Mekedatu Dam| ಮೇಕೆದಾಟು ಹೊಸ ಡಿಪಿಆರ್‌: ತಮಿಳುನಾಡಿನ ತಗಾದೆಗೆ ಕರ್ನಾಟಕ ಪ್ರತಿತಂತ್ರ
x

ಮೇಕೆದಾಟು ಜಲಾಶಯ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶ

Mekedatu Dam| ಮೇಕೆದಾಟು ಹೊಸ ಡಿಪಿಆರ್‌: ತಮಿಳುನಾಡಿನ ತಗಾದೆಗೆ ಕರ್ನಾಟಕ ಪ್ರತಿತಂತ್ರ

ಮೇಕೆದಾಟು ಯೋಜನೆ ಸಂಬಂಧ ರಾಜ್ಯ ಸರ್ಕಾರ ಹೊಸ ಡಿಪಿಆರ್‌ ಸಲ್ಲಿಸಿದ್ದು, 14 ಸಾವಿರ ಕೋಟಿಗೆ ಯೋಜನಾ ವೆಚ್ಚ ಹೆಚ್ಚಿಸಲಾಗಿದೆ. ತಮಿಳುನಾಡಿನ ನೀರಿನ ಪಾಲು ಕಿಂಚಿತ್‌ ಕಡಿಮೆ ಮಾಡುವುದಿಲ್ಲ ಎಂದಿದೆ.


Click the Play button to hear this message in audio format

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಹಾಗೂ ಆಗಾಗ ತಮಿಳುನಾಡಿನ ತಗಾದೆಗಳಿಗೆ ಕಾರಣವಾಗುತ್ತಿರುವ ರಾಮನಗರ ಜಿಲ್ಲೆಯ ಮೇಕೆದಾಟು ಅಣೆಕಟ್ಟು ಸಮತೋಲನಾ ಜಲಾಶಯ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಜಲ ಆಯೋಗಕ್ಕೆ ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಅರ್‌) ಮತ್ತೆ ಹೊಸತಾಗಿ ಸಲ್ಲಿಕೆ ಮಾಡಿದೆ.

ತಮಿಳುನಾಡು ಯಾವುದೆ ರೀತಿಯ ಹೊಸ ಕ್ಯಾತೆಗಳನ್ನು ಸೃಷ್ಟಿಸಬಾರದು ಎನ್ನುವ ವಿಚಾರಕ್ಕೆ ಒತ್ತು ನೀಡಿರುವ ರಾಜ್ಯ ಸರ್ಕಾರದ ಹೊಸ ಡಿಪಿಆರ್‌(Detailed Project Report -DPR)ನಲ್ಲಿ ಸಾಕಷ್ಟು ಬದಲಾವಣೆಗಳಿವೆ. ಅದರಲ್ಲೂ, ತಮಿಳುನಾಡು ಮತ್ತೊಮ್ಮೆ ತಕರಾರು ಅರ್ಜಿ ಸಲ್ಲಿಸಲು ಅವಕಾಶವಿಲ್ಲದಂತೆ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ.

"ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ಮೇಕೆದಾಟು ಜಲಾಶಯ ನಿರ್ಮಿಸಲಾಗುತ್ತಿದ್ದು, ಮುಂದಿನ 50 ವರ್ಷದವರೆಗೂ ಬೆಂಗಳೂರು ನಗರಕ್ಕೆ ಕಾವೇರಿ ನೀರು ಪೂರೈಸುವ ಉದ್ದೇಶವನ್ನಷ್ಟೇ ಸರ್ಕಾರ ಹೊಂದಿದೆ. ಯಾವುದೇ ಕಾರಣಕ್ಕೂ ಕುಡಿಯುವ ಉದ್ದೇಶ ಬಿಟ್ಟು ಇತರೆ ಕಾರಣಗಳಿಗೆ ಈ ನೀರನ್ನು ಬಳಕೆ ಮಾಡಿಕೊಳ್ಳುವುದಿಲ್ಲ," ಎಂದು ಡಿಪಿಆರ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಖಚಿತ ಮೂಲಗಳು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿವೆ.

"ತಮಿಳುನಾಡಿಗೆ ನಿಗದಿಯಾಗಿರುವ ನೀರಿನಲ್ಲಿ ಹನಿ ನೀರನ್ನು ಕಡಿಮೆ ಮಾಡುವುದಿಲ್ಲ. ಕನಕಪುರ ಬಳಿಕ ಕಾವೇರಿ ಉಪನದಿ ಅರ್ಕಾವತಿ ಹಾಗೂ ಕಾವೇರಿ ಸಂಗಮದಿಂದ 2 ಕಿ.ಮೀ. ದೂರದಲ್ಲಿ ಮೇಕೆದಾಟು ಡ್ಯಾಂ ನಿರ್ಮಿಸುವ ಬಗ್ಗೆ ಸ್ಥಳ ನಿಗದಿಯನ್ನೂ ಮಾಡಲಾಗಿದ್ದು, ತಮಿಳುನಾಡಿಗೆ ಯಾವುದೇ ಸಮಸ್ಯೆಯಾಗದಂತೆ ಯೋಜನೆ ಪೂರ್ಣಗೊಳಿಸಲಾಗುವುದು," ಎಂದು ಡಿಪಿಅರ್‌ನಲ್ಲಿ ಭರವಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ 2025ರಲ್ಲಿ ಆದೇಶಿಸಿತ್ತು. ಅದರಂತೆ ಹೊಸ ಡಿಪಿಆರ್ (ಪರಿಷ್ಕೃತ ವಿಸ್ತೃತ ಯೋಜನಾ ವರದಿ) ಅನ್ನು ಫೆ. 2ರಂದು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ) ಸಲ್ಲಿಸಿದೆ. ಈ ಡಿಪಿಆರ್‌ನಲ್ಲಿ ಕುಡಿಯುವ ನೀರಿಗಷ್ಟೇ ಜಲಾಶಯ ನಿರ್ಮಿಸಲಾಗುವುದು ಎಂಬ ಅಂಶವನ್ನು ಸೇರಿಸಿ ವರದಿಯನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ತಮಿಳುನಾಡು ಮತ್ತೊಮ್ಮೆ ತಕರಾರು ಅರ್ಜಿ ಸಲ್ಲಿಸುವ ಯೋಜನೆಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

14 ಸಾವಿರ ಕೋಟಿಗೆ ಹೆಚ್ಚಿದ ಯೋಜನಾ ವೆಚ್ಚ

ಜಲಾಶಯ ನಿರ್ಮಾಣ ಸಂಬಂಧ 2019ರಲ್ಲಿ ಮೊದಲ ಯೋಜನೆಯನ್ನು ಸಿದ್ಧಪಡಿಸಿದಾಗ ಯೋಜನಾ ವೆಚ್ಚ 4,500 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. 2024ರಲ್ಲಿ ಮರು ಪರಿಶೀಲಿಸಿದಾಗ ಈ ಅಂದಾಜು ಮೊತ್ತ 9 ಸಾವಿರ ಕೋಟಿ ರೂ.ಗೆ ಏರಿಕೆಯಾಗಿತ್ತು. ಇದೀಗ ಹೊಸ ಡಿಪಿಆರ್‌ನಲ್ಲಿ ಈ ಅಂದಾಜು ಮೊತ್ತ ಮತ್ತಷ್ಟು ಹೆಚ್ಚಾಗಿದ್ದು, ಯೋಜನೆ ಪೂರ್ಣಗೊಳ್ಳುವ ವೇಳೆಗೆ 14 ಸಾವಿರ ಕೋಟಿ ರೂ. ದಾಟಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಏರಿಕೆಯಾಗುತ್ತಿದ್ದು, ಕಳೆದ ಏಳು ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಕಾಮಗಾರಿ ವಿಳಂಬಗೊಂಡಷ್ಟು ಯೋಜನಾ ವೆಚ್ಚ ಇನ್ನಷ್ಟು ಏರಿಕೆಯಾಗಲಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ನೀರಾವರಿ ನಿಗಮದ ಅಧಿಕಾರಿಗಳು.

ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟುಗಳ ಸಂಗ್ರಹಣಾ ಸಾಮರ್ಥ್ಯ

ಡಿ.ಕೆ. ಶಿವಕುಮಾರ್ ಹೇಳಿದ್ದೇನು?

"ಈಗಾಗಲೇ ಪರಿಷ್ಕೃತ ಡಿಪಿಆರ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಡ್ಯಾಂ ನಿರ್ಮಿಸುವ ಸ್ಥಳ ಗುರುತಿಸಲಾಗಿದೆ. ಯೋಜನೆಯಿಂದ ಮುಳುಗಡೆಯಾಗಲಿರುವ ಅರಣ್ಯ ಪ್ರದೇಶಗಳಿಗೆ ಮೂರು ಪಟ್ಟು ಹೆಚ್ಚುವರಿಯಾಗಿ ಅರಣ್ಯ ಹಸ್ತಾಂತರಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಕೇಂದ್ರದ ಅವಕಾಶ ಸಿಕ್ಕ ಕೂಡಲೇ ಯೋಜನೆ ಜಾರಿ ಮಾಡಲಾಗುವುದು," ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಮಿಳುನಾಡಿನ ವಿರೋಧ ಏಕೆ?

ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂಬ ಆತಂಕ ತಮಿಳುನಾಡಿಗಿದೆ. ವಿಶೇಷವಾಗಿ ಮಳೆ ಕೊರತೆಯಿರುವ ವರ್ಷಗಳಲ್ಲಿ ನೀರಿಗೆ ತೊಂದರೆಯಾಗಬಹುದೆಂಬ ವಾದವನ್ನೇ ತಮಿಳುನಾಡು ಮಂಡಿಸುತ್ತಿದೆ.

2007ರ ಕಾವೇರಿ ಜಲವಿವಾದ ನ್ಯಾಯಾಧೀಕರಣ (CWDT) ಮತ್ತು 2018ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕರ್ನಾಟಕವು ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಡಲೇಬೇಕು. ಅಣೆಕಟ್ಟು ಕಟ್ಟುವುದರಿಂದ ಈ ತೀರ್ಪಿನ ಉಲ್ಲಂಘನೆಯಾಗುತ್ತದೆ. ಮೆಟ್ಟೂರು ಜಲಾಶಯಕ್ಕೆ ಬರುವ ನೀರು ಕಡಿಮೆಯಾದರೆ, ಅಲ್ಲಿನ ಮುಖಜ ಭೂಮಿ (Delta region) ಪ್ರದೇಶದ ರೈತರ ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿರೋಧಿಸುತ್ತಿದೆ.

ಅನುಮತಿ ಅವಶ್ಯಕ

ಬೆಳೆಯುತ್ತಿರುವ ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗದ ಕೋಟ್ಯಂತರ ಮಂದಿಯ ಜಲದಾಹ ನೀಗಿಸಲು ರಾಜ್ಯ ಸರ್ಕಾರ ಹೊಸ ಹೆಜ್ಜೆ ಇರಿಸಿದಂತಾಗಿದೆ. ಕಾವೇರಿ ಕೊಳ್ಳದ ಪ್ರಮುಖ ನೀರಾವರಿ ಯೋಜನೆಯಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ತೆಗೆದಿದ್ದ ತಕರಾರನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ, ಯೋಜನೆ ಕಾರ್ಯರೂಪಕ್ಕೆ ತರಲು ರಾಜ್ಯ ಜಲಸಂಪನ್ಮೂಲ ಇಲಾಖೆ ಸಜ್ಜಾಗಿದೆ.

ಆದರೆ, ಯೋಜನೆಯಲ್ಲಿ ಅರಣ್ಯ ಪ್ರದೇಶ ಸಹ ಮುಳುಗಡೆಯಾಗಲಿರುವ ಹಿನ್ನೆಲೆಯಲ್ಲಿ ಸಿಡಬ್ಲ್ಯೂಸಿ ಜತೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಸಹ ಅಗತ್ಯವಿದೆ. ಈ ಅನುಮತಿ ದೊರೆತಲ್ಲಿ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ಸಿಕ್ಕಂತಾಗಲಿದೆ.


ಬೆಂಗಳೂರಿಗರಿಗೆ ನೀರಿನ ಸೆಲೆ

ಮೇಕೆದಾಟು ಸಮತೋಲನಾ ಅಣೆಕಟ್ಟು ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಪ್ರಸ್ತುತ 1.50 ಕೋಟಿ ಆಸುಪಾಸಿನಲ್ಲಿರುವ ಬೆಂಗಳೂರು ಮಹಾನಗರಕ್ಕೆ ಭವಿಷ್ಯದಲ್ಲಿ ಕುಡಿಯುವ ನೀರು ಈ ಯೋಜನೆಯಿಂದ ಲಭಿಸಲಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ 4.75 ಟಿಎಂಸಿ ನೀರನ್ನು ಮೀಸಲಿರಿಸಲಾಗಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.

ಸುಮಾರು 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆಯಲ್ಲಿ ನೀಲನಕ್ಷೆ ಸಿದ್ಧಪಡಿಸಿದ್ದು, ಈ ಯೋಜನೆ ಪೂರ್ಣಗೊಂಡಿದ್ದೇ ಆದಲ್ಲಿ ನಮ್ಮ ರಾಜ್ಯದ ಗ್ರಿಡ್‌ಗೆ 400 ಮೆ.ವ್ಯಾಟ್ ಗುಣಮಟ್ಟದ ವಿದ್ಯುತ್ ಹೆಚ್ಚುವರಿಯಾಗಿ ಲಭಿಸಲಿದೆ.

ಡಿಕೆಗೆ ಪ್ರತಿಷ್ಠೆಯ ವಿಚಾರ

ಮೇಕೆದಾಟು ಜಲಾಶಯ ನಿರ್ಮಾಣ ಸಂಬಂಧ ಡಿ.ಕೆ. ಶಿವಕುಮಾರ್ 2022ರಲ್ಲಿ ಅಂದಿನ ರಾಜ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿದ್ದರು. 'ನಮ್ಮ ನೀರು - ನಮ್ಮ ಹಕ್ಕು' ಎಂಬ ಘೋಷವಾಕ್ಯದಲ್ಲಿ 130 ಕಿ.ಮೀ. ಪಾದಯಾತ್ರೆ ನಡೆಸಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಜತೆಗೆ ಜಲಾಶಯ ನಿರ್ಮಾಣವಾಗುತ್ತಿರುವುದು ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ. ಹೀಗಾಗಿ ಈ ಯೋಜನೆ ಜಾರಿಗೊಳಿಸುವುದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ವಿಚಾರವೂ ಆಗಿದೆ.

5,173 ಹೆಕ್ಟೇರ್ ಭೂಮಿ ಮುಳುಗಡೆ

99 ಮೀಟರ್ ಎತ್ತರಕ್ಕೆ ಈ ಸಮತೋಲನಾ ಅಣೆಕಟ್ಟು ನಿರ್ಮಾಣ ಮಾಡಲು ಡಿಪಿಆರ್‌ನಲ್ಲಿ ಉಲ್ಲೇಖಿಸಿದ್ದು, 67.16 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥ್ಯವನ್ನು ಈ ಡ್ಯಾಂ ಹೊಂದಲಿದೆ. ಇನ್ನು ಡ್ಯಾಂ ನಿರ್ಮಾಣದಿಂದ 5,173 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದ್ದು, ಹೆಚ್ಚು ಜನವಸತಿ ಪ್ರದೇಶಗಳು ಮುಳುಗಡೆಯಾಗುವುದಿಲ್ಲ. ಕಾವೇರಿ ವನ್ಯಜೀವಿ ವಲಯ ಸೇರಿದಂತೆ 4,800 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ. ಯೋಜನೆಗೆ ಮುಳುಗಡೆಯಾಗಲಿರುವ ಅರಣ್ಯಕ್ಕೆ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ಅರಣ್ಯಕ್ಕೆ ಭೂಮಿ ನೀಡುವುದಾಗಿ ಸರ್ಕಾರ ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮೇಕೆದಾಟು ಯೋಜನೆಗೆ 78 ವರ್ಷಗಳ ಇತಿಹಾಸ

ಮೇಕೆದಾಟು ಯೋಜನೆಯ ಪ್ರಯತ್ನಕ್ಕೆ 78 ವರ್ಷಗಳ ಇತಿಹಾಸವಿದೆ. 1948ರಲ್ಲಿ ಮೊದಲ ಬಾರಿಗೆ ಮೇಕೆದಾಟು ಜಲವಿದ್ಯುತ್ ಯೋಜನೆಯ ಪ್ರಸ್ತಾಪ ಪ್ರಾರಂಭವಾಯಿತಾದರೂ, ರಾಜ್ಯಗಳ ಪುನರ್ವಿಂಗಡಣೆ ವಿಚಾರದಿಂದ ಇದು ನನೆಗುದಿಗೆ ಬಿದ್ದಿತು. 1956ರಲ್ಲಿ ಜಲವಿದ್ಯುತ್ ಯೋಜನೆ ತನಿಖಾ ಆಯೋಗ ಈ ಯೋಜನೆಗೆ ಸಂಬಂಧಿಸಿದಂತೆ ವಿವರಗಳನ್ನು ಸಂಗ್ರಹಿಸುವ ಪ್ರಯತ್ನ ಆರಂಭಿಸಿತು.

1986ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಯೋಜನೆಯ ಬಗ್ಗೆ ತನಿಖೆ ನಡೆಸಿತು. 1996ರಲ್ಲಿ ಇದೇ ಆಯೋಗ ಮೇಕೆದಾಟು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಯೋಜನಾ ವರದಿ ನೀಡಿತು. ಆದರೆ, ಕಾವೇರಿ ಜಲವಿವಾದದಿಂದ ಈ ಯೋಜನೆ ನನೆಗುದಿಗೆ ಬಿದ್ದಿತು. 2007ರಲ್ಲಿ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬಂದ ಬಳಿಕ ಮೇಕೆದಾಟು ಯೋಜನೆಯ ಚರ್ಚೆಗೆ ಮತ್ತೆ ಜೀವ ಬಂದಿತು. 2015ರಲ್ಲಿ ಕೆಲ ರೈತರು ಯೋಜನೆ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾರಂಭಿಸಿದರು.

2018ರಲ್ಲಿ ರಾಜ್ಯ ಸರ್ಕಾರ ಕಾವೇರಿ ನ್ಯಾಯಾಧೀಕರಣಕ್ಕೆ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಅನುಮತಿ ಕೋರಿತು. ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ ಅನುಮತಿ ನೀಡುತ್ತಿದ್ದಂತೆ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. 2025ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿ ವಜಾಗೊಳಿಸಿತು. ಇದೀಗ ರಾಜ್ಯ ಸರ್ಕಾರ ಪರಿಷ್ಕೃತ ಡಿಪಿಆರ್ ಸಲ್ಲಿಸಿ ಕೇಂದ್ರದ ಅನುಮತಿ ಕೋರಿದೆ.

ಕಾವೇರಿ ನದಿಯ ದೊಡ್ಡ ಅಣೆಕಟ್ಟು

ದಕ್ಷಿಣ ಕರ್ನಾಟಕದ ಅತಿ ದೊಡ್ಡ ನದಿಯಾಗಿರುವ ಕಾವೇರಿ ನದಿಯ ಉದ್ದ 802 ಕಿ.ಮೀ. ಇದ್ದು, ಕರ್ನಾಟಕದಲ್ಲಿ ಕಾವೇರಿ ನದಿ 381 ಕಿ.ಮೀ. ದೂರ ಹರಿಯುತ್ತದೆ. ಅದರಲ್ಲೂ 64 ಕಿ.ಮೀ. ದೂರ ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿ ಅರಣ್ಯ ಪ್ರದೇಶದಂಚಿನಲ್ಲೇ ಹರಿಯುತ್ತದೆ. ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶ 34,273 ಚದರ ಕಿ.ಮೀ. ಇದ್ದು, ಇದರಲ್ಲಿ ಕೆಆರ್‌ಎಸ್ ಜಲಾಶಯದ ಕೆಳಭಾಗದಲ್ಲಿ 23,231 ಚದರ ಕಿ.ಮೀ. ಪ್ರದೇಶದಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ನೀರಾವರಿ ಯೋಜನೆ ಇಲ್ಲವಾಗಿದೆ.

ಇದರಿಂದಾಗಿ ರಾಜ್ಯಕ್ಕೆ ಕಾವೇರಿ ನ್ಯಾಯಾಧೀಕರಣದ ಅಂತಿಮ ವರದಿಯಲ್ಲಿ ಹಂಚಿಕೆಯಾಗಿರುವ 270+14 ಟಿಎಂಸಿ ನೀರನ್ನು ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ. ಇದೀಗ ಮೇಕೆದಾಟು ಯೋಜನೆ ಈ ಕೊರತೆಯನ್ನು ನೀಗಿಸಲಿದೆ. ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಅತಿ ದೊಡ್ಡ ಅಣೆಕಟ್ಟು ಇದೇ ಎನಿಸಿದೆ.

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳಿಂದ ಸಂಗ್ರಹಣೆ ಮಾಡಲು ಸಾಧ್ಯವಿರುವ ನೀರಿನ ಪ್ರಮಾಣ 114.57 ಟಿಎಂಸಿ ಮಾತ್ರ. ಇನ್ನು ಕಾವೇರಿ ಕೊಳ್ಳದ ಕೆರೆಗಳನ್ನು ಸೇರಿಸಿದರೆ ಮಳೆಗಾಲದಲ್ಲಿ ನಮ್ಮ ರಾಜ್ಯ 120 ಟಿಎಂಸಿಗಿಂತ ಹೆಚ್ಚು ನೀರನ್ನು ಸಂಗ್ರಹಣೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲವಾಗಿದೆ. ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನನ್ವಯ ಪ್ರತಿ ಜಲ ವರ್ಷ (ಜೂನ್‌ನಿಂದ ಮೇ ವರೆಗೆ) 177.25 ಟಿಎಂಸಿ ನೀರನ್ನು ಬಿಡಬೇಕಿದೆ. ಆದರೆ, ಕೆಲವೊಂದು ಸಂಕಷ್ಟದ ಮಳೆ ವರ್ಷಗಳನ್ನು ಹೊರತುಪಡಿಸಿದರೆ, ನಮ್ಮ ರಾಜ್ಯದಿಂದ ಅಗತ್ಯಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಮಳೆಗಾಲದ ಸಮಯದಲ್ಲಿ ನೀರನ್ನು ಹರಿಯಬಿಟ್ಟು ಬೇಸಿಗೆಯ ದಿನಗಳಲ್ಲಿ ಬೆಂಗಳೂರು ನಗರ ಸೇರಿದಂತೆ ಕಾವೇರಿ ಕೊಳ್ಳದ ಹಲವು ಪಟ್ಟಣ, ಗ್ರಾಮಗಳು ಕುಡಿಯುವ ನೀರಿಗೆ ಪರದಾಡಿದ ಉದಾಹರಣೆ ಸಾಕಷ್ಟಿದೆ. ಇದಕ್ಕೆಲ್ಲ ಮೇಕೆದಾಟು ಪರಿಹಾರ ನೀಡಲಿದೆ.

Read More
Next Story