Mekedatu Dam|ಕರ್ನಾಟಕದಿಂದ ಮೇಕೆದಾಟು ಮರು ಅಧ್ಯಯನ; ತಮಿಳುನಾಡು ತಗಾದೆ ತಪ್ಪಿಸಲು ಕಾನೂನು ಬಲ?
x

Mekedatu Dam|ಕರ್ನಾಟಕದಿಂದ ಮೇಕೆದಾಟು ಮರು ಅಧ್ಯಯನ; ತಮಿಳುನಾಡು ತಗಾದೆ ತಪ್ಪಿಸಲು ಕಾನೂನು ಬಲ?

ಸಿಡಬ್ಲುಸಿ ಆದೇಶದ ಮೇರೆಗೆ ರಾಜ್ಯ ಸರ್ಕಾರ ಈಗಾಗಲೇ ನೂತನ ಡಿಪಿಆರ್‌ (ಪರಿಷ್ಕೃತ ಯೋಜನಾ ವರದಿ) ಸಲ್ಲಿಕೆ ಮಾಡಿದ್ದು, ತಮಿಳುನಾಡಿನಿಂದ ಯಾವುದೇ ತಕರಾರು ಸಲ್ಲಿಕೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.


Click the Play button to hear this message in audio format

ಕರ್ನಾಟಕದ ಪಾಲಿನ ಮಹತ್ವಾಕಾಂಕ್ಷಿ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಕೇಂದ್ರ ಜಲ ಆಯೋಗದ (CWC) ಇತ್ತೀಚಿನ ನಿರ್ದೇಶನಗಳ ಹಿನ್ನೆಲೆಯಲ್ಲಿ, ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮರು ಅಧ್ಯಯನ ನಡೆಸಲು ಕಾವೇರಿ ನೀರಾವರಿ ನಿಗಮ (KNNL) ತೀರ್ಮಾನಿಸಿದೆ.

ಮೇಕೆದಾಟು ಯೋಜನೆಯ ಕುರಿತು ಈ ಹಿಂದೆ ಸಿದ್ಧಪಡಿಸಲಾಗಿದ್ದ ಸಮಗ್ರ ಯೋಜನಾ ವರದಿ (DPR) ಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗವು ಕೆಲವು ತಾಂತ್ರಿಕ ಪ್ರಶ್ನೆಗಳನ್ನು ಎತ್ತಿತ್ತು. ವಿಶೇಷವಾಗಿ ಪರಿಸರ ಸೂಕ್ಷ್ಮತೆ, ನೀರಿನ ಲಭ್ಯತೆಯ ನಿಖರತೆ ಮತ್ತು ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದ ಮೇಲೆ ಈ ಜಲಾಶಯ ಬೀರುವ ಪ್ರಭಾವದ ಕುರಿತು ಹೊಸ ಅಂಕಿ ಅಂಶಗಳನ್ನು ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಾಲಕ್ಕೆ ತಕ್ಕಂತೆ ವರದಿ ಅಪ್‌ಡೇಟ್ ಮಾಡಲು ಈ ಹೊಸ ಅಧ್ಯಯನ ಪೂರಕವಾಗಲಿದೆ.

ಹಿಂದಿನ ಅಧ್ಯಯನ ಪೂರ್ಣ

ಈ ಹಿಂದೆ ರಾಜ್ಯ ಸರಕಾರ ಮೊದಲ ಸುತ್ತಿನ ಅಧ್ಯಯನ ಪೂರ್ಣಗೊಳಿಸಿದ್ದು, ಮಂಡ್ಯ ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧ್ಯಯನ ನಡೆಸಿ, ಯೋಜನೆಯಿಂದಾಗಿ ಮುಳುಗಡೆಯಾಗಲಿರುವ ಅರಣ್ಯ ಪ್ರದೇಶ, ಮರ-ಗಿಡಗಳ ಬಗ್ಗೆ ವರದಿ ಸಿದ್ದಪಡಿಸಲಾಗಿತ್ತು. ನೂತನ ಡಿಪಿಆರ್‌ ಸಲ್ಲಿಕೆ ಬಳಿಕ ಇವುಗಳ ಬಗ್ಗೆಯೆ ಮತ್ತೊಮ್ಮೆ ಮರು ಅಧ್ಯಯನ ನಡೆಯಲಿದೆ.

ನೂತನ ಡಿಪಿಆರ್‌

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ 2025ರಲ್ಲಿ ಆದೇಶಿಸಿತ್ತು. ಅದರಂತೆ ಹೊಸ ಡಿಪಿಆರ್ (ಪರಿಷ್ಕೃತ ವಿಸ್ತೃತ ಯೋಜನಾ ವರದಿ) ಅನ್ನು 2026 ರ ಫೆ. 2ರಂದು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ) ಸಲ್ಲಿಸಿತ್ತು. ಈ ಡಿಪಿಆರ್‌ನಲ್ಲಿ ಕುಡಿಯುವ ನೀರಿಗಷ್ಟೇ ಜಲಾಶಯ ನಿರ್ಮಿಸಲಾಗುವುದು ಎಂಬ ಅಂಶವನ್ನು ಸೇರಿಸಿ ವರದಿಯನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ತಮಿಳುನಾಡು ಮತ್ತೊಮ್ಮೆ ತಕರಾರು ಅರ್ಜಿ ಸಲ್ಲಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ನೂತನ ಡಿಪಿಆರ್‌ ಬೆನ್ನಲ್ಲೇ, ಮತ್ತೊಮ್ಮೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮರು ಅಧ್ಯಯನ ನಡೆಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ. ಈ ಹಿಂದೆ ನಡೆಸಿದ್ದ ಅಧ್ಯಯನದ ಮಾದರಿಯಲ್ಲಿಯೇ ಈ ಅಧ್ಯಯನವು ನಡೆಯಲಿದೆ.

ಏನೆಲ್ಲ ಅಧ್ಯಯನ ಸಾಧ್ಯತೆ ?

ಕಳೆದ ಹತ್ತು ವರ್ಷಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆ ಮತ್ತು ನೀರಿನ ಹರಿವಿನ ಆಧಾರದ ಮೇಲೆ ಜಲಾಶಯದ ಸಾಮರ್ಥ್ಯವನ್ನು ಮರು ಮೌಲ್ಯೀಕರಿಸಲು (ಹೈಡ್ರಾಲಜಿ) ಅಧ್ಯಯನ ನಡೆಯಲಿದೆ. ಯೋಜನೆಯಿಂದಾಗಿ ಮುಳುಗಡೆಯಾಗಲಿರುವ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ಅಲ್ಲಿನ ಜೀವವೈವಿಧ್ಯಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡುವ ಮಾರ್ಗೋಪಾಯಗಳನ್ನು ಹುಡುಕುವುದು. ಇಲ್ಲಿನ ವನ್ಯಜೀವಿಗಳು, ಜೀವವೈವಿಧ್ಯಗಳ ಮೇಲಾಗುವ ಪರಿಣಾಮ, ಆಧುನಿಕ ತಂತ್ರಜ್ಞಾನ ಬಳಸಿ ಜಲಾಶಯದ ಅಣೆಕಟ್ಟು ವಿನ್ಯಾಸದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ತಾಂತ್ರಿಕ ವಿನ್ಯಾಸದ ಮೇಲೆ ಅಧ್ಯಯನ ನಡೆಯಲಿದೆ.

ಕಾವೇರಿ ನೀರಾವರಿ ನಿಗಮವು ಈ ಅಧ್ಯಯನಕ್ಕಾಗಿ ತಜ್ಞರ ಸಮಿತಿಯನ್ನು ನೇಮಿಸಲಿದ್ದು, ವರದಿ ಸಿದ್ಧವಾದ ನಂತರ ಅದನ್ನು ರಾಜ್ಯ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ತದನಂತರ ಪರಿಷ್ಕೃತ ವರದಿಯನ್ನು ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಪರಿಸರ ಸಚಿವಾಲಯಕ್ಕೆ ಅನುಮತಿಗಾಗಿ ಸಲ್ಲಿಸಲಾಗುತ್ತದೆ.

ಆದರೆ, ಹೊಸ ಅಧ್ಯಯನ ಹಾಗೂ ಸಮೀಕ್ಷೆ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಬೇಕಿದೆ. ಹೀಗಾಗಿ ಮೇಕೆದಾಟು ಯೋಜನೆಯ ಸಮೀಕ್ಷೆ ನಡೆಸಲು ಅನುಮತಿ ನೀಡುವಂತೆ ಕೋರಿ ಕಾವೇರಿ ನೀರಾವರಿ ನಿಗಮವು ಪಿಸಿಸಿಎಫ್‌ (Principal Chief Conservator of Forests) ಮೂಲಕ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಫೆ.4 ರಂದು ಪ್ರಸ್ತಾವನೆ ಸಲ್ಲಿಸಿದೆ.

ಹಿಂದೆ ನಡೆದಿದ್ದ ಅಧ್ಯಯನಗಳೇನು?

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ಮೇಕೆದಾಟು ಯೋಜನಾ ಪ್ರದೇಶದ ಪ್ರತಿ ಹೆಕ್ಟೇರ್‌ನಲ್ಲಿ 300 ರಿಂದ 400 ಮರಗಳು ಇರುವುದು ಎಂದು ಅಂದಾಜಿಸಲಾಗಿದೆ. ಇಲ್ಲಿನ 3,946 ಹೆಕ್ಟೇರ್‌ನಲ್ಲಿ ಮರಗಳ ಎಣಿಕೆ ನಡೆಸಲಾಗಿದ್ದು, ಯೋಜನೆಗೆ ಮುಳುಗಡೆಯಾಗಲಿರುವ ಚಾಮರಾಜನಗರ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಮೂರುಪಟ್ಟು ಅರಣ್ಯವನ್ನು ನಿಗದಿಪಡಿಸಲಾಗಿತ್ತು. ಇದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕೆಲಸ ನಡೆಬೇಕಿತ್ತು.

ಅಂದು ಯೋಜನೆಗಾಗಿ ಒಟ್ಟು 5 ,077 ಹೆಕ್ಟೇರ್‌ ಅರಣ್ಯಭೂಮಿ ಹಾಗೂ 190.26 ಹೆಕ್ಟೇರ್‌ ಕಂದಾಯ ಭೂಮಿ ಅವಶ್ಯಕತೆ ಇದೆ ಅಂದಾಜಿಸಲಾಗಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2 ,163 ಹೆಕ್ಟೇರ್‌ ಅರಣ್ಯಭೂಮಿ, 181 .99 ಹೆಕ್ಟೇರ್‌ ಕಂದಾಯ ಭೂಮಿ, ಮಂಡ್ಯ ಜಿಲ್ಲೆಯಲ್ಲಿ1 ,010 .66 ಹೆಕ್ಟೇರ್‌ ಅರಣ್ಯಭೂಮಿ, 8 .99 ಹೆಕೇರ್‌ ಕಂದಾಯ ಭೂಮಿ, ಚಾಮರಾಜನಗರ ಜಿಲ್ಲೆಯಲ್ಲಿ1 ,902 .89 ಹೆಕ್ಟೇರ್‌ ಅರಣ್ಯ ಭೂಮಿ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿತ್ತು.

ಏನಿದು ಯೋಜನೆ

ಸುಮಾರು 9,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ರಾಜ್ಯಕ್ಕೆ ಎರಡು ಪ್ರಮುಖ ಲಾಭಗಳಿದ್ದು, ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ದಾಹ ತಣಿಸಲು ಸುಮಾರು 4.75 ಟಿಎಂಸಿ ನೀರನ್ನು ಬಳಸಿಕೊಳ್ಳುವುದು ಹಾಗೂ ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸಲಿದೆ.

ಈ ಯೋಜನೆಯಡಿ 67.16 ಟಿಎಂಸಿ ಅಡಿ ನೀರು ಸಂಗ್ರಹಿಸಿ ಸಮತೋಲನ ಜಲಾಶಯ ನಿರ್ಮಿಸಲಾಗುತ್ತದೆ. ಜತೆಗೆ, ಸೇತುವೆ, ಭೂವಿವರ ಕೇಂದ್ರ ಹಾಗೂ ಸುರಂಗ ನಿರ್ಮಾಣ ಮಾಡಲಾಗುತ್ತದೆ. ಜಲಾಶಯದ ಮುಂಭಾಗದಲ್ಲಿ 4.75 ಟಿಎಂಸಿ ಅಡಿ ಕುಡಿಯುವ ನೀರು ಎತ್ತಲು ಜಾಕ್‌ವೆಲ್ ಕಮ್ ಪಂಪ್‌ಹೌಸ್ ನಿರ್ಮಾಣವೂ ಒಳಗೊಂಡಿದೆ. ಯೋಜನೆಗೆ ನದಿ ಭಾಗದ 1,130 ಹೆಕ್ಟೇರ್ ಸೇರಿದಂತೆ 5,267 ಹೆಕ್ಟೇರ್ ಅರಣ್ಯ ಹಾಗೂ ಕಂದಾಯ ಭೂಮಿ ಬಳಸಲಾಗುತ್ತದೆ.

ಈ ಜಲಾಶಯ ನಿರ್ಮಾಣದಿಂದ ಕಾವೇರಿ ವನ್ಯಜೀವಿಧಾಮದಲ್ಲಿನ ಮಡಿವಾಳ, ಕೊಂಗೆದೊಡಿ, ಸಂಗವು, ಬೊಮ್ಮಸಂದ್ರ ಹಾಗು ಮುತ್ತತ್ತಿ ಭಾಗದ ಗ್ರಾಮಗಳು ಮುಳುಗಡೆಯಾಗಲಿದೆ ಎಂದು ಈ ಹಿಂದೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೆಖಿಸಲಾಗಿತ್ತು.

ಅಂತರಾಜ್ಯ ವಿವಾದ

ಈ ಯೋಜನೆಗೆ ತಮಿಳುನಾಡು ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಮೇಕೆದಾಟು ಜಲಾಶಯ ನಿರ್ಮಾಣದಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ಅವರ ವಾದ. ಆದರೆ, "ನಾವು ಕೇವಲ ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುತ್ತೇವೆ, ಇದು ಸುಪ್ರೀಂ ಕೋರ್ಟ್ ನೀಡಿದ ನೀರು ಹಂಚಿಕೆ ತೀರ್ಪಿನ ಉಲ್ಲಂಘನೆಯಲ್ಲ, ಕೇವಲ ಕುಡಿಯುವ ನೀರಿನ ಉದ್ದೇಶಕ್ಕಷ್ಟೆ ಅಣೆಕಟ್ಟು ನಿರ್ಮಿಸಲಾಗುವುದು ಎಂದು ಕರ್ನಾಟಕ ವಾದಿಸುತ್ತಿದೆ. ಸಿಡಬ್ಲ್ಯುಸಿ ಸೂಚನೆಯಂತೆ ಹೊಸ ಅಧ್ಯಯನ ವರದಿ ಸಿದ್ಧವಾದರೆ, ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ವಾದಕ್ಕೆ ಮತ್ತಷ್ಟು ಬಲ ಸಿಗಲಿದೆ," ಎಂದು ಕಾನೂನು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

Read More
Next Story