Save Tigers - Part 2| ಬದಲಾದ ಆವಾಸ, ಇಲ್ಲ ಸಂಗಾತಿ ಸಹವಾಸ! ಕಾಡಲ್ಲಿ ಬಿಟ್ಟ ಹುಲಿಗಳಿಗೆ ಕಾಡಲಿದೆ ಖಿನ್ನತೆ! ಅರಣ್ಯ ಇಲಾಖೆ ಅವಾಂತರ?
x
ಆಹಾರ ಹುಡುಕುತ್ತಾ ಸಾಗಿರುವ ಹುಲಿ - ಸಂಗ್ರಹ ಚಿತ್ರ

Save Tigers - Part 2| ಬದಲಾದ ಆವಾಸ, ಇಲ್ಲ ಸಂಗಾತಿ ಸಹವಾಸ! ಕಾಡಲ್ಲಿ ಬಿಟ್ಟ ಹುಲಿಗಳಿಗೆ ಕಾಡಲಿದೆ ಖಿನ್ನತೆ! ಅರಣ್ಯ ಇಲಾಖೆ ಅವಾಂತರ?

Save Tigers: ಅರಣ್ಯ ಇಲಾಖೆ ಮನಬಂದಂತೆ ಹುಲಿಗಳನ್ನು ಹಿಡಿದು ಅಜ್ಞಾತ ಸ್ಥಳಗಳಿಗೆ ಬಿಟ್ಟಿದೆ. ಬಳಿಕ ಅವುಗಳ ಚಲನವಲನ ಗಮನಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎನುತ್ತಾರೆ ವನ್ಯಜೀವಿ ತಜ್ಞರು.


Click the Play button to hear this message in audio format

ಬಂಡೀಪುರ, ನಾಗರಹೊಳೆ ಹಾಗೂ ಬಿಳಿಗಿರಿ ರಂಗನ ಬೆಟ್ಟದಲ್ಲಿ 27 ಹುಲಿಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ ಕಾಡಿನ ಮಧ್ಯೆ ಬಿಟ್ಟಿರುವ 23 ಹುಲಿಗಳಿಗೆ ಬದುಕು ಕಟ್ಟಿಕೊಳ್ಳುವ ಹೊಸ ಸವಾಲು ಎದುರಾಗಿದೆ!

ಕಾಡಿನಲ್ಲಿ ತನ್ನದೇ ಗಡಿ ಗುರುತಿಸಿಕೊಂಡು ವಿಹರಿಸುತ್ತಿದ್ದ ಹುಲಿಗಳು ಇದೀಗ ದಟ್ಟಾರಣ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕಾಡಂಚಿನ ಗ್ರಾಮಗಳ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಹೋಗಿ ವ್ಯಾಘ್ರಗಳನ್ನೇ ತೊಂದರೆಯಲ್ಲಿ ಸಿಲುಕಿಸಿದೆ ಅರಣ್ಯ ಇಲಾಖೆ. ವಾಸಸ್ಥಾನ ಬದಲಾಗುವುದರಿಂದ ಹೊಸ ಗಡಿ ಗುರುತಿಸಿಕೊಳ್ಳುವ ಸವಾಲು ಹುಲಿಯ ಎದುರು ಇರಲಿದೆ. ಒಂದು ವೇಳೆ ಬದಲಾದ ಸ್ಥಳವು ಬೇರೆ ಹುಲಿಯ ಗಡಿಯಾಗಿದ್ದರೆ ಅದರೊಂದಿಗೆ ಕಾದಾಟ ನಡೆಸಬೇಕಾದ ಅನಿವಾರ್ಯತೆ ಇರಲಿದೆ. ಇನ್ನು ನೀರು, ಆಹಾರಕ್ಕಾಗಿ ಪರಿತಪಿಸಲಿವೆ. ಕೆಲ ಹುಲಿಗಳು ಒಂಟಿತನದಿಂದ ಖಿನ್ನತೆಗೂ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರಲಿದೆ.

ಅರಣ್ಯ ಇಲಾಖೆ ಮನಬಂದಂತೆ ಹುಲಿಗಳನ್ನು ಹಿಡಿದು ಅಜ್ಞಾತ ಸ್ಥಳಗಳಿಗೆ ಬಿಟ್ಟಿದೆ. ಬಿಟ್ಟ ನಂತರ ಅವುಗಳ ಚಲನವಲನ ಗಮನಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸ್ಥಳಾಂತರಿಸಿರುವ ಪ್ರದೇಶದಲ್ಲಿ ಹುಲಿಗಳ ಪರಿಸ್ಥಿತಿ ಹೇಗಿದೆ, ಅವು ಹೊಂದಿಕೊಂಡಿವೆಯೋ ಅಥವಾ ಗಡಿಗಾಗಿ ಇತರೆ ಹುಲಿಗಳೊಂದಿಗೆ ಕಾದಾಟ ನಡೆಸುತ್ತಿವೆಯೇ ಎಂಬುದನ್ನು ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಸೋತಿದೆ. ಸೆರೆ ಹಿಡಿದ ಹುಲಿಗಳಿಗೆ ರೇಡಿಯೋ ಕಾಲರ್‌ ಅಳವಡಿಸಿ ಚಲನವಲನ ನಿಗಾ ವಹಿಸಬಹುದು ಎಂಬ ಮಾತುಗಳು ಕೇಳಿ ಬಂದರೂ ಹುಲಿ ಸಂರಕ್ಷಣಾ ಪ್ರಾಧಿಕಾರಿಗಳು ರೇಡಿಯೋ ಕಾಲರ್‌ ಅಳವಡಿಕೆಗೆ ಅನುಮತಿ ಅಷ್ಟು ಸುಲಭವಲ್ಲ. ಜತೆಗೆ ಎಲ್ಲ ಹುಲಿಗಳಿಗೂ ರೇಡಿಯೋ ಕಾಲರ್‌ ಅಳವಡಿಸುವುದು ಕಾರ್ಯಸಾಧುವೂ ಅಲ್ಲ ಎನ್ನಲಾಗಿದೆ.

ಹುಲಿಗಳ ಗಡಿ ಹೇಗಿರಲಿದೆ?

ಕಾಡುಗಳಲ್ಲಿ ಹೆಣ್ಣು ಹುಲಿಯು 10 ರಿಂದ 15 ಚದರ ಕಿ.ಮೀ. ವ್ಯಾಪ್ತಿಯಲ್ಲಿ ತನ್ನ ಭೌಗೋಳಿಕ ವ್ಯಾಪ್ತಿ (ಟೆರಿಟರಿ) ನಿರ್ಮಿಸಿಕೊಂಡು ಮರಿಗಳೊಂದಿಗೆ ವಾಸಿಸುತ್ತದೆ. ಅದೇ ಗಂಡು ಹುಲಿ ಸುಮಾರು 50 ಚದರ ಕಿ.ಮೀ. ಪ್ರದೇಶವನ್ನು ತನ್ನ ಸರಹದ್ದನ್ನಾಗಿ ಮಾಡಿಕೊಂಡಿರಲಿದೆ. ಕಾಡಿನ ವಿಸ್ತಾರಕ್ಕೆ ಅನುಗುಣವಾಗಿ ಹುಲಿಗಳು ಗಡಿ ನಿರ್ಮಿಸಿಕೊಳ್ಳಲಿವೆ. ಅರಣ್ಯ ಪ್ರದೇಶ ವಿಸ್ತಾರವಾಗಿದ್ದರೆ 500 ಚದರ ಕಿ.ಮೀ. ವರೆಗೂ ಗಂಡು ಹುಲಿಗಳ ವ್ಯಾಪ್ತಿ ಇರಲಿದೆ. ಇನ್ನು ನೈಸರ್ಗಿಕವಾಗಿ ವರ್ಷಕ್ಕೊಮ್ಮೆ ವ್ಯಾಘ್ರಗಳು ವಲಸೆ ಹೋಗಲಿವೆ. ಆದರೆ, ಈಗ ಅರಣ್ಯ ಇಲಾಖೆ ಬಲವಂತವಾಗಿ ಹುಲಿಗಳನ್ನು ಗಡಿ ದಾಟಿಸಿರುವ ಹಿನ್ನೆಲೆಯಲ್ಲಿ ಒಗ್ಗಿಕೊಳ್ಳುವುದು ಸವಾಲಾಗಿದೆ.

"ರಾಜ್ಯ ಸರ್ಕಾರವು ಹುಲಿ ಸಂತತಿ ಹೆಚ್ಚುತ್ತಿದೆ ಎಂದು ಹೇಳಿಕೊಂಡರೂ ಅರಣ್ಯದ ವ್ಯಾಪ್ತಿಯನ್ನು ವಿಸ್ತರಿಸುತ್ತಿಲ್ಲ. ಅರಣ್ಯ ಒತ್ತುವರಿಯಾಗುತ್ತಿದೆ. ಅಕ್ರಮ ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಹೀಗಿರುವಾಗ ಆಹಾರ ಅರಸಿ ನಾಡಿನತ್ತ ಹೋಗುವುದು ಅನಿವಾರ್ಯ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹುಲಿಗಳನ್ನು ಸ್ಥಳಾಂತರ ಮಾಡುವುದರಿಂದ ಸರಹದ್ದು ಸಂಘರ್ಷ ಏರ್ಪಡಬಹುದು. ಈ ಕಾದಾಟದಲ್ಲಿ ಗೆದ್ದ ಹುಲಿಯಷ್ಟೇ ನೆಲೆ ಸ್ಥಾಪಿಸಿಕೊಳ್ಳಬಹುದು. ಇಲ್ಲವಾದರೆ, ವಲಸೆ ಮುಂದುವರಿಸಬೇಕು. ಈ ಪಯಣದ ಹಾದಿನಲ್ಲಿ ಹೊಸ ಪ್ರದೇಶ, ಒಂಟಿತನದಿಂದಾಗಿ ಹುಲಿಗಳು ಖಿನ್ನತೆಗೆ ಒಳಗಾಗಲಿವೆ" ಎಂದು ವನ್ಯಜೀವಿ ಪ್ರಿಯರಾದ ಜೋಸೆಫ್‌ ಹೂವರ್‌ ʼದ ಫೆಡರಲ್‌ ಕರ್ನಾಟಕʼ ತಿಳಿಸಿದರು.

ಮೂತ್ರದಿಂದಲೇ ಗಡಿ ಗುರುತು

ಹುಲಿಗಳು ಕಾಡಿನೊಳಗೆ ವಿಶಿಷ್ಟವಾದ ನೈಸರ್ಗಿಕ ವಿಧಾನ ಬಳಸಿಕೊಂಡು ಗಡಿ ಗುರುತಿಸಿಕೊಳ್ಳಲಿವೆ. ಒಂಟಿಯಾಗಿ ಜೀವಿಸುವ ಹುಲಿಯು ತಮ್ಮ ವ್ಯಾಪ್ತಿಗೆ ಇತರರು ಬರದಂತೆ ತಡೆಯಲು ಮೂತ್ರ ಸಿಂಪಡಿಸಲಿವೆ. ಹುಲಿಗಳ ಮೂತ್ರದಲ್ಲಿ ವಿಶೇಷ ಗ್ರಂಥಿಗಳ ಸ್ರವಿಸುವಿಕೆಯೊಂದಿಗೆ ತೀಕ್ಷ್ಣ ವಾಸನೆ ಇರಲಿದೆ. ಇತರೆ ಹುಲಿಗಳು ಈ ವಾಸನೆ ಗ್ರಹಿಸಿಯೇ ಗಡಿ ಅತಿಕ್ರಮಣದಿಂದ ದೂರ ಇರಲಿವೆ.

ಅದೇ ರೀತಿ ಹುಲಿಗಳು ಮರಗಳನ್ನು ಚೂಪಾದ ಉಗುರುಗಳಿಂದ ಕೆರೆದಿರುತ್ತವೆ. ಇತರೆ ಹುಲಿಗಳು ಈ ಸಂಕೇತದಿಂದಲೇ ಪ್ರಬಲ ಹುಲಿಯ ಅಸ್ತಿತ್ವ ಇರಬಹುದು ಎಂದು ಎಚ್ಚರಿಕೆ ವಹಿಸಲಿವೆ. ಇನ್ನು ಹುಲಿಯ ಘರ್ಜನೆ, ನಿರಂತರ ಗಸ್ತು ತಿರುಗುವಿಕೆ ಮೂಲಕವೂ ಗಡಿ ಸಂರಕ್ಷಿಸಿಕೊಳ್ಳಲಿವೆ. ಒಂದೊಮ್ಮೆ ಒಂದೇ ಲಿಂಗದ ಹುಲಿಗಳು ಗಡಿ ಹಂಚಿಕೊಂಡಿದ್ದಾಗ ಭೀಕರ ಕಾಳಗ ನಡೆಯಲಿದೆ. ಸೋತ ಹುಲಿಗಳು ಹೊಸದಾಗಿ ಗಡಿ ನಿರ್ಮಿಸಿಕೊಳ್ಳುವ ಸವಾಲಿನೊಂದಿಗೆ ವಲಸೆ ಹೋಗಲಿದೆ.

ಹುಲಿ ಚಲನವಲನದ ಮೇಲೆ ನಿಗಾ

ಅರಣ್ಯ ಇಲಾಖೆ ಸೆರೆ ಹಿಡಿದಿರುವ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಜಿಪಿಎಸ್‌ ಹಾಗೂ ವಿಎಚ್‌ಎಫ್‌ ಟ್ರಾನ್ಸ್‌ಮಿಟರ್‌ಗಳ ಮೂಲಕ ಅವುಗಳ ಚಲನವಲನ ಮತ್ತು ವ್ಯಾಪ್ತಿ ಗಮನಿಸಲಿದೆ. ಆದರೆ, ರೇಡಿಯೋ ಕಾಲರ್‌ ಅಳವಡಿಸುವುದು ಅಷ್ಟು ಸುಲಭವಲ್ಲ. ನರಹಂತಕ ಹುಲಿ ಅಥವಾ ಅಧ್ಯಯನದ ಸಲುವಾಗಿ ಕೆಲ ಹುಲಿಗಳಿಗೆ ಮಾತ್ರ ರೇಡಿಯೊ ಕಾಲರ್‌ ಅಳವಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅದಕ್ಕೂ ನಾನಾ ರೀತಿಯ ಷರತ್ತುಗಳನ್ನು ಪೂರೈಸಬೇಕು. ರೇಡಿಯೋ ಕಾಲರ್‌ಗಳ ಬ್ಯಾಟರಿ ಬಾಳಿಕೆ ಕೇವಲ ಒಂದೆರಡು ವರ್ಷ ಇರಲಿದೆ. ಕೆಲವೊಮ್ಮೆ ಈ ಕಾಲರ್‌ಗಳು ಹುಲಿಗಳ ಪ್ರಾಣಕ್ಕೂ ಎರವಾಗುವ ಆತಂಕವಿದೆ.

ʼʼಬಲವಂತವಾಗಿ ವಾಸ ಸ್ಥಾನ ಬದಲಿಸಿದರೆ ಹುಲಿಗಳು, ಹೊಸ ಜಾಗದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಆ ಪ್ರದೇಶದಲ್ಲಿ ತಮ್ಮ ವ್ಯಾಪ್ತಿ ಗುರುತಿಸಿಕೊಂಡು ಆಹಾರ, ನೀರು ಪತ್ತೆ ಮಾಡಿಕೊಳ್ಳಬೇಕು. ಸಂಗಾತಿಗಾಗಿ ಅಲೆದಾಡಬೇಕು. ಈ ಪ್ರಕ್ರಿಯೆಯಲ್ಲಿ ಬಹುತೇಕ ಹುಲಿಗಳು ಮಾನಸಿಕವಾಗಿ ಖಿನ್ನತೆಗೊಳಗಾಗಿ ಮೃತಪಡುವ ಸಾಧ್ಯತೆಗಳಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ"ದ (NTCA) ವೆಬ್‌ಸೈಟ್‌ನಲ್ಲಿ ಹುಲಿಗಳ ಸಾವಿನ ಸಂಖ್ಯೆಯನ್ನಷ್ಟೇ ನಮೂದಿಸಲಾಗಿದ್ದು, ಅಸಹಜ ಸಾವಿಗೆ ನಿಖರ ಕಾರಣ ತಿಳಿಸಿಲ್ಲʼʼ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಪ್ರತಿಯೊಂದು ಹುಲಿಯೂ ತನ್ನದೇ ಆದ ವಿಶಿಷ್ಟ ಗುರುತು ಹೊಂದಿರುತ್ತದೆ. ದೇಹದ ಗಾತ್ರ, ಎತ್ತರ ಮಾತ್ರವಲ್ಲದೆ ಹುಲಿಗಳ ಮೈಮೇಲಿನ ಪಟ್ಟೆಗಳು ಭಿನ್ನವಾಗಿರಲಿವೆ. ಮನುಷ್ಯನ ಬೆರಳಚ್ಚು ಪ್ರತಿಯೊಬ್ಬರಿಗೂ ಬೇರೆ ಬೇರೆ ಇರುವಂತೆ, ಹುಲಿಗಳ ಪಟ್ಟೆಗಳು ಮತ್ತು ಚುಕ್ಕೆಗಳ ವಿನ್ಯಾಸವೂ ಒಂದಕ್ಕಿಂತ ಮತ್ತೊಂದು ಭಿನ್ನವಾಗಿರಲಿದೆ. ಇದೇ ಆಧಾರದ ಮೇಲೆ ಇಲಾಖೆಯು ಹುಲಿ ಗಣತಿ ನಡೆಸಲಿದೆ ಎಂದು ವಿವರಿಸಿದರು.

ಆನೆಗೂ, ಹುಲಿಗೂ ವ್ಯತ್ಯಾಸ ಇದೆ

ಹುಲಿ ಮತ್ತು ಆನೆ ಇವೆರೆಡೂ ಕಾಡಿನ ಅತ್ಯಂತ ಶಕ್ತಿಶಾಲಿ ಪ್ರಾಣಿಗಳು. ಆದರೆ, ಇವುಗಳ ಜೀವನಶೈಲಿ, ಆಹಾರ ಕ್ರಮ ಮತ್ತು ಸ್ವಭಾವದಲ್ಲಿ ಆಕಾಶ-ಭೂಮಿಯಷ್ಟು ವ್ಯತ್ಯಾಸ. ಆನೆಗಳು ಗುಂಪು ಗುಂಪಾಗಿ ಇಲ್ಲವೆ ಒಂಟಿಯಾಗಿ ಓಡಾಡುತ್ತವೆ. ಅವುಗಳನ್ನು ಯಾವುದೇ ಅರಣ್ಯಕ್ಕೆ ಬಿಟ್ಟರೂ, ಮತ್ತೆ ತಮ್ಮ ಮೂಲ ಸ್ಥಾನಕ್ಕೆ ಮರಳಿ ಬರಲಿವೆ. ಇಲ್ಲಿ ಹುಲಿಗಳ ಜೀವನವೇ ಬೇರೆ. ತಮ್ಮ ವ್ಯಾಪ್ತಿಯಲ್ಲಷ್ಟೇ ಓಡಾಡುವ ಹುಲಿಗಳು, ಇತರೆ ಹುಲಿಗಳು ತಮ್ಮ ಗಡಿ ಪ್ರವೇಶಿಸದಂತೆ ತಡೆಯುತ್ತವೆ. ಒಂದೇ ಲಿಂಗದ ಹುಲಿಗಳ ಮಧ್ಯೆ ಸದಾ ಕಾದಾಟ ನಡೆಯಲಿವೆ.

ಹುಲಿಗಳು 2 ವರ್ಷದವರೆಗೂ ಮಾತ್ರ ಮರಿಗಳನ್ನು ಸಲಹುತ್ತವೆ. ನಾಚಿಕೆ ಸ್ವಭಾವದ ಹುಲಿಯು ಮನುಷ್ಯರ ಕಣ್ಣಿಗೆ ಬೀಳದಂತೆ ಓಡಾಡುತ್ತವೆ. ಆನೆಗಳಿಂದಲೂ ಅಂತರ ಕಾಯ್ದುಕೊಳ್ಳಲಿವೆ. ಆನೆಗಳು ಖಿನ್ನತೆಗೆ ಒಳಗಾದಾಗ ಒಂದೇ ಕಡೆ ನಿಂತು ತಲೆಯನ್ನು ಎಡ-ಬಲಕ್ಕೆ ಅಲ್ಲಾಡಿಸಲಿವೆ. ಒಂದೇ ದಿಕ್ಕಿನಲ್ಲಿ ಪದೇ ಪದೇ ನಡೆಯಲಿವೆ. ಹುಲಿಗಳು ಖಿನ್ನತೆಗೆ ಒಳಗಾದರೆ ಆಹಾರ ತ್ಯಜಿಸಿ, ಒಂಟಿಯಾಗಿ ತಿರುಗಾಡಲಿವೆ.

ಹುಲಿ ಖಿನ್ನತೆಯ ಲಕ್ಷಣಗಳೇನು?

ಹುಲಿಗಳು ಅತ್ಯಂತ ಬಲವಾದ 'ಗಡಿ' ಪ್ರಜ್ಞೆ ಹೊಂದಿರಲಿವೆ. ತಾವು ಹುಟ್ಟಿ ಬೆಳೆದ ಜಾಗ ಬಿಟ್ಟು ಅಪರಿಚಿತ ಕಾಡಿಗೆ ಹೋದಾಗ ದಿಗಿಲುಗೊಳ್ಳಲಿವೆ. ಹೊಸ ಜಾಗದಲ್ಲಿ ನೀರು ಮತ್ತು ಆಹಾರ ಎಲ್ಲಿ ಸಿಗುತ್ತದೆ ಎಂಬುದು ತಿಳಿದಿರುವುದಿಲ್ಲ. ಅದಾಗಲೇ ಕಾಡಿನಲ್ಲಿರುವ ಮತ್ತೊಂದು ಹುಲಿ ಇವುಗಳ ಮೇಲೆ ದಾಳಿ ಮಾಡಬಹುದು. ಜೀವ ಉಳಿಸಿಕೊಳ್ಳಲು ಹೊಸ ಹುಲಿ ನಿರಂತರವಾಗಿ ಓಡುತ್ತಲೇ ಇರಬೇಕು. ಇದು ತೀವ್ರ ದೈಹಿಕ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಲಿದೆ.


ಗಂಡು ಹುಲಿಗಳು ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳಲು ವರ್ಷಗಟ್ಟಲೇ ಶ್ರಮಿಸಲಿವೆ. ಒಕ್ಕಲೆಬ್ಬಿಸಿದ ಬಳಿಕ ಉಂಟಾಗುವ ಅಲೆದಾಟವು ಅವುಗಳನ್ನು ಮಾನಸಿಕವಾಗಿ ಕುಗ್ಗಿಸಲಿದೆ. ಹುಲಿಯನ್ನು ಸೆರೆಹಿಡಿಯುವಾಗ ನೀಡುವ ಮದ್ದು, ಪಂಜರದೊಳಗೆ ಬಂಧನ ಮತ್ತು ಮನುಷ್ಯರ ಓಡಾಟವು ಭೀತಿ ಹುಟ್ಟಿಸುತ್ತದೆ. ಕುತ್ತಿಗೆಗೆ ಬಿಗಿಯಾದ ರೇಡಿಯೋನಿಂದ ಅವುಗಳ ನೈಸರ್ಗಿಕ ಚಲನೆಗೆ ಅಡ್ಡಿಯಾಗಬಹುದು. ಕಾಲರ್‌ನಿಂದ ಉಂಟಾಗುವ ಗಾಯ ಅಥವಾ ತುರಿಕೆ ನಿರಂತರವಾಗಿ ಕಿರಿಕಿರಿ ಉಂಟು ಮಾಡಲಿದೆ. ಆಹಾರ ಸೇವನೆಯಲ್ಲಿ ಆಸಕ್ತಿ ಕಳೆದುಕೊಳ್ಳಲಿವೆ. ಇದರಿಂದ ಹುಲಿ ಕ್ರಮೇಣ ನಿಸ್ಸಹಾಯಕವಾಗಲಿದೆ.

ಹುಲಿಗಳಲ್ಲಿ ಖಿನ್ನತೆ ಅಥವಾ ಒತ್ತಡ ಕಂಡುಬಂದಾಗ ಬೇಟೆಯಾಡುವುದಿಲ್ಲ. ಆಹಾರ ಬಿಡಲಿವೆ. ವಿಶ್ರಾಂತಿ ಪಡೆಯದೇ ಒಂದೇ ಸಮನೆ ನಡೆಯಲಿವೆ. ಒಂದೇ ಕಡೆ ನಿಸ್ತೇಜವಾಗಿ ಕುಳಿತುಬಿಡುತ್ತವೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ದೂರ ಸರಿಯುವ ಹುಲಿಗಳು, ಅತಿಯಾದ ಒತ್ತಡದಲ್ಲಿದ್ದಾಗ ಯಾವುದಕ್ಕೂ ಪ್ರತಿಕ್ರಿಯಿಸದ ಶೂನ್ಯ ಸ್ಥಿತಿಗೆ ತಲುಪಲಿವೆ. ಒಮ್ಮೊಮ್ಮೆ ಖಿನ್ನತೆಯಲ್ಲಿ ವ್ಯಾಘ್ರರೂಪ ತಾಳುವ ಸಾಧ್ಯತೆಗಳೂ ಇರಲಿವೆ.

ಕರ್ನಾಟಕದಲ್ಲಿ ಎಷ್ಟಿವೆ ಹುಲಿಗಳು?

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಅಂಕಿ ಅಂಶಗಳ ಪ್ರಕಾರ, ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಅಂದಾಜು 110 ಹುಲಿಗಳಿವೆ. ಕಾಡಿನ ಸಾಮರ್ಥ್ಯವು 229 ಹುಲಿಗಳನ್ನು ಹೊಂದುವಷ್ಟಿದೆ. ನಾಗರಹೊಳೆಯಲ್ಲಿ 135 ಹುಲಿಗಳಿವೆ. ಇಲ್ಲಿ 170 ಹುಲಿಗಳು ಇರಬಹುದಾಗಿದೆ. ಬಿಆರ್‌ಟಿಯಲ್ಲಿ 29 ಹುಲಿಗಳಿದ್ದು, 81 ಹುಲಿಗಳು ಇರುವ ಸ್ಥಳಾವಕಾಶವಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 26 ರಿಂದ 35 ಹುಲಿಗಳಿವೆ. ಪ್ರಸ್ತುತ, ಹುಲಿ ಗಣತಿ ನಡೆಯುತ್ತಿದ್ದು, ಗಣತಿ ಪೂರ್ಣವಾದ ಬಳಿಕ ನಿಖರ ಹುಲಿಗಳ ಸಂಖ್ಯೆ ತಿಳಿಯಲಿದೆ.

ಇನ್ನು ಕೆಲವೆಡೆ ಹುಲಿಗಳ ಆವಾಸವು ವ್ಯತಿರಿಕ್ತ ರೀತಿಯಲ್ಲಿದೆ. ಹೆಚ್ಚಿನ ವಿಸ್ತೀರ್ಣವಿರುವೆಡೆ ಕಡಿಮೆ ಹುಲಿಗಳಿವೆ. ಉದಾಹರಣೆಗೆ 1100 ಚದರ ಕಿ.ಮೀ. ವಿಸ್ತೀರ್ಣದ ಕಾವೇರಿ ವನ್ಯಜೀವಿ ಧಾಮದಲ್ಲಿ ಕೇವಲ 2 ಹುಲಿಗಳಿವೆ. ಆದರೆ, 643 ಚದರ ಕಿ.ಮೀ. ಇರುವ ನಾಗರಹೊಳೆಯಲ್ಲಿ 135 ಹುಲಿಗಳಿವೆ. 785 ಚದರ ಕಿ.ಮೀ ಅರಣ್ಯ ಹೊಂದಿರುವ ಬಂಡೀಪುರ ಅರಣ್ಯದಲ್ಲಿ 110 ಹುಲಿಗಳಿವೆ. 906 ಚದರ ಕಿ.ಮೀ ವ್ಯಾಪ್ತಿ ಹೊಂದಿರುವ ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಕೇವಲ 12 ಹುಲಿಗಳಿವೆ. ಇದರೊಂದಿಗೆ ಅರಣ್ಯ ಬಿಟ್ಟು ಕಾಡಿನ ಹೊರಗಿರುವ ಕಾಫಿ ತೋಟ, ರೈತರ ಜಮಿನುಗಳಲ್ಲಿ ಅಂದಾಜು 50 ಹುಲಿಗಳಿವೆ.

ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಮಾತನಾಡಿ, "ವನ್ಯಜೀವಿ ಸಂರಕ್ಷಣೆಯನ್ನು ನಾವೊಬ್ಬರೇ ಮಾಡುತ್ತೇವೆ ಎಂದು ಅರಣ್ಯ ಇಲಾಖೆ ಯೋಚಿಸಿದರೆ, ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಗಳ ಪರಿಸ್ಥಿತಿಯೇ ಅರಣ್ಯಕ್ಕೂ ಬರಲಿದೆ. ಅರಣ್ಯ ಇಲಾಖೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಅರಣ್ಯದ ಸಮತೋಲನ ತಪ್ಪಿದಾಗ ಹುಲಿಗಳು ಕಾಡುಬಿಟ್ಟು, ಹಳೆ ಕ್ವಾರಿಗಳು, ತೋಟಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅರಣ್ಯ ಪ್ರದೇಶದ ವ್ಯಾಪ್ತಿಗೆ ತಕ್ಕಂತೆ ಎಷ್ಟೆಷ್ಟು ವನ್ಯಜೀವಿಗಳಿರಬೇಕು ಎಂಬ ಲೆಕ್ಕವೇ ಇಲಾಖೆಯಲ್ಲಿಲ್ಲ. ಇತ್ತಿಚೆಗೆ ಸೆರೆ ಹಿಡಿದಿದ್ದ ಹುಲಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಅರಣ್ಯ ಇಲಾಖೆ ನೀಡುತ್ತಿಲ್ಲ" ಎಂದು ಅಸಮಾಧಾನ ಹೊರಹಾಕಿದರು.

ನಾಚಿಕೆ ಸ್ವಭಾವದ ಪ್ರಾಣಿ

ʼಸಾಮಾನ್ಯವಾಗಿ ಹುಲಿ ಅವಲಂಬಿತ ಪ್ರಾಣಿಯಲ್ಲ. ಹುಲಿ ಅತ್ಯಂತ ನಾಚಿಕೆ ಸ್ವಭಾವದ ಪ್ರಾಣಿ. ಮನುಷ್ಯ ಇರುವ ಜಾಗಕ್ಕೂ ಅಪ್ಪಿತಪ್ಪಿಯೂ ಬರುವುದಿಲ್ಲ. ‌ಅಲ್ಲದೇ, ಮನುಷ್ಯನ ಮುಖ ನೋಡುವುದಕ್ಕೂ ಇಷ್ಟವಿರುವುದಿಲ್ಲ. ಮನುಷ್ಯರನ್ನು ವಾಸನೆ, ಶಬ್ದದಿಂದಲೇ ಗ್ರಹಿಸಿ, ದೂರ ಹೋಗಲಿವೆ. ಒಂದು ವೇಳೆ ಮನುಷ್ಯ ತೊಂದರೆ ನೀಡಿದರಷ್ಟೇ ಹುಲಿ ದಾಳಿ ಮಾಡುತ್ತದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹಿರಿಯ ಪಶು ವೈದ್ಯ ಡಾ. ಮುಜೀಬ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"ಇನ್ನು ಹುಲಿಗಳ ಲಿಂಗವನ್ನು ದೂರದಿಂದಲೇ ಗುರುತಿಸಲು ಸಾಧ್ಯವಿಲ್ಲ. ಹೆಣ್ಣು ಹುಲಿಯು ಗಂಡು ಹುಲಿಗಿಂತ ಕೊಂಚ ಸಣ್ಣದಾಗಿರಲಿದೆ. ಹೆಣ್ಣು ಹುಲಿ ತನ್ನ ಮರಿಗಳನ್ನು ಎರಡೂವರೆ ವರ್ಷದವರೆಗೆ ಸಲಹಲಿದೆ. ಬಳಿಕ ಮರಿಗಳು ಕೂಡ ತಾಯಿಯಿಂದ ದೂರವಾಗಿ ಸ್ವತಂತ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳಲಿವೆ. ಅಲ್ಲದೇ ತಮ್ಮದೇ ಗಡಿ ನಿರ್ಮಿಸಿಕೊಳ್ಳಲಿವೆ. ಕೇವಲ ಶೇ.10ರಷ್ಟು ಹುಲಿಗಳು ಮಾತ್ರ ಜತೆಯಾಗಿರಲಿವೆ. ಹೀಗಿರುವಾಗ, ಆವಾಸ ಬದಲಾದರೆ ಹುಲಿಗಳು ಖಿನ್ನತೆಗೆ ಒಳಗಾಗಲಿವೆ" ಎಂದು ತಿಳಿಸಿದರು.

ಮೂರನೇ ಹಂತದಲ್ಲಿ ಪ್ರಯೋಗ ಯಶಸ್ವಿ

ಹುಲಿ ಆವಾಸ ಬದಲಾದಾಗ ಅದರ ವರ್ತನೆಯಲ್ಲಿ ಆಗುವ ಬದಲಾವಣೆ ದಾಖಲಿಸಲು ಮಧ್ಯಪ್ರದೇಶದಲ್ಲಿ ಮೊದಲ ಬಾರಿಗೆ ಪ್ರಯೋಗ ನಡೆಸಲಾಯಿತು. ಆದರೆ, ಮೊದಲ ಪ್ರಯೋಗವೇ ವಿಫಲವಾಯಿತು. ಹೊಸ ಜಾಗಕ್ಕೆ ಹುಲಿ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ. ಎರಡನೇ ಬಾರಿಗೆ ನಡೆಸಿದ ಪ್ರಯೋಗದಲ್ಲಿ ಕೊಂಚ ಯಶಸ್ವಿಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಮೂರನೇ ಪ್ರಯೋಗದಲ್ಲಿ ಹುಲಿಗಳಿಗೆ ರೇಡಿಯೋ ಕಾಲರ್ ಹಾಕುವ ಮೂಲಕ ಅವುಗಳ ಚಲನವಲನದ ಮೇಲೆ ನಿಗಾ ಇರಿಸಿ, ಮೇಲ್ವಿಚಾರಣೆ ಮಾಡಲಾಯಿತು. ಇದರಿಂದ ಮೂರನೇ ಪ್ರಯತ್ನದಲ್ಲಿ ಪ್ರಯೋಗ ಯಶಸ್ವಿಯಾಯಿತು ಎಂದು ವನ್ಯಜೀವಿ ಪ್ರಿಯರು ಹೇಳುತ್ತಾರೆ.

ಪ್ರಸ್ತುತ, ಅರಣ್ಯ ಒತ್ತುವರಿಯಿಂದ ಹುಲಿಗಳಿಗೆ ಕಾಡಿನಲ್ಲಿ ಜಾಗ ಇಲ್ಲದಂತಾಗಿದೆ. ಹುಲಿಗಳು ರಸ್ತೆ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿವೆ. ಅರಣ್ಯ ಇಲಾಖೆ ಹುಲಿಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಅವುಗಳ ಸಂತತಿ ಹೆಚ್ಚಳ ಕಷ್ಟವಾಗಲಿದೆ ಎಂಬುದು ವನ್ಯಜೀವಿ ಪ್ರಿಯರ ಕಳವಳವಾಗಿದೆ.

Read More
Next Story