನರಿಂದ ಮಾಡಿಸಿದರೆ ವಿಳಂಬವಾಗಬಹುದು ಎಂಬ ಕಾರಣ ಜೆಸಿಬಿಗಳನ್ನು ಬಳಸಿದ್ದಾರೆ ಎಂದು ಜೋಸೆಫ್‌ ಹೂವರ್‌ ಆರೋಪಿಸಿದ್ದಾರೆ.

ಜೆಸಿಬಿಗಳಿಂದ ಪೊದೆಗಳ ನಾಶ ಸೇರಿದಂತೆ ಇಡೀ ಭೂ ರಚನೆಯನ್ನು ಸಮತಟ್ಟು ಮಾಡಲಿದೆ. ಇದರಿಂದ ಹುಲಿಗಳು ಆಶ್ರಯ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡಲಿವೆ. ಅಧಿಕಾರಿಗಳ ಈ ಅವೈಜ್ಞಾನಿಕ ಕ್ರಮದಿಂದಲೂ ಹುಲಿಗಳ ಸಂತತಿ ಕ್ಷೀಣಿಸುವ ಆತಂಕವಿದೆ ಎಂದು ದೂರಿದ್ದಾರೆ.

ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಕಾರ್ಯಾಚರಣೆಗೂ ಮೊದಲೇ ಎನ್‌ಟಿಸಿಎ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಪ್ರಾಧಿಕಾರ ಮೊದಲೇ ಎಚ್ಚೆತ್ತುಕೊಂಡಿದ್ದರೆ ಕಾಡಂಚಿನ ಗ್ರಾಮಗಳಿಗೆ ಹುಲಿಗಳು ಲಗ್ಗೆ ಇಡುತ್ತಿರಲಿಲ್ಲ. ಈಗ ಹುಲಿ ಸೆರೆ ಹಿಡಿಯುತ್ತಿರುವುದನ್ನು ಪ್ರಶ್ನಿಸುತ್ತಿದೆ. ಎಲ್ಲಾ ಮುಗಿದ ಮೇಲೆ ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೂವರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆರೆ ಹಿಡಿದ ಹುಲಿಗಳನ್ನು ಕಾಡಿನ ಮಧ್ಯೆ ಅಥವಾ ಬೇರೆ ಸ್ಥಳಗಳಿಗೆ ಬಿಡುವುದರಿಂದ ಬೇರೆ ಹುಲಿಗಳೊಂದಿಗೆ ಸರಹದ್ದು ಸಂಘರ್ಷ ನಡೆಯಲಿದೆ. ಅರಣ್ಯ ಅಧಿಕಾರಿಗಳು ಮಾನವ- ಪ್ರಾಣಿ ಸಂಘರ್ಷ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರಾಣಿ ಸಂಪತ್ತು ಹಾಗೂ ಜೀವ ವೈವಿಧ್ಯ ಸಂರಕ್ಷಿಸಲು ಆಗದ ಅಧಿಕಾರಿಗಳು ಮನೆಗೆ ಹೋಗಲಿ ಎಂದು ಹೂವರ್‌ ಕಿಡಿಕಾರಿದ್ದಾರೆ.

ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚು ಏಕೆ?

ಕರ್ನಾಟಕಕ್ಕೆ ಹೋಲಿಸಿದರೆ ಮಧ್ಯಪ್ರದೇಶದಲ್ಲಿಅರಣ್ಯ ವ್ಯಾಪ್ತಿ ದೊಡ್ಡದಿದೆ. ನಮ್ಮದು ತುಂಡು ಅರಣ್ಯ. ಸತ್ಯಮಂಗಲಂ, ಎಂ.ಎಂ. ಹಿಲ್ಸ್‌, ಕಾವೇರಿ ವನ್ಯಧಾಮದಿಂದ ಬೆಂಗಳೂರಿನ ಬನ್ನೇರುಘಟ್ಟದವರೆಗೆ ಅರಣ್ಯ ಕಾರಿಡಾರ್‌ ಇದೆ. ಆದರೆ, ಇತ್ತೀಚೆಗೆ ಅರಣ್ಯ ಇಲಾಖೆ ಇಕೋ ಟೂರಿಸಂ ಸೇರಿದಂತೆ ಅನಗತ್ಯ ಹಸ್ತಕ್ಷೇಪದಿಂದ ಹುಲಿಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗುತ್ತಿದೆ.

ಈ ಮೊದಲು ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಮೂರು ವರ್ಷಗಳ ಹಿಂದೆ ಮಧ್ಯಪ್ರದೇಶ ಹಾಗೂ ಕರ್ನಾಟಕದ ಹುಲಿಗಳ ಸಂಖ್ಯೆಯಲ್ಲಿ ಕೇವಲ ಒಂದೇ ಸಂಖ್ಯೆ ಏರುಪೇರಾಗಿತ್ತು. ಆದರೆ, ಮಧ್ಯಪ್ರದೇಶವು ಹೆಚ್ಚುವರಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಸೇರಿಸಿಕೊಂಡ ಪರಿಣಾಮ ವ್ಯಾಪ್ತಿ ಹಿಗ್ಗಿದೆ. ಪ್ರಸ್ತುತ, ಮಧ್ಯಪ್ರದೇಶದಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಕರ್ನಾಟಕದಲ್ಲಿ ಕೇವಲ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಇತ್ತೀಚೆಗೆ ಕುದುರೆಮುಖ, ಎಂ.ಎಂ.ಹಿಲ್ಸ್‌ ‌ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವ ಮೂಲೆ ಸೇರಿದೆ, ನಮ್ಮಲ್ಲಿ 1000 ಹುಲಿಗಳು ಇರುವಷ್ಟು ಅರಣ್ಯ ವ್ಯಾಪ್ತಿ ಇದೆ. ಆದರೆ, ಕರ್ನಾಟಕದಲ್ಲಿ ಕೇವಲ 640 ಹುಲಿಗಳಿವೆ ಎನ್ನಲಾಗಿದೆ.

Read More
Next Story